ಗಜಲ್
ಸಾವಿರ ಜಪಗಳ ಮಾಡಿದರೂ ಮನ ಶುದ್ಧಿಯಾದವರ ಕಾಣಲಿಲ್ಲ
ಹತ್ತು ಹುದ್ದೆಗಳನೇರಿದರೂ ಜನರ ಸೇವೆ ಮಾಡಿದವರ ಕಾಣಲಿಲ್ಲ
ನೂರು ಕೂವೆಗಳ ಚಿತ್ತದ ಹುತ್ತದಲಿ ಅಡಗಿಹುದು ಕರಿನಾಗರ
ವ್ರತ ನೇಮಗಳನು ಮಾಡಿಯೂ ಸರಳ ನಡೆಯವರ ಕಾಣಲಿಲ್ಲ
ಹಗಲಿರುಳುಗಳ ಜೋಕಾಲಿಯಲಿ ಜೀಕಿ ಮರೆತು ಬೆಳೆದಿಹರು
ಕಾಲನ ಚಕ್ರದ ಬಂಧನವನು ಅರಿತು ಬಾಳಿದವರ ಕಾಣಲಿಲ್ಲ
ಬಣ್ಣ ಬಣ್ಣನೆಯ ಮಾತುಗಳಲೆ ಕೊಳೆತು ಹೋಯಿತು ಜೀವ
ಬದುಕು ಚಿಟ್ಟೆಯ ತೆರದಿ ಕ್ಷಣಿಕವೆಂದು ನಡೆದವರ ಕಾಣಲಿಲ್ಲ
ಒಳಗೊಂದು ಹೊರಗೊಂದು ಮುಖವಾಡವ ತೊಟ್ಟವರೆ ಎಲ್ಲ
ಸಿದ್ಧ ಹಣತೆಯ ಬೆಳಕಿನೊಳಗಣ ಬೆಳಕ ತೋರಿದವರ ಕಾಣಲಿಲ್ಲ

-ಸಿದ್ಧರಾಮ ಕೂಡ್ಲಿಗಿ
