ನಾ ನೋಡಿದ ಚಿತ್ರ: ಲ್ಯಾಂಡ್ ಲಾರ್ಡ್, ಚಿತ್ರ ವಿಮರ್ಶೆ: ಸಿದ್ದರಾಮ ತಳವಾರ, ಕಿತ್ತೂರು

”ಲಾ & ಆರ್ಡರ್ V/s ಲ್ಯಾಂಡ್ ಲಾರ್ಡ್”

ಉಳುವವನೇ ಭೂಮಿ ಒಡೆಯ ಕಾನೂನು ಸುತ್ತ ಹೆಣೆದ ಕಥೆ ಕಾಟೇರ ಸಿನಿಮಾ ಆಗಿ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಅಚ್ಚೊತ್ತಿದ ಬೆನ್ನಲ್ಲೇ ‘ಲ್ಯಾಂಡ್ ಲಾರ್ಡ್’ ಕೂಡ ಇದೇ ಮಾದರಿಯ ಕಥಾಹಂದರ ಹೊಂದಿರಬಹುದು ಅಂಥ ಟ್ರೈಲರ್ ನೋಡಿದಾಗಲೇ ಚಿತ್ರರಸಿಕರು ಅಂದಾಜಿಸಿದ್ದರು. ಈ ದಿನ ಚಿತ್ರ ನೋಡಿದಾಗ ಬಹುಶಃ ಅವರ ಅನಿಸಿಕೆ ಸುಳ್ಳಾಗಲಿಲ್ಲ ಅಂತ ಅನ್ನಿಸಿದೆ.

ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವೇ ‘ಲ್ಯಾಂಡ್ ಲಾರ್ಡ್’ ಚಿತ್ರದ ಮುಖ್ಯ ಕಥಾವಸ್ತು. ತುಂಡು ನೆಲಕ್ಕಾಗಿ ಧಣಿಗಳ ಮನೆಯ ಜೀತ ಮಾಡಿಯೇ ಜೀವ ಸವೆಸಿದ ಕೂಲಿಯೊಬ್ಬನ ಕೊನೆಯ ಆಸೆಯಂತೆ ಸತ್ತ ಕೂಲಿಯ ಹೆಂಡತಿ ಮಗ ಧಣಿಯನ್ನು ಅಂಗಲಾಚಿ ಬೇಡುವ ಮತ್ತು ಧಣಿ ತುಂಡು ನೆಲ ಕೊಡಲು ನಿರಾಕರಿಸುವ ದೃಶ್ಯದೊಂದಿಗೆ ಚಿತ್ರ ಆರಂಭವಾಗುತ್ತದೆ. ಅಪ್ಪನ ಶವಕ್ಕಿಟ್ಟ ಬೆಂಕಿ ತುಂಡು ನೆಲ ಪಡೆದೇ ತೀರುವ ಛಲದ ಸಂಕೇತದಂತೆ ತೋರುತ್ತದೆ.

ತುತ್ತು ಅನ್ನಕ್ಕೆ ಕೈ ಚಾಚುವವರೆಲ್ಲ ಜಮೀನ್ದಾರರಾದರೆ ಕೈ ಚಾಚಿ ಕೂಲಿಗೆ ನಿಲ್ಲೋರು ಯಾರು ಕೂಲಿಯವರು ಕೂಲಿಯಾಗಿಯೇ ಸಾಯಬೇಕು ಅನ್ನೋ ಹಠಕ್ಕೆ ಬಿದ್ದ ಧಣಿಯರು ತುಂಡು ನೆಲವೂ ದಕ್ಕದಂತೆ ಏನೆಲ್ಲ ಮಾಡುತ್ತಾರೆ ತುಂಡು ನೆಲಕ್ಕಾಗಿ ಕೂಲಿಯವರು ಏನೇನೆಲ್ಲ ಮಾಡುತ್ತಾರೆ ಅನ್ನೋದು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು.

ಚಿತ್ರನಾಯಕ ದುನಿಯಾ ವಿಜಯ್ (ಕೊಡ್ಲಿ ರಾಚಯ್ಯ), ರಚಿತಾ ರಾಮ್ (ನಿಂಗವ್ವ) ಉಮಾಶ್ರೀ ತಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನೆಗೆಟಿವ್ ಶೇಡ್ ನಲ್ಲಿ ರಾಜ್ ಬಿ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ದುನಿಯಾ ವಿಜಯ್ ಅವರ ಪುತ್ರಿ ರಿತನ್ಯಾ ವಿಜಯ್ ನಟನೆ ಶ್ಲಾಘನೀಯ. ಅಜನೀಶ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಜೀವ ತುಂಬಿದೆ. ವಿಜಯ ಪ್ರಕಾಶ ಅನನ್ಯ ಭಟ್ ಧ್ವನಿ ಸೊಗಸಾಗಿದೆ. ಜಡೇಶ ಕೆ ಹಂಪಿ ಅವರ ನಿರ್ದೇಶನದ ಚಿತ್ರ ಈ ವರ್ಷದ ಸೂಪರ್ ಹಿಟ್ ಅಂದರೆ ತಪ್ಪಾಗಲಾರದು.

“ಇಲ್ಲಿ ನಡೀಬೇಕಿರೋದು ಸಂಧಾನ ಅಲ್ಲ ಸಂವಿಧಾನ”
ಅನ್ನೋ ಸಂಭಾಷಣೆಗೆ ಥಿಯೇಟರ್ ನಲ್ಲಿ ಶಿಳ್ಳೆ ಚಪ್ಪಾಳೆಗಳ ಸುರಿಮಳೆಯೇ ಸುರಿಯುತ್ತದೆ.‌
“ಖಾಕಿ ಸೀರೆಗೆ ಬರಿ ಬೆರಗಿರಲ್ಲ ಮೆರಗಿರ್ತದೆ”
“ಎಲ್ರೂ ಬಸವಿ ಆಗಲ್ಲ
ನೆನಪಿಟ್ಕೊಳ್ಳೋ ಇಸವಿ ಆಗ್ತಾರೆ”
ಈ ತರಹದ ಸಂಭಾಷಣೆಯೇ ಚಿತ್ರದ ಜೀವಾಳ ಅಂದ್ರೆ ತಪ್ಪಾಗಲ್ಲ. ಇಡೀ ಚಿತ್ರದಲ್ಲಿ ಮಾಸ್ತಿ ಅವರ ಸಂಭಾಷಣೆ ಪ್ರೇಕ್ಷಕನಲ್ಲಿ ಹೊಸ ಹುರುಪು ತುಂಬುತ್ತದೆ. ಕೊನೆಯಲ್ಲಿ
“ಮಳೆ ಬಂದ್ರೆ ಭೂಮಿಗೆ ಸಮಾಧಾನ
ಸಂವಿಧಾನ ಬಂದ್ರೆ ನಮಗೆಲ್ಲ ಸಮಾಧಾನ” ಅನ್ನೋ ಸಂಭಾಷಣೆ ನಾಯಕನ ಬಾಯಲ್ಲಿ ಬಂದಾಗಲಂತೂ ಗೊತ್ತಿಲ್ಲದೇ ಕೈಗಳು ಚಪ್ಪಾಳೆ ತಟ್ಟಿದವು.
ಒಟ್ಟಾರೆ ‘ ಲ್ಯಾಂಡ್ ಲಾರ್ಡ್’ ಈ ವರ್ಷದ ಸೂಪರ್ ಹಿಟ್ ಚಿತ್ರ ಒಂದ್ಸಲ ನೋಡಿ ಖುಷಿಪಡಿ.

-ಸಿದ್ದರಾಮ ತಳವಾರ, ಕಿತ್ತೂರು, ಬೆಳಗಾವಿ ಜಿ.