ಅನುದಿನ ಕವನ-೧೮೫೦, ಕವಿ: ಸಿದ್ದರಾಮ ತಳವಾರ, ಕಿತ್ತೂರು, ಕವನದ ಶೀರ್ಷಿಕೆ: ಪ್ರೇಮ!

ಪ್ರೇಮ!

ಎಲ್ಲೋ ಓದಿದ ನೆನಪು
ಥೇಟ್ ಹಾಗೆಯೇ..
ನಿನ್ನ ಕಣ್ಣುಗಳು ಎರಡಲಗಿನ ಕತ್ತಿಗಳೇ ಸರಿ,
ಮೋಹಕ ಸೆಳೆತ ಅಬ್ಬಬ್ಬ…
ಎದೆಗಿಳಿಸಿದರೆ ರಮ್ಯ ನೋಟ
ಎದೆ ಸೀಳಿದರೆ ಏನೀ ಹರಿತ,

ಎದೆ ಅಮೃತ ಬಳ್ಳಿ
ಕಾಯಿಲೆಗೆ ಮದ್ದು ಕಾಯಕ್ಕೆ ಮುದ್ದು
ಕಣ್ಮುಚ್ಚಿದರೆ ನೇರ ಸ್ವರ್ಗ
ಹಸಿವೆ, ನಿದಿರೆ, ನೀರಡಿಕೆಯಿಲ್ಲ
ನಿರಂತರ ಸುಖ ನೆಮ್ಮದಿಯ ನಿದಿರೆ
ಇಂದ್ರನಂಗಳದಲ್ಲಿ ಹೂವಾಗದಿರಲಷ್ಟೇ!

ಈ ದಾರಿಯ ಆಗಂತುಕ ಆಸಾಮಿ ನಾನು
ಪ್ರೀತಿ ಸುಮ ಪ್ರೇಮದ ಘಮ ಅರಿಯದವ
ಅನವರತ ಸುಖವರಸಿ ಗಿರಿ ಕಾನ ಹಿಮ ತುಳಿದು
ಮಾಂಸ ಖಂಡಗಳ ದಣಿಸಿ ಅಗಣಿತ ಧ್ಯಾನಿಸಿದ
ನಿಜಾತ್ಮವನರಿತ ಬಯಲ ಜಂಗಮ,

ಹೇಳು….
ನಾ ಎಂದೂ ಓದದ ಎಲ್ಲೂ ಕೇಳದ
ಯಾರೂ ಬರೆಯದ ನಿನ್ನೊಳಗಿನ
ಈ ಸುಖದ ಧ್ಯಾನ ನನ್ನುಸಿರ ಜ್ಞಾನಕ್ಕೆ
ಪ್ರೇಮವಲ್ಲದೇ ಮತ್ತೊಂದು ಹೆಸರೇನು?


✍️-ಸಿದ್ದರಾಮ ತಳವಾರ, ಕಿತ್ತೂರು
—–