ಅನುದಿನ ಕವನ-೧೮೫೩, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಸೋಲುತ್ತೇನೆ…

ಸೋಲುತ್ತೇನೆ…

ಅವನು ಹೇಳುತ್ತಾನೆ
ಮತ್ತೇರಿಸುವುದಿಲ್ಲ ನಿನ್ನ ನೋಟ
ಬೆರಳ ತಾಗಿಸು ಎಂದು…

ನಾನೋ ನನ್ನ ಮರೆತು
ಅವನೆಡೆಗೆ ಒಂದೇ ಸಮನೆ ನೋಡುವಾಗ
ಅವನಿಗೆ ಬೇರೇನೋ ಬೇಕು
ಎಂಬುದನ್ನು ಮರೆಯುತ್ತೇನೆ…

ಮತ್ತೆ ಹೇಳುತ್ತಾನೆ ಅವನು
ಆಗೆ ಕಾಡಬೇಡ
ಸನಿಹ ಬಂದು ತೋಳು ಬಳಸಿ
ಎದೆ ಅಪ್ಪಿ ಬಿಡು
ಉಸಿರುಸಿರು ತಾಗಿ
ಜಗವ ಮರೆತು ಬಿಡೋಣ ಎಂದು…

ನಾನೋ ಈಗಾಗಲೇ ನಿನಗೆ ಶರಣಾಗಿ
ಎಲ್ಲವ ಮರೆತು ಹೋಗಿದ್ದೇನೆ ಎಂಬುದ
ಅವನಿಗೆ ಹೇಗೆ ವಿವರಿಸಿ ಹೇಳಲಿ
ತುಟಿ ಸನ್ನೆಗಳ ಗುರುತಿಸಿ
ಬೇಕಂತಲೇ ನಾನು ದೂರ ನಿಲ್ಲುತ್ತೇನೆ…

ಮತ್ತೆ ತಡವರಿಸಿ ಅವನು
ಮಾತನಾಡಿ, ಸೆಳೆಯಲೆತ್ನಿಸಿ ಸೋತು
ಮೊದಲ ಬೇಟಿಯ ಕುರಿತು
ಇಬ್ಬರ ಸುತ್ತಲಿದ್ದ ಮೌನದ ಬಗ್ಗೆ
ತಕರಾರು ತೆಗೆದು ಕಾಲು ಕೆರೆದು
ಹುಸಿ ನಗೆಯ ಚೆಲುವನಾಗಿ
ಹಣೆಗೆ ಹಣೆ ಹೊತ್ತಿ ಪ್ರೀತಿಯ
ಸಂಭ್ರಮದ ಹಬ್ಬ ಮಾಡುತ್ತಾನೆ…

ನಾನೋ ಅವನದೆ ಗುಂಗಿನಲ್ಲಿ
ಆಗೆ ಉದುರಿ ಮತ್ತೆ ಚಿಗುರುವ
ವಸಂತ ಹೂಗಳ ಮತ್ತು
ಚಿಗುರೆಲೆಯ ತಂಬೆರಳ ಆಗೆ
ಮತ್ತೆ ಮತ್ತೆ ಅವನೊಳಗೆ
ಚಿಗುರುತೆನೆಂಬುದನ್ನು ಅವನಿಗೆ
ನೆನಪಿಸಲು ಸೋಲುತ್ತೇನೆ….


-ಸಿದ್ದು ಜನ್ನೂರ್, ಚಾಮರಾಜನಗರ