ಅನುದಿನ ಕವನ-೧೮೬೧, ಕವಯತ್ರಿ: ವಿಶಾಲ ಆರಾಧ್ಯ, ಬೆಂಗಳೂರು, ಕವನದ ಶೀರ್ಷಿಕೆ: ಅತ್ತು ಹಗುರಾಗಿ ಬಿಡು

ಅತ್ತು ಹಗುರಾಗಿ ಬಿಡು

ಮನದ ಮುಗಿಲಲಿ ಕವಿದ ದುಗುಡದ
ಹಿಮವ ಕಣ್ಣೀರಾಗಿ ಹರಿಸಿಬಿಡೇ ಗೆಳತಿ
ಯಾವುದು ಹಾಲೆಂದು – ನೀರೆಂದು
ತಿಳಿದುಹೋಗಲಿ ಅತ್ತು ಹಗುರಾಗಿಬಿಡು//

ಸ್ನೇಹವೇ ದುಗುಡಕೆ ?
ಅಮ್ಮನುಣಿಸಿದ ಎದೆ ಹಾಲಿಗಿಂತಲೇ ?
ಮೈಯ್ಯಿಡಿದು ಕೈಯ್ಯಿಡಿದು ನಡೆಸಿದ
ಪ್ರಸಂಗಗಳಿಂದು ಸರಿದಾಗಿದೆ
ದೂರ ಬಂದಾಗಿದೆ….//
ಜೋರಾಗಿ ಒಮ್ಮೆ ಅತ್ತು ಋಣವ
ತೀರಿಸಿಬಿಡು ಗೆಳತಿ //

ಮನದ ಕಿಟಕಿಯ ಮೇಲೆ
ಹಂಚಿದ್ದ ಕನಸ ಪರದೆಯ
ಒಮ್ಮೆ ಸರಿಸಿ ಬಿಡೇ ಗೆಳತೀ//
ಕಿಟಕಿಯಾಚೆಗಿನ ವಿಸ್ತಾರ ಲೋಕದ
ಭ್ರಮೆಯು ಕಣ್ಮುಂದೆ ಬಂದುಬಿಡಲಿ!
ಕನಸಾಗಿದ್ದರೆ ಒಮ್ಮೆ ಅತ್ತು ಹಗುರಾಗಿಬಿಡು!
ಅದರ ಋಣವೂ ಹರಿದು ಹೋಗಲಿ //

ರಕ್ತ ಸಂಬಂಧ ಸಿಕ್ಕಾಗಿ ಮನದ ಎಳೆಗಳೆಲ್ಲ
ಗಂಟು ಗಂಟಾದವೇ? ಬಿಡಿಸ ಹೋದಷ್ಟೂ
ಕೈಗೆ ಸಿಗದ ಸಿಕ್ಕುಗಳು ಎಚ್ಚರ!!!
ಎಂಥವೇ …?? ಬಿಟ್ಟು ಬಿಡು .!!
ಎಷ್ಟು ರಕ್ತ ಹರಿಸಿಲ್ಲ ಹೆಣ್ಣಾಗಿ
ಬಿಟ್ಟುಬಿಡು ಮೋಹಗಳ
ಮನದ ಗೋಡೆಯ ಸುತ್ತ
ಗೋಜಲಾದ ಬರಹಗಳ ಗೀಚದಿರು //

ದುಃಖ ಉಮ್ಮಳಿಸಿದರೆ ಕರಗಿಬಿಡು
ಜೋರಾಗಿ ಅತ್ತು ಹಗುರಾಗಿಬಿಡು
ಕರಗುತ್ತಾ ಮರವಾಗಿಬಿಡು ಜಡವಾಗಿ
ನಿನಗೆ ನೀನೇ ವರವಾಗಿ ಗುರುವಾಗಿಬಿಡು//

ಜೋರಾಗಿ ಅತ್ತು ಹಗುರಾಗಿಬಿಡು /
ಎಲ್ಲಾ ಋಣಗಳು ಹರಿದು ಹೋಗಲಿಬಿಡು//


-ವಿಶಾಲ ಆರಾಧ್ಯ, ಬೆಂಗಳೂರು