ಸಂಕಷ್ಟಗಳ ನಡುವಿನ ಸಾಧಕರು ‘ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್’
ಕುವೆಂಪು ವಿವಿ ಕನ್ನಡ ಭಾರತಿ ನಿರ್ದೇಶಕ, ಸಾಹಿತಿ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಅವರು ಇಂದು ತಮ್ಮ ೫೫ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಡವಿಭಾಗದ ಸಂಶೋಧನಾರ್ಥಿ ಟಿ.ಓಬಳೇಶ್ ಅವರು ಡಾ. ನೆಲ್ಲಿಕಟ್ಟೆ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಮೂಲಕ ಶುಭ ಕೋರಿದ್ದಾರೆ. ಕರ್ನಾಟಕ ಕಹಳೆ ಸಾಹಿತ್ಯ ಬಳಗದ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಅವರಿಗೆ karnatakakahale.com ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತದೆ.
(ಸಂಪಾದಕರು)

ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರ ಹುಟ್ಟುಹಬ್ಬದ ಈ ಮಧುರ ಸಂದರ್ಭದಲ್ಲಿ, ಅವರ ಬದುಕು ಒಂದು ಸರಳ ಗ್ರಾಮೀಣ ಮಣ್ಣಿನಿಂದ ಆರಂಭವಾಗಿ, ಅಧ್ಯಾತ್ಮದ ಆಳವಾದ ನದಿಯಾಗಿ ಹರಿದು, ಸಾಹಿತ್ಯದ ಉನ್ನತ ಶಿಖರಗಳನ್ನು ತಲುಪಿದ ಒಂದು ಪ್ರೇರಣಾಮಯ ಯಾತ್ರೆಯಂತಿದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ನೆಲ್ಲಿಕಟ್ಟೆ ಗ್ರಾಮದಲ್ಲಿ ೧೯೭೨ರ ಮಾರ್ಚ್ ೪ರಂದು ಮಾರಕ್ಕ ಮತ್ತು ಎಚ್. ಸಿದ್ದಪ್ಪ ದಂಪತಿಗಳ ಮಡಿಲಲ್ಲಿ ಜನಿಸಿದ ಸಿದ್ದೇಶ್ ಅವರು, ತಮ್ಮ ಹುಟ್ಟೂರಿನ ಮಣ್ಣಿನ ಸರಳತೆಯನ್ನು, ಗ್ರಾಮೀಣ ಬದುಕಿನ ನೋವು-ನಲಿವುಗಳನ್ನು, ಸಮಾಜದ ಅಸಮಾನತೆಗಳನ್ನು, ದುಃಖ-ದುಮ್ಮಾನಗಳನ್ನು ಹೃದಯದಲ್ಲಿ ಧರಿಸಿಕೊಂಡು ಬೆಳೆದರು. ಆ ಹಳ್ಳಿಯ ಹೊಲ-ಗದ್ದೆಗಳ ನಡುವೆ, ಪುಟ್ಟ ಮಕ್ಕಳ ಆಟದ ಧೂಳಿನಲ್ಲಿ, ಶಾಲೆಯ ಗುಡಿಸಲಿನಲ್ಲಿ ಆರಂಭವಾದ ಶಿಕ್ಷಣದ ಹಾದಿ ಇವರನ್ನು ಸರ್ಕಾರಿ ಪ್ರೌಢ ಶಾಲಾ ಅಧ್ಯಾಪಕರಾಗಿ, ಕ್ಷೇತ್ರಸಂಪನ್ಮೂಲ ವ್ಯಕ್ತಿಯಾಗಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾಗಿ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಯಾಗಿ ತದನಂತರ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ವಿಭಾಗದ ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ, ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರನ್ನಾಗಿಸಿದೆ.
ತಮ್ಮ ಹುಟ್ಟೂರಿನ ಪ್ರಾಥಮಿಕ ಶಾಲೆಯಿಂದ ಆರಂಭವಾಗಿ, ಇಸಾಮುದ್ರ ಮತ್ತು ಕಾಲಗೆರೆ ಗ್ರಾಮಗಳಲ್ಲಿ ಮಾಧ್ಯಮಿಕ-ಪ್ರೌಢ ಶಿಕ್ಷಣವನ್ನು ಪಡೆದರು. ಬಿದರಕೆರೆಯಲ್ಲಿ ಪದವಿ ಪೂರ್ವ ವ್ಯಾಸಂಗ ಮಾಡಿ, ಚಿತ್ರದುರ್ಗದ ಕಲಾ ಕಾಲೇಜಿನಲ್ಲಿ ಬಿ.ಎ. ಪದವಿಯನ್ನು ಏಳನೇ ರ್ಯಾಂಕ್ನೊಂದಿಗೆ ಪಡೆದರು. ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯಸ್ವಾಮಿಗಳ ಸ್ಮರಣಾರ್ಥ ಚಿನ್ನದ ಪದಕದೊಂದಿಗೆ ಬಿ.ಎಡ್. ಪದವಿ ಪಪೂರೈಸಿದರು

ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ.ಯನ್ನು ಮೂರನೇ ರ್ಯಾಂಕ್ನೊಂದಿಗೆ ಪಡೆದು, ೨೦೦೫ರಲ್ಲಿ ‘ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿ: ಒಂದು ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದರು. ವಿದ್ಯಾರ್ಥಿ ದಿನಗಳಲ್ಲೇ ಉತ್ತಮ ಭಾಷಣಕಾರರಾಗಿ ಗುರುತಿಸಿಕೊಂಡ ಇವರು, ಡಾ. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ದಾರ್ಶನಿಕತೆಯಿಂದ, ದಲಿತಬಂಡಾಯ ಸಾಹಿತ್ಯ ಮತ್ತು ಕುವೆಂಪು ಅವರ ಮಾನವತಾವಾದಿ ಚಿಂತನೆಗಳಿಂದ ಪ್ರಭಾವಿತರಾದರು. ಈ ವಿಚಾರಧಾರೆಗಳು ಇವರ ಬರಹಗಳಲ್ಲಿ, ಚಿಂತನೆಗಳಲ್ಲಿ, ಭಾಷಣಗಳಲ್ಲಿ ಒಂದೇ ನದಿಯಂತೆ ಹರಿಯುತ್ತವೆ- ಅಧ್ಯಾತ್ಮವನ್ನು ಸಾಮಾಜಿಕ ಸುಧಾರಣೆಯೊಂದಿಗೆ ಸಂಯೋಜಿಸುವ ಅಪೂರ್ವ ಪ್ರಯತ್ನ ಇವರದು.
ಸಾಹಿತ್ಯದ ಪಯಣವು ೨೦೦೧ರಲ್ಲಿ ‘ಬಿಸಿಲು-ಮಳೆ’ ಎಂಬ ಪ್ರಥಮ ಕವನ ಸಂಕಲನದೊಂದಿಗೆ ಆರಂಭವಾಯಿತು. ಯುವ ಕವಿಯಾಗಿ ಬರೆದ ಆ ಕವನಗಳು ಸಾಮಾಜಿಕ ವಿಷಮತೆಯನ್ನು, ಶೋಷಣೆಯನ್ನು, ವೇಷಧಾರಿಗಳ ಅಪ್ರಾಮಾಣಿಕತೆಯನ್ನು ತೀಕ್ಷ್ಣವಾದ ಭಾಷೆಯಲ್ಲಿ ಚಿತ್ರಿಸಿದಂತಹವು. ಡಾ. ಎಚ್.ಜೆ. ಲಕ್ಕಪ್ಪಗೌಡ ಅವರು ಆಗಲೇ “ಯುವ ಆದರ್ಶದ ಹಂಬಲ, ಸಮಾಜ ಸುಧಾರಣೆಯ ತವಕ… ಕಾವ್ಯಕ್ಷೇತ್ರದಲ್ಲಿ ಬೆಳೆದು ಬೆಳಗಲಿ” ಎಂದು ಹಾರೈಸಿದ್ದರು. ನಂತರ ಬಂದ ‘ಸಾಹಿತಿ ಸಂಕುಲ’, ‘ಛಲಬೇಕು ಶರಣಂಗೆ’ ಮುಂತಾದ ಕೃತಿಗಳು ಅವರ ಚಿಂತನೆಯ ಒಳನೋಟವನ್ನು ತೋರಿಸಿದವು.

ಆದರೆ ಅವರ ಬರಹಗಳಲ್ಲಿ ಅತ್ಯಂತ ವಿಶಿಷ್ಟವಾದ್ದು ಅಧ್ಯಾತ್ಮದೊಂದಿಗಿನ ಸಮನ್ವಯ. ‘ಅಜಾತ’ (೨೦೧೫) ಭಕ್ತಿಗೀತೆಗಳ ಸಂಕಲನವಾಗಿ ಶ್ರೀಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿ ಮತ್ತು ಮಹದೇವಮ್ಮನವರ ಆಧ್ಯಾತ್ಮಿಕ-ಸಾಮಾಜಿಕ ಸೇವೆಯನ್ನು ಸುಲಲಿತವಾಗಿ ಹಾಡುವಂತಿದೆ. ಸದ್ಗುರು ಶ್ರೀ ಶ್ರೀ ಶ್ರೀ ಶಿವಲಿಂಗಾನಂದ ಸ್ವಾಮಿಗಳು “ಹೀನ-ದೀನ-ದಲಿತರನ್ನು ತನ್ನವರೆಂದು ಅಪ್ಪಿಕೊಳ್ಳುವ ಆಪ್ತತೆಯೇ ಭಕ್ತಿ… ಇದೇ ‘ಅಜಾತ’ದ ಶಕ್ತಿ” ಎಂದು ಹೇಳಿದ್ದರು. ‘ಶ್ರೀಗುರು’ ನಾಟಕವು (೨೦೧೭) ಶ್ರೀಗುರು ಕರಿಬಸವೇಶ್ವರಜ್ಜಯ್ಯ ಸ್ವಾಮಿಯ ಜೀವನವನ್ನು ರಂಗರೂಪದಲ್ಲಿ ತಂದು, ಭಕ್ತರ ಕಷ್ಟಗಳ ನಿವಾರಣೆಯ ಮಾರ್ಗವನ್ನು ತೋರಿಸುತ್ತದೆ. ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಕರಿಬಸವರಾಜೇಂದ್ರ ಮಹಾಸ್ವಾಮಿಗಳು “ಇತಿಹಾಸ-ಪುರಾಣ-ಧರ್ಮ-ಅಧ್ಯಾತ್ಮ ಬೆರೆತು ಬೆರಗುಗೊಳಿಸುತ್ತದೆ” ಎಂದು ಪ್ರಶಂಸಿಸಿದ್ದರು.
ಇವರ ಅತ್ಯಂತ ಪ್ರಮುಖ ಮತ್ತು ಗಮನಾರ್ಹ ಕೃತಿಯೆಂದರೆ ‘ಅಂಬೇಡ್ಕರ್ ಮತ್ತು ಅಧ್ಯಾತ್ಮ’ (೨೦೨೧). ಇಲ್ಲಿ ಅಂಬೇಡ್ಕರ್ ಅವರ ಸಂವಿಧಾನವನ್ನು ಅಧ್ಯಾತ್ಮದ ಉತ್ಕೃಷ್ಟ ಪ್ರತಿರೂಪವೆಂದು ವಿಶ್ಲೇಷಿಸುತ್ತಾರೆ. ಅಶೋಕ್ ಎನ್. ಚಲವಾದಿ ಅವರು “ಆಳಿಸಿಕೊಳ್ಳುವವರನ್ನೇ ಅರಸರನ್ನಾಗಿಸಿದ ಅಂಬೇಡ್ಕರ್… ಅಧ್ಯಾತ್ಮದ ನೆಲೆಯೊಳಗೆ ಅವರ ಚಿಂತನ-ಮಂಥನವಿದೆ” ಎಂದು ಹೇಳಿದ್ದಾರೆ. ‘ತನ್ನ ತಾನರಿದಡೆ’ಯಂತಹ ಕೃತಿಗಳು ವ್ಯಕ್ತಿತ್ವ ವಿಕಾಸದ ಚಿಂತನೆಗಳನ್ನು, ಸಹನೆ-ಸದ್ಗುಣ-ಸಮಾಧಾನದ ಮಹತ್ವವನ್ನು ತೀರ್ವವಾಗಿ ಬಿಚ್ಚಿಡುತ್ತವೆ. ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’, ‘ಕನಕದಾಸರ ಲೋಕದೃಷ್ಟಿ’, ‘ಮರ್ತ್ಯದ ವಿಸ್ಮಯ ಮಹದೇವಮ್ಮ’ ಮುಂತಾದವು ಸಾಮಾಜಿಕ-ಸಾಂಸ್ಕೃತಿಕ ನಾಯಕರನ್ನು ಗೌರವಿಸುತ್ತವೆ. ‘ಸಾಂಸ್ಕೃತಿಕ ನಾಯಕಿ ಒನಕೆ ಓಬವ್ವ’ ಕೃತಿಯು ಇತಿಹಾಸದ ಅಮರ ವೀರವನಿತೆಯರನ್ನು ಪುನಃ ಜನರ ಮುಂದಿಡುತ್ತವೆ.
ಶ್ರೀಯುತರು ಬರೆದಿರುವ ನಮ್ಮ ‘ಕಾಣ್ಕೆ’ ಕವಿತೆಯು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯವಾಗಿದೆ. ‘ವೃಕ್ಷಮಾತೆ ಸಾಲುಮರದ ತಿಮ್ಮಕ್ಕ’ ಕೃತಿಯು ಗುಲ್ಬರ್ಗಾ ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ, ಕ್ರೆೈಸ್ಟ್ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿದೆ. ‘ಸಾಂಸ್ಕೃತಿಕ ನಾಯಕಿ ಒನಕೆ ಓಬವ್ವ’ ಕೃತಿಯು ಬೆಳಗಾವಿ ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯವಾಗಿದೆ. ಹಾಗೆಯೆ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಲಕ್ಷ ಲಕ್ಷ ಜನ ಕೇಳುಗರಿಗೆ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಪ್ರೇರಿತ ಸಾಧಕರ ಸಂದರ್ಶನದ ಸರಣಿಯಲ್ಲಿ ೫೨ ಸಂಚಿಕೆಗಳನ್ನು ನಡೆಸಿಕೊಟ್ಟಿರುವುದು, ೧೫ ಸಂಚಿಕೆಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕೃತಿಗಳನ್ನು ಪರಿಚಯಿಸುವ ಕಾರ್ಯದಲ್ಲಿ ಯಶಸ್ವಿಯಾಗಿರುವರು. ಹಲವು ರಾಷ್ಟ್ರೀಯ, ರಾಜ್ಯ ಮಟ್ಟದ ವಿಚಾರ ಸಂಕಿರಣ, ಕಾರ್ಯಗಾರಗಳನ್ನು ರೂಪಿಸಿ ಯಶಸ್ಸು ಪಡೆದಿದ್ದಾರೆ.
ಇಪ್ಪತ್ತಕ್ಕೂ ಹೆಚ್ಚು ಸ್ವಂತ ಕೃತಿಗಳು, ಹಲವಾರು ಸಂಪಾದಿತ ಸಂಪುಟಗಳು- ಕುವೆಂಪು, ಶಾಂತಿನಾಥ ದೇಸಾಯಿ, ಯುಗಧರ್ಮ ರಾಮಣ್ಣ ಅವರ ಕೃತಿಗಳ ಸಂಕಲನಗಳು-ಸಂಶೋಧನಾ ಯೋಜನೆಗಳು (ನೆಲ್ಲಿಕಟ್ಟೆ ಗ್ರಾಮ ಸಾಂಸ್ಕೃತಿಕ ಅಧ್ಯಯನ, ಛಲವಾದಿ ಜನಾಂಗ ಅಧ್ಯಯನ, ಅಂಬೇಡ್ಕರ್ ಮತ್ತು ಅಧ್ಯಾತ್ಮ), ಪ್ರಶಸ್ತಿಗಳು (ಶಿಕ್ಷಕ ವಿಭೂಷಣ (೨೦೦೪), ಡಾ.ಎಚ್.ನರಸಿಂಹಯ್ಯ ಪ್ರಶಸ್ತಿ (೨೦೦೭), ಮಹಾತ್ಮ ಜ್ಯೋತಿ ಬಾಪುಲೆ’ ರಾಷ್ಟ್ರೀಯ ಪ್ರಶಸ್ತಿ (೨೦೧೦), “ಡಿ ಎಸ್ ಮ್ಯಾಕ್ಸ್ ಸಾಹಿತ್ಯ ಶ್ರೀ’’ ಪ್ರಶಸ್ತಿ (೨೦೧೯), ಸ್ಫೂರ್ತಿಶ್ರೀ ಪ್ರಶಸ್ತಿ (೨೦೨೦), ಕವಿ ವಿಭೂಷಣ ಪ್ರಶಸ್ತಿ (೨೦೨೧), ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ (೨೦೨೨), ಶ್ರೀಗಂಧ ಹಾರ ಪ್ರಶಸ್ತಿ (೨೦೨೨-೨೩), ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (೨೦೨೩), ಭಾರತೀಯ ಸಾಹಿತ್ಯ ರತ್ನ (೨೦೨೫), ಕಿ.ರಂ.ನಾಗರಾಜ್ ರಾಷ್ಟ್ರೀಯ ವಿಮರ್ಶಾ ಪ್ರಶಸ್ತಿ (೨೦೨೫)- ಇವೆಲ್ಲವೂ ಅವರ ಅವಿರತ ಪರಿಶ್ರಮದ ಸಾಕ್ಷಿಗಳು.
ಆದರೆ ಅವರಿಗೆ ಅತ್ಯಂತ ಮುಖ್ಯವಾದ್ದು ಅಧ್ಯಾತ್ಮದ ಮೂಲಕ ಸಮಾಜವನ್ನು ಉದ್ಧರಿಸುವ ಕನಸು. ಇಂದಿನ ಒತ್ತಡ-ಆತಂಕ-ಅವಸರದ ಕಾಲದಲ್ಲಿ ಭಕ್ತಿ ಮಾರ್ಗವೇ ಶಾಂತಿ-ನೆಮ್ಮದಿಯ ಸರಳ ಸೋಪಾನ ಎಂದು ನಂಬುತ್ತಾರೆ. “ಎಲ್ಲರೂ ನಮ್ಮವರು, ನಾನು ಎಲ್ಲರೊಳಗೆ ಇರುವೆ” ಎಂಬ ಭಾವನೆಯನ್ನು ಮೂಡಿಸುವ ಅಧ್ಯಾತ್ಮವೇ ಅವರ ಚಿಂತನೆಯ ಕೇಂದ್ರಬಿಂದು. ಡಾ. ಮೀರಾಸಾಬಿಹಳ್ಳಿ ಶಿವಣ್ಣ ಅವರು “ಉಜ್ವಲ ಪ್ರತಿಭೆ” ಎಂದರೆ, ಡಾ. ಕಮಲ ಹಂಪನಾ, ಡಾ. ಸಿ.ಎಸ್. ಶಿವಕುಮಾರಸ್ವಾಮಿ, ಡಾ. ಎಚ್.ಎಂ. ಮಹೇಶ್ವರಯ್ಯ ಮುಂತಾದ ಹಿರಿಯರು ಅವರ ಸಂಶೋಧನೆಗಳ ಗುಣಮಟ್ಟವನ್ನು ಹೊಗಳಿದ್ದಾರೆ.
ಇಂದು, ಮಾರ್ಚ್ ೪ರ ಈ ಹುಟ್ಟುಹಬ್ಬದ ದಿನದಂದು, ಕನ್ನಡ ಜಗತ್ತು ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ನಿಮ್ಮ ಬರಹಗಳು ಇನ್ನಷ್ಟು ಜನರ ಹೃದಯಕ್ಕೆ ತಲುಪಲಿ, ಅಧ್ಯಾತ್ಮದ ಬೆಳಕು ಸಮಾಜದ ಪ್ರತಿ ಮೂಲೆಗೂ ಹರಡಲಿ, ಸಾರ್ಥಕದ ಬದುಕಿನ ಮಾರ್ಗವನ್ನು ತೋರಿಸಲಿ, ಶಿಕ್ಷಣ-ಸಂಘಟನೆ-ಹೋರಾಟದ ಮೂಲಕ ಸರ್ವೋದಯದ ಕನಸನ್ನು ನನಸಾಗಿಸಲಿ.
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಸರ್ ನಿಮ್ಮ ಚಿಂತನೆ-ಮಂಥನಗಳು ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ, ಸಮಾಜಕ್ಕೆ ಬೆಳಕಾಗಲಿ, ಹೃದಯಗಳನ್ನು ಒಗ್ಗೂಡಿಸಲಿ.

-ಓಬಳೇಶ ಟಿ
ಸಂಶೋಧನಾರ್ಥಿ
ಕನ್ನಡ ಭಾರತಿ
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
