ಅನುದಿನ ಕವನ-೧೮೯೨, ಕವಯತ್ರಿ: ಡಾ.ಮುಮ್ತಾಜ್ ಬೇಗಂ, ಗಂಗಾವತಿ

ಮನಸ್ಸೆಂಬ ಗೋಡೆಯಲಿ
ಹಕಳಿ ಹಕಳಿಗಳು ಕೀಳುತ್ತಿವೆ
ಮೆತ್ತಿದರೂ, ಸಾರಿಸಿದರೂ
ಮತ್ತೆ ಶಕ್ತಿಕುಂದಿ
ಉದುರುತ್ತಲೇ ಇದೆ
ಹೇಗೆ ನಿಲ್ಲಿಸಲಿ?

ಬೆಳಕೊ ಮಬ್ಬಾಗಿ ಹೋಗಿದೆ
ಮನಸ್ಸಿನೊಳಗಿನ
ಕತ್ತಲೆಯ ಮುಂದೆ,
ಕುಳಿತ ನೆಲವು ನಡುಗುತ್ತಿದೆ
ಕ್ರೌರ್ಯದ ಕಂಪನಕ್ಕೆ
ಹೇಗೆ ಮುಂದಡಿ ಇಡಲಿ?

ಗೋಡೆಗಚ್ಚಿದ ಬಣ್ಣ ಭಿನ್ನವಾದರೂ
ಮನೆಯಂಬ ಮನದ ನೆಲದಲಿ
ನಗುತ ನಲಿಯುತ,
ನೆರೆಹೊರೆಯು ನನ್ನದೆನ್ನುತ
ಒಂದಾಗಿ ಕೂಡಿ ಬೆಳೆದೇವು

ಕೈಮುಗಿದು, ಹೃದಯಮುಟ್ಟಿ,
ತಲೆಬಾಗಿ ನಮಿಸಿದೇವು..
ನಿನ್ನ ಹೆಸರಿನ ಬಣ್ಣ ಬಣ್ಣದ ಧ್ವಜಗಳು ರಂಗೇರಿ
ಆರ್ಭಟಿಸಿ, ಮನ ಮನೆಗಳು
ಒಡೆ ಒಡೆದು ಚೂರಾಗಿವೆ

ಹಳೆಯ ಬಟ್ಟೆಯ ಕೌದಿ ಹೊಸತಾದರೂ
ನನ್ನ ಬಟ್ಟೆ ಬಣ್ಣವಿದು,
ನಿನ್ನ ಬಟ್ಟೆಯ ಬಣ್ಣವದು ಎಂಬ
ಕಿತ್ತಾಟದಲಿ ಹೊಲಿದ ಕೌದಿ ನಲುಗಿ ಹೋಗಿದೆ
ಮತ್ತೆ ಜೋಡಿಸಿ ಹೊಲಿಯೆಂದರೆ
ಹೇಗೆ ಹೊಲಿಯಲಿ??
ಸೌಹಾರ್ದದ ದಾರ ಕಳೆದು ಹೋಗಿದೆ..!


-ಡಾ.ಮುಮ್ತಾಜ್ ಬೇಗಂ, ಗಂಗಾವತಿ
—–