ಈ ಯುದ್ಧಗಳ ಕುರಿತು….
ಈ ಯುದ್ಧಗಳ ಕುರಿತು
ಪದ್ಯ ಬರೆಯಲು ಆಗುವುದಿಲ್ಲ
ಅಲ್ಲಿ ಸಾವಿರುತ್ತದೆ
ನೋವಿರುತ್ತದೆ
ಎಳೆ ಮಕ್ಕಳ ಆಕ್ರಂದನವಿರುತ್ತದೆ…
ಅಲ್ಲಿ ಸತ್ತವರ ಲೆಕ್ಕ ಎಣಿಸಲಾಗುತ್ತದೆ
ಮದ್ದುಗುಂಡುಗಳ ಶಬ್ಧವಿರುತ್ತದೆ
ಮಕ್ಕಳು ಮರಿಗಳ ಗೋಳಾಟವಿರುತ್ತದೆ
ದೊರೆಗೆ ಲಾಭದ ದುರುದ್ದೇಶವಿರುತ್ತದೆ
ಈ ಯುದ್ಧಗಳೇ ಆಗೆ ಬಡವರ ನೆತ್ತರು ಹರಿಸಿ
ಅವರ ಸಮಾಧಿಯ ಮೇಲೆ ಸರ್ವಾಧಿಕಾರದ
ಬಂಗಲೆ ಕಟ್ಟಲಾಗುತ್ತದೆ…
ಅಲ್ಲಿ ಮಾನವೀಯತೆ ಮಣ್ಣಾಗಿರುತ್ತದೆ
ಮನುಷ್ಯ ಮನುಷ್ಯನ ಮೇಲೆ
ಮದ್ದು ಗುಂಡುಗಳ ಸಿಡಿಸಿ
ಭೂಮಿಯ ರಕ್ತಸಿಕ್ತಗೊಳಿಸಿ
ನಾನೇ ಮೇಲೆಂದು ಮೆರೆವ ಯುದ್ಧೋನ್ಮಾದದ
ಭಯಾನಕ ಕರಾಳ ಮುಖದ ಮುಖವಾಡ ವಿರುತ್ತದೆ…
ಅಲ್ಲಿ ಹಸುಗೂಸುಗಳ ನೆತ್ತರು ಹರಿಸಿ
ಮನುಷ್ಯತ್ವವ ಸಾಯಿಸಲಾಗಿರುತ್ತದೆ
ಅಲ್ಲಿ ಅಪ್ಪ ಅಮ್ಮನ ಕಳೆದುಕೊಂಡು ಮಕ್ಕಳ ರೋಧನ
ಮುಗಿಲು ಮುಟ್ಟಿದ ಬಂಧುಗಳ ಆಕ್ರಂದನ
ದೊರೆಗೆ ಕೇಳಿಸುವುದಿಲ್ಲ
ಕಣ್ಣಿಗೆ ಕಾಣಿಸುವುದಿಲ್ಲ….

-ಸಿದ್ದು ಜನ್ನೂರ್, ಚಾಮರಾಜನಗರ
