The post ಕಾವ್ಯ ಕಹಳೆ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ವರವ ನೀಡು ವರಮಹಾಲಕ್ಷ್ಮಿ appeared first on Karnataka Kahale.
]]>
ಮಂಗಳ ರೂಪಿಣಿ ಮಂಜುಳಭಾಷಿಣಿ ಮಹಾಲಕ್ಷ್ಮಿ
ನಲಿಯುತ, ನಗುತಲಿ ಬಾರಮ್ಮ ದೇವಿ ವರಲಕ್ಷ್ಮಿ
ಶುಕ್ರವಾರದ ಶುಭ ಸಂಜೆಯ ಘಳಿಗೆಗೆ
ಬಾರಮ್ಮ ತಾಯಿ ಭಕ್ತರ ಮನೆ ಮನೆಗೆ ||
ಸಂಭ್ರಮ ಸಡಗರದಿ ಬಂದಿದೆ ಶ್ರಾವಣ ಮಾಸ
ಹೆಂಗಳೆಯರ ಮೊಗದಲಿ ಮೂಡಿದೆ ಮಂದಹಾಸ
ಮಹಾಲಕ್ಷ್ಮಿಯು ಬರುವಳು ವರವನು ನೀಡುತ
ಹರಸಿ ಹಾರೈಸಮ್ಮಾ ತಾಯೇ ಅನವರತ ||
ಸಂಸಾರ ಸಾಗರದಿ ಇರಲು ದುಃಖದ ಬಾಳು
ನಿನ್ನ ಕೃಪೆಯೊಂದಿರಲು ನಮಗಿಲ್ಲ ಸೋಲು
ಜಗದೋದ್ಧಾರಿಣಿ ಜಗದೀಶ್ವರಿ ಶ್ರೀ ಜನನಿ
ನಿನ್ನ ಪಾಡುತಲಿಹರು ಭಕ್ತ ವೃಂದ ಜಯವರ್ಧಿನಿ ||
ಬದುಕಿಗೆ ನಿನ್ನ ಅಭಯ ಇರಲು
ಸಕಲ ಸೌಭಾಗ್ಯಕ್ಕೂ ನೀನೇ ಕಣ್ಗಾವಲು
ಭವ ಭಯ ಬಹುದೂರ ನಿನ್ನ ಧ್ಯಾನದಿ
ನೀನೆಲೆಸುವಾ ಮನೆ ಸುಖ, ಶಾಂತಿ, ನೆಮ್ಮದಿ||

-ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ
The post ಕಾವ್ಯ ಕಹಳೆ, ಕವಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನಹಡಗಲಿ, ಕವನದ ಶೀರ್ಷಿಕೆ: ವರವ ನೀಡು ವರಮಹಾಲಕ್ಷ್ಮಿ appeared first on Karnataka Kahale.
]]>The post ರುದ್ರಾಂಬಾ ಎಂ.ಪಿ. ಪ್ರಕಾಶ್ ವಿಧಿವಶ: ಸಿಎಂ ಸಂತಾಪ appeared first on Karnataka Kahale.
]]>
ಹೂವಿನ ಹಡಗಲಿ, ಏ.29: ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ ಅವರ ಪತ್ನಿ ಎಂ.ಪಿ. ರುದ್ರಾಂಬಾ(83) ಅವರು ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ ನಿಧನರಾದರು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ರುದ್ರಾಂಬಾ ಅವರು ಪುತ್ರಿಯರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಸಮಾಜ ಸೇವಕಿ ವೀಣಾ ಮಹಾಂತೇಶ್, ರಂಗಭಾರತಿ ಅಧ್ಯಕ್ಷೆ ಸುಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಾಜಿ ಶಾಸಕ, ಏಕೈಕ ಪುತ್ರ ಎಂ. ಪಿ ರವೀಂದ್ರ ಅವರು ನಾಲ್ಕು ವರ್ಷಗಳ ಹಿಂದೆ ಅಕಾಲಿಕವಾಗಿ ವಿಧಿ ವಶರಾಗಿದ್ದಾರೆ. ಹೂವಿನ ಹಡಗಲಿಯಲ್ಲಿ ಮಂಗಳವಾರ ಸಂಜೆ 4.30 ಕ್ಕೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಯುತ್ತಿದೆ. ದಿ. ಎಂ.ಪಿ. ಪ್ರಕಾಶ್ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿಎಂ ಸಿದ್ದರಾಮಯ್ಯ ಸಂತಾಪ
ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ರುದ್ರಾಂಬಾ ಅವರು ತಮ್ಮ ಪತಿಯ ಆದರ್ಶಗಳನ್ನು ಪಾಲಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೊಂದ ಜನರ ಬದುಕಿಗೆ ಬೆಳಕಾಗಿದ್ದವರು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ.
The post ರುದ್ರಾಂಬಾ ಎಂ.ಪಿ. ಪ್ರಕಾಶ್ ವಿಧಿವಶ: ಸಿಎಂ ಸಂತಾಪ appeared first on Karnataka Kahale.
]]>The post ಹೂವಿನ ಹಡಗಲಿ: ಶೋಭಾ ಪ್ರಕಾಶನದ ‘ಬಿರಿದ ಮಲ್ಲಿಗೆ ಹೂವುಗಳು” ಕೃತಿ ಬಿಡುಗಡೆ appeared first on Karnataka Kahale.
]]>
ಹೂವಿನ ಹಡಗಲಿ, ಮಾ.29: ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ನಗರದ ಎಸ್ ಆರ್ ಎಂ ಪಿ ಪಿ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ವರುಷದ ಹರುಷ’ ಸಾಹಿತ್ಯಕ ಕಾರ್ಯಕ್ರಮ ಆಯೋಜಿಸಿತ್ರು.
ಶೋಭಾ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಶೋಭಾ ಮಲ್ಕಿಒಡೆಯರ್ ಅವರ ಕಥೆ ಕಾವ್ಯಗಳ ಗುಚ್ಚ ‘ಬಿರಿದ ಮಲ್ಲಿಗೆ ಹೂವುಗಳು” ಕೃತಿಯನ್ನು ವೈದ್ಯಾಧಿಕಾರಿ ಡಾ. ಕೊಟ್ರಮ್ಮ ಲೋಕಾರ್ಪಣೆ ಗೊಳಿಸಿದರು. ಯುವ ಸಾಹಿತಿ ಕಾರ್ತಿಕ್ ಆಚಾರ್ಯ ಅವರು ಕೃತಿ ಪರಿಚಯಿಸಿದರು.
ಕರ್ನಾಟಕ ಸರಕಾರಿ ನೌಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ ಪಿ ಎಂ ಅಶೋಕ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿ ಎಂ ದೊಡ್ಡ ಬಸಯ್ಯ ಮಾತನಾಡಿ, ತಮ್ಮ ಸಂಸ್ಥೆ ಮತ್ತಷ್ಟು ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ. ಕಚೇರಿ ವ್ಯವಸ್ಥಾಪಕಿ ಶ್ರೀಮತಿ ಎಸ್ ಜ್ಯೋತಿ ಉಪಸ್ಥಿತರಿದ್ದರು.

ಶ್ರೀಮತಿ ವೀಣಾ ಹೆಚ್ ಪಾಟೀಲ್ ಅವರು ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಾಹಿತಿಗಳ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಹಾಸ್ಯ ಭಾಷಣಕಾರ ಬಿ ಬಿ ಬೆನಕನವಾರಿ ಅವರ ಉಪನ್ಯಾಸ ಸಭಿಕರನ್ನು ನಗೆಗಡಲಲ್ಲಿ ಮುಳುಗಿಸಿತು.
ಅಧ್ಯಕ್ಷ ದೊಡ್ಡಬಸಯ್ಯ ಬಿ ಎಂ ಅವರು ಮಾತನಾಡಿ
ಕವಿಗೋಷ್ಠಿ: ಚನ್ನವೀರ ಸ್ವಾಮಿ, ಶ್ರೀಮತಿ ಹೆಚ್ವನಾಗರತ್ನ, ಶ್ರೀಮತಿ ಜೆ ಬಿ ನೂರ ಜಹಾನ್, ಶ್ರೀಮತಿ ಯು ರೇಣುಕಾ, ವೀರಭದ್ರಯ್ಯ ಟಿ ಎಂ , ಶ್ರೀಮತಿ ರಿಹಾನ್ ಕಲಾರಿ, ಶ್ರೀಮತಿ ನಾಗರತ್ನ ನಾಗಭೂಷಣ್, ಕೊಟ್ರೇಶ್ ಜವಳಿ, ಶ್ರೀ ಕಳಕಪ್ಪ ಜಲ್ಲಿಗೇರಿ, ಗಂಗಾಧರ ಹುಣಶಿಕಟ್ಟಿ, ಜಿ ಆರ್ ಬಸವ ರಾಜೇಶ್ವರಿ, ವೀರೇಶ್ ಎಸ್ ಕವಿತೆಗಳನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ಪ್ರಕಾಶ್ ಮಲ್ಕಿ ಒಡೆಯರ್ ಮತ್ತಿತರರು ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹೇಶ್ ಎಸ್ ಹೆಚ್ ಟ್ರಸ್ಟ್ ನಡೆದು ಬಂದ ದಾರಿ ಕುರಿತು ವಿವರಿಸಿದರು.
ಗೌರಮ್ಮ ಮಲ್ಲಿನಾಥ ಸ್ವಾಗತಿಸಿದರು. ನಳಿನಾಕ್ಷಿ ಮಲ್ಲಿನಾಥ ವಂದಿಸಿದರು. ಹಾಲೇಶ ಹಕ್ಕಂಡಿ ಹಾಗೂ ನಿಸಾರ್ ಸಾಲಿನ ನಿರ್ವಹಿಸಿದರು
——-
The post ಹೂವಿನ ಹಡಗಲಿ: ಶೋಭಾ ಪ್ರಕಾಶನದ ‘ಬಿರಿದ ಮಲ್ಲಿಗೆ ಹೂವುಗಳು” ಕೃತಿ ಬಿಡುಗಡೆ appeared first on Karnataka Kahale.
]]>The post ‘ಕಾವ್ಯ ವಿಜಯ’ ಕವನ ಸಂಕಲನ ಒಂದು ಮೌಲಿಕ ಕೃತಿ – ಮಕ್ಕಳ ಸಾಹಿತಿ ಎಚ್ ಎಸ್ ಮಹೇಶ್ ಬಣ್ಣನೆ appeared first on Karnataka Kahale.
]]>
ಹೂವಿನ ಹಡಗಲಿ, ಸೆ.7:ಕಾವ್ಯ ಕ್ಷೇತ್ರದಲ್ಲಿ ಸಹಕಾರ ತತ್ವದಡಿ ಕವಿಯಿತ್ರಿ ಶೋಭಾ ಮಲ್ಕಿ ಒಡೆಯರ್ ಅವರು ಸಂಪಾದಿಸಿ ಪ್ರಕಟಿಸಿದ ‘ಕಾವ್ಯ ವಿಜಯ’ ಕವನ ಸಂಕಲನ ಒಂದು ಮೌಲಿಕ ಕೃತಿ ಎಂದು ಮಕ್ಕಳ ಸಾಹಿತಿ, ಅಧ್ಯಾಪಕ ಎಚ್ ಎಸ್ ಮಹೇಶ್ ಅವರು ಬಣ್ಣಿಸಿದರು.
ನಗರದ ಶ್ರೀ ಗವಿಸಿದ್ದೇಶ್ವರ ಮಠದಲ್ಲಿ ಶ್ರೀ ಹಿರಿಶಾಂತವೀರ ಸ್ವಾಮೀಜಿ ಗಳವರ ಸಾನಿಧ್ಯದಲ್ಲಿ ಆಯೋಜಿಸಿದ್ದ ಮಾಸಿಕ ಶಿವಾನುಭವ ಕಾರ್ಯಕ್ರಮ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.
ವಿಜಯನಗರ ಜಿಲ್ಲೆಯ ಕವಯಿತ್ರಿಯರು ತಮ್ಮ ತಾಯಿಯಂದಿರನ್ನು ನೆನೆದು ಕವನ ರಚಿಸಿರುವುದು ಪುಸ್ತಕದ ಘನತೆಯನ್ನು ಎತ್ತಿ ಹಿಡಿಯುವುದರ ಜೊತೆಗೆ ಮಾತೃ ಪ್ರೇಮವನ್ನ ಅಕ್ಷರಗಳ ಮೂಲಕ ಅಭಿವ್ಯಕ್ತಪಡಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂಕಲನದ ಬಹುತೇಕ ಕವಯತ್ರಿಯರು ಕಾವ್ಯ ರಚನೆಯನ್ನು ಪಟ್ಟಾಗಿ ಹಿಡಿದರೆ ಮುಂದಿನ ಸಂಕಲನಗಳಲ್ಲಿ ಅವರಿಂದ ಉತ್ತಮ ಕವಿತೆಗಳನ್ನು ನಿರೀಕ್ಷಿಸಬಹುದು. ನೂತನ ಜಿಲ್ಲೆಯಲ್ಲಿ ಗುರುತಿಸಿಕೊಂಡ ಈ ಕವಯತ್ರಿಯರಿಗೆ ಸಾರಸ್ವತ ಲೋಕದಲ್ಲಿ ಉಜ್ವಲ ಭವಿಷ್ಯವಿದೆ ಎಂದು ಹೇಳಿದರು.

ಕೃತಿ ಬಿಡುಗಡೆ ಮಾಡಿದ ವಿಶ್ರಾಂತ ಅಧ್ಯಾಪಕ ಕುಷ್ಟಗಿಯ ಹಿರೇಮನ್ನಾಪುರದ ವಿ ಎಸ್ ಕಾಡಗಿಮಠ ಅವರು, ನಮ್ಮ ತವರು ನೆಲ ಕುಷ್ಟಗಿಯ ಮಗಳು ಶೋಭಾ ಮಲ್ಕಿ ಒಡೆಯರ್ ಅವರು ಸಾಹಿತಿಯಾಗಿ, ಪ್ರಕಾಶಕರಾಗಿ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿದ್ದಾರೆ.
ವಿಜಯನಗರದ ಹನ್ನೊಂದು ಕವಿಯತ್ರಿಯರ ಕವನಗಳನ್ನು ಸಂಪಾದಿಸಿ ಸಂಕಲನ ಹೊರ ತಂದಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಪ್ರಶಂಸಿಸಿದರು.
ಸಂಪಾದಕಿ ಶ್ರೀಮತಿ ಶೋಭಾ ಮಲ್ಕಿ ಒಡೆಯರ್ ಸೇರಿದಂತೆ ಕವಿಯತ್ರಿಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶ್ರೀ ಹಿರಿಶಾಂತವೀರ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ
ಶ್ರೀಮತಿ ಶೋಭಾ ಮಲ್ಕಿ ಒಡೆಯರ್ ಅವರು ತಮ್ಮ ಬರಹಗಳ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತಮೋತ್ತಮ ಗೀತೆಗಳನ್ನು ರಚಿಸಿ ಸಂಗೀತದ ಮೂಲಕ ಸಾದರಪಡಿಸಿರುವುದು ಸಾರಸತ್ವ ಲೋಕದಲ್ಲಿ ಗಮನ ಸೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತಮ್ಮ ಭಾಗದ ಉತ್ತಮ ಸಾಹಿತಿಗಳನ್ನು ಕಂಡು ಸಂತಸವಾಯಿತು ಎಂದರು.

ಕೃತಿ ಸಂಪಾದಕಿ ಶೋಭಾ ಮಲ್ಕಿ ಒಡೆಯರ್ ಮಾತನಾಡಿ, ಎಲ್ಲ ಸಾಹಿತ್ಯಾಸಕ್ತರು , ಓದುಗರು ಕವಿಯತ್ರಿಯರಿಗೆ ಬೆಂಬಲ ನೀಡಿದರೆ ಪ್ರತಿಯೊಬ್ಬ ಕವಿಯತ್ರಿಯರು ತಮ್ಮ ಕೃತಿಗಳನ್ನು ಪ್ರಕಟಿಸುದರಲ್ಲಿ ಸಂದೇಹವಿಲ್ಲ. ನಿಮ್ಮ ಬೆಂಬಲ ಸದಾಹೀಗೇ ಇರಲೆಂದು ಮನವಿ ಮಾಡಿದರು.

ಶ್ರೀ ಮ. ನಿ. ಪ್ರ. ನಿರಂಜನ ಸ್ವಾಮೀಜಿಯವರು, ಸಂಪಾದಕಿ ಶ್ರೀಮತಿ ಶೋಭಾ ಮಲ್ಕಿ ಒಡೆಯರ್ ಸೇರಿದಂತೆ ಕವಿಯತ್ರಿಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಹಲವು ಗಣ್ಯರು ಉಪಸ್ಥಿತರಿದ್ದರು.
—–
The post ‘ಕಾವ್ಯ ವಿಜಯ’ ಕವನ ಸಂಕಲನ ಒಂದು ಮೌಲಿಕ ಕೃತಿ – ಮಕ್ಕಳ ಸಾಹಿತಿ ಎಚ್ ಎಸ್ ಮಹೇಶ್ ಬಣ್ಣನೆ appeared first on Karnataka Kahale.
]]>The post ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್ appeared first on Karnataka Kahale.
]]>
ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಸರಕಾರ ವಾಯುಮಾಲಿನ್ಯ ನಿಯಂತ್ರಣ ಕಾಯಿದೆ ತಂದಿದೆ. ಆದರೆ ಇದು ಖಾಸಗಿ ವಾಹನಗಳಿಗೆ ಮಾತ್ರ ಅನ್ವಯ ಸರಕಾರಿ ವಾಹನಗಳಿಗೆ ಅನ್ವಯವಾಗುವುದಿಲ್ಲ ಎಂಬಂತಾಗಿದೆ.
ಖಾಸಗಿ ವಾಹನಗಳು ವಾಯು ಮಾಲಿನ್ಯ ತಪಾಷಣೆ ಮಾಡಿಸದಿದ್ದರೆ ತಡೆದು ಫೈನ್ ಹಾಕುವ ಪೊಲೀಸ್ ಅಧಿಕಾರಿಗಳಿಗೆ ಇಂತಹ ಸರಕಾರಿ ವಾಹನಗಳು ಕಣ್ಣಿಗೆ ಬೀಳುತ್ತಿಲ್ಲವೇನೊ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.
ಹೂವಿನಹಡಗಲಿ ಘಟಕದ ಈ ಬಸ್ ಹೂವಿನಹಡಗಲಿ ಯಿಂದ ರಾಣೆಬೆನ್ನೂರಿಗೆ ಸಂಚರಿಸುತ್ತಿದೆ. ಈ ವಾಹನ ಉಗುಳುವ ವಿಪರೀತ ಹೊಗೆಯಿಂದಾಗಿ ಹಿಂದೆ ಪ್ರಯಾಣಿಸುವ ಪ್ರಯಾಣಿಕರಿಗೆ ಉಸಿರುಕಟ್ಟಿದಂತಾಗುತ್ತದೆ. ಆದರೂ ಇದನ್ನು ಚಲಾಯಿಸುವ ಚಾಲಕ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲವೆಂದು ಕಾಣುತ್ತೆ. ಒಂದು ವೇಳೆ ಚಾಲಕ ಘಟಕದ ವ್ಯವಸ್ಥಾಪಕರಿಗೆ ತಿಳಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರಬಹುದು.
ಈ ಬಗ್ಗೆ ಘಟಕದ ವ್ಯವಸ್ಥಾಪಕ ವೆಂಕಟಾಚಲಪತಿ ಅವರಿಗೆ ಕರೆಮಾಡಿ ಮಾತನಾಡಿದಾಗ ಅವರು ಕೂಡಲೇ ಬಸ್ ಮರಳಿ ಬರುತ್ತಲೆ ತಪಾಸಣೆ ಮಾಡಿಸುವುದಾಗಿ ತಿಳಿಸಿದ್ದು, ಕೂಡಲೇ ಬಸ್ಸು ಹೊಗೆ ಉಗುಳುವುದನ್ನು ತಪ್ಪಿಸಲಿ.

-ಹೆಚ್.ಸುಭಾಸಚಂದ್ರ
ಸಾಹಿತಿ ಹಾಗೂ ಪತ್ರಕರ್ತರು
ಹೊಳಲು
—–
The post ವಿಪರೀತ ಹೊಗೆ ಉಗುಳುವ ಹೂವಿನಹಡಗಲಿ ಸಾರಿಗೆ ಬಸ್ appeared first on Karnataka Kahale.
]]>The post ರೋಡ್ ಶೋ ಸಂಭ್ರಮ (ವಿಡಂಬನೆ) ವಿಡಂಬನಾ ಬರಹ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ appeared first on Karnataka Kahale.
]]>ಸಾವಿರಾರು ಕೋಟಿ ಹಣ ಸುರುವಿ ದಿನವೂ ಒಂದೊಂದು ಊರಿನಲ್ಲಿ ಭರ್ಜರಿ ಸ್ಟೇಜ್ ಹಾಕಿ, ಭರ್ಜರಿ ರೋಡ್ ಶೊ ಮಾಡುವ ಎಲ್ಲಾ ಪಕ್ಷದವರನ್ನೂ ನಿತ್ಯ ನೋಡ್ತೇವೆ. ಇವರು ಪ್ರಚಾರಕ್ಕೆ ಸುರಿಯುವ ಹಣವನ್ನು ಬಡ ಬಗ್ಗರಿಗೆ ಹಂಚಿದ್ದರೆ ಎಷ್ಟೋ ಕುಟುಂಬಗಳು ಇವತ್ತು ನೆಮ್ಮದಿ ಜೀವನ ನಡೆಸುತ್ತಿದ್ದವು! ಲೆಕ್ಕಾಚಾರದ ವಿಷಯ. ದಣಿಗೆ ವಿವರಣೆ ನೀಡಿದ.
ಹೌದು ಕಣ್ಲಾ! ನಮ್ಮ ಎಲ್ಲಾ ನಾಯಕರುಗಳು ನೀತಿ ನಿಯತ್ತಿನಿಂದ ಕೆಲಸ ಮಾಡಿ, ತಾವು ಮಾಡಿದ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುವ ಬದಲು ಪ್ರತೀ ಪಕ್ಷಗಳ ಹುಳುಕನ್ನು ಹುಡುಕಿ, ಕೆದಕಿ ಒಬ್ಬರ ಮೇಲೆ ಒಬ್ಬರು ಗೂಬೆ ಕೂರಿಸುವ ಪ್ರಚಾರ ಬೇಕಾ….!?
ಅಲ್ರವಾ…! ತೆಗಳಿಕೆಗಳೇ ತಮ್ಮ ಸಾಧನೆಯ ಮೆಟ್ಟಿಲು ಅನ್ಕಬಿಟ್ಟವ್ರೆ ದಣಿ
ಅದು ದಿಟ ಕಣ್ಲಾ, ತಾವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ಓಟು ಕೊಡಬೇಕೆ ವಿನಃ ! ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಬಿಸಿಲೊಳು ಬೆವರಿಳಿಸ್ತಾ ಅದ್ಧೂರಿ ರೋಡ್ ಶೊ, ರ್ಯಾಲಿ ಮಾಡಿಕೊಂಡು ತಿರುಗಾಡ್ತವೆ….!
ಹಂಗೆಯಾ ದಣಿ, ಒಬ್ಬರನ್ನೊಬ್ಬರು ತೆಗಳುವ ಭರದಲ್ಲಿ ಮಾತಿನ ವಾಕ್ ಚಾತುರ್ಯದಲ್ಲಿ ಯಾರು ಜೋರಿರ್ತಾರೆ ಅವರನ್ನೇ ಪದೆ ಪದೇ ಟಿ. ವಿ. ನಲ್ಲಿ ತೋರುಸ್ತವ್ರೆ! ಹಿಂಗಾಗಿ ಅದೂ ಒಂದು ಪ್ರಚಾರ ಅನ್ಕೊಂಡಿರ್ಬೌದು.
ಹೋಗ್ಲಿ ಬಿಡು ಕಳಾ… ಇಷ್ಟು ದಿನಾನೆ ಕಾದವ್ರೆ ಜನಗಳು, ಇನ್ನು ಒಂದು ವಾರ ಯಾಕೆ ವಾದ!?. ಆಮೇಲೆ ಗೊತ್ತಾಗತೈತಲ್ಲಾ ಯಾರು (ನಾ)ಲಾಯಕ್ ಅಂಬೋದು.
‘ಆಯ್ತು ದಣಿ, ನಂಗೂ ವಸಿ ಕೆಲಸ ಐತೆ ಬರ್ತೇನಿ’ ಎಬಡೇಶಿಯ ನಿರ್ಗಮನ.
ನಾಯಕರುಗಳೇ ನಾಲಾಯಕ್ ಗಳಾದರೆ ಪ್ರಜೆಗಳ ಗತಿಯೇನು !? ಧಣಿಯ ಸ್ವಗತದ ಅನಿಸಿಕೆ.

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
The post ರೋಡ್ ಶೋ ಸಂಭ್ರಮ (ವಿಡಂಬನೆ) ವಿಡಂಬನಾ ಬರಹ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ appeared first on Karnataka Kahale.
]]>The post ಕಾವ್ಯ ಕಹಳೆ (ಮತದಾನ ಜಾಗೃತಿ ಗೀತೆ) ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕ್ಷಣಿಕದಾಸೆ ಬೇಡ! appeared first on Karnataka Kahale.
]]>
ಕ್ಷಣಿಕದಾಸೆ ಬೇಡ!
ಜನ ಮರುಳೊ ಜಾತ್ರೆ ಮರುಳೊ
ಒತ್ತಬೇಡಿ ಹಣವ ಪಡೆದು
ಪ್ರಜಾಪ್ರಭುತ್ವದಲ್ಲಿ ನಮ್ಮದೇ ಆಯ್ಕೆ ಇದು
ಆಸೆ ಆಮಿಷ ತೊಡೆದುಬಿಡಿ ಇಂದು ||
ಯಾವುದೇ ಪಕ್ಷದೊಳಿರಲಿ ನಿಷ್ಪಕ್ಷಪಾತ
ಪಾರದರ್ಶಕವಾಗಿರಬೇಕು ಈ ಸಮಾಜ
ಮತಗಳ ಮಾರಿಕೊಂಡ ಮನುಜ
ಯಾವತ್ತೂ ಗುಲಾಮಗಿರಿ, ಇದುವೇ ನಿಜ ||
ಒಂದು ದಿನದ ಕಾಸಿಗಾಸೆಪಟ್ಟರೆ
ಮತ್ತೆ ಕಾಯಬೇಕು ಮತದಾರ ಐದು ವರ್ಷ
ಹೆಂಡ ಸಾರಾಯಿಯ ಕುಡಿತದಲ್ಲಿ ಮುಳುಗಿ
ನೀನಾಗಬೇಡಾ ಅನ್ಯಾಯಕ್ಕೆ ದಾಸ ||
ಎಂಜಲಾಸೆಗೆ ಕಟ್ಟುಬಿದ್ದು
ತಂತ್ರಕ್ಕೆ ಸಿಲುಕಿದೆಯೋ, ಆಗುವೆ ನೀ ಅತಂತ್ರ
ನ್ಯಾಯ, ನೀತಿ, ಧರ್ಮದಲ್ಲಿ ನಡೆಯುತಿರು ಸದಾ
ಸಿಕ್ಕೇ ಸಿಗುವುದು ಸ್ಪಷ್ಟ ಸ್ವಾತಂತ್ರ್ಯ ||

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
The post ಕಾವ್ಯ ಕಹಳೆ (ಮತದಾನ ಜಾಗೃತಿ ಗೀತೆ) ಕವಿಯಿತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ ಕವನದ ಶೀರ್ಷಿಕೆ: ಕ್ಷಣಿಕದಾಸೆ ಬೇಡ! appeared first on Karnataka Kahale.
]]>The post ನಿಂಗವ್ವಳ ಚುನಾವಣಾ ಪ್ರಚಾರ (ವಿಡಂಬನೆ) ಬರಹ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ appeared first on Karnataka Kahale.
]]>ಬೆಳಿಗ್ಗೆ ಆರು ಗಂಟೆ ಹೊತ್ತಿಗೇ ಕೈಯಲ್ಲಿ ಸ್ಮಾರ್ಟ್ ಫೋನ್ ಹಿಡಿದು ದೌಡಾಯಿಸಿ ಬಂದ ನಿಂಗಿ”ದನಲಕ್ಸಮಕ್ಕ ದನಲಕ್ಸಮಕ್ಕ ಒಸಿ ಕದ ತಗೀರಿ” ಕೆಲಸದ ನಿಂಗಿ ಒಂದೇ ಸಮನೆ ಬಾಗಿಲು ಬಡಿಯುವ ಸದ್ದಿಗೆ ಯಾರಿರಬಹುದು ಎಂದು, ಕಣ್ಣುಜ್ಜುತ್ತ ಮನೆಯೊಡತಿ ಧನ ಲಕ್ಷ್ಮಿ ಬಾಗಿಲು ತೆರೆದಾಗ,
“ಅಯ್ಯೊ ನಿಂಗಿ, ಬೆಳಿಗ್ಗೆನೆ ಬಂದಿಯಲ್ಲೇ !? ಏನವಸರ ? ಮಧ್ಯಾನ್ಹ ಆದ್ರೂ ಒಂದೊಂದಿನ ಬರದೇ ಇರೋಳು ಏನಿವತ್ತ! ಇಷ್ಟು ಬೇಗ !!” ಮನೆಯೊಡತಿ ಒಂದೇ ಉಸುರಿಗೆ ಕೇಳಿದಾಗ
“ಇನ್ನು ಮುಂದೆ ಪಾತ್ರೆ ಗಿತ್ರೆ ತೊಳೆಯಾಕ ಬರಕಿಲ್ಲ ಕಣ್ರವ್ವ, ನಮಗೂ ಒಸಿ ದಿನ ರಜಾ ಬೇಕು. ಈ ಎಲೆಕ್ಸನ್ ಟೈಮಾಕೆ ನನ್ನ ಗಂಡ ಮನಿ ಬಿಟ್ಟು ಎಲ್ಲೂ ಹೋಗ್ಬೇಡಾ…ನೀನು ಮನಿ ಒಳಿಕ್ಕೇ ಇರು” ಅಂತಾ ತಾಕೀತು ಮಾಡವ್ನೆ…ಅದ್ಕೆ ಎಲೆಕ್ಸನ್ ಮುಗಿಗಂಟಾ ನಾನು ಬರಕಿಲ್ಲ. ನಿಮ್ದು ಚೆಂದಾಗಿರೋ ಎರಡು ಸೀರೆ ಇದ್ರೆ ಕೊಡ್ತೀರಾ ಅಮ್ಮವ್ರೆ?”
“ಅಲ್ಲಾ ನಿಂಗಿ, ಎಲೆಕ್ಷನ್ ಟೈಮಲ್ಲಿ ನಿನ್ನ ಕೆಲಸ ಏನು?”
“ಅಯ್ಯೊ ಅದ್ಯಾಕ ಕೇಳೀರಾ…ಒಂದೆ ಎರಡೆ ಹೇಳಾಕೆ. ಮೊದ್ಲು ಹಳ್ಯಾಗ ಇದ್ದ ಆ ಮುದ್ಕಿ(ಅತ್ತೆ) ನ ಕರ್ಕೊಂಡ್ಬಂದು ಬಾಗಲ ಮುಂದ ಕುಂದ್ರಸಬೇಕು, ಯಾಕ ಅಂತಾ ಕೇಳಿ..ಪ್ರತಿ ತಿಂಗ್ಳು ಎರಡ ಸಾವಿರ ಕೊಡ್ತಾರಂತೆ ! ಇನ್ನು ನನ್ನ ಸಂಘದಾಗ ನಾನ ಲೀಡ್ರು….ಎಲ್ಲಾನ್ರೂ ಬೆಟ್ಟಿ ಮಾಡಬೇಕು, ಅವರ ಮನ ಒಲಸ್ಬೇಕು ಪಕ್ಷದಿಂದ ಬರುವ ಸೀರಿ, ಕುಕ್ಕರ್ ಮನಿ ಮನಿಗೆ ಹೋಗಿ ತಲುಪಿಸಬೇಕು …ಇನ್ನು ಇನ್ನೂ ಬಾಳ ಬಾಳ ಕೆಲ್ಸ ಕಣ್ರವ್ವ” ಎಂದು ಸೀರೆ ಗಾಗಿ ಮತ್ತೊಮ್ಮೆ ನೆನಪಿಸಿದಳು.
“ಅಲ್ಲಾ ನಿಂಗಿ, ನಮ್ಮಮನೆಯಲ್ಲಿ ಮಗಳ ಹೆರಿಗಿ ಆಗೇತಿ ನೀ ಹಿಂಗ ಕೆಲಸಾ ಬಿಟ್ರ ಮತ್ತ ಯಾರನ್ನು ಹುಡುಕಬೇಕು” ಆತಂಕದ ಪ್ರಶ್ನೆ.
“ಅವ್ವಾರ ಬಸುರು ಬಾಣಂತನ ಎಲ್ಲಾರ ಮನ್ಯಾಗ ಇದ್ದದ್ದ.. ಆದ್ರs ಐದು ವರ್ಸಕ್ಕಬರೋ ಅದೃಷ್ಟ ಕಳಕನಾಕ ಯಾರು ತಯ್ಯಾರ ಇರ್ತಾರ ?” ‘ಅತ್ತಲಿಂದ ಗಂಡನ ಫೋನ್ ಕರೆಗೆ “ಈ ಸದ್ದೇ ಬರ್ತಾಇವ್ನಿ…ನೀನು ಬಂದಬಿಡು”
“ಬಂದೆ ಕಣಮ್ಮಿ, ಇವತ್ತು ಇಬ್ರೂ ಹೋಟಲ್ದಾಗ ತಿಂಡಿ ತಿನ್ಕಂಡ ಲೀಡರ ಜೊತಿಗೆ ಹೋಗೋಮ ಬಾ…ಊರಾಗ ಒಸಿ ಪ್ರಚಾರಕ್ಕ”
“ಆಯ್ತು ಕಣ್ರವ್ವ….ನಾ ಬತ್ತೀನಿ ಸೀರೆಗಳನ್ನು ತಗೊಂಡು ಗತ್ತಿನಲ್ಲಿ ಹೊರಟ ನಿಂಗಿಯನ್ನು ತದೇಕ ಚಿತ್ತದಿಂದ ನೋಡುತ್ತ ನಿಂತಳು ಮನೆಯೊಡತಿ. ಮುಸುರೆ ತಿಕ್ಕೊಂಡು ಇದ್ದ ನಿಂಗಿ ಮನಸ್ನಾಗ ರಾಜಕೀಯದ ಗಾಳಿ ಬೀಸಿದ್ದು ಸೋಜಿಗ ತರಿಸಿತ್ತು.

-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
The post ನಿಂಗವ್ವಳ ಚುನಾವಣಾ ಪ್ರಚಾರ (ವಿಡಂಬನೆ) ಬರಹ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ appeared first on Karnataka Kahale.
]]>The post ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಲೇಖನ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ appeared first on Karnataka Kahale.
]]>
ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಧರ್ಮ ದೊಡ್ಡದಲ್ಲ ದಯೆ ದೊಡ್ಡದು ಎಂದು ವಿಶ್ವಕ್ಕೆ ಸಾರಿದರು ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು. ಹಾಗೆ ಜೀವನಪೂರ್ತಿ ನುಡಿದಂತೆ ನಡೆದರು ಯುಗ ಪುರುಷರು. ಈಗ ಹೇಳುವ ವಿಚಾರ ರಾಜಕಾರಣಿಗಳದ್ದು! ಎಲ್ಲರೂ ನುಡಿಯುವರು… ಅದರಂತೆ ನಡೆಯದೇ ತಮಗೆ, ತಮ್ಮವರಿಗಾಗಿ ಹಗಲು – ರಾತ್ರಿ ದುಡಿಯುವ ಅತೀ ಜಾಣ ಪುರುಷರು.
ಮತ್ತೆ ಮರಳಿ ಬರುತಲಿದೆ ಚುನಾವಣೆ, ನಾಯಕರ ಹಣಾಹಣಿ…ಇದು ಯಾರಿಗೂ ಗೊತ್ತು. ಹೊಸ ಹುರುಪಿನೊಂದಿಗೆ ಹೊಸ ಮುಖಗಳೊಂದಿಗೆ ಹೊಚ್ಚ ಹೊಸ – ಹೊಸ ಭರವಸೆಗಳನ್ನು ಮೂಡಿಸುತ್ತ, ಜನರ ಮೂಗಿಗೆ ತುಪ್ಪ ಸವರುವ ಕಾಯಕ ಎಲ್ಲ ಪಕ್ಷಗಳಲ್ಲಿ ಸಾಂಗೋಪಸಾಂಗವಾಗಿ ಭರವಸೆಗಳ ಹುಸಿ ಬೀಜಗಳನ್ನು ಬಿತ್ತುವುದರತ್ತ, ಓಟು ಪಡೆಯಲು ಸಾಹಸ ನಡೆಯುತ್ತಲಿದೆ. ಎಲ್ಲ ಪಕ್ಷಗಳಲ್ಲೂ ಉದ್ದುದ್ದ ಪ್ರಣಾಳಿಕೆಗಳ ಘೋಷಣೆ ಕೂಗುವರು ಹತ್ತಾರು ಬಾರಿ ; ನಂತರದ ದಿನಗಳಲ್ಲಿ ಯಾವುದೂ ಆಗುವುದಿಲ್ಲ ಜಾರಿ. ಮತ್ತದೇ ನವ ವರಸೆಗಳಲ್ಲಿ ಪ್ರಣಾಳಿಕೆಗಳು ಜನರ ಮುಂದೆ ಪ್ರತ್ಯಕ್ಷವಾಗಲಿವೆ. ಮತ್ತೆ – ಮತ್ತೆ ಮೇಕೆಯ ಬಾಯಿಗೆ ಮೊಸರೊರೆಸುವ ಕಾಯಕ ಶುರುವಾಗಿದೆ.
ಯುವಕರನ್ನು ಸೆಳೆಯುವ ಹೊಸ ರೀತಿಯ ತಂತ್ರಗಳು, ಜಾತಿಯ ಲೆಕ್ಕಾಚಾರದ ತಂತ್ರ ಮತ್ತು ಮಹಿಳೆಯರನ್ನು ಆಕರ್ಷಣೀಯವಾಗಿ ಸೆಳೆಯುವಲ್ಲಿ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ. ಮಹಿಳೆಯರಿಗಾಗಿಯೇ ಸೀರೆ, ಕುಪ್ಪಸ, ಕುಕ್ಕರ್, ಟಿವಿ, ಬೆಳ್ಳಿ, ಬಂಗಾರ ಇತ್ಯಾದಿ… ಇತ್ಯಾದಿ. ಇಂತಹ ಆಮಿಷ ಒಡ್ಡುವುದು ಹೊಸತೇನಲ್ಲ. ರಾಜಕಾರಣಿಗಳಿಂದ ಹಣ ಪಡೆಯುವುದು ! ಪ್ರಭು ಮಹಾಶಯರು ಓಟು ಹಾಕುವುದು ಒಂದು ರೀತಿ ಬುಕ್ಕಿಂಗ್ ಲೆಕ್ಕದಲ್ಲಿ ನಡೆಯುತ್ತದೆ. ಕಂತೆ – ಕಂತೆ ಹಣದ ಕಟ್ಟು ಮತಭಾಂದವರನ್ನು ತಲುಪಲು ಎಲ್ಲೆಲ್ಲಿಂದ ಸಾಗಿ ಕಳ್ಳ ದಾರಿಯಲ್ಲಿ ಬರುತ್ತಲಿವೆ. ಜನ ಸಾಮಾನ್ಯರು ಹಣವಷ್ಟೇ ಮುಖ್ಯವೆಂದು ಹಣ ಪಡೆದು ಓಟು ಹಾಕಿದರೆ, ನಾಯಕರು ಹಣ ನೀರಿನಂತೆ ಚೆಲ್ಲಿ!! ಓಟು ಪಡೆದು ಜನರ ಕೈಗಳಿಗೆ ಸಿಗದಂತೆ ನುಣುಚಿಕೊಳ್ಳುತ್ತಾರೆ. ಈಗಿನ ಚುನಾವಣೆ ವ್ಯವಹಾರ ಆಗಿದೆ. ಎಲೆಕ್ಷನ್ ಟೈಮಲ್ಲಿ ಊರಿಗೆ ಊರೇ ಸದ್ದು – ಗದ್ದಲ ; ನಂತರದಲ್ಲಿ ಗೆದ್ದವರ ಸದ್ದೇ ಇಲ್ಲ! ಅನ್ನುವ ಹಾಗೆ ಹಣ ಚೆಲ್ಲಿ ಗದ್ದುಗೆ ಏರುತ್ತಾರೆ. ಕಳೆದುಕೊಂಡ ದುಡ್ಡನ್ನು ಹತ್ತು ಪಟ್ಟು ಹೆಚ್ಚಿಸುವಲ್ಲಿ ಬಿಜಿಯಾಗುತ್ತಾರೆ. ಸಾಮಾಜಿಕ ಕಾರ್ಯಗಳು, ಚುನಾವಣೆಗು ಮುನ್ನ ಹರಿಯಬಿಟ್ಟ ಪ್ರಣಾಳಿಕೆಗಳು ಕರಪತ್ರದಲ್ಲಿ ಬೆಚ್ಚನೆ ಮಲಗಿ ಬಿಡುತ್ತವೆ.
ಚುನಾವಣೆಗೂ ಮುನ್ನ
ಹೊಸ – ಹೊಸ
ಯೋಜನೆಗಳ ಪ್ರಣಾಳಿಕೆ ;
ಗೆದ್ದ ನಂತರ
ಬರೀ ಆಕಳಿಕೆ
ತೂಕಡಿಕೆ
ಹೀಗಾಗದಂತೆ ತಡೆಗಟ್ಟಲು ನಮಗೆಲ್ಲ ಸುಸಮಯ ಬಂದಿದೆ. ಸಮಾಜ ಸುಧಾರಣೆಗೆ ಪ್ರತಿ ಪ್ರಜೆಗಳು ಮುಂದಾಗಬೇಕು. ಇದು ಪ್ರಜಾಪ್ರಭುತ್ವ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತು ಪಡಿಸಬೇಕು. ನ್ಯಾಯ ದೇವತೆ ವಿಜೃಂಭಿಸಬೇಕು. ನ್ಯಾಯ – ನೀತಿ – ಧರ್ಮದ ಪಾಲನೆ ಎಲ್ಲರೂ ಸ್ವ ಇಚ್ಛೆಯಿಂದ ಪಾಲಿಸಬೇಕು. ಆಗ ರಾಮರಾಜ್ಯದ ಕನಸು ನನಸಾಗುವುದರಲ್ಲಿ ಯಾವ ಸಂದೇಹವಿಲ್ಲ. ರಾಮರಾಜ್ಯದಲ್ಲಿ ರಾವಣರಿಗೆ ಪ್ರವೇಶ ನೀಡಬಾರದು.
ಗಾಂಧಿಯವರು ನಡೆಸಿದರು ನ್ಯಾಯ, ನೀತಿ, ಸತ್ಯಕ್ಕಾಗಿ ಚಳವಳಿ… ರಾಜಕಾರಣಿಗಳದ್ದು ನ್ಯಾಯ ನೀತಿ ಬದಿಗಿಟ್ಟು ಕೋಟಿ – ಕೋಟಿ ಕಬಳಿಸುವ ಚಾಳಿ! ಇಂತಹ ಜನನಾಯಕರಿಗೆ ನಾವುಗಳೇ ಬೆಂಬಲ ಕೊಟ್ಟರೆ ಮುಂದಿನ ಪೀಳಿಗೆಗೆ ಯಾರು ಮಾದರಿ !? ರಾಜಕೀಯದಲ್ಲಿ ಎರಡು ದಾರಿಗಳು ಒಂದು ನ್ಯಾಯ ಮಾರ್ಗ, ಇನ್ನೊಂದು ವಾಮ ಮಾರ್ಗ ನ್ಯಾಯ ಮಾರ್ಗದಲ್ಲಿ ನಡೆಯುವ, ನಂಬಿಕೆಗೆ ಅರ್ಹತೆ ಇದ್ದವರನ್ನು ಗೆಲ್ಲಿಸೋಣ…ಬೆಂಬಲ ಕೊಡೋಣ ಏನಂತೀರಾ ? ಮತ್ತದೇ ಹಳೆ ರಾಗ ಹಳೆ ಹಾಡು ಅಂತಾಗದೇ ಸಮಾಜದ ಸುಭಿಕ್ಷೆಗಾಗಿ ಎಲ್ಲರೂ ಪಣತೊಡೋಣ.

-ಶೋಭಾ ಮಲ್ಕಿ ಒಡೆಯರ್, ಸಾಹಿತಿ,
ಹೂವಿನ ಹಡಗಲಿ
The post ಉತ್ತಮರನ್ನು ಆರಿಸೋಣ, ಪ್ರಜಾಪ್ರಭುತ್ವ ಬಲಪಡಿಸೋಣ ಲೇಖನ: ಶೋಭ ಮಲ್ಕಿಒಡೆಯರ್, ಸಾಹಿತಿ, ಹೂವಿನ ಹಡಗಲಿ appeared first on Karnataka Kahale.
]]>The post ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಪುರುಷರಂತೆ ಮಹಿಳೆಯರು ಎಲ್ಲಾ ರಂಗಗಳಲ್ಲೂ ಮುಂದು -ಸಾಹಿತಿ ಕಾರ್ತಿಕ ಆಚಾರ್ಯ appeared first on Karnataka Kahale.
]]>
ಹೂವಿನ ಹಡಗಲಿ, ಮಾ.11:ಪ್ರಸ್ತುತ ದಿನಮಾನಗಳಲ್ಲಿ ಪುರುಷರಂತೆ ಮಹಿಳೆಯರು ಎಲ್ಲಾ ರಂಗದಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಸಾಹಿತಿ ದಾವಣಗೆರೆಯ ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ ಅವರು ತಿಳಿಸಿದರು.
ಪಟ್ಟಣದ ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ (ರಿ) ಶನಿವಾರ ಸಮೀಪದ ನಾಗತಿ ಬಸಾಪುರ ಗ್ರಾಮದ ” ಜ್ಞಾನ ಭಾರತಿ ಶಾಲೆ ” ಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ
“ಸಾಧಕರೊಂದಿಗೆ ನಾವು ನೀವು” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡಿದ ಮಹಿಳಾ ಸಾಧಕಿಯರು ಇದ್ದಾರೆ. ಇವರಿಗೆ ಸೂಕ್ತ ಪ್ರೋತ್ಸಾಹ, ಗೌರವ ದೊರೆಯಬೇಕು ಎಂದು ಹೇಳಿದರು.
ಹೆಣ್ಣು ಎಲ್ಲಿ ಪೂಜೆಗೊಳ್ಳುತ್ತಾಳೋ ಅಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ವೇದಗಳು ಹೇಳುತ್ತವೆ ಆದರೆ ಆಧುನಿಕ ಕಾಲಘಟ್ಟದಲ್ಲಿ ದೌರ್ಜನ್ಯ, ಶೋಷಣೆಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾಳೆ ಎಂದು ವಿಷಾಧಿಸಿದರು.
ಡಾ. ಕೊಟ್ರಮ್ಮ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆವಹಿಸಿದ್ದ ಶ್ರೀಮತಿ ಶೋಭಾ ಮಲ್ಕಿ ಒಡೆಯರ್ ಅವರು ಮಾತನಾಡಿದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಎಲ್. ಮೂರ್ತಿ ನಾಯಕ್ ಅವರು ಜಾನಪದ ಗೀತೆಗಳನ್ನು ಹಾಡಿ ಗಮನ ಸೆಳೆದರು.
ಸನ್ಮಾನ: ಇದೇ ಸಂದರ್ಭದಲ್ಲಿ ಡಾ. ಹೆಚ್. ಕೊಟ್ರಮ್ಮ ಅವರನ್ನು ಕರ್ನಾಟಕ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಹೆಚ್. ಎಮ್. ಗೌರಮ್ಮ ಮಲ್ಲಿನಾಥ್ ಅವರು ಸನ್ಮಾನಿತರನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಎಸ್. ಹೆಚ್. ಮಹೇಶ್, ಗೌರವ ಅಧ್ಯಕ್ಷ, ಹಿರಿಯ ಸಾಹಿತಿ ಪ್ರಕಾಶ್ ಮಲ್ಕಿ ಒಡೆಯರ್, ಅಧ್ಯಕ್ಷ ಬಿ. ಎಮ್. ದೊಡ್ಡಬಸಯ್ಯ, ಉಪಾಧ್ಯಕ್ಷ ಎಚ್. ಎಂ. ಕೊಟ್ರಯ್ಯ, ಶಿಕ್ಷಕ ಹಾಲೇಶ್ ಹಕ್ಕಂಡಿ ಮತ್ತಿತರರು ಉಪಸ್ಥಿತರಿದ್ದರು.

ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ಗೌರಮ್ಮ ಮಲ್ಲಿನಾಥ್ ಅವರು ಸ್ವಾಗತಿಸಿದರು. ನಯನ ಮಲ್ಲಿನಾಥ ನಿರೂಪಿಸಿದರು. ಹೆಚ್.ಎಂ.
ಗೌರಮ್ಮ ಮಲ್ಲಿನಾಥ್ ಅವರ ಜನ್ಮದಿನದ ಪ್ರಯುಕ್ತ ಶಾಲಾ ಮಕ್ಕಳಿಗೆ ಮತ್ತು ಸಭಿಕರಿಗೆ ಸಿಹಿ ಹಂಚಲಾಯಿತು.
*****
The post ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಪುರುಷರಂತೆ ಮಹಿಳೆಯರು ಎಲ್ಲಾ ರಂಗಗಳಲ್ಲೂ ಮುಂದು -ಸಾಹಿತಿ ಕಾರ್ತಿಕ ಆಚಾರ್ಯ appeared first on Karnataka Kahale.
]]>