The post ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ಭೇಟಿ ನೀಡಿ ಸಂವಾದಿಸಿದ ಶ್ರೀಲಂಕಾ ಪತ್ರಕರ್ತರ ನಿಯೋಗ appeared first on Karnataka Kahale.
]]>ಕರ್ನಾಟಕ ಪ್ರವಾಸದಲ್ಲಿರುವ ನಿಯೋಗ, ಮಾಹಿತಿ ಹಕ್ಕು ಆಯೋಗಕ್ಕೆ ಸೌಹಾರ್ದಯುತವಾಗಿ ಭೇಟಿ ಹಲವು ವಿಷಯಗಳ ಮೇಲೆ ಚರ್ಚೆ ನಡೆಸಿತು.
ಕರ್ನಾಟಕದಲ್ಲಿ ಮಾಹಿತಿ ಹಕ್ಕು ಆಯೋಗ ಕಳೆದ ಎರಡು ದಶಕಗಳಲ್ಲಿ ಹೇಗೆ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಆಯೋಗದ ಪ್ರಭಾರಿ ಮುಖ್ಯ ಆಯುಕ್ತರಾದ ಕೆ.ರಾಮನ್, ಆಯುಕ್ತರುಗಳಾದ ರಾಜಶೇಖರ್, ರುದ್ರಣ್ಣ ಹರ್ತಿಕೋಟೆ, ಮಮತಾ ಮತ್ತು ಬದ್ರುದ್ದೀನ್ ಅವರು ಮಾಹಿತಿ ನೀಡಿದರು.
ಶ್ರೀಲಂಕಾದಲ್ಲಿ ಕಳೆದ 3 ವರ್ಷಗಳಿಂದ ಮಾಹಿತಿ ಹಕ್ಕು ಆಯೋಗ (ಆರ್‌ಟಿಐ)ಪ್ರಾರಂಭವಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷರ ಮಾಧ್ಯಮ ಮಾಜಿ ಕಾರ್ಯದರ್ಶಿ ಮತ್ತು ನಿಶ್ಚಿನಾಂತು ಆಲ್ವೀಸ್ ಹಾಗೂ ಹಿರಿಯ ಪತ್ರಕರ್ತ ಪಾತುಮ್ ಪಾಸ್ಕೂಲ್ ಅವರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು, ಪತ್ರಕರ್ತರ ಸಂಘದ ಹೋರಾಟ ಕಾರಣದಿಂದ ಪತ್ರಕರ್ತರಿಗೆ ಬಸ್ ಪಾಸ್, ಮಾಸಾಶನ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಿದೆ ಎನ್ನುವ ಮಾಹಿತಿಯನ್ನು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೀಲಂಕಾ ನಿಯೋಗ, ಶ್ರೀಲಂಕಾದಲ್ಲಿ ಪತ್ರಕರ್ತರಿಗೆ ಯಾವುದೇ ಸೌಲಭ್ಯಗಳು ಇನ್ನೂ ಲಭ್ಯವಿಲ್ಲ ಎನ್ನುವ ಮಾಹಿತಿಯನ್ನು ಅವರು ನೀಡಿದರು. ಆದರೆ, ಶ್ರೀಲಂಕಾದಲ್ಲಿ ಮಾಧ್ಯಮ ಮೇಲೆ ಸರ್ಕಾರ ಯಾವುದೇ ನಿಯಂತ್ರಣವನ್ನು ಹೊಂದಿಲ್ಲ. ಸ್ವತಂತ್ರವಾಗಿ ಮಾಧ್ಯಮ ಕಾರ್ಯ ನಿರ್ವಹಣೆ ಮಾಡುತ್ತಿವೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಸಂಜೀವ ಥಿಸೆರಾ, ಹೇಮಂತ ಕುಮಾರಸಿಂಘೆ, ತುಷಾರ ಹೆಟ್ಟಿಯಾರಾಚ್ಚಿ, ಸಿ.ಎ.ದಮ್ಸಿರಿ ಅಜಿತ್ ಅವರು ಶ್ರೀಲಂಕಾ ನಿಯೋಗದಲ್ಲಿದ್ದರು
The post ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ಭೇಟಿ ನೀಡಿ ಸಂವಾದಿಸಿದ ಶ್ರೀಲಂಕಾ ಪತ್ರಕರ್ತರ ನಿಯೋಗ appeared first on Karnataka Kahale.
]]>The post ಇಸ್ರೇಲ್ ಬೆಳವಣಿಗೆ ವಾಸ್ತವ ಅರಿಯಲು ಭಾರತೀಯ ಪತ್ರಕರ್ತರ ನಿಯೋಗಕ್ಕೆ ಆಹ್ವಾನ -ಇಸ್ರೇಲ್ ಕಾನ್ಸಲೇಟರ್ ಹಾರ್ಲಿವೈಟ್ಸ್ ಮೆನ್ appeared first on Karnataka Kahale.
]]>
ಇದೇ ಸಂದರ್ಭದಲ್ಲಿ ಹಾರ್ಲಿವೈಟ್ಸ್ ಮೆನ್ ಅವರನ್ನು ದಕ್ಷಿಣ ಭಾರತೀಯ ಪತ್ರಕರ್ತರ ತಂಡದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕಾರಿಸಿ ಮಾತನಾಡಿದ ಹಾರ್ಲಿವೈಟ್ಸ್ ಮೆನ್ ಅವರು, ಇಸ್ರೇಲ್ ದೇಶ ಭಯೋತ್ಪಾದನೆ ವಿರುದ್ದ ಎದುರಿಸುತ್ತಿರುವ ಸವಾಲು, ಗಡಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸತ್ಯದ ಸಂಗತಿಗಳನ್ನು ತಿಳಿಯಲಿ ಎನ್ನುವುದು ಈ ಪ್ರವಾಸದ ಆಶಯವಾಗಿತ್ತು ಎಂದರು.
ಸುವರ್ಣ ಟಿವಿ ಅಸೋಶಿಯೇಟ್ ಎಡಿಟರ್ ಪ್ರಶಾಂತ ನಾತು ಅವರು, ಇಸ್ರೇಲ್ ಅಧ್ಯಯನಶೀಲ ಪ್ರವಾಸ ಅನೇಕ ಸತ್ಯ ಸಂಗತಿಗಳನ್ನು ತಿಳಿಯಲು ಅನುಕೂಲವಾಯಿತು ಎಂದು ತಿಳಿಸಿ, ಇಸ್ರೇಲ್ ಅಂಬಾಸಿಡರ್ ಸೇರಿದಂತೆ ಎಲ್ಲ ಸಂಬಂದಿಸಿದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಇಸ್ರೇಲ್ ಕಾನ್ಸಲೆಟ್ ಪಿಆರ್ ರವಿಕಿರಣ್, ಹಿರಿಯ ಪತ್ರಕರಾದ ಚೀ.ಜ.ರಾಜೀವ್, ಮಧುನಾಯಕ್, ರಮೇಶ್ ಕುಮಾರ್ ನಾಯಕ್, ಬಸವರಾಜು, ಹರೀಶ್ ಉಪಾದ್ಯಾಯ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪತ್ರಕರ್ತರು ಹಾಜರಿದ್ದರು .
The post ಇಸ್ರೇಲ್ ಬೆಳವಣಿಗೆ ವಾಸ್ತವ ಅರಿಯಲು ಭಾರತೀಯ ಪತ್ರಕರ್ತರ ನಿಯೋಗಕ್ಕೆ ಆಹ್ವಾನ -ಇಸ್ರೇಲ್ ಕಾನ್ಸಲೇಟರ್ ಹಾರ್ಲಿವೈಟ್ಸ್ ಮೆನ್ appeared first on Karnataka Kahale.
]]>The post ಇಸ್ರೇಲ್ ವಿದೇಶಾಂಗ ಕಾರ್ಯದರ್ಶಿ ಭೇಟಿ ಮಾಡಿದ ದಕ್ಷಿಣ ಭಾರತ ಪತ್ರಕರ್ತರ ನಿಯೋಗ appeared first on Karnataka Kahale.
]]>
ಇಸ್ರೇಲ್, ಸೆ.7: ಇಸ್ರೇಲ್ ಪ್ರವಾಸದಲ್ಲಿರುವ ದಕ್ಷಿಣ ಭಾರತ ಪತ್ರಕರ್ತರ ನಿಯೋಗ ಇಸ್ರೇಲ್ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಈಡನ್‌ಬಾರ್ ಟಾಲ್ ಅವರ ಜೊತೆಗೆ ಸಂವಾದ ನಡೆಸಿತು.
ಇದೇ ಸಂದರ್ಭದಲ್ಲಿ ಯುದ್ದ ಕೊನೆಗಾಣಿಸುವಂತೆ ಪತ್ರಕರ್ತರ ತಂಡ ಆಶಯ ವ್ಯಕ್ತಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲ ಘಟನೆಗಳು ಅನಿವಾರ್ಯವಾಗಿ ಯುದ್ಧದ ಪರಿಸ್ಥಿತಿ ತಂದೊಡ್ಡಿದ್ದವು. ಇಸ್ರೇಲ್ ಶಾಂತಿಗೆ ಆದ್ಯತೆ ನೀಡುತ್ತಾ ಬಂದಿದೆ. ಈಗಲೂ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಪ್ರಯತ್ನದಲ್ಲಿದ್ದೇವೆ ಎಂದು ತಿಳಿಸಿದರು. ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಭಾರತೀಯ ಪತ್ರಕರ್ತರ ನಿಯೋಗದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಭಾರತೀಯ ಸಂಪ್ರದಾಯದ ಶಲ್ಯ ಹಾಕಿ, ಕೆಯುಡಬ್ಲ್ಯೂಜೆ ಹೊರತಂದಿರುವ ಪತ್ರಕರ್ತ ಸಂಚಿಕೆ ಮತ್ತು ಅಮೃತಬೀಜ
ಪುಸ್ತಕಗಳನ್ನು ನೀಡಿ ಗೌರವಿಸಿತು.
ಹಿರಿಯ ಪತ್ರಕರ್ತರಾದ ಪ್ರಶಾಂತ ನಾತು, ಚೀ.ಜ.ರಾಜೀವ್, ರಮೇಶ್ ಕುಮಾರ್ ನಾಯಕ್, ಬಸವರಾಜು, ಮಧು ನಾಯಕ್ , ತಮಿಳುನಾಡು, ಕೇರಳ ಪತ್ರಕರ್ತರು ಜೊತೆಯಲ್ಲಿದ್ದರು.
The post ಇಸ್ರೇಲ್ ವಿದೇಶಾಂಗ ಕಾರ್ಯದರ್ಶಿ ಭೇಟಿ ಮಾಡಿದ ದಕ್ಷಿಣ ಭಾರತ ಪತ್ರಕರ್ತರ ನಿಯೋಗ appeared first on Karnataka Kahale.
]]>The post ಯಶಸ್ವೀಭವ, ವಿಜಯೀಭವ” ಯಶಸ್ವಿ ಜೈಸ್ವಾಲ್..! ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! -ಸುದರ್ಶನ್ ಗೌಡ, ಬೆಂಗಳೂರು appeared first on Karnataka Kahale.
]]>What a story..!
An amazing journey of Yashaswi Jaiswal..!

ಉತ್ತರ ಪ್ರದೇಶದ ಬದೋಹಿಯಲ್ಲೊಂದು ಪುಟ್ಟ ಅಂಗಡಿ. ಆ ಅಂಗಡಿ ಮಾಲೀಕನಿಗೊಬ್ಬ ಮಗ.. ಕ್ರಿಕೆಟ್ ಹುಚ್ಚು ಹಿಡಿಸಿಕೊಂಡಿದ್ದವನಿಗೆ ಯಾರೋ ಹೇಳಿದ್ದಂತೆ, “ನೀನು ಇಲ್ಲಿಯೇ ಇದ್ದರೆ ಕ್ರಿಕೆಟರ್ ಆಗಲು ಸಾಧ್ಯವಿಲ್ಲ, ಮುಂಬೈಗೆ ಹೋಗು” ಎಂದು. 10ನೇ ವಯಸ್ಸಿನಲ್ಲಿ ತಂದೆಯ ಜೊತೆ ಮುಂಬೈಗೆ ಬಂದಿಳಿದಿದ್ದ ಆ ಹುಡುಗ.
ಮುಂಬೈ ಎಂದರೆ ಅದೊಂದು ಮಹಾಸಾಗರ. ಆ ಸಾಗರದಲ್ಲಿ ಅಪ್ಪಳಿಸಿ ಬರುವ ಅಲೆಗಳ ಮುಂದೆ ಈಜಲು ನಿಂತವನ ಹೆಸರು ಯಶಸ್ವಿ ಭೂಪೇಂದ್ರ ಕುಮಾರ್ ಜೈಸ್ವಾಲ್.
ಮಗನನ್ನು ಮುಂಬೈಗೆ ಕರೆ ತಂದ ತಂದೆಗೆ ಇದ್ದ ಚಿಂತೆ ‘ಈ ಮಹಾನಗರದಲ್ಲಿ ಮಗ ಹೇಗೆ ಇರಬಲ್ಲ’ ಎಂದು.
‘’ನಾನು ಇಲ್ಲಿ ಅಂಕಲ್ ಜೊತೆ ಇರುತ್ತೇನೆ” ಅಂದಿದ್ದ ಜೈಸ್ವಾಲ್. ಆ ಅಂಕಲ್ ಏನೂ ಮುಂಬೈನಲ್ಲಿ ಕೋಟೆ ಕಟ್ಟಿಕೊಂಡವನಲ್ಲ. ಒಬ್ಬ ಬಡ ವ್ಯಾಪಾರಿ.
10 ವರ್ಷದ ಹುಡುಗನನ್ನು ಹಾಲಿನ ಡೈರಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿಸುತ್ತಾನೆ. ಅಲ್ಲೇ ಪುಟ್ಟ ಕೋಣೆಯೊಂದರಲ್ಲಿ ವಾಸ. ಬೆಳಗ್ಗೆ 5 ಗಂಟೆಗೆ ಎದ್ದು ಅಂಗಡಿಯನ್ನು ಶುಚಿಗೊಳಿಸಿ ಕ್ರಿಕೆಟ್ ಅಭ್ಯಾಸಕ್ಕೆ ಹೊರಟು ಬಿಡುತ್ತಿದ್ದ ಯಶಸ್ವಿ ಜೈಸ್ವಾಲ್. ಅಭ್ಯಾಸ ಮುಗಿಸಿ ಬಂದವನು ರಾತ್ರಿಯವರೆಗೆ ಅಂಗಡಿಯಲ್ಲಿ ಕೆಲಸ ಮಾಡಬೇಕಿತ್ತು.
ಬೆಳಗ್ಗೆಯಿಂದ ಕ್ರಿಕೆಟ್ ಆಡಿ ದಣಿದು ಬರುತ್ತಿದ್ದ ಪುಟ್ಟ ಬಾಲಕ ಇದನ್ನೆಲ್ಲಾ ಹೇಗೆ ತಾನೇ ಸಹಿಸಿಕೊಳ್ಳಬಲ್ಲ..?
ಒಂದು ದಿನ ಡೈರಿಯ ಮಾಲೀಕ, ‘ಇವನು ಕೆಲಸಕ್ಕೆ ಬರುವವನಲ್ಲ’ ಎಂದು ಜೈಸ್ವಾಲ್’ನನ್ನು ಓಡಿಸಿ ಬಿಟ್ಟ.
ದೊಡ್ಡ ನಗರದಲ್ಲಿ ಸಣ್ಣ ಹುಡುಗ ಏಕಾಂಗಿಯಾಗಿ ನಿಂತಿದ್ದ. ಗುರುತು ಪರಿಚಯವಿಲ್ಲದ ಜನ. ಗೊತ್ತು ಗುರಿಯಿಲ್ಲದ ಬದುಕು.
ಬಟ್ಟೆಗಳನ್ನು ಪ್ಯಾಕ್ ಮಾಡಿಕೊಂಡವನೇ ಮುಂಬೈನ ಆಜಾದ್ ಮೈದಾನಕ್ಕೆ ಬಂದ. ಅಲ್ಲಿ ಮುಸ್ಲಿಂ ಯುನೈಟೆಡ್ ಎಂಬ ಕ್ರಿಕೆಟ್ ಕ್ಲಬ್ ಇದೆ. ‘’ನಾನು ಕ್ರಿಕೆಟ್ ಆಡಬೇಕು, ದಯವಿಟ್ಟು ಸಹಾಯ ಮಾಡಿ’’ ಎಂದು ಯಶಸ್ವಿ ಅಂಗಲಾಚುತ್ತಾನೆ.
‘’ನಮ್ಮ ಕ್ಲಬ್ ಪರ ಒಂದು ಮ್ಯಾಚ್ ಆಡುವೆಯಂತೆ.
ಚೆನ್ನಾಗಿ ಆಡಿದರೆ ಇಲ್ಲೇ ವಾಸಕ್ಕೆ ವ್ಯವಸ್ಥೆ ಮಾಡುತ್ತೇವೆ’’ ಎಂಬ ಭರವಸೆ ಆ ಕ್ರಿಕೆಟ್ ಕ್ಲಬ್’ನಿಂದ ಸಿಕ್ಕಿತು.
ಒಂದೇ ಒಂದು ಅವಕಾಶಕ್ಕಾಗಿ ಕಾದಿದ್ದ ಹುಡುಗ, ಸಿಕ್ಕ ಅವಕಾಶದಲ್ಲಿ ಹಿಗ್ಗಾಮುಗ್ಗ ಬಾರಿಸಿ ಬಿಟ್ಟ.
ಯಶಸ್ವಿ ಜೈಸ್ವಾಲ್’ನ ಆಟ ನೋಡಿ ಮೆಚ್ಚಿದ ಮುಸ್ಲಿಂ ಯುನೈಟೆಡ್ ಕ್ಲಬ್’ನ ಕೋಚ್ ಇಮ್ರಾನ್, ಹುಡುಗನನ್ನು ಒಂದು ಟೆಂಟ್ ಬಳಿ ಕರೆ ತರುತ್ತಾರೆ. ‘ಇಲ್ಲೇಕೆ ಕರೆ ತಂದರು’ ಎಂದು ಯೋಚಿಸುತ್ತಿದ್ದ ಹುಡುಗನಿಗೆ ಆಮೇಲೆ ಗೊತ್ತಾಗಿದ್ದು, “ನನ್ನ ಮುಂದಿನ ವಾಸ ಇಲ್ಲೇ” ಎಂದು.
ಕಬ್ಬಿಣದ ತಗಡಿನಿಂದ ಮಾಡಿದ ಟೆಂಟ್. ಬಿಸಿಲ ಧಗೆ. ನಿದ್ದೆಯಾದರೂ ಹೇಗೆ ಬಂದೀತು..? ಹಾಗೆಂದು ಹುಡುಗನಿಗೆ ಬೇರೆ ದಾರಿಯಾದರೂ ಏನಿತ್ತು..? 3 ವರ್ಷ ಅಲ್ಲೇ ಮಲಗುತ್ತಾನೆ. ಕರೆಂಟ್ ಇಲ್ಲ, ಶೌಚಾಲಯವಿಲ್ಲ. 10-14ನೇ ವಯಸ್ಸಿನಲ್ಲಿ ಪಡಬಾರದ ಯಾತನೆ ಪಟ್ಟು ಬಿಟ್ಟ ಯಶಸ್ವಿ.
ಮಳೆಗಾಲ ಬಂತೆಂದರೆ ಟೆಂಟ್ ಒಳಗೆ ನೀರು ನುಗ್ಗುತ್ತಿತ್ತು. ಯಶಸ್ವಿ ಜೈಸ್ವಾಲ್ ಹೇಳಿಕೊಂಡಂತೆ ಟೆಂಟ್’ನಲ್ಲಿ ವಾಸಿಸುತ್ತಿದ್ದ ಕೆಲ ಹುಡುಗರು ಆತನಿಗೆ ಹೊಡೆಯುತ್ತಿದ್ದರಂತೆ. ‘’ನಮಗೆಲ್ಲಾ ಅಡುಗೆ ಮಾಡಿ ಹಾಕು’’ ಎಂದು ಹಿಂಸಿಸುತ್ತಿದ್ದರಂತೆ.
ಕ್ರಿಕೆಟ್ ಆಡಲು ಹೇಗೋ ಒಂದು ಕ್ಲಬ್ ಸಿಕ್ಕಿತ್ತು. ಜೀವನ ನಡೆಯಬೇಕು, ಕೈಯಲ್ಲಿ ದುಡ್ಡಿಲ್ಲ. ಹುಡುಗ ಏನು ಮಾಡಿದ ಗೊತ್ತೇ..? ಕ್ರಿಕೆಟ್ ಮುಗಿಸಿ ಸಂಜೆ 7 ಗಂಟೆಗೆ ಟೆಂಟ್’ಗೆ ಬಂದವನೇ ಪಕ್ಕದ ಬೀದಿಯಲ್ಲಿ ಪಾನಿಪೂರಿ ವ್ಯಾಪಾರಿಯೊಬ್ಬನ ಜೊತೆ ಪಾನಿಪೂರಿ ಮಾರಲು ಶುರು ಮಾಡುತ್ತಾನೆ. ತನ್ನ ಜೊತೆ ಆಡುತ್ತಿದ್ದ ಹುಡುಗರು ಪಾನಿಪೂರಿ ತಿನ್ನಲು ಬಂದರೆ ಎಲ್ಲಿ ಹಂಗಿಸುತ್ತಾರೋ ಎಂಬ ಆತಂಕದಲ್ಲಿ ತಲೆ ತಪ್ಪಿಸಿಕೊಳ್ಳುತ್ತಿದ್ದನಂತೆ ಜೈಸ್ವಾಲ್.
ಹೀಗೇ ಸಮಯ ಉರುಳುತ್ತಿತ್ತು.. ಕಾಲಚಕ್ರ ತಿರುಗುತ್ತಲೇ ಇತ್ತು. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಕಲಿಯುತ್ತಿದ್ದ ಯಶಸ್ವಿ ಜೈಸ್ವಾಲ್. ಉತ್ತರ ಪ್ರದೇಶದಿಂದ ಉರುಳಿದ್ದ ಶಿಲೆಗೆ ಉಳಿ ಪೆಟ್ಟುಗಳು ಬೀಳುತ್ತಿದ್ದಂತೆ ಶಿಲೆ ಕಲೆಯಾಗಿ ಅರಳುತ್ತಿತ್ತು. ಕಷ್ಟಗಳು ಅವನನ್ನು ಮಾನಸಿಕವಾಗಿ ಗಟ್ಟಿಯಾಗಿಸಿದವು.
ಆಟಕ್ಕೆ ನಿಂತು ಬಿಟ್ಟನೆಂದರೆ ಯಶಸ್ವಿ ಜೈಸ್ವಾಲ್ ಬಾಲ ರಾಕ್ಷಸ.. ಓರಗೆಯ ಬೌಲರ್’ಗಳನ್ನು ಹುರಿದು ಮುಕ್ಕಿ ಬಿಡುತ್ತಿದ್ದ. ಅವನ ಆಟವನ್ನು ನೋಡಿದ ಕೆಲ ಹುಡುಗರು ಬೇರೆ ಬೇರೆ ಮ್ಯಾಚ್’ಗಳಿಗೆ ಕರೆದೊಯ್ಯುತ್ತಾರೆ. ಕ್ರಿಕೆಟ್ ಆಡಲು ದಿನಕ್ಕೆ 100 ರೂಪಾಯಿ ಸಂಬಳ. ಬೇರೆಯವರ ಬಳಿ ಬ್ಯಾಟ್’ಗಳನ್ನು ಕಾಡಿ ಬೇಡಿ ಆಡಬೇಕಿತ್ತು. ಜೀವನ ಕಷ್ಟವಾಗಿ ಬಿಟ್ಟಿತ್ತು. ಕ್ರಿಕೆಟ್ ಆಸೆ ಬಿಟ್ಟು ಮರಳಿ ಉತ್ತರ ಪ್ರದೇಶಕ್ಕೆ ಹೋಗೋಣ ಎಂದು ನಿರ್ಧಾರ ಮಾಡಿ ಬಿಡುತ್ತಾನೆ ಯಶಸ್ವಿ ಜೈಸ್ವಾಲ್.
ಕೆಲವೊಮ್ಮೆ ದೇವರೇ ಮನುಷ್ಯ ರೂಪದಲ್ಲಿ ಬಂದು ಬಿಡುತ್ತಾನೆ. ಸೋತು ಕೈಚೆಲ್ಲಿ ಕೂತಿದ್ದ ಯಶಸ್ವಿ ಜೈಸ್ವಾಲ್ ಪಾಲಿಗೆ ಆ ದಿನ ದೇವರಾಗಿ ಬಂದವರು
ಜ್ವಾಲಾ ಸಿಂಗ್. ಮುಂಬೈನ ಫೇಮಸ್ ಕ್ರಿಕೆಟ್ ಕೋಚ್.
2013, ಡಿಸೆಂಬರ್ ತಿಂಗಳು. ಒಳ್ಳೆಯ ಆಟಗಾರರಿಗಾಗಿ ಹುಡುಕುತ್ತಿದ್ದ ಜ್ವಾಲಾ ಸಿಂಗ್ ಕಣ್ಣಿಗೆ ಬಿದ್ದವನು ಯಶಸ್ವಿ ಜೈಸ್ವಾಲ್. ‘ಎ’ ಡಿವಿಜನ್ ಬೌಲರ್”ಗಳ ವಿರುದ್ಧ ಬೀಡು ಬೀಸಾಗಿ ಬ್ಯಾಟ್ ಬೀಸುತ್ತಿದ್ದ ಹುಡುಗನ್ನು ನೋಡಿ ಜ್ವಾಲಾ ಸಿಂಗ್ ಬೆಕ್ಕಸ ಬೆರಗಾಗಿ ಬಿಡುತ್ತಾರೆ. ಅಷ್ಟೇ.. ಅವತ್ತೇ ನಿರ್ಧಾರ ಮಾಡಿ ಬಿಡುತ್ತಾರೆ “ನನ್ನ ಪಾಲಿನ ಅರ್ಜುನ ಇವನೇ” ಎಂದು.
ಹುಡುಗನನ್ನು ಹತ್ತಿರಕ್ಕೆ ಕರೆದ ಜ್ವಾಲಾ ಸಿಂಗ್ “ಎಲ್ಲಿ ನಿನ್ನ ಮನೆ” ಎಂದು ಕೇಳುತ್ತಾರೆ. ‘’ಪಕ್ಕದಲ್ಲೇ ಒಂದು ಟೆಂಟ್’ನಲ್ಲಿದ್ದೇನೆ ಸರ್” ಎನ್ನುತ್ತಾನೆ ಯಶಸ್ವಿ.
ಇಂಥದ್ದೇ ಹಿನ್ನೆಲೆಯಿಂದ ಬಂದವರು ಜ್ವಾಲಾ ಸಿಂಗ್. ಹುಡುಗನಿಗೆ ಹೇಳಿದ ಮಾತು, “ನಿನ್ನ ಕ್ರಿಕೆಟ್ ಆಸಕ್ತಿ ಹೇಗಿದೆ ಎಂದು ನಾನು ಪರೀಕ್ಷೆ ಮಾಡಬೇಕು. ನನ್ನ ಬಳಿ ಪ್ರಾಕ್ಟೀಸ್’ಗೆ ಬಾ” ಎಂದು.
ಅಲ್ಲಿಂದ ಶುರುವಾಗಿತ್ತು ಯಶಸ್ವಿ ಜೈಸ್ವಾಲ್”ನ ಜೀವನದ ಮತ್ತೊಂದು ಅಧ್ಯಾಯ. ಮುಂಬೈ ಕ್ರಿಕೆಟ್ ಸಂಸ್ಥೆಯ ಡಿವಿಜನ್ ಮ್ಯಾಚ್’ಗಳಲ್ಲಿ ಶತಕಗಳ ಮೇಲೆ ಶತಕಗಳನ್ನು ಬಾರಿಸಿದ ಜೈಸ್ವಾಲ್, 16ನೇ ವಯಸ್ಸಿನಲ್ಲಿ ಇಂಡಿಯಾ ಅಂಡರ್-19 ತಂಡಕ್ಕೆ ಆಯ್ಕೆಯಾಗುತ್ತಾನೆ. 2020ರಲ್ಲಿ ಅಂಡರ್-19 ವಿಶ್ವಕಪ್’ನಲ್ಲೂ ಆಡುತ್ತಾನೆ. ಟೂರ್ನಿಯಲ್ಲೇ ಅತೀ ಹೆಚ್ಚು 400 ರನ್ ಗಳಿಸಿದವನ ಮುಂದಿನ ಪ್ರಯಾಣ ಮುಂಬೈ ಸೀನಿಯರ್ ಕ್ರಿಕೆಟ್ ತಂಡದ ಜೊತೆ.
2019ರಲ್ಲಿ ಬೆಂಗಳೂರಿನ ಆಲೂರು ಕ್ರಿಕೆಟ್ ಮೈದಾನದಲ್ಲಿ ವಿಜಯ್ ಹಜಾರೆ ಟೂರ್ನಿಯಲ್ಲಿ ದ್ವಿಶತಕ ಬಾರಿಸಿದ್ದಾಗ, ಈಗಿನ ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ “Next Superstar” ಎಂದು ಟ್ವೀಟ್ ಮಾಡಿದ್ದರು.
ರೋಹಿತ್ ಮಾತು ನಿಜವಾಗಿತ್ತು. ಮುಂಬೈನ ಟೆಂಟ್’ನಲ್ಲಿ ಮಲಗುತ್ತಿದ್ದ ಹುಡುಗ, ಆಜಾದ್ ಮೈದಾನದಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ, ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಬಾರಿಸುತ್ತಾನೆ. ಅಲ್ಲಿಂದ ಆರೇ ತಿಂಗಳಲ್ಲಿ ಟೆಸ್ಟ್ ದ್ವಿಶತಕ. ಆಸ್ಟ್ರೇಲಿಯಾದಲ್ಲಿ ಆಡಿದ ಪ್ರಪ್ರಥಮ ಟೆಸ್ಟ್’ನಲ್ಲೇ ಶತಕ.., ಈಗ ಇಂಗ್ಲೆಂಡ್’ನಲ್ಲಿ ಆಡಿದ ಮೊದಲ ಟೆಸ್ಟ್’ನಲ್ಲೂ ಶತಕ..
ಇವತ್ತಿಗೆ 23 ವರ್ಷದ ಯಶಸ್ವಿ ಜೈಸ್ವಾಲ್”ನ ಹೆಸರಲ್ಲಿರುವ ದಾಖಲೆಗಳ ಬಗ್ಗೆ ಗೊತ್ತಾ..?
* ಅಂಡರ್-19 ವಿಶ್ವಕಪ್’ನಲ್ಲಿ ಶತಕ
* ರಣಜಿ ಟ್ರೋಫಿಯಲ್ಲಿ ಶತಕ
* ಇರಾನಿ ಕಪ್”ನಲ್ಲಿ ಶತಕ
* ದುಲೀಪ್ ಟ್ರೋಫಿಯಲ್ಲಿ ಶತಕ
* ವಿಜಯ್ ಹಜಾರೆ ಟ್ರೋಫಿಯಲ್ಲಿ ಶತಕ
* ಭಾರತ ‘ಎ’ ತಂಡದ ಪರ ಶತಕ
* ಐಪಿಎಲ್’ನಲ್ಲಿ ಶತಕ
* ಅಂತರಾಷ್ಟ್ರೀಯ ಟಿ20ಯಲ್ಲಿ ಶತಕ
* ಟೆಸ್ಟ್ ಪದಾರ್ಪಣೆಯಲ್ಲಿ ಶತಕ
* ಪ್ರಥಮದರ್ಜೆ ಕ್ರಿಕೆಟ್’ನಲ್ಲಿ ದ್ವಿಶತಕ
* ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ ದ್ವಿಶತಕ
* ಟೆಸ್ಟ್ ಕ್ರಿಕೆಟ್’ನಲ್ಲಿ ದ್ವಿಶತಕ
* ವೆಸ್ಟ್ ಇಂಡೀಸ್’ನಲ್ಲಿ ಟೆಸ್ಟ್ ಶತಕ
* ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಶತಕ
* ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ
ಮುಂಬೈನ ಆಜಾದ್ ಮೈದಾನದ ಬಳಿ 10-12 ವರ್ಷಗಳ ಹಿಂದೆ ಪಾನಿಪೂರಿ ಮಾರುತ್ತಿದ್ದ ಹುಡುಗ ತುಂಬಾ ದೂರ ಸಾಗಿ ಬಂದಿದ್ದಾನೆ.
“ಯಶಸ್ವೀಭವ, ವಿಜಯೀಭವ” ಯಶಸ್ವಿ ಜೈಸ್ವಾಲ್..!

-ಸುದರ್ಶನ್ ಗೌಡ, ಬೆಂಗಳೂರು
—–
The post ಯಶಸ್ವೀಭವ, ವಿಜಯೀಭವ” ಯಶಸ್ವಿ ಜೈಸ್ವಾಲ್..! ಮುಂಬೈ ಬೀದಿಯಲ್ಲಿ ಪಾನಿಪೂರಿ ಮಾರುತ್ತಿದ್ದ ಹುಡುಗ ಇಂಗ್ಲೆಂಡ್’ನಲ್ಲಿ ಟೆಸ್ಟ್ ಶತಕ ಬಾರಿಸಿದ..! -ಸುದರ್ಶನ್ ಗೌಡ, ಬೆಂಗಳೂರು appeared first on Karnataka Kahale.
]]>The post ಮೊರಕ್ಕೊದಲ್ಲಿ ಕೊಪ್ಪಳ ವಿವಿ ಕುಲಪತಿಗಳು: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯ -ಪ್ರೊ.ಬಿ.ಕೆ.ರವಿ appeared first on Karnataka Kahale.
]]>
ಕಾಸಾಬ್ಲಾಂಕಾ (ಮೊರಕ್ಕೋ) ಜೂನ್.12: ಸುಸ್ಥಿರ ಅಭಿವೃದ್ಧಿ ಹಾಗೂ ಜಾಗತಿಕ ಸಮಸ್ಯೆಗಳ ನಿವಾರಣೆಗೆ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದವಾವಣೆಗಳನ್ನು ತರುವ ಅಗತ್ಯವಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ ಅವರು ಅಭಿಪ್ರಾಯಪಟ್ಟರು.
ಕಾಸಾಬ್ಲಾಂಕಾದ ಹಸನ್-II ವಿಶ್ವವಿದ್ಯಾಲಯ ಆಯೋಜಿಸಿದ್ದ “ಸುಸ್ಥಿರ ಭವಿಷ್ಯಕ್ಕಾಗಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ”ಕುರಿತ 16ನೆಯ ಅಂತರರಾಷ್ಟ್ರಿಯ ಶೈಕ್ಷಣಿಕ ಸಮ್ಮೇಳನದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ಜಾಗತಿಕವಾಗಿ 251 ಮಿಲಿಯನ್ ಮಕ್ಕಳು ಶಾಲೆಗಳಿಂದ ಹೊರಗುಳಿಯುತ್ತಿರುವುದು, 400 ಮಿಲಿಯನ್ ಜಾಗತಿಕ ತಾಪಮಾನದಿಂದ,ಪರಿಸರ ಬದಲಾವಣೆಯಿಂದ ತೊಂದರೆಗೆ ತುತ್ತಾಗುತ್ತಿರುವುದು, 57.2%ರಷ್ಟು ಮಕ್ಕಳು ಸೌಲಭ್ಯಗಳು ಹಾಗೂ ತಂತ್ರಜ್ಞಾನದ ಲಭ್ಯತೆಯಿಂದ ವಂಚಿತರಾಗುತ್ತಿರುವುದು ಹಾಗೂ ತೃತೀಯ ಜಗತ್ತಿನ ರಾಷ್ಟçಗಳು ಹಣಕಾಸಿನ ಅಲಭ್ಯತೆಯಿಂದ ಬಳಲುತ್ತಿರುವುದು ಆತಂಕಕಾರಿ ಎಂದರು.
ವಿದ್ಯಾರ್ಥಿಗಳನ್ನು ಕೇವಲ ತರಗತಿಗಳಿಗೆ ಸೀಮಿತಗೊಳಿಸದೆ ಜೀವನದ ನಿಜ ಆಯಾಮವನ್ನು, ಮಾನವೀಯ ಮೌಲ್ಯಗಳನ್ನು ಅವರಲ್ಲಿ ಕರಗತಗೊಳಿಸುವ ಅಗತ್ಯವಿದೆ ಹಾಗೂ ತಂತ್ರಜ್ಞಾನದ ಬಳಕೆ ಬಗ್ಗೆ ಕೂಡಾ ಅವರಲ್ಲಿ ಅರಿವು ಮೂಡಿಸಬೇಕು, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ಕೊಟ್ಟು,ಸಂಶೋಧನೆಗಳ ಫಲಿತಗಳನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಪ್ರೊ.ರವಿ ಹೇಳಿದರು.
ನಂತರ ಉನ್ನತ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕುರಿತ ವಿಶೇಷ ಉಪನ್ಯಾಸ ನೀಡಿದರು. ಈ ಅಂತರರಾಷ್ಟ್ರಿಯ ಸಮ್ಮೇಳನದಲ್ಲಿ 254ಕ್ಕೂ ಹೆಚ್ಚು ಸಂಶೋಧಕರು ತಮ್ಮ ಪ್ರಬಂಧಗಳನ್ನು ಮಂಡಿಸಿದರು.
ಹಸನ್-II ವಿಶ್ವವಿದ್ಯಾಲಯದ ಕುಲಪತಿ ಡಾ.ಹೌಸಿನೇ ಅಸೆಡಾಗ್,ಡೀನ್ ಡಾ.ಅಬ್ದೆಲ್ಲಾ ಬ್ರಾಕ್ಟಾ, ಸಮ್ಮೇಳನದ ಸಂಯೋಜಕಿ ಡಾ.ಇಮಾನೇ ಎಲ್ ಇಮಾಡಿ, ಮುಂತಾದವರು ಉಪಸ್ಥಿತರಿದ್ದರು.
The post ಮೊರಕ್ಕೊದಲ್ಲಿ ಕೊಪ್ಪಳ ವಿವಿ ಕುಲಪತಿಗಳು: ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಅನಿವಾರ್ಯ -ಪ್ರೊ.ಬಿ.ಕೆ.ರವಿ appeared first on Karnataka Kahale.
]]>The post ಲಂಡನ್: ಬೂಕರ್ ಪ್ರಶಸ್ತಿ ಆಯಪಟ್ಟಿಯಲ್ಲಿ ಹಿರಿಯ ಸಾಹಿತಿ ಬಾನು ಮುಷ್ಕಾಕ್ ಕೃತಿ appeared first on Karnataka Kahale.
]]>
ಲಂಡನ್,ಫೆ.೨೬: ಕನ್ನಡದ ಖ್ಯಾತ ಸಾಹಿತಿ ಬಾನು ಮುಸ್ತಾಕ್ ಅವರ ಸಣ್ಣಕತೆಗಳ ಅನುವಾದಿತ ಸಂಕಲನ ‘ಹಾರ್ಟ್ ಲ್ಯಾಂಪ್’ ಪ್ರತಿಷ್ಠಿತ ಅಂತ ರಾಷ್ಟ್ರೀಯ ಬೂಕರ್ ಪುರಸ್ಕಾರಕ್ಕೆ ಪರಿಗಣನೆಗೆ ಸಿದ್ಧವಾಗಿರುವ ಪಟ್ಟಿಯಲ್ಲಿ ಸೇರ್ಪಡೆಗೊಂಡಿದೆ.
ಈ ಕುರಿತು ವಾರ್ತಾಭಾರತಿ ಕನ್ನಡ ದಿನ ಪತ್ರಿಕೆ ವರದಿ ಮಾಡಿದೆ.
ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು ಕಥಾಸಂಕಲನವನ್ನು ದೀಪಾ ಭಸ್ವಿ ಅವರು ‘ಹಾರ್ಟ್ ಲ್ಯಾಂಪ್’ ಶೀರ್ಷಿಕೆ ಯೊಂದಿಗೆ ಇಂಗ್ಲಿಷ್ ಅನುವಾದಿಸಿದ್ದರು.
ಕನ್ನಡ’ ಭಾಷೆಯು ಕೃತಿಯೊಂದು ಬೂಕರ್ ಸ್ಪರ್ಧೆಗೆ ಪ್ರವೇಶ ಪಡೆದಿರುವುದು ಇದೇ ಮೊದಲ ಸಲ ವಾಗಿದೆ. ಕುಟುಂಬ ಹಾಗೂ ಸಮುದಾಯದ ತುಮುಲಗಳನ್ನು ಹೃದಯಸ್ಪರ್ಶಿಯಾಗಿ ಪ್ರಾದೇಶಿಕ ಸೊಗಡಿನೊಂದಿಗೆ ಮುಸ್ತಾಕ್ ಅವರ ಕಥೆಗಳು ಕಟ್ಟಿಕೊಟ್ಟಿವೆ ಎಂದು ತೀರ್ಪುಗಾರರು ತಿಳಿಸಿದ್ದಾರೆ.
೫೦ ಸಾವಿರ ಪೌಂಡ್ ( ಸುಮಾರು ೫೫ ಲಕ್ಷ ರೂ.) ಮೊತ್ತದ ಬೂಕರ್ ಪ್ರಶಸ್ತಿಗೆ ಪರಿಗಣನೆಯ ಪಟ್ಟಿಯಲ್ಲಿ ಒಟ್ಟು ೧೩ ಕೃತಿಗಳು ಪ್ರವೇಶಪಡೆದಿವೆ.
ಅಂತಿಮ ಸುತ್ತಿಗೆ ಪ್ರವೇಶ ಪಡೆಯುವ ೬ ಕೃತಿಗಳ ಪೈಕಿ ಒಂದನ್ನು ಬೂಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು, ಎಪ್ರಿಲ್ ೮ರಂದು ಬೂಕರ್ ಪುರಸ್ಕಾರ ಘೋಷಣೆಯಾಗಲಿದೆ.
The post ಲಂಡನ್: ಬೂಕರ್ ಪ್ರಶಸ್ತಿ ಆಯಪಟ್ಟಿಯಲ್ಲಿ ಹಿರಿಯ ಸಾಹಿತಿ ಬಾನು ಮುಷ್ಕಾಕ್ ಕೃತಿ appeared first on Karnataka Kahale.
]]>The post ಬೌದ್ಧಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್ -ರಘೋತ್ತಮಹೊ.ಬ., ಮೈಸೂರು appeared first on Karnataka Kahale.
]]>
1881 ರಲ್ಲೆ ವಿಲಿಯಂ ಹಂಟರ್ ಎಂಬುವವರು ಭಾರತದಲ್ಲಿ ಬೌದ್ಧಧರ್ಮ ಪುನರುತ್ಥಾನವಾಗುವುದೆಂದು ಸೂಚಿಸಿದ್ದರು. ವಿಶ್ವಕವಿ ರವೀಂದ್ರನಾಥ ಠಾಗೋರ್ ಕೂಡ ತಮ್ಮ “ಬುದ್ಧದೇವೋ” ಎಂಬ ಪದ್ಯದಲ್ಲಿ ಬೌದ್ಧಧರ್ಮ ಪುನಾರುತ್ಥಾನವಾಗುವುದೆಂದು ನಿರೀಕ್ಷಿಸಿದ್ದರು. ಅದರೆ? ನಿಜಕ್ಕೂ ಅದರ ಪುನರುತ್ಥಾನಕ್ಕೆ ಶ್ರಮಿಸಿದ್ದು? ಭಾರತದಲ್ಲಿ ಮತ್ತೆ ಬುದ್ಧ ಮಂತ್ರ ಪಠಣದ ಕ್ರಿಯೆಗೆ ಮುನ್ನುಡಿ ಬರೆದದ್ದು? ನಿಸ್ಸಂಶಯವಾಗಿ ಅದು ಅಂಬೇಡ್ಕರ್. ಅಂಬೇಡ್ಕರ್ 1956 ಅಕ್ಟೋಬರ್ 14 ರಂದು ನಾಗಪುರದ ದೀಕ್ಷಾಭೂಮಿಯಲ್ಲಿ ತಮ್ಮ 10 ಲಕ್ಷ ಅನುಯಾಯಿಗಳೊಂದಿಗೆ ಬೌದ್ಧಧರ್ಮ ಸ್ವೀಕರಿಸಿದ್ದು ಇಡೀ ವಿಶ್ವದ ಇತಿಹಾಸದಲ್ಲಿ ಚಿರನೆನಪಿನಲ್ಲಿ ಉಳಿದುಕೊಳ್ಳುವಂತಹ ಘಟನೆ. ಯಾಕೆಂದರೆ ಎಲ್ಲರೂ ಮತಾಂತರ ಮತಾಂತರ ಎನ್ನುತ್ತಾರೆ ಆದರೆ ಒಂದೇ ದಿನ ಅಷ್ಟೊಂದು ಬೃಹತ್ ಜನ ಒಂದೇ ವೇದಿಕೆಯಲ್ಲಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಗೊಂಡಿದ್ದು? ಹಿಂದೆ ಎಂದೂ ನಡೆದಿರಲಿಲ್ಲ! ಆದರೆ ಅಂಬೇಡ್ಕರ್ ಮೂಲಕ ಅದು ನಡೆಸಲ್ಪಟ್ಟಿತ್ತು. ಯಾವ ಬೌದ್ಧಧರ್ಮ ಭಾರತದಿಂದ ಕಣ್ಮರೆಯಾಗಿತ್ತೋ ಅದು ಅಂಬೇಡ್ಕರ್ ಮೂಲಕ ಭಾರತದಲ್ಲಿ ಮತ್ತೆ ಜೀವ ಪಡೆದಿತ್ತು. ಈ ನಿಟ್ಟಿನಲಿ ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ಥಾನಕ್ಕೆ ಅಂಬೇಡ್ಕರ್ ಮುನ್ನುಡಿ ಬರೆದಿದ್ದರು.
ಹಾಗಿದ್ದರೆ ಬೌದ್ಧಧರ್ಮಕ್ಕೆ ಮತಾಂತರ ಹೊಂದುವ ಅಂಬೇಡ್ಕರರ ನಿರ್ಧಾರ ದಿಢೀರನೆ ತೆಗೆದುಕೊಂಡದ್ದೆ? ಅಥವಾ ಯಾವುದಾದರೂ ಆಮಿಷಕ್ಕೊಳಗಾಗಿ ಅವರು ಮತಾಂತರ ಹೊಂದಿದರೆ? ಖಂಡಿತ ಇಲ್ಲ. ಬೌದ್ಧಧರ್ಮ ಸ್ವೀಕಾರದ ಅವರ ನಿರ್ಧಾರ ಅವರ ಜೀವನದ ಅಂತಿಮಗಳಿಗೆಯದ್ದಲ್ಲ ಅಥವಾ ಯಾವುದೇ ಆಸೆ ಆಮಿಷದ್ದೂ ಅಲ್ಲ. ಯಾಕೆಂದರೆ ತಮ್ಮ ಜೀವಿತದ ಬಹಳ ಹಿಂದೆಯೇ ಅಂದರೆ 1936, ಮೇ13 ರ ಬುದ್ಧ ಜಯಂತಿಯಂದೆ ಮುಂಬೈನಲ್ಲಿ ತಮ್ಮ ಸುಪ್ರಸಿದ್ಧ “ಮುಕ್ತಿಯ ಮಾರ್ಗ ಯಾವುದು?” ಎಂಬ ಭಾಷಣದಲ್ಲಿ ಅವರು ತಮ್ಮ ಸ್ಪಷ್ಟ ಗುರಿ ಬೌದ್ಧಧರ್ಮ ಎಂಬುದನ್ನು ಬಹಳ ನಿಖರವಾಗಿಯೇ, ನಿಶ್ಚಿತವಾಗಿಯೇ ಹೇಳಿದ್ದರು.

ಯಾಕೆಂದರೆ ಅಂಬೇಡ್ಕರ್ ಹಿಂದೂಧರ್ಮ ಟೀಕಿಸುತ್ತಿದ್ದರು ಎಂದರೆ ಅದಕ್ಕೆ ಪರ್ಯಾಯವನ್ನು ಹುಡುಕಿಕೊಂಡಿದ್ದರೆಂದೇ ಅಲ್ಲವೆ? ಹೌದು, ಜೀವನದುದ್ದಕ್ಕೂ ಹಿಂದೂಧರ್ಮವನ್ನು, ಮತ್ತದರ ಜಾತಿ ವ್ಯವಸ್ಥೆಯನ್ನು ಟೀಕಿಸುತ್ತಿದ್ದ ಅವರು ಹಾಗೆ ಟೀಕಿಸುತ್ತಾ, ಟೀಕಿಸುತ್ತಾ ಬುದ್ಧನನ್ನು ತನ್ನೆಡೆಗೆ ಎಳೆದುಕೊಂಡಿದ್ದರು. ಅಂದಹಾಗೆ 1936 ರ ಸಮಯದಲ್ಲಿ ಅವರು ಬೌದ್ಧಧರ್ಮದಲ್ಲಿ ತನ್ನ ಭವಿಷ್ಯ ಎಂದಾಗ ಮೂಂಜೆ ಎಂಬ ಹಿಂದೂ ಮಹಾಸಭಾದ ಮುಖಂಡರು ಅಂಬೇಡ್ಕರರಿಗೆ ಸಲಹೆ ನೀಡಿದ್ದು “ಮುಸ್ಲಿಂ ಧರ್ಮವನ್ನು ಪರ್ಯಾಯವಾಗಿ ಎದುರಿಸಲು ದಲಿತರು ಸಿಖ್ ಧರ್ಮಕ್ಕೆ ಮತಾಂತರಗೊಳ್ಳಲಿ” ಎಂದು. ಆದರೆ ಅಂಬೇಡ್ಕರರು ಹಿಂದೂ ಧರ್ಮದ ನಾಯಕರುಗಳ ಆ ಸಲಹೆಗಳಿಗೆ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ತಮ್ಮಷ್ಟಕ್ಕೆ ತಾವು ಬುದ್ಧನತ್ತ ಚಲಿಸತೊಡಗಿದ್ದರು. 1950ರಲ್ಲಿ “ಷೆಡ್ಯೂಲ್ಡ್ ಕ್ಯಾಸ್ಟ್ ಫಡರೇಷನ್” ಎಂಬ ತಮ್ಮ ನೇತೃತ್ವದ ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ಅಂಬೇಡ್ಕರರು ಬುದ್ಧ ಜಯಂತಿಯನ್ನು ಆಚರಿಸುವಂತೆ ಕೂಡ ಕರೆನೀಡಿದ್ದರು. ಕೋಲ್ಕತ್ತಾದ ಮಹಾಬೋಧಿ ಸೊಸೈಟಿಯವರು ಹೊರತಂದಿದ್ದ ವಿಶೇಷ ಸಂಚಿಕೆಯೊಂದರಲ್ಲಿ ಅವರು 1950ರಲ್ಲೇ “ಭಗವಾನ್ ಬುದ್ಧ ಮತ್ತು ಆತನ ಧಮ್ಮದ ಭವಿಷ್ಯ”ಎಂಬ ಲೇಖನ ಬರೆದಿದ್ದರು. ಆ ಮೂಲಕ ಬೌದ್ಧದರ್ಮಕ್ಕೆ ‘ಉಜ್ವಲ ಭವಿಷ್ಯ’ವಿದೆ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದರು . ಈ ನಡುವೆ 1954ರಲ್ಲಿ ಬರ್ಮಾದಲ್ಲಿ ನಡೆದ ಅಂತರಾಷ್ಟ್ರೀಯ ಬೌದ್ಧ ಸಮ್ಮೇಳನದಲ್ಲಿಯೂ ಕೂಡ ಅಂಬೇಡ್ಕರ್ ರವರು ಭಾಗವಹಿಸಿದ್ದರು. ಒಟ್ಟಾರೆ ತಮ್ಮ ಅವಿರತ ಸಾಮಾಜಿಕ, ರಾಜಕೀಯ ಹೋರಾಟದ ನಡುವೆ ಅಂಬೇಡ್ಕರರು ನಿಧಾನವಾಗಿ ಚಲಿಸುತ್ತಿದ್ದದ್ದು ಬೌದ್ಧದರ್ಮದ ಕಡೆಗೆ . ಯಾಕೆಂದರೆ ಅವರಿಗೆ ತಿಳಿದಿತ್ತು , ಒಂದು ಸಮುದಾಯಕ್ಕೆ ಸಾಮಾಜಿಕ ರಾಜಕೀಯ ಜಾಗೃತಿ ಮೂಡಿಸಿ ಅದಕ್ಕೆ ಧಾರ್ಮಿಕ ದಿಕ್ಕನ್ನು ತೋರಿಸದಿದ್ದರೆ ಅದಕ್ಕೆ ಅರ್ಥವಿರುವುದಿಲ್ಲ ಎಂದು. ಈ ಕಾರಣಕ್ಕಾಗಿಯೇ ಅವರು ತಮ್ಮ ಹದಗೆಡುತ್ತಿದ್ದ ಆರೋಗ್ಯದ ಮಧ್ಯೆ ಸ್ವೀಕರಿಸಿದ್ದು ಬೌದ್ಧಧರ್ಮ ಮತ್ತು ಅಂಥ ಮುನ್ಸೂಚನೆ ಸಿಕ್ಕಿದ್ದರಿಂದಲೇ ಅಂದರೆ ತಮ್ಮ ಸಾವಿನ ಮುನ್ಸೂಚನೆ ಸಿಕ್ಕಿದ್ದರಿಂದಲೆ ಅವರು ತಾವು ಪುನರುತ್ಥಾನಗೊಳಿಸಿದ ಅಂತಹ ಧರ್ಮದ ನೆಲೆಗಟ್ಟಾಗಿ ಬುದ್ಧಧರ್ಮವನ್ನು ಕುರಿತು “ ಬುದ್ಧ ಅಂಡ್ ಹಿಸ್ ಧಮ್ಮ” ಎಂಬ ಕೃತಿ ಬರೆದದ್ದು. ಯಾಕೆಂದರೆ ಅದಾಗಲೆ ಮಹಾಬೋಧಿ ಸೊಸೈಟಿ ಮತ್ತು ಮತ್ತಿತರ ಬೌದ್ಧ ಸೊಸೈಟಿಗಳು ಭಾರತದಲ್ಲಿ ಇದ್ದವಾದರು ಅವ್ಯಾವುದಕ್ಕೂ ಭಾರತದಲ್ಲಿ ಬೌದ್ಧಧರ್ಮದ ಪುನರುತ್ಥಾನಕ್ಕೆ ಸ್ಪಷ್ಟ ರೂಪುರೇಷೆ ಅಥವಾ ಟಾರ್ಗೆಟ್ ಗ್ರೂಪ್ ಇರಲಿಲ್ಲ. ಆದರೆ ಬಾಬಾಸಾಹೇಬ್ ಅಂಬೇಡ್ಕರರಿಗೆ ಬೌದ್ಧಧರ್ಮವನ್ನು ಈ ರಾಷ್ಟ್ರದ ಜನಮಾನಸದ ಧರ್ಮವಾಗಿ ಬೆಳೆಸುವ ಆಲೋಚನೆ ಇತ್ತು. ಬರೀ ದಲಿತರಿಗೆ ಮಾತ್ರ ಆ ಧರ್ಮ ಎಂಬಂತೆಯಲ್ಲ. ಸಮಸ್ತ ಭಾರತೀಯರಿಗೂ ಆ ಧರ್ಮದ ಆಶಯಗಳನ್ನು ತಲುಪಿಸಬೇಕೆಂಬ ಆಶಯವಿತ್ತು ಅಂಬೇಡ್ಕರರಿಗೆ . ಹಾಗಂತ ಅಂಬೇಡ್ಕರರು ತಮ್ಮ ಆಪ್ತ ಅನುಯಾಯಿಗಳಲ್ಲಿ ಹೇಳಿಕೊಂಡಿದ್ದರು. ಅವರ ಈ ಆಶಯಗಳನ್ನು ಉಲ್ಲೇಖಿಸುತ್ತ ಅವರ ಸಹಪಾಠಿಯಾಗಿದ್ದ ಭಗವಾನ್‍ದಾಸ್‍ರವರು ತಮ್ಮ “ಇನ್ ಪಸ್ರ್ಯೂಟ್ ಆಫ್ ಅಂಬೇಡ್ಕರ್” ಕೃತಿಯಲ್ಲಿ ಹೀಗೆ ಹೇಳುತ್ತಾರೆ “ಅವರು( ಅಂಬೇಡ್ಕರ್) ಬೌದ್ಧಧರ್ಮ ಅಸ್ಪೃಶ್ಯರ ಏಕಾಧಿಪತ್ಯಕ್ಕೆ ಒಳಪಡುವುದರ ಪರ ಇರಲಿಲ್ಲ. ಬದಲಿಗೆ ಅದು ಇಡೀ ಪ್ರಪಂಚದಲ್ಲೇ ಮಾನವತೆ ಮತ್ತು ಸಹೋದರತೆಯನ್ನು ಪ್ರಚುರಪಡಿಸುವ ಸಾಧನವಾಗಬೇಕು” ಎಂದು ಆಶಿಸಿದ್ದರು ಎನ್ನುತ್ತಾರೆ ಭಗವಾನ್ ದಾಸ್ ರವರು. ಈ ನಿಟ್ಟಿನಲ್ಲಿ ಅಂಬೇಡ್ಕರರ ಇನ್ನಷ್ಟೂ ಆಶಯಗಳನ್ನು ಅವರು ಉಲ್ಲೇಖಿಸುತ್ತಾರೆ ಅವುಗಳೆಂದರೆ
1. ಪ್ರತಿಯೊಬ್ಬ ಬೌದ್ಧನು ತನ್ನ ಬಳಿ ಬೌದ್ಧಧರ್ಮದ ಧರ್ಮ ಗ್ರಂಥವೊಂದನ್ನು ಇಟ್ಟುಕೊಳ್ಳಬೇಕು ಮತ್ತು ಆ ಗ್ರಂಥ ಬುದ್ಧನ ಸಾಮಾಜಿಕ, ನೈತಿಕ ಮೌಲ್ಯಗಳನ್ನು ಬಿಂಬಿಸಬೇಕು.
2. ಹೇಗೆ ಕ್ರಿಶ್ಚಿಯನ್ನರು ಒಂದು ಅಧಿಕಾರಯುತ ಮತಾಂತರ ಪದ್ಧತಿಯನ್ನು ಇಟ್ಟುಕೊಂಡಿದ್ದಾರೋ ಅಂತಹದ್ದೆ ಮಾದರಿಯ ಮತಾಂತರ ಪದ್ಧತಿಯನ್ನು ಬೌದ್ಧರು ಕೂಡ ಹೊಂದಬೇಕು. ಅಂದಹಾಗೆ ಅಂತಹ ಮತಾಂತರದಲ್ಲಿ ಬರೀ ಬೌದ್ಧ ಪಂಚಶೀಲಗಳಷ್ಟೆ ಅಲ್ಲ ಬದಲಿಗೆ ಭಾರತದಲ್ಲಿ ಬೌದ್ಧಧರ್ಮ ಸ್ವೀಕರಿಸಿದ ವ್ಯಕ್ತಿಯೊಬ್ಬ “ಇನ್ನುಮುಂದೆ ನಾನು ಹಿಂದೂ ಅಲ್ಲ, ನಾನೊಬ್ಬ ಹೊಸ ಮನುಷ್ಯ” ಎಂಬ ಭಾವನೆ ಮೂಡಬೇಕು ಎನ್ನುತ್ತಾರೆ ಅಂಬೇಡ್ಕರ್‍ರವರು . ಈ ಕಾರಣಕ್ಕೆ ತಮ್ಮದೇ 22 ದೀಕ್ಷಾ ವಿಧಿಗಳನ್ನು ಸಹ ಅಂಬೇಡ್ಕರರು ಪ್ರತಿಷ್ಠಾಪಿಸುತ್ತಾರೆ. ಅವುಗಳಲ್ಲಿ ನಾನು ಹಿಂದೂ ದೇವರುಗಳನ್ನು ನಂಬುವುದಿಲ್ಲ, ಬ್ರಹ್ಮ, ವಿಷ್ಣು, ಶಿವ ಇವರುಗಳನ್ನು ನಂಬುವುದಿಲ್ಲ, ಬುದ್ಧ ವಿಷ್ಣುವಿನ ಅವತಾರ ಎಂದು ನಂಬುವುದಿಲ್ಲ ಎಂಬಿತ್ಯಾದಿ ಅಂಶಗಳಿವೆ.
3. ಬೌದ್ಧ ಧರ್ಮದ ಪ್ರಚಾರಕ್ಕಾಗಿ ಉಪಾಸಕರನ್ನು ನೇಮಿಸಿಕೊಳ್ಳಬೇಕು ಮತ್ತು ಅವರು ವಿವಾಹಿತರಾಗಿರಬೇಕು. ಅಲ್ಲದೆ ಧರ್ಮ ಪ್ರಚಾರ ಮಾಡುವ ಅವರಿಗೆ ಸೂಕ್ತ ವೇತನ ನೀಡಬೇಕು ಮತ್ತು ಅವರು ಬೌದ್ಧ ಧರ್ಮ ಪ್ರಚಾರ ಕಾರ್ಯವನ್ನು ಪಾರ್ಟ್ ಟೈಮ್ ವೃತ್ತಿಯಾಗಿ ಸ್ವೀಕರಿಸಬೇಕು.
4. ಬೌದ್ಧ ಧರ್ಮ ಪ್ರಚಾರಕ್ಕಾಗಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಬೇಕು. ಅಂತಹ ಕೇಂದ್ರಗಳಲ್ಲಿ ಉಪಾಸಕರಿಗೆ ತರಬೇತಿ ನೀಡುವ, ಬೇರೆ ಧರ್ಮಗಳ ಬಗ್ಗೆ ತಿಳಿದು ಕೊಳ್ಳುವ ವ್ಯವಸ್ಥೆಯಾಗಬೇಕು.
5. ಪ್ರತಿ ಭಾನುವಾರ ಜನರು ಬೌದ್ಧ ವಿಹಾರವೊಂದರಲ್ಲಿ ಸೇರಬೇಕು ಮತ್ತು ಅಲ್ಲಿ ಅವರು ಬುದ್ಧನ್ನು ಪೂಜಿಸಬೇಕು ಹಾಗೆಯೇ ಅಲ್ಲಿ ಬುದ್ಧನ ಕುರಿತು ಉಪನ್ಯಾಸವಿರಬೇಕು.
ಹೀಗೆ ಅಂಬೇಡ್ಕರರ ಆಶಯಗಳನ್ನು ಹೇಳುತ್ತಾ ಹೋಗುತ್ತಾರೆ ಭಗವಾನ್ ದಾಸ್ ರವರು. ಒಂದಂತು ನಿಜ, ಬೌದ್ಧ ಧರ್ಮದ ಪ್ರಚಾರಕ್ಕಾಗಿ ಅಂಬೇಡ್ಕರರು ತುಂಬಾ ಸೀರಿಯಸ್ ಆಗಿದ್ದರು. ಧರ್ಮ ಸ್ವೀಕಾರ ಮತ್ತು ಪ್ರಚಾರವನ್ನು ಅವರು ಹಗುರವಾಗಿ ತೆಗೆದುಕೊಂಡಿರಲಿಲ್ಲ. ಏನಾದರೂ ಅವರು ಇನ್ನೊಂದಿಷ್ಟು ವರುಷ ಬದುಕಿದ್ದೇ ಆದರೆ ಇಡೀ ಭಾರತವನ್ನು ಬೌದ್ಧ ಭಾರತ ಮಾಡಿ ಬಿಡುತ್ತಿದ್ದರು. ಆದರೆ ಜೀವನದ ಅಂತ್ಯ ಅವರಿಗೆ ಅಂತಹ ಅವಕಾಶ ಕೊಡಲಿಲ್ಲ. ಅದೇನೆ ಇರಲಿ, ಬಾಬಾಸಾಹೇಬ್ ಅಂಬೇಡ್ಕರ್ ಭಾರತದಲ್ಲಿ ಬೌದ್ಧ ಧರ್ಮದ ಪುನರುತ್ಥಾರಕರೆಂಬುದು ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿ ಹೋಗಿದೆ. ಈ ನಿಟ್ಟಿನಲಿ ಅವರ ಆ ಧರ್ಮ ಪುನರುತ್ಥಾನದ ಧಾರ್ಮಿಕ ಪ್ರಕ್ರಿಯೆಯ ನಿರಂತರತೆಗೆ ಪ್ರತಿಯೊಬ್ಬರೂ ಶ್ರಮಿಸಬೇಕಷ್ಟೆ.

-ರಘೋತ್ತಮ ಹೊ.ಬ., ಮೈಸೂರು
—–
The post ಬೌದ್ಧಧರ್ಮದ ಪುನರುತ್ಥಾನಕ್ಕೆ ಮುನ್ನುಡಿ ಬರೆದ ಅಂಬೇಡ್ಕರ್ -ರಘೋತ್ತಮಹೊ.ಬ., ಮೈಸೂರು appeared first on Karnataka Kahale.
]]>The post ‘ಹಂಪಿ’ಯ ಕಡುವ್ಯಾಮೋಹಿ ಛಾಯಾಗ್ರಾಹಕ ‘ಬಣಗಾರ’ -ತಿರು ಶ್ರೀಧರ್, ದುಬೈ appeared first on Karnataka Kahale.
]]>
ಇಂದು ಪ್ರಸಿದ್ಧ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಲೇಖಕ ತಿರು ಶ್ರೀಧರ್ ಅವರು, ಪ್ರತಿಭಾ ಸಂಪನ್ನ ಬಣಗಾರ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಲೇಖನದ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ. ಕರ್ನಾಟಕ ಕಹಳೆ ಡಾಟ್ ಕಾಮ್ ಬಳಗದ ಹೆಮ್ಮೆಯ ಛಾಯಾಗ್ರಾಹಕ ಶಿವಶಂಕರ ಬಣಗಾರ ಅವರಿಗೂ ಜನುಮದಿನದ ಶುಭಾಶಯಗಳನ್ನು ಕೋರುತ್ತಿದೆ.
(ಸಂಪಾದಕ)
ಶಿವಶಂಕರ ಬಣಗಾರ ನಮ್ಮ ನಡುವೆ ಎದ್ದುಕಾಣುವ ಭವ್ಯ ಛಾಯಾಗ್ರಾಹಕರು. ಹಂಪೆಯ ವೈಭವವನ್ನು, ಅದು ಎಷ್ಟೇ ಹಾಳಾಗಿದ್ದರೂ ಅದನ್ನು ಪ್ರತಿದಿನ ತಪ್ಪದಂತೆ ತಮ್ಮ ಬದುಕಿನ ತಪಸ್ಸೇ ಏನೋ ಎಂಬಂತೆ ಆದರಿಸಿ, ಸೂರ್ಯನ ಹೊಂಗಿರಣಗಳಲ್ಲಿ ಬೆಳಗುವಂತೆ ತೆರೆದಿಡುವ ಶಿವಶಂಕರ ಬಣಗಾರರ ಬಂಗಾರದಂತಹ ಚಿತ್ರಗಳನ್ನು ಕಾಣುವಾಗ ‘ನೂರು ಕಣ್ಣು ಸಾಲದು’ ಎಂದು ಹೃದಯ ಹಾಡುವಂತೆ ಮಾಡುತ್ತದೆ.
ಶಿವಶಂಕರ ಬಣಗಾರ ಅವರು 1971ರ ಮೇ 18ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಜನಿಸಿದರು. ತಂದೆ ಶಿವಲಿಂಗಪ್ಪ. ತಾಯಿ ಶಂಕರಮ್ಮ.

ಶಿವಶಂಕರ್ ಅವರು ಪಿಯುಸಿ ಓದುವಾಗಲೇ ಪತ್ರಿಕೋದ್ಯಮದ ಸೆಳೆತದಿಂದ ‘ಹೊಸಪೇಟೆ ಟೈಮ್ಸ್’ನ ವರದಿಗಾರರಾಗಿ ಮತ್ತು ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಮುಂದೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಪದವಿಗೆ ಓದಿದರು.
ಶಿವಶಂಕರ್ ಬಣಗಾರ್ ಅವರು ಹೊಸಪೇಟೆ ಟೈಮ್ಸ್ ಅಲ್ಲದೆ, ಈ ನಮ್ಮ ಕನ್ನಡ ನಾಡು ಉಪಸಂಪಾದಕರಾಗಿ, ವಿಜಯ ಕರ್ನಾಟಕ ಪತ್ರಿಕೆಗೆ ಹೊಸಪೇಟೆ ವರದಿಗಾರರಾಗಿ – ಜಾಹಿರಾತು ಪ್ರತಿನಿಧಿಯಾಗಿ – ಜಾಹಿರಾತು ಮುಖ್ಯಸ್ಥರಾಗಿ; ವಿಜಯವಾಣಿ ವರದಿಗಾರರಾಗಿ, ಉದಯವಾಣಿ ಹಂಪಿ ವರದಿಗಾರರಾಗಿ, ಸಂಯುಕ್ತ ಕರ್ನಾಟಕದ ವರದಿಗಾರರಾಗಿ, ಹೊಸ ದಿಗಂತದ ವರದಿಗಾರರಾಗಿ ಹೀಗೆ ವಿವಿಧ ಅವಧಿಗಳಲ್ಲಿ ವಿವಿಧ ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ಪ್ರಸಕ್ತದಲ್ಲಿ ಅವರು ಬಣಗಾರ ಮೀಡಿಯಾ ಸಲ್ಯೂಷನ್ಸ್ ಎಂಬ ಜಾಹಿರಾತು ಸಂಸ್ಥೆ ನಿರ್ವಹಿಸುತ್ತಿದ್ದಾರೆ.

ಶಿವಶಂಕರ ಬಣಗಾರ್ ಅವರಿಗೆ ಚಿಕ್ಕಂದಿನಿಂದಲೂ ಛಾಯಾಗ್ರಹಣದಲ್ಲಿ ಆಸೆ ಇದ್ದರೂ ಕೈಯಲ್ಲಿ ಕ್ಯಾಮರಾ ಇರಲಿಲ್ಲ. 2008ರಲ್ಲಿ ವರದಿಗಾರಿಕೆಗಾಗಿ ಸೋನಿ ಪಾಯಿಂಟ್ ಅಂಡ್ ಶೂಟ್ ಕ್ಯಾಮೆರಾ ಕೊಂಡರು. ಅದೂ ನೀರುಕಾಗೆಯ ಒಂದು ಸುದ್ಧಿ ಇವರ ಛಾಯಾಗ್ರಹಣಕ್ಕೆ ಮೊದಲ ಕಾರಣವಾಯ್ತು.
ಶಿವಶಂಕರ ಬಣಗಾರ್ ಅವರಿಗೆ ವನ್ಯಜೀವಿ ಪಂಪಯ್ಯ ಸ್ವಾಮಿ ಮಳೆಮಠ ಅವರ ಸಾಂಗತ್ಯದಿಂದ ಪಕ್ಷಿಗಳ ಚಿತ್ರ ತೆಗೆಯುವ ಹವ್ಯಾಸ ಬೆಳೆಯಿತು. 10 ಎಕ್ಸ್ ಕ್ಯಾಮೆರಾದಿಂದ, 30 ಎಕ್ಸ್ ಸೋನಿ ಕ್ಯಾಮೆರಾಗೆ ಬಂದು, ಮುಂದೆ ಕ್ಯಾನಾನ್ 50 ಎಕ್ಸ್ ಬಳಸಿ ಛಾಯಾಚಿತ್ರಗಳನ್ನು ತೆಗೆಯಲು ತೊಡಗಿದರು.

ಪೇಸ್ಬುಕ್ನಲ್ಲಿ ಅಂತೂ ಶಿವಶಂಕರ ಬಣಗಾರರ ಚಿತ್ರಗಳು ಜನಸ್ತೋಮವನ್ನು ಅಪಾರವಾಗಿ ಆಕರ್ಷಿಸಿವೆ. ಹಂಪಿಯ ಅವರ ಚಿತ್ರಗಳಂತೂ ಪ್ರತಿಯೊಬ್ಬರಿಗೂ ಆಕರ್ಷಣೆ. ಇವರ ಚಿತ್ರಗಳು ಜಪಾನ್ ದೇಶದಲ್ಲೂ ಪ್ರದರ್ಶನಗೊಂಡಿವೆ. ಪುರಾತನ ದೇಗುಲಗಳ ಕುರಿತಾದ ಸಮೂಹಗಳಲ್ಲಿ ಮತ್ತು ಅನೇಕ ಪುಸ್ತಕಗಳಲ್ಲಿ ಶಿವಶಂಕರ್ ಬಣಗಾರ್ ಅವರ ಚಿತ್ರಗಳು ಮುಖಪುಟ ಮತ್ತು ಪ್ರಮುಖ ಪುಟಗಳಾಗಿ ನಿರಂತರವಾಗಿ ಕಂಗೊಳಿಸುತ್ತಿವೆ. 2016ರಲ್ಲಿ ಅಮೆರಿಕದ ‘ಅಕ್ಕ’ ಸಮ್ಮೇಳನದಲ್ಲಿ ಪ್ರಕಟಗೊಂಡ ‘ಐಸಿರಿ ಕಾಫಿಟೇಬಲ್ ಬುಕ್’ನಲ್ಲಿ ಶಿವಶಂಕರ್ ಅವರ ಹಂಪಿ ಮತ್ತು ಪಟ್ಟದಕಲ್ಲಿನ ಭವ್ಯ ಚಿತ್ರಗಳಿವೆ.

ಶಿವಶಂಕರ್ ಬಣಗಾರ್ ಅವರ ಛಾಯಾಚಿತ್ರಗಳ ಕುರಿತು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ, ಸಂಯುಕ್ತ ಕರ್ನಾಟಕ, ಉದಯವಾಣಿ, ತೆಲುಗು ದೈನಿಕವಾದ ಈನಾಡು ಪತ್ರಿಕೆಗಳು ನುಡಿಚಿತ್ರಾವಳಿಯನ್ನು ಪ್ರಕಟಿಸಿವೆ.
ಯಾವುದೇ ಕಲಾಕಾರನ ಕಲೆಯನ್ನು ಜನ ಮೆಚ್ಚುತ್ತಾರೆ, ಎಲ್ಲೆಡೆ ಉಪಯೋಗಿಸುತ್ತಾರೆ ಎಂಬುದು ಸಂತೋಷವಾದರೂ ಅಂತದ್ದು ಅವರ ಬದುಕಿನ ಆಸರೆಗೂ ಬೆಂಬಲವಾಗುವ ದಿನಗಳು ಮೂಡುವಂತಾಗಬೇಕು.
ಅತ್ಯುತ್ತಮ ಛಾಯಾಚಿತ್ರಗಳನ್ನು ನಮಗೆ ನೀಡುತ್ತಿರುವ ಶಿವಶಂಕರ ಬಣಗಾರ ಅವರ ಬದುಕು ಬಂಗಾರವಾಗಿರಲಿ. ಅವರ ಬದುಕು ಸಕಲ ಸುಖ, ಸಂತಸ, ಸೌಭಾಗ್ಯ, ಸಂಪದ, ಸಾಧನೆ ಮತ್ತು ಸಂತೃಪ್ತಿಗಳಿಂದ ಕಂಗೊಳಿಸುತ್ತಿರಲಿ. ನಮಸ್ಕಾರ.

-ತಿರು ಶ್ರೀಧರ್,ಲೇಖಕರು, ದುಬೈ
—–
The post ‘ಹಂಪಿ’ಯ ಕಡುವ್ಯಾಮೋಹಿ ಛಾಯಾಗ್ರಾಹಕ ‘ಬಣಗಾರ’ -ತಿರು ಶ್ರೀಧರ್, ದುಬೈ appeared first on Karnataka Kahale.
]]>The post ಅನುದಿನ ಕವನ-೧೦೪೭, ಕವಿ:ಎಂ.ವಿ. ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೇರಿಕ, ಕವನದ ಶೀರ್ಷಿಕೆ: ದೀಪಾವಳಿ appeared first on Karnataka Kahale.
]]>ದೀಪಗಳೆಂದರೆ ಬರೀ ಬೆಳಕಲ್ಲ
ಜ್ಞಾನದ ಗುರಿಯ ಹಾದಿಯದು
ರೂಪ ಕುರೂಪಗಳ ಭೇದವ ಮೀಟಿ
ಸುಂದರ ಜಗ ತೋರುವ ಜ್ಯೋತಿಯದು
ಸೇರುವ ಜೊತೆಯಲಿ ಬೆಳಗಲು ದೀಪ
ಸಾರಲು ಹರುಷದಿ ಪ್ರೀತಿ ಸ್ವರೂಪ
ಎರಗಲು ಬರುವ ನರಕನ ಭಾವಕೆ
ಸುರಿಯುವ ಅಗ್ನಿಯ ಕುಹುಕದ ಮನಕೆ
ತಣಿಯಲಿ ಮುನಿಸು ಮನಗಳ ನಡುವೆ
ಅರಳಲಿ ಸ್ನೇಹ ಸಿಹಿ ಉಣಿಸಿನಲಿ
ತ್ಯಾಗದ ಅರ್ಥ ಜಗದಲಿ ಪಸರಿಸಿ
ಕ್ಲೇಶಗಳಲೆಲ್ಲವ ಕಳೆಯಲಿ
ಅರಳಲಿ ಹರುಷವು ಎಲ್ಲರ ಬಾಳಲಿ
ಸುರಿಯಲಿ ಸುಮಮಳೆ ಹಾದಿಯಲಿ
ಸರಿಯಲಿ ಕಷ್ಟಗಳೆಲ್ಲವು ಮೂಲೆಗೆ
ತೆರೆಯಲಿ ಎಲ್ಲವು ಹೊಸಜಗಕೆ

-ಎಂ.ವಿ. ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೇರಿಕ
The post ಅನುದಿನ ಕವನ-೧೦೪೭, ಕವಿ:ಎಂ.ವಿ. ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೇರಿಕ, ಕವನದ ಶೀರ್ಷಿಕೆ: ದೀಪಾವಳಿ appeared first on Karnataka Kahale.
]]>The post ಕರ್ನಾಟಕ ರಾಜ್ಯೋತ್ಸವ ಏಕೆ ಮತ್ತು ಹೇಗೆ? -ಎಂ.ವಿ.ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೇರಿಕ appeared first on Karnataka Kahale.
]]>
ಎಲ್ಲಾದರು ಇರು, ಎಂತಾದರು ಇರು
ಎದೆಂದಿಗೂ ನೀ ಕನ್ನಡವಾಗಿರು
ರಾಷ್ಟ್ರಕವಿ ಕುವೆಂಪು ಅವರ ಈ ಕಳಕಳಿಗೆ ನಿಜವಾಗಲೂ ಸ್ಪಂದಿಸುತ್ತಿರುವವರು ಹೊರನಾಡ ಕನ್ನಡಿಗರು. ನಮ್ಮ ನೆಲ,ಜಲ ಭಾಷೆ ಬಿಟ್ಟು ಜೀವನ ನಡೆಸುವ ಅನಿವಾರ್ಯತೆಯಿಂದ ಹೊರಗೆಲ್ಲೂ ನೆಲೆಸಿರುವವರಿಗೆ, ತಮ್ಮೆದೆಲ್ಲವ ಬಿಟ್ಟ ನೋವಿನಿಂದಲೋ, ತಪ್ಪಿತಸ್ಥ ಭಾವನೆಯಿಂದಲೋ, ತಾವೇನೋ ಕಳೆದುಕೊಳ್ಳೋತ್ತಿದ್ದೇವೆ ಎನ್ನುವ ಅನುಮಾನದಿಂದಲೋ ದೇಶ, ಭಾಷೆಗಳನ್ನು ಇನ್ನೂ ಹೆಚ್ಚು ಪ್ರೀತಿಸುತ್ತಾರೆ. ತಮ್ಮ ಜಾಗಗಳಲ್ಲಿಯೇ ಕನ್ನಡ ಸಂಘಗಳನ್ನು ಸ್ಥಾಪಿಸಿಕೊಂಡು ಕನ್ನಡಿಗರನ್ನು ಒಟ್ಟು ಗೂಡಿಸಿ ಕನ್ನಡವನ್ನು ಜಾಗೃತಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತಮಗೆ ತಿಳಿದಿರುವ ಸರಳ ಭಾಷೆಯಲ್ಲಿಯೇ ಕಥೆ ಕವನ ಬರೆಯಲು ಪ್ರಯತ್ನಿಸುತ್ತಾರೆ, ಅದನ್ನು ಬೇರೆಯವರಿಗೆ ತೂರಿಸಿ ಹೆಮ್ಮೆ ಪಡುತ್ತಾರೆ. ಹೊರನಾಡಿನಲ್ಲಿಯೇ ಇದ್ದುಕೊಂಡು ಅದ್ಭುತವಾಗಿ ಬರೆದ ಬರಹಗಾರರು ಕನ್ನಡದಲ್ಲಿ ಇದ್ದಾರೆ. ಇಥೋಪಿಯಾದಲ್ಲಿ ಹದಿನೈದು ವರ್ಷಗಳಿದ್ದು ಬರೆದ ಕೆ.ಟಿ.ಗಟ್ಟಿ ಯಂಥ ಅದ್ಬುತ ಕಾದಂಬರಿಕಾರರು ನಮ್ಮಲಿದ್ದಾರೆ ಎನ್ನುವುದು ಒಂದು ಹೆಮ್ಮೆ.
ಆದರೆ ನಮ್ಮದೇ ರಾಜ್ಯ ಕರ್ನಾಟಕದಲ್ಲಿ ಏನಾಗುತ್ತಿದೆ. ಬರಹಗಾರರು ಹೆಚ್ಚಾಗುತ್ತಿದ್ದಾರೆ, ಹೆಚ್ಚು ಪುಸ್ತಕಗಳು ಪ್ರಕಟಣೆಯಾಗುತ್ತಿವೆ, ಆದರೆ ಓದುವವರೇ ಇಲ್ಲವಾಗುತ್ತಿದ್ದಾರೆ. ಪುಸ್ತಕ ಕೊಂಡು ಓದುವವರಂತೋ ಅತೀ ಕಡಿಮೆ. ಅನೇಕರು ಇನ್ನು ಹಳೇ ಬರಹಗಾರರ ಪುಸ್ತಕಗಳನ್ನು ಕೊಂಡು ಓದುತ್ತಾರೆ. ಬರೆಯುವವರೇ ಇನ್ನೊಬ್ಬರ ಪುಸ್ತಕ ಓದುವ ಸ್ಥಿತಿ. ಓದುಗ ಬಳಗ ಸೃಷ್ಟಿಸಲು ನಾವು ವಿಫಲರಾಗುತ್ತಿದ್ದೇವೆ. ಇಲ್ಲಾ ಜನಕ್ಕೆ ಓದುವ ಆಸಕ್ತಿ ಕಡಿಮೆ ಆಗಿರಬೇಕು, ಇಲ್ಲ ಇಂದಿನ ಬರಹಗಾರರಲ್ಲಿ ಗಟ್ಟಿಸಾಹಿತ್ಯ ಸೃಷ್ಟಿಸುವ ಶಕ್ತಿ ಇಲ್ಲದಿರಬೇಕು. ಕನ್ನಡದಲ್ಲಿ ಅನೇಕ ಸುದ್ದಿ ಸಮಾಚಾರ ಪತ್ರಿಕೆಗಳು, ಮ್ಯಾಗಜಿನ್ ಗಳು ಪ್ರಕಟವಾಗುತ್ತಿವೆ, ಅವುಗಳ ಉತ್ತಮ ಪ್ರಸರಣವೂ ಇದೆ, ಅಂದರೆ ಜನ ಓದುತ್ತಿರಬೇಕಲ್ಲವೇ. ಆದರೆ ಅವರು ಓದುತ್ತಿರುವುದು ಏನನ್ನು?. ಜನ ಹೆಚ್ಚು ಓದುತ್ತಿರುವುದು ರಾಜಕೀಯ ಸಮಾಚಾರಗಳನ್ನು, ರಾಜಕಾರಣಿಗಳು ಕೊಡುವ ಹೇಳಿಕೆ, ಪ್ರತಿ ಹೇಳಿಕೆಗಳನ್ನು. ರಾಜಕೀಯ ಸುದ್ದಿಗಳಿಗೆ ಜನರ ಸ್ಪಂದನೆ ಹೆಚ್ಚಾಗಿರುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಜನ ಜಗಳವಾಡುವುದು ನೋಡುತ್ತಿದ್ದೇವೆ. ಯಾವುದೋ ವಿಷಯ ಜನ ಕನ್ನಡ ಓದುತ್ತಾರಲ್ಲ ಎಂದು ಆನಂದಿಸೋಣವೇ?
ಎಲ್ಲಾ ತರಹದ ಪತ್ರಿಕೆಗಳಲ್ಲಿ ಸಾಹಿತ್ಯಕ್ಕೆ ಜಾಗ ಕಡಿಮೆಯಾಗುತ್ತಿದೆ. ಹಿಂದೆ ಕ್ರೀಡಾಲೋಕದ ಜಾಗವನ್ನು (ಅಂದರೆ ಕೊನೆಯ ಪುಟ) ಈಗ ಸಾಹಿತ್ಯ ಆಕ್ರಮಿಸಿಕೊಳ್ಳುತ್ತಿದೆ, ಅಂದರೆ ಸಾಹಿತ್ಯ ಕೊನೆಗೆ ನೂಕಲ್ಪಟ್ಟ್ಟಿದೆ. ಎಲ್ಲಾ ಓದಿ, ಓದುಗ ಕೊನೆಯ ಪುಟಕ್ಕೆ ಬರುವಹೊತ್ತಿಗೆ, ಬೇಸರದಿಂದಲೋ, ಸಮಯದ ಅಭಾವದಿಂದಲೋ, ದಣಿವಿನಿಂದಲೋ ಕೊನೆಯಪುಟದ ಮೇಲೆ ಹಾಗೆ ಕಣ್ಣಾಡಿಸಿ ಪತ್ರಿಕೆ ಎಸೆಯುತ್ತಾನೆ, ಅಷ್ಟರಲ್ಲೇ ಕನ್ನಡ ಸಾಹಿತ್ಯ ತೃಪ್ತಿಹೊಂದಬೇಕು. ಎಷ್ಟೋ ಪತ್ರಿಕೆಗಳು ಕವನಗಳನ್ನು ಪ್ರಿಂಟ್ ಮೀಡಿಯಾದಲ್ಲಿ ಪ್ರಕಟಿಸುವುದನ್ನು ನಿಲ್ಲಿಸಿಬಿಟ್ಟೆವೆ, ಇಲ್ಲಾ ಅಂತರ್ಜಾಲದಲ್ಲಿ ಪ್ರಕಟಿಸುತ್ತಿವೆ. ಪ್ರಖ್ಯಾತ ಪತ್ರಿಕೆಗಳು ಕೂಡ ಕವನ, ಕಥೆ ಪ್ರಕಟಿಸುವುದಿಲ್ಲ. ಮಕ್ಕಳಿಗೆ ಕನ್ನಡ ಓದುವ ಅಭ್ಯಾಸ ಬರಬೇಕೆಂದರೆ ಅದು ಕವನ, ಕಥೆಗಳ ಮೂಲಕವೇ ಆಗಬೇಕು, ಮಕ್ಕಳು ರಾಜಕೀಯ ಓದಿ ಓದುವ ಅಭ್ಯಾಸ ಬೆಳೆಸಿಕೊಳ್ಳಲು ಸಾಧ್ಯವೇ.

ಇನ್ನು ಬರೆಯುವವರ ವಿಷಯಕ್ಕೆ ಬಂದರೆ, ಏನನ್ನೂ ಓದದೇ ಭಾಷೆಯಮೇಲೆ ಹಿಡಿತವಿಲ್ಲದೆ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬರೆಯುವುದೆಲ್ಲಾ ಕವನವಾಗುತ್ತಿದೆ, ಬರಹಗಾರರ ಹತ್ತಿರದವರು ಅನಿವಾರ್ಯತೆಯಿಂದ ಆಹಾ ಒಹೋ ಎನ್ನುತ್ತಾರೆ, ಅಲ್ಲಿಂದ ಆಚೆಗೆ ಬರಹ ಹೋಗುವುದಿಲ್ಲ. ಬರೆಯುವುದನ್ನು ಗಂಭೀರವಾಗಿ ತೆಗೆದುಕೊಳ್ಳಬಯಸುವುದಾದರೆ ತುಂಬಾ ಓದಬೇಕು, ಪ್ರಖ್ಯಾತ ಸಮಕಾಲೀನ ಕವಿ/ಕವಿಯತ್ರಿಗಳ ಕವನಗಳನ್ನು ಅಭ್ಯಸಿಸಬೇಕು. ಒಳ್ಳೆಯ ಶೈಲಿ ರೂಡಿಸಿಕೊಳ್ಳಬೇಕು. ಕವನಗಳು ತುಂಬಾ ಸರಳವಾದರೆ ಹಿಡಿತ ವಿರುವುದಿಲ್ಲ. ಭಿನ್ನವಾಗಿ ಬರೆಯಬೇಕು. ಕಾವ್ಯ ವೆಂಬುದು ಭಾವನೆಗಳ ಆಗರ, ಭಾವನೆಗಳ ಪ್ರಸರಣ, ಭಾವನೆಗಳ ಮನನ. ಭಾವನೆಗಳನ್ನು ಯಾವುದೇ ರೂಪದಲ್ಲಿ ವ್ಯಕ್ತಪಡಿಸಬಹದು. ಕವಿತೆ, ಕತೆ, ಕಾದಂಬರಿ, ಲೇಖನ ಇತ್ಯಾದಿ, ಆದರೆ ಕಾವ್ಯಕ್ಕೆ ಪ್ರತ್ಯೇಕತೆ ಇದೆ, ಭಾವನೆಗಳನ್ನು ಮನದಾಳಕ್ಕೆ ಇಳಿಸಿ ಚಿಂತಿಸುವಂತೆ ಮಾಡುವ ಶಕ್ತಿ ಕಾವ್ಯಕ್ಕೆ ಇದೆ. ಅಂತಹ ಶಕ್ತಿ ಕಾವ್ಯಕ್ಕೆ ತರುವುದು ಕವಿ ಅಥವಾ ಕವಿಯತ್ರಿಯ ಶಕ್ತಿ ಕೂಡ. ಕಾವ್ಯ ಬರೀ ಶಬ್ದಾಡಂಬರವಾಗದೆ, ಹಿಂದೆ ಯಾರೋ ಆಡಿದ ಮಾತಿನ ಪುನರಾವರ್ತನೆ ಆಗದೆ, ಕ್ಲೀಷೆಗಳಿಂದ ತುಂಬದೇ ಮನತುಂಬಬೇಕು.
ಬರಹಗಾರರಿಗೆ ಸಾಮಾಜಿಕ ಬಾಧ್ಯತೆ ಇರಬೇಕು. ಬರಹ ಯಾವರೂಪದಲ್ಲಾದರೂ ಓದುಗರನ್ನು ಚಿಂತಿಸುವಂತೆ ಮಾಡಬೇಕು. ಬರಹ ಕಾವ್ಯ ಎದೆಯಾಳದಿಂದ ಉಕ್ಕಬೇಕು. ಜೀವನ, ದೈವ ಭಕ್ತಿ, ದೇಶಭಕ್ತಿ, ಪ್ರೀತಿ-ಪೇಮದ ಕವನಗಳು ಬಂದಿವೆ, ಬರುತ್ತಿವೆ, ಮುಂದೆ ಬರುತ್ತವೆ, ಆದರೆ ಪ್ರತಿಸಲ ಬರೆದಾಗಲೂ ಹೊಸತೆಂಬಂತೆ ಬರೆಯಬೇಕು, ಓದುಗನಿಗೆ ಹೊಸ ಅನುಭವ ನೀಡಬೇಕು. ಕಾವ್ಯ ಭಾವವುಕ್ಕಿ ಮನದಲಿ ಉಳಿಯಲಾಗದೆ ಹೊರಹೊಮ್ಮಬೇಕು. ಕಾವ್ಯ ಪ್ರಸವ ವೇದನೆಯ ನಂತರ ಹುಟ್ಟುವ ಮಗುವಾಗಬೇಕು. ಪ್ರೀತಿಯೊಂದು ಮಗುವು ಹೊಸತು, ಅನನ್ಯ ಮತ್ತು ವಿಭಿನ್ನ. ಬರಹ ಗಂಭೀರವಾಗಿರಬೇಕು, ಕಾಲಹರಣಕೆ ಕಾವ್ಯ ಬರೆಯಬಾರದು.
ಕನ್ನಡ ರಾಜ್ಯೋತ್ಸವ ಏಕೆ ಮಾಡಬೇಕು, ಇಂಗ್ಲಿಷಿನ ಪ್ರಭಾವ ಮತ್ತು ಮೋಹದಿಂದ, ,ಹಿಂದಿಯ ಹೇರಿಕೆಯಿಂದ ಕನ್ನಡದ ಉಸಿರುಕಟ್ಟುತ್ತಿದೆ. ಕನ್ನಡದ ಉಸಿರಾಟ ಸರಾಗ ಮಾಡಲು ಕನ್ನಡ ಕಾರ್ಯಕ್ರಮಗಳನ್ನು ಸಾಧ್ಯವಾದಷ್ಟು ಹಮ್ಮಿಕೊಳ್ಳಬೇಕು. ಕನ್ನಡ ಜಾತ್ರೆ ನಡೆಯನೇಕು, ಅಲ್ಲಿ ಜನರ ಸೇರಿಸಬೇಕು, ಮಕ್ಕಳನ್ನು ಕರೆದೊಯ್ಯಬೇಕು. ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡಬೇಕು. ಕನ್ನಡದ ಶಕ್ತಿ, ಸೌಂದರ್ಯ ಮಕ್ಕಳಿಗೆ ತಿಳಿಸಬೇಕು. ಕರ್ನಾಟಕದ ನೆಲ, ಜಲ, ಭಾಷೆಯೆಂದರೆ ಒಂದು ತಿಂಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಮರೆಯುವುದಲ್ಲ, ವರ್ಷವಿಡೀ ಸರ್ಕಾರದ ಕನ್ನಡ ಜಾತ್ರೆಗಳನ್ನು ಮಾಡಬೇಕು. ಜನರಿಗೆ ಕನ್ನಡ ಪುಸ್ತಕ ಕೊಂಡು ಓದುವ ಅಭ್ಯಾಸ ಬೆಳೆಸಬೇಕು. ಸಿನಮಾ ನೋಡುವ ಸಮಯದ ಹತ್ತು ಪ್ರತಿಶತ ಸಮಯ ವ್ಯಯಸಿದರೂ ಸಾಕು, ಅನೇಕ ಪುಸ್ತಕಗಳನ್ನು ಓದಬಹುದು. ಕನ್ನಡ ಸಾಹಿತ್ಯಕ್ಕೆ ಹಣದ ಮೌಲ್ಯ ಇಲ್ಲವಾದ್ದರಿಂದಲೇ ಇಂತಹ ಸಮಸ್ಸೆಯೇನೋ, ಎಲ್ಲವನ್ನೂ ಹಣದ ರೂಪದಲ್ಲಿ ನೋಡುವ ಇಂದಿನ ದಿನಗಳ್ಲಲಿ ಸಾಹಿತಿಗಳಿಗೆ ಸಿನಮಾ ನಾಯಕರಿಗೆ ಸಿಗುವ ಹಣ ಸಿಗುವುದಾದರೆ, ಕವಿ, ಕಥೆಗಾರ, ಕಾದಂಬರಿಕಾರ ಕೂಡ ಸೆಲೆಬ್ರಿಟಿ ಆಗಬಹದು, ಸ್ಟಾರ್ ಆಗಬಹುದೇನೋ. ಶಿವರಾಮ ಕಾರಂತರ ಬಗ್ಗೆ ಜಯಂತ ಕಾಯ್ಕಿಣಿಯರು ಗೂಗಲ್ ಮೀಟ್ನಲ್ಲಿ ಮಾತನಾಡಿದರು,ಮನೆಯಲ್ಲೇ ಕುಳಿತು ಕೇಳಬಹುದಾದ ಆ ಕಾರ್ಯಕ್ರಮದಲ್ಲಿ ಮೊದಲಿಗೆ ಇಪ್ಪತ್ತು ಜನವಿದ್ದು, ಕೊನೆಗೆ ಹದಿನಾಲ್ಕು ಜನಗಳಾದರು. ಇದು ಸಾಹಿತಿಗಳೇ ಸಾಹಿತ್ಯಾಕ್ಕೆ ಕೊಡುವ ಪ್ರೀತಿ, ಇನ್ನು ಬೇರೆ ಜನಕ್ಕೆ ಏನು ಹೇಳುವುದು.
ಕನ್ನಡ ಬೆಳೆದಿದೆ, ಉಳಿಯುತ್ತದೆಯೇ, ಕಾಲವೇ ಹೇಳಬೇಕು. ಕನ್ನಡ ಮಾತನಾಡುವದು, ಕನ್ನಡ ಓದುವುದು, ಕನ್ನಡವನ್ನು ಪ್ರೀತಿಸುವುದು, ಗೌರವಿಸುವುದು, ಇದೇ ನಿಜವಾದ ಕನ್ನಡ ರಾಜ್ಯೋತ್ಸವ ಅಲ್ಲವೇ?

-ಎಂ.ವಿ.ಶಶಿಭೂಷಣ ರಾಜು
ಪೆನ್ಸಿಲ್ವೇನಿಯ, ಅಮೇರಿಕ
—–
The post ಕರ್ನಾಟಕ ರಾಜ್ಯೋತ್ಸವ ಏಕೆ ಮತ್ತು ಹೇಗೆ? -ಎಂ.ವಿ.ಶಶಿಭೂಷಣ ರಾಜು, ಪೆನ್ಸಿಲ್ವೇನಿಯ, ಅಮೇರಿಕ appeared first on Karnataka Kahale.
]]>