The post ಶಿಕ್ಷಣ ವ್ಯವಸ್ಥೆ ಜಡ್ಡುಗಟ್ಟುತ್ತಿದೆಯೇ? ಶಿಕ್ಷಣ ಚಿಂತನೆ:ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ. appeared first on Karnataka Kahale.
]]>ಮೊದಲ ಪ್ರಶ್ನೆ ಶಿಕ್ಷಣ ಯಾಕೆ ಬೇಕು ? ಎಂಬುದನ್ನು ಯೋಚಿಸಿದರೆ ಉತ್ತರಗಳು ಸಿಗುತ್ತ ಹೋಗುತ್ತವೆ. ಶಿಕ್ಷಣ ಬೇಕಿರುವುದು ಜ್ಞಾನಕ್ಕಾಗಿಯೋ ? ಉದ್ಯೋಗಕ್ಕಾಗಿಯೋ ? ವ್ಯವಹಾರಕ್ಕಾಗಿಯೋ ?
ಶಿಕ್ಷಣ ನಮಗೆ ಬೇಕಿರುವುದು ಕೇವಲ ಜ್ಞಾನಕ್ಕಾಗಿ ಎಂದರೆ ಉದ್ಯೋಗಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದಂತಾಗುತ್ತದೆ. ಶಿಕ್ಷಣ ಬೇಕಿರುವುದು ಉದ್ಯೋಗಕ್ಕಾಗಿ ಎಂದರೆ ಶಾಲೆ ಕಾಲೇಜಿನಲ್ಲಿ ಕಲಿಸುತ್ತಿರುವ ಶಿಕ್ಷಣ ಎಂಥದ್ದು ? ಉದ್ಯೋಗ ಸಂಬಂಧಿಯಾ ? ಎಂಬ ಪ್ರಶ್ನೆ ಏಳುತ್ತದೆ. ಶಿಕ್ಷಣ ಬೇಕಿರುವುದು ವ್ಯವಹಾರಕ್ಕಾಗಿ ಎಂದರೆ ಈಗಿರುವ ಪಠ್ಯಪುಸ್ತಕಗಳಲ್ಲಿರುವ ವಿಷಯಗಳು ವ್ಯವಹಾರಕ್ಕೆ ಸಂಬಂಧಿಸಿರೋದಾ ? ಎಂದು ಕೇಳಿಕೊಳ್ಳಬೇಕಾಗುತ್ತದೆ.
ಮಕ್ಕಳಿಗೆ ಅಕ್ಷರಾಭ್ಯಾಸದ ನಂತರ ಬಹುತೇಕ ಪಾಲಕರಿಗಿರೋದು ಹೆಚ್ಚು ಅಂಕ ಪಡೆಯಬೇಕು, ಒಳ್ಳೆಯ ಉದ್ಯೋಗವನ್ನು ದೊರಕಿಸಿಕೊಳ್ಳಬೇಕು. ಹೀಗಾಗಿ ಎಲ್ಲರೂ ಅಂಕಗಳ ಹಿಂದೆ ಶರವೇಗವಾಗಿ ಓಡುತ್ತಿರುತ್ತಾರೆ. ಹೀಗಾಗಿ ಸ್ಪರ್ಧೆಯೂ ಹೆಚ್ಚು.
ಅದಿರಲಿ ಹಳೆಯ ದಿನಗಳಿಂದಲೂ ಶಾಲೆ, ಕಾಲೇಜು ಪಠ್ಯಪುಸ್ತಕಗಳಲ್ಲಿ ಕಲಿಸೋದೇನಿದೆ ಜ್ಞಾನಕ್ಕಾಗಿ ಎನ್ನುವ ರೀತಿಯಲ್ಲಿಯೇ ಇತ್ತು. ಆಗ ಈಗಿನಷ್ಟು ತಂತ್ರಜ್ಞಾನ, ಆಧುನಿಕ ಜಗತ್ತು ಇರಲಿಲ್ಲ. ಯಾವಾಗ ತಂತ್ರಜ್ಞಾನ ಅತ್ಯಂತ ವೇಗವಾಗಿ ಬೆಳೆಯತೊಡಗಿತೋ ಆಗ ನಮ್ಮ ಶಿಕ್ಷಣದಲ್ಲಿನ ಪಠ್ಯಗಳು ಹಳತಾಗತೊಡಗಿದವು. ಒಂದಕ್ಕೊಂದು ಸಂಬಂಧವೇ ಇರದಂತಾದವು. ಮೊಬೈಲ್, ಕಂಪ್ಯೂಟರ್ ಗಳು ಬದುಕಿನಲ್ಲಿ ಎಷ್ಟು ಹಾಸುಹೊಕ್ಕಾದುವೆಂದರೆ, ಮಕ್ಕಳು ಇವುಗಳನ್ನು ಬಳಸಿಯೇ ಓದಬಹುದು ಎಂಬಷ್ಟು. ಇವತ್ತು ಮಕ್ಕಳಿಗೆ ಯಾವುದೇ ವಿಷಯವನ್ನು ಬರೆಯಿರಿ ಎಂದರೂ ಕೈಬೆರಳ ತುದಿಯಲ್ಲೇ ಎಲ್ಲ ಮಾಹಿತಿ ಸಿಗುತ್ತದೆ. ಮೊಬೈಲ್ ಗಳಲ್ಲಿ ಕೇಳಿದ ಮಾಹಿತಿ ರಾಶಿ ರಾಶಿ ಬಂದು ಬೀಳುತ್ತವೆ. ಈಗ ಸಮಸ್ಯೆ ಎಂದರೆ ಇರೋ ರಾಶಿ ಮಾಹಿತಿಯನ್ನು ಹೇಗೆ ಕ್ರೋಢೀಕರಿಸಬೇಕೆನ್ನುವುದು.
ಆದರೆ ಶಾಲಾ ಕಾಲೇಜು ಪಠ್ಯಗಳಲ್ಲಿ ಈಗಲೂ ಕೆಲವು ಶಿಕ್ಷಕರು, ಉಪನ್ಯಾಸಕರು ಹಲವಾರು ವರ್ಷಗಳ ಹಿಂದೆ ತಾವು ಸಿದ್ಧಪಡಿಸಿದ ನೋಟ್ಸ್ ಗಳನ್ನೇ ಇಂದಿಗೂ ಬಳಸುತ್ತಿರೋದು. ಆಧುನಿಕ ಜಗತ್ತು ಇಂದು ಬೆರಳ ತುದಿಯಲ್ಲೇ ಇದ್ದರೂ, ಎಷ್ಟೋ ಬದಲಾವಣೆಯಾಗಿದ್ದರೂ ನಮ್ಮ ಶಿಕ್ಷಣ ವ್ಯವಸ್ಥೆ ಮಾತ್ರ ಇನ್ನೂ ಹಲವಾರು ವರ್ಷಗಳ ಹಿಂದೆ ಸಿದ್ಧಪಡಿಸಿರುವ ನೋಟ್ಸ್ ಗಳಲ್ಲೇ ಒದ್ದಾಡುತ್ತಿದೆ. ಹಲವಾರು ವರ್ಷಗಳ ಹಿಂದೆ ಸಿದ್ಧಪಡಿಸಿದ ರೆಫರೆನ್ಸ್ ಬುಕ್ಸ್ ಗಳಲ್ಲೇ ಸಿಕ್ಕಿಹಾಕಿಕೊಂಡಿದೆ. ಹೀಗಾಗಿ ಶಾಲಾ ಕಾಲೇಜಿನ ಗ್ರಂಥಾಲಯಗಳು ಧೂಳು ತಿನ್ನುತ್ತಿವೆ. ಮಕ್ಕಳಿಗೆ ಅಂಗೈಯಲ್ಲಿಯೇ ಎಲ್ಲ ಮಾಹಿತಿ ಇರುವಾಗ ಗ್ರಂಥಾಲಯಗಳಿಗೆ ಹೋಗುವ ಅಗತ್ಯವೇನಿದೆ. ಇನ್ನೂ ಬೇಕಾದರೆ ಪುಸ್ತಕಗಳನ್ನು ಆಡಿಯೋ ಮೂಲಕವೂ ಕೇಳಬಹುದು, ನೋಡಬಹುದು. ಹೀಗಾಗಿ ಪುಸ್ತಕಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಈಗ ಏನಿದ್ದರೂ ಡಿಜಿಟಲ್ ಪುಸ್ತಕಗಳು, ಡಿಜಿಟಲ್ ಗ್ರಂಥಾಲಯಗಳು.
ಇನ್ನು ಶಾಲಾ ಕಾಲೇಜುಗಳಲ್ಲಿ ಕಲಿತ ನಂತರ ಮುಂದೇನು ? ಎಂದಾಗ ವಿವಿಧ ಕ್ಷೇತ್ರಗಳ ಹುದ್ದೆಗಳಿಗಾಗಿ ಪೈಪೋಟಿ. ಕೆಲವು ಇಲಾಖೆಗಳ ಕೆಲಸಗಳಿಗೂ ಓದಿರುವ ವಿಷಯಕ್ಕೂ ಸಂಬಂಧವೇ ಇರುವುದಿಲ್ಲ. ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆ ಹೀಗೇ…….. ಕಾಲೇಜಿನಲ್ಲಿ ಓದಿರೋ ವಿಷಯಗಳಿಗೂ, ಈ ಇಲಾಖೆಗಳ ಕೆಲಸಕ್ಕೂ ಸಂಬಂಧವೇ ಇರುವುದಿಲ್ಲ. ಇಲ್ಲಿ ಕೆಲಸಕ್ಕೆ ಸೇರಿದ ನಂತರ ಆ ಕಾರ್ಯಕ್ಷೇತ್ರದ ಬಗ್ಗೆ ತಿಳಿದುಕೊಳ್ಳಬೇಕೆ ಹೊರತು ಕಾಲೇಜಿನಲ್ಲಿ ಕಲಿತದ್ದು ಅಲ್ಲ. ಅದರಲ್ಲಿಯೂ ಕಂಪ್ಯೂಟರ್ ಪರಿಜ್ಞಾನ ಅತ್ಯಗತ್ಯ. ಎಷ್ಟು ಶಾಲಾ ಕಾಲೇಜುಗಳಲ್ಲಿ ಕಂಪ್ಯೂಟರ್ ಕಲಿಸಲಾಗುತ್ತಿದೆ ? ಮಾಹಿತಿ ತಂತ್ರಜ್ಞಾನದ ಬಗ್ಗೆ ಹೇಳಿಕೊಡಲಾಗುತ್ತಿದೆ ? ಇನ್ನೂ ಶತಮಾನಗಳ ವಿಷಯಗಳನ್ನೇ ಕಲಿಯುತ್ತ, ಕಲಿಸುತ್ತ ಜಡವಾಗುತ್ತಿದ್ದೇವೆ.
ಈಗ ಬೇಕಾಗಿರೋದು ’ಪ್ರಸ್ತುತ ಜಗತ್ತು, ಮುಂದೆ ಬದಲಾಗುತ್ತಿರುವ ಜಗತ್ತು’ ಈ ವಿಷಯವನ್ನು ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಬೇಕಿದೆ. ಮೊದಲೆಲ್ಲ ಕೇವಲ ಬಿಇ, ಮೆಡಿಕಲ್ ಓದಿದರೆ ಸಾಕಿತ್ತು. ಈಗ ಅದೆಲ್ಲ ಸಾಕಾಗೋದೇ ಇಲ್ಲ. ಅವುಗಳಲ್ಲಿಯೇ ಪ್ರತ್ಯೇಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇಷ್ಟಕ್ಕೇ ಮುಗಿಯುವುದಿಲ್ಲ ಆಧುನಿಕ ತಂತ್ರಜ್ಞಾನ, ಕೌಶಲ್ಯತೆಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಂತ ನೀರಿನಂತಾಗಿ ಉದ್ಯೋಗ ಸಿಗುತ್ತಿಲ್ಲ ಎಂದು ಪರದಾಡುವಂತೆ ಮಾಡುತ್ತದೆ ಇಂದಿನ ಆಧುನಿಕ ಜಗತ್ತು. ಇವತ್ತು ಎಷ್ಟೋ ಜನ ಪದವೀಧರರು ಉದ್ಯೋಗವಿರದೇ ಪರದಾಡಲು ಇದೂ ಒಂದು ಕಾರಣ.
ಕೌಶಲ್ಯ, ಜಾಣ್ಮೆ ಇರುವವರು ಮಾತ್ರ ಆಯ್ಕೆಯಾಗಿ ಮುಂದೆ ಹೋಗಲು ಸಾಧ್ಯ. ಅಷ್ಟೇ ಅಲ್ಲ ಬದಲಾಗುತ್ತಿರುವ ಜಗತ್ತಿನೊಂದಿಗೆ ಬದಲಾಗುತ್ತಲೇ ಹೋಗಬೇಕು, ಆಧುನಿಕತೆಯನ್ನು ಮೈಗೂಡಿಸಿಕೊಳ್ಳುತ್ತಲೇ ಹೋಗಬೇಕು. ಇಲ್ಲದಿದ್ದರೆ ಈ ಜಗತ್ತು ಹಿಂದೆ ತಳ್ಳಿ ಮೂಲೆಗುಂಪು ಮಾಡಿಬಿಡುತ್ತದೆ. AI ಕೃತಕ ಬುದ್ಧಿಮತ್ತೆ ಬಂದ ಮೇಲಂತೂ ಇದು ಇನ್ನೂ ಸ್ಪಷ್ಟವಾಗುತ್ತಿದೆ.
ಸ್ನಾತಕೋತ್ತರ ಪದವೀಧರರು ಕಾಲೇಜುಗಳಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿರುವಾಗ ವೃತ್ತಿ ಕೌಶಲ್ಯಗಳನ್ನು, ಆಧುನಿಕ ಜಗತ್ತಿನ ಒಳಹೊರಗನ್ನು ಅರಿತ ಸಾಮಾನ್ಯನು ಇವತ್ತು ಸಾಕಷ್ಟು ಹಣವನ್ನು ಗಳಿಸಬಹುದಾಗಿದೆ. ಹೆಚ್ಚು ಓದದೇ ಇರುವ ವ್ಯಕ್ತಿಗೆ ಇವತ್ತು ಅವನ ಜಾಣ್ಮೆ, ಕೌಶಲ್ಯಗಳಿಗೆ ಅನುಗುಣವಾಗಿ ಉದ್ಯೋಗಾವಕಾಶಗಳು ದೊರೆಯುತ್ತಿವೆ. ಇಲ್ಲಿ ಬೇಕಿರುವುದು “ಬದುಕುವುದಕ್ಕೆ ಬೇಕಿರುವ ಜಾಣ್ಮೆ”.
ಮಹಾನಗರಗಳಲ್ಲಿ ಟ್ಯಾಕ್ಸಿ ಚಾಲಕರು, ಹಲವಾರು ಮನೆಗಳಿಗೆ ಬೇಕಿರುವ ಅಗತ್ಯ ಸಾಮಗ್ರಿಗಳನ್ನು ಪೂರೈಸುವ ಏಜಂಟರು, ಮನೆಯ ಅಗತ್ಯ ರಿಪೇರಿ ಕೆಲಸ ಮಾಡುವ ಕುಶಲ ಕರ್ಮಿಗಳು, ಗುಜರಿ ವಸ್ತುಗಳನ್ನು ವಿಲೇವಾರಿ ಮಾಡುವ ಏಜಂಟರು ಒಂದೇ ಎರಡೇ ಇವೆಲ್ಲ ಸಣ್ಣಪುಟ್ಟ ಕೆಲಸಗಳೆನಿಸಬಹುದಾದರೂ ಹಾಗೆ ನೋಡಿದರೆ ಇಂದು ಶಾಲಾ ಕಾಲೇಜುಗಳಲ್ಲಿ ಅರೆಕಾಲಿಕ ಶಿಕ್ಷಕರಾಗಿ, ಉಪನ್ಯಾಸಕರಾಗಿ ದುಡಿಯುತ್ತಿರುವ ಎಷ್ಟೋ ಜನ ಪದವೀಧರರಿಗಿಂತಲೂ ಇವರು ಹೆಚ್ಚು ಹಣ ಪಡೆಯುತ್ತಿದ್ದಾರೆ.
ಹಾಗಾದರೆ ಎಲ್ಲಿ ಏನು ಬದಲಾವಣೆಯಾಗಬೇಕಿದೆ ? ಈಗಿರುವ ಶಿಕ್ಷಣ ವ್ಯವಸ್ಥೆ, ಪಠ್ಯಗಳನ್ನೇ ಅಮೂಲಾಗ್ರವಾಗಿ ಬದಲಾಯಿಸಿ, ಹೊಸ ರೂಪ ಕೊಡಬೇಕಿದೆ. ಅದು ನಾಳಿನ ಆಧುನಿಕ ಜಗತ್ತಿನಲ್ಲಿ ನಮ್ಮ ಮಕ್ಕಳು “ಬದುಕುವ ಕೌಶಲ್ಯ”ವನ್ನು ಕಲಿಯುವ ಬಗೆಯಲ್ಲಿ ರೂಪುಗೊಳ್ಳಬೇಕಿದೆ.
ದುರಂತವೆಂದರೆ ನಮ್ಮ ಶಿಕ್ಷಣ ತಜ್ಞರು, ಇಲಾಖೆಗಳು ಇನ್ನೂ ಧೂಳಿಡಿದ ಗ್ರಂಥಗಳಲ್ಲೇ ಹುಡುಕಾಡಿ ಮಕ್ಕಳಿಗೆ ಪಠ್ಯಗಳನ್ನು ಅಳವಡಿಸುವುದರಲ್ಲಿಯೇ ಬ್ಯುಸಿಯಾಗಿದ್ದಾರೆ. ಯಾರಿಗೆ ಹೇಳೋದು ?

-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.
The post ಶಿಕ್ಷಣ ವ್ಯವಸ್ಥೆ ಜಡ್ಡುಗಟ್ಟುತ್ತಿದೆಯೇ? ಶಿಕ್ಷಣ ಚಿಂತನೆ:ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ. appeared first on Karnataka Kahale.
]]>The post ಎಲ್ಲಿ ಹೋದವು ಬಟ್ಟೆ ಬ್ಯಾನರು?! -ಚಂದ್ರಕಾಂತ ವಡ್ಡು, ಬೆಂಗಳೂರು appeared first on Karnataka Kahale.
]]>
ಏಳು ವರ್ಷಗಳ ಹಿಂದೆ ಹಾವೇರಿಯಲ್ಲಿ ಸಮಾಜಮುಖಿ ಓದುಗರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಒಟ್ಟಾಗಿ ಒಂದು ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿದ್ದರು. ಅಂದು ಅದೇ ತಾನೇ ಐಎಎಸ್ ಪರೀಕ್ಷೆ ಪಾಸಾಗಿದ್ದ ಹೊಸಪೇಟೆಯ ಕೀರ್ತಿಕಿರಣ್ ಪೂಜಾರ್ (ಇವರು ಹಾವೇರಿಯ ಅಳಿಯ) ಅವರನ್ನು ಗೌರವಿಸಲಾಯಿತು.
ಆ ಕಾರ್ಯಕ್ರಮದಲ್ಲಿ ಹಾವೇರಿಯ ಪರಿಸರಪ್ರೇಮಿ ಗೆಳೆಯರು ಬಳಸಿದ್ದ ಕೈಬರಹದ ಬಟ್ಟೆ ಬ್ಯಾನರು ವಿಶೇಷವಾಗಿ ಗಮನ ಸೆಳೆಯುತ್ತದೆ.
ಇತ್ತೀಚೆಗೆ ಎಲ್ಲೆಡೆ ಫ್ಲೆಕ್ಸ್ ಬ್ಯಾನರುಗಳ ಬಳಕೆ ಮೂಲಕ ಪರಿಸರ ಮಾಲಿನ್ಯಕ್ಕೆ ವಿಪರೀತ ಕೊಡುಗೆ ನೀಡಲಾಗುತ್ತಿದೆ. ಇಂಥ ಕೆಟ್ಟ ಸಾರ್ವಜನಿಕ ನಡವಳಿಕೆಯನ್ನು ಬಹುತೇಕ ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳು, ನೇತಾರರು ಯಾವ ಅಳುಕು ಅಂಜಿಕೆ ಕಾಳಜಿ ಇಲ್ಲದೇ ಪಾಲಿಸುವುದನ್ನು ಅಸಹಾಯಕತೆಯಿಂದ ಗಮನಿಸುತ್ತಿದ್ದೇವೆ.
ಇಂತಹ ಪರಿಸರ ಹಾನಿ ವರ್ತನೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಮಾಧ್ಯಮ ಲೋಕವಾದರೂ ಹೊರತಾಗಬೇಕಲ್ಲವೇ…?
ಮರೆತು ಹೋಗಿರುವ ಬಟ್ಟೆ ಬ್ಯಾನರ್ ಬಳಕೆಯನ್ನು ಮತ್ತೆ ಜಾರಿಗೆ ತರುವುದು ಸೂಕ್ತವೇ? ಸಾಧ್ಯವೇ? ಕಣ್ಮರೆಯಾಗಿರುವ ಬಟ್ಟೆಬರವಣಿಗೆಯ ಕಲಾವಿದರನ್ನು ಹುಡುಕುವುದು ಹೇಗೆ, ಎಲ್ಲಿ?

-ಚಂದ್ರಕಾಂತ ವಡ್ಡು , ಸಂಪಾದಕರು: ಸಮಾಜಮುಖಿ ಮಾಸಿಕ, ಬೆಂಗಳೂರು
—–
The post ಎಲ್ಲಿ ಹೋದವು ಬಟ್ಟೆ ಬ್ಯಾನರು?! -ಚಂದ್ರಕಾಂತ ವಡ್ಡು, ಬೆಂಗಳೂರು appeared first on Karnataka Kahale.
]]>The post ತಾರತಮ್ಯವಿಲ್ಲದೇ ಬೇಕಿದೆ ಅತಿಥಿ ಉಪನ್ಯಾಸಕರಿಗೆ “ಘನತೆಯ ಬದುಕು” -ಡಾ.ಗುರುಪ್ರಸಾದ ಎಚ್ ಎಸ್. ಉಪನ್ಯಾಸಕರು, ಪತ್ರಕರ್ತರು ಮರಿಯಮ್ಮನ ಹಳ್ಳಿ appeared first on Karnataka Kahale.
]]>ಭೂಸ್ವಾಧೀನದ ಅಂತಿಮ ಪ್ರಕ್ರಿಯೆಗಳು ಮುಗಿದಿದ್ದರೂ ಕೂಡ ಸರ್ಕಾರ ಮನಸ್ಸು ಮಾಡಿದರೆ ಎಲ್ಲಾ ಕಾನೂನು ತೊಡಕುಗಳನ್ನು ಮೀರಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬುದಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರ ರೈತಪರ ತೀರ್ಮಾನವೇ ಇದಕ್ಕೆ ತಾಜಾ ಉದಾಹರಣೆ .
ಇಂತಹುದೇ ದೃಢವಾದ ತೀರ್ಮಾನ ಕೇವಲ ತಿಂಗಳಿಗೆ ಸಾವಿರ ರೂಪಾಯಿ, ಹದಿನೈದು ನೂರಕ್ಕೆ ದಶಕಗಳ ಕಾಲ ಸೇವೆ ಮಾಡಿದ ಸರಕಾರಿ ಪ್ರಥಮದರ್ಜೆ (ಪದವಿ) ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಯುಜಿಸಿ-ನಾನ್ ಯುಜಿಸಿ ಎಂಬ ತಾರತಮ್ಯವಿಲ್ಲದೇ ಘನತೆಯ ಬದುಕು ಬೇಕಿದೆ,
ಅನಿಶ್ಚಿತ ಬದುಕು, ಪ್ರತಿವರ್ಷ ಹತ್ತು ತಿಂಗಳಿಗೊಮ್ಮೆ ಕೌನ್ಸಿಲಿಂಗ್ ಗುಮ್ಮ ಇದರಿಂದ ಅವರಿಗೆ ಬದುಕು ಕಟ್ಟಿಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯ UGC ಅರ್ಹತೆಯ NET/KSLET /PhD ಜೊತೆಗೆ 8, 10, 15, 20 ವರ್ಷಗಳ ಸೇವಾನುಭವದ NON UGC ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡದ ತಾರತಮ್ಯದಿಂದಾಗಿ
ಐದು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಕೆಲಸ ಕಳೆದುಕೊಳ್ಳುವ, ಅವರ ಮತ್ತು ಕುಟಬದವರ ಬದುಕು ಕತ್ತಲೆಯತ್ತ ಸಾಗಿದೆ. ಅದರಂತೆಯೇ ದೇವನಹಳ್ಳಿ ರೈತರ ಭೂ ಸ್ವಾಧಿನ ಕೈಬಿಟ್ಟು ಅವರ ಬೇಡಿಕೆಯಂತೆ ಸರ್ಕಾರ ತೀರ್ಮಾನ ತೆಗೆದುಕೊಂಡಂತೆ ಅತಿಥಿ ಉಪನ್ಯಾಸಕರ ಘನತೆಯ ಬದುಕಿಗೆ ಬೇಕಿರುವುದು ಸೇವಾ ವಿಲೀನಾತಿ ಒಂದೇ.
ರೈತಪರವಾಗಿ ಜೀವಪರವಾದ ನಿಲುವು ತಳೆದ ಮಾನ್ಯ ಮುಖ್ಯಮಂತ್ರಿ ಗಳು , ಅತಿಥಿ ಉಪನ್ಯಾಸಕರ ಈ ದಶಕಗಳ ಕಾಲದ ಸಮಸ್ಯೆಯನ್ನು, ಸರ್ಕಾರದಿಂದ ಮಾನವೀಯ ಪರಿಹಾರ ನೀಡಲು ಕಷ್ಟ ಸಾಧ್ಯವೇನಲ್ಲ.
ಕಾನೂನಿನ ತೊಡಕು ನಿವಾರಿಸಿ ಹೊಸ ಮಸೂದೆಯ ಮೂಲಕ ಅತಿಥಿ ಉಪನ್ಯಾಸಕರ ಖಾಯಂ ಮಾಡಿ , ಅವರ ಕುಟುಂಬದವರು ಘನತೆಯಿಂದ ಬದುಕು ಮಾಡಲಿ.
ಆದರೆ ಇಲ್ಲಿ ಬೇಕಿರುವುದು ಅತಿ ಮುಖ್ಯವಾಗಿ ಅತಿಥಿ ಉಪನ್ಯಾಸಕರು, ಸಂಘಟನೆಗಳು ಮತ್ತು ಸರ್ಕಾರದ ಇಚ್ಛಾ ಶಕ್ತಿ, ಹಿರಿಯ ಹಾಗೂ ಕಿರಿಯ ಉಪನ್ಯಾಸಕರು,
ಮನೆಯೊಂದು ಮೂರು ಬಾಗಿಲನಂತೆ ಇರುವ ಅತಿಥಿ ಉಪನ್ಯಾಸಕ ಸಂಘಟನೆಗಳು ,ನಾಯಕರುಗಳ ಸ್ವಹಿತಾಸಕ್ತಿ, ಹಿಂದೆ ಸಂಘಟನೆ ನಾಯಕರುಗಳು ಆಮಿಷಗಳಿಗೆ ಬಲಿಯಾಗಿರುವುದು, ಒಬ್ಬರಿಗೊಬ್ಬರು ಕಾಲು ಎಳೆಯುವ,
ಶಿಕ್ಷಣ ಕ್ಷೇತ್ರದಿಂದ ಆಯ್ಕೆ ಆದ ಎಂಎಲ್ ಸಿ ಗಳ ನಿರ್ಲಿಪ್ತತೆ, ಉನ್ನತ ಅಧಿಕಾರಿಗಳ
ಮತ್ತು ರಾಜಕಾರಣಿಗಳ ಒಡೆದಾಳುವ ನೀತಿ-
ಆಟಗಳಿಂದಾಗಿ ಎಂದೋ ಆಗಬೇಕಿದ್ದ ಅತಿಥಿ ಉಪನ್ಯಾಸಕರ ಸೇವಾ ವಿಲೀನತೆ ಗ್ರಹಣ ಹಿಡಿಯಿತು.
ರಾಜಕೀಯ ಇಚ್ಛಾಶಕ್ತಿ ಇದ್ದರೆ ತನ್ನದೇ ನಿರ್ಧಾರಗಳನ್ನು ರದ್ದು ಪಡಿಸಲು ಸರ್ಕಾರಕ್ಕೆ ಅಡೆತಡೆಗಳು ಇಲ್ಲವೇ ಇಲ್ಲ ಅಥವಾ ಬಹಳ ಕಡಿಮೆ. ಅದೇ ರೀತಿ, ತಾನೇ ಹೊರಡಿಸಿದ ಆದೇಶಗಳನ್ನು ಕಾನೂನಿನ ಇನ್ಯಾವುದೋ ತೊಡಕು ನಿವಾರಿಸಿ ಹೊಸ ಮಸೂದೆಯ ಮೂಲಕ ಹತ್ತು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಖಾಯಂ ಆಗುವಂತೆ ನೋಡಿಕೊಳ್ಳುವುದು, ಈ ಉಪನ್ಯಾಸಕರ ಹೊಟ್ಟೆ ಮೇಲೆ ಬರೆ ಎಳೆಯದಂತೆ ಸರ್ಕಾರ ಜವಾಬ್ದಾರಿಯುತ ಕೆಲಸ ಮಾಡಬೇಕಿದೆ.

-ಡಾ.ಗುರುಪ್ರಸಾದ ಎಚ್ ಎಸ್.
ಉಪನ್ಯಾಸಕರು, ಪತ್ರಕರ್ತರು
ಮರಿಯಮ್ಮನ ಹಳ್ಳಿ
The post ತಾರತಮ್ಯವಿಲ್ಲದೇ ಬೇಕಿದೆ ಅತಿಥಿ ಉಪನ್ಯಾಸಕರಿಗೆ “ಘನತೆಯ ಬದುಕು” -ಡಾ.ಗುರುಪ್ರಸಾದ ಎಚ್ ಎಸ್. ಉಪನ್ಯಾಸಕರು, ಪತ್ರಕರ್ತರು ಮರಿಯಮ್ಮನ ಹಳ್ಳಿ appeared first on Karnataka Kahale.
]]>The post ಐ ಲವ್ ಹೊಸಪೇಟೆ -ಪ್ರೊ. ಎಸ್. ಎಂ ಶಶಿಧರ್, ಹೊಸಪೇಟೆ appeared first on Karnataka Kahale.
]]>
ಹೌದು! ಬೋರಾಯಿತೆನಿಸಿದರೆ, ಎಸ್ಕೇಪ್ ಆಗಲು ಊರಿನ ಸುತ್ತ, ಹತ್ತಾರು ಅಲ್ಲ, ನೂರಾರು ಸ್ಥಳಗಳಿವೆ. ಕೇವಲ 15-20 ನಿಮಿಷಗಳ ಬೈಕ್ ರೈಡಿನಲ್ಲಿ ಮತ್ತಾವುದೋ ಲೋಕಕ್ಕೆ ಎಂಟ್ರಿ ಕೊಟ್ಟಂತೆ! ಹಂಪಿಯ ಗುಡಿ- ಗುಂಡಾರಗಳಂತೂ ಏಕ್ದಮ್ ಮನಸ್ಸನ್ನು ಶಾಂತಗೊಳಿಸುತ್ತವೆ. ತುಸು ಪ್ರಯಾಸವೂ ಇಲ್ಲದೆ, ಮನಸ್ಸನ್ನು ಧ್ಯಾನದೊಳಗೆ ಎಳೆದುಕೊಂಡು ಬಿಡುತ್ತವೆ. ಮಾಲ್ಯವಂತ, ಮಾತಂಗ, ಅಂಜನಾದ್ರಿ ಬೆಟ್ಟಗಳಂತೂ ಟ್ರೆಕ್ಕಿಂಗಿನ ರೋಚಕ ಫೀಲಿಂಗ್ ಕೊಡುತ್ತವೆ. ಸೂರ್ಯೋದಯಕ್ಕೆ ಮಾತಂಗ, ಸೂರ್ಯಾಸ್ತಕ್ಕೆ ಹೇಮಕೂಟ. ಒಂದಿಡೀ ದಿನದ ಆಹ್ಲಾದ, ವಾರಗಳ ಕಾಲ ತೊನೆಯುವ ಆಮೋದ. ತುಂಗಭದ್ರಾ ಅಣೆಕಟ್ಟಿನ ಸರೋವರ, ಬ್ಯಾಕ್ ವಾಟರ್ ಅಥವಾ ಲೇಕ್ ವ್ಯೂ ನೋಡುತ್ತಾ ಕುಳಿತುಬಿಟ್ಟರೆ ಪ್ರಪಂಚ ಮರೆತು ಹೋಗುತ್ತದೆ. ಅನಕೊಂಡದಂತೆ ಮೈಚಾಚಿ ಊರಿನ ಸುತ್ತ ಹರಿಯುವ ಕಾಲುವೆಗಳ ಬದಿಯಲ್ಲಿ ಓಡಾಡಬಹುದು. ಕುಳಿತು ರಿಲ್ಯಾಕ್ಸ್ ಆಗಬಹುದು. ಓಡಾಡಲಾಗದ, ಹತ್ತಲಾಗದ ಸೋಮಾರಿ ಕ್ಷಣಗಳು ಬೇಕೆಂದರೆ, ಸುಂದರ ಉದ್ಯಾನಗಳಿವೆ. ತುಂಗಭದ್ರಾ ಅಣೆಕಟ್ಟಿನ ಸುತ್ತಮುತ್ತ- ಚಕ್ರವನ, ನಂದನವನ, ಪಂಪಾವನ ಉದ್ಯಾನಗಳು.

ಈಚೆಗೆ ನನ್ನ ಇಷ್ಟದ ಪಂಪಾವನಕ್ಕೆ ಹೋಗಿದ್ದೆ. 61 ಎಕರೆಗಳ ಹಚ್ಚಹಸಿರು ಉದ್ಯಾನ. ಕರ್ನಾಟಕದಲ್ಲೇ ದೊಡ್ಡ ಪಾರ್ಕ್ ಎಂಬ ಹೆಗ್ಗಳಿಕೆ ಇದಕ್ಕೆ ಇದೆ! ಮೂರು ದಶಕಗಳ ಹಿಂದೆ, ಡಾ.ರಾಜ್ ಕುಮಾರ್ ಮತ್ತು ಬಿ. ಸರೋಜಾದೇವಿ ಹಾಡಿ ನರ್ತಿಸಿದ “ನಿನ್ನಾ ಸ್ನೇಹಕೇ ನಾ ಸೋತು ಹೋದೆನು. ಎಲ್ಲಾ ದೇವರ ನಾ ಬೇಡಿ ಕೊಂಡೆನು”, ಹಾಡು ಚಿತ್ರೀಕರಿಸಿದ ಸ್ಥಳ. ತುಸು ಮೇಂಟೇನ್ ಮಾಡಿದರೆ ಈ ಪಾರ್ಕ್ ಅತ್ಯಾಕರ್ಷಕ ಟೂರಿಸ್ಟ್ ಸ್ಪಾಟ್ ಆಗುವುದರಲ್ಲಿ ಸಂದೇಹವಿಲ್ಲ.

-ಪ್ರೊ. ಎಸ್ ಎಂ ಶಶಿಧರ್ ವಿಶ್ರಾಂತ ಪ್ರಾಚಾರ್ಯರು ಪಿಡಿಐಟಿ ಇಂಜನಿಯರಿಂಗ್ ಕಾಲೇಜ್ ಹೊಸಪೇಟೆ
The post ಐ ಲವ್ ಹೊಸಪೇಟೆ -ಪ್ರೊ. ಎಸ್. ಎಂ ಶಶಿಧರ್, ಹೊಸಪೇಟೆ appeared first on Karnataka Kahale.
]]>The post ಶಿಕ್ಷಣ ಮಿತ್ರ-ಹಂಪಿ ಟೈಮ್ಸ್: ಅಪರೂಪದ ಸಂಪಾದಕ ಬಸಾಪುರ ಬಸವರಾಜ್ -ಮಹಿಮ, ನಿವೃತ್ತ ಡಿಡಿಪಿಐ, ಬಳ್ಳಾರಿ appeared first on Karnataka Kahale.
]]>
ಹಂಪಿ ಟೈಮ್ಸ್ ದಿನಪತ್ರಿಕೆ ಎರಡು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ ಮೂರನೇ ವಸಂತಕ್ಕೆ ಪಾದಾರ್ಪಣೆ ಮಾಡಿದೆ..
ಈ ಪತ್ರಿಕೆಯ ಸಂಪಾದಕರಾದ ಬಸಾಪುರ ಬಸವರಾಜ್ ರವರು ಓರ್ವ ಶಿಕ್ಷಣ ಪ್ರೇಮಿ..
ಆದ್ಯತೆಯಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಮಾಹಿತಿಗಳನ್ನು ಅವರು ಪತ್ರಿಕೆಯಲ್ಲಿ ಪ್ರಕಟಿಸುತ್ತಾ ಬಂದಿದ್ದಾರೆ..
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಅವರು ಪತ್ರಿಕೆಯಲ್ಲಿ ನೀಡಿದ ನೋಟ್ಸ್ ಗಳು ಶಾಲಾ ಮಕ್ಕಳ ಕಲಿಕೆಯಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡಿವೆ.

ಬಸವರಾಜ್ ರವರು ಒಮ್ಮೆ ನನ್ನ ಜೊತೆ ಮಾತನಾಡುವಾಗ
“ಶಿಕ್ಷಣ ಕ್ಷೇತ್ರ ಸಬಲೀಕರಣಗೊಳ್ಳಬೇಕು,ಮಕ್ಕಳು ಪ್ರತಿಭಾವಂತರಾಗಬೇಕು..ಮಕ್ಕಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕು,ಶಿಕ್ಷಕರು ಮಕ್ಕಳ ಕಲಿಕೆಗೆ ಬೆನ್ನೆಲುಬಾಗಿ ನಿಲ್ಲಬೇಕು..ನನಗೆ ಬಹಳಷ್ಟು ಶಿಕ್ಷಕರು ನೋಟ್ಸ್ ಗಳನ್ನು ಪತ್ರಿಕೆಗೆ ನೀಡಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಮಾಡಿದ್ದಾರೆ..ಅವರಿಗೆ ನನ್ನ ಕೃತಜ್ಞತೆಗಳು..ಇದು ನನ್ನ ಪತ್ರಿಕೆ ಅಲ್ಲ ,,ಇದು ನಮ್ಮೆಲ್ಲರ ಪತ್ರಿಕೆ. ಶಿಕ್ಷಣ ಕ್ಷೇತ್ರಕ್ಕೆ ನನ್ನ ಕೈಲಾದ ಕೊಡುಗೆ ಇದು..” ಎಂದು ಹೇಳಿದಾಗ ನನಗೆ ಅವರ ಬಗ್ಗೆ ಹೆಮ್ಮೆ ಅನಿಸಿತು..
ಯಾವುದೇ ಹಮ್ಮು ಬಿಮ್ಮುಗಳಿಲ್ಲದ ವ್ಯಕ್ತಿತ್ವ ಬಸವರಾಜ್ ಅವರದು..
ಇಂತಹ ಮನಸ್ಥಿತಿಯವರು ಬಹಳ ವಿರಳ ,ಇಂಥವರು ಬೆಳೆಯಬೇಕು..
ಹಂಪಿ ಟೈಮ್ಸ್ ಪತ್ರಿಕೆಯು ಎಸ್ ಎಸ್ ಎಲ್ ಸಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ವಿಜಯನಗರ ಜಿಲ್ಲೆ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ 19 ನೇ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಮಹತ್ತರವಾದ ಪಾತ್ರ ವಹಿಸಿದೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ..
ಕೇವಲ ಶಿಕ್ಷಣ ಕ್ಷೇತ್ರವಲ್ಲದೇ ವಿವಿಧ ರಂಗಗಳ ಬಗ್ಗೆ ಸವಿಸ್ತಾರವಾದ ವರದಿಗಳನ್ನು ನಾವು ಹಂಪಿ ಟೈಮ್ಸ್ ನಲ್ಲಿ ಕಾಣಬಹುದು..
ಶಿಕ್ಷಣ ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ ಬಸವರಾಜ್ ನೇತೃತ್ವದ ಹಂಪಿ ಟೈಮ್ಸ್ ದಿನ ಪತ್ರಿಕೆ ನಾಡಿನಾದ್ಯಾಂತ ಹೆಸರು ಮಾಡಲಿ..
ವಿದ್ಯಾರ್ಥಿಗಳ ಬಾಳನ್ನು ಬೆಳಗಲಿ..
ಬಸವರಾಜ್ ರವರಿಗೆ ಈ ಶುಭ ಸಂದರ್ಭದಲ್ಲಿ ನನ್ನ ಶುಭ ಹಾರೈಕೆಗಳು..

-ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ(ಮಹಿಮ)ನಿವೃತ್ತ ಡಿಡಿಪಿಐ, ಬಳ್ಳಾರಿ
The post ಶಿಕ್ಷಣ ಮಿತ್ರ-ಹಂಪಿ ಟೈಮ್ಸ್: ಅಪರೂಪದ ಸಂಪಾದಕ ಬಸಾಪುರ ಬಸವರಾಜ್ -ಮಹಿಮ, ನಿವೃತ್ತ ಡಿಡಿಪಿಐ, ಬಳ್ಳಾರಿ appeared first on Karnataka Kahale.
]]>The post ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆ -ಸಾಹಿತಿ ಸಿದ್ಧರಾಮ ಹಿರೇಮಠ appeared first on Karnataka Kahale.
]]>ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆಯಾಗಿದೆ. ತಮಿಳರು ಭಾಷಾ ವಿಷಯದಲ್ಲಿ ಅತ್ಯಂತ ದುರಭಿಮಾನಿಗಳು.
ಸಾಹಿತಿ ಬಿ.ಜಿ.ಎಲ್.ಸ್ವಾಮಿಯವರೇ ತಮ್ಮ ಅನುಭವವನ್ನು ಕೃತಿಯೊಂದರಲ್ಲಿ ದಾಖಲಿಸುತ್ತಾ “ತಮಿಳರಿಗೆ ತಮ್ಮ ಭಾಷೆಯ ಬಗ್ಗೆ ಎಷ್ಟು ಅಭಿಮಾನವಿದೆಯೆಂದರೆ, ತಮಿಳಿನ ಪ್ರಾಚೀನತೆಯ ಬಗ್ಗೆ ಹೀಗೆ ಹೇಳುತ್ತಾರೆ, ’ಶಿವ ಕೈಲಾಸದಲ್ಲಿ ಡಮರುಗ ಬಾರಿಸಿದಾಗ ಒಂದು ಕಡೆಯಿಂದ ಸಂಸ್ಕೃತವೂ ಮತ್ತೊಂದು ಕಡೆಯಿಂದ ತಮಿಳು ಹುಟ್ಟಿತು’ ಎಂದು. ಇದು ಜನಸಾಮಾನ್ಯರಲ್ಲ ಅಲ್ಲಿಯ ಪ್ರಕಾಂಡ ಪಂಡಿತರೂ ಈ ರೀತಿಯೇ ವಾದ ಮಾಡುತ್ತಾರೆಂದರೆ ಅವರಲ್ಲಿ ಭಾಷೆಯ ಬಗ್ಗೆ ಎಷ್ಟು ದುರಭಿಮಾನವಿರಬಹುದು. ಇದು ಹಿಂದಿನಿಂದಲೂ ನಡೆದುಬಂದಿದೆ.
ಇನ್ನು ನಮ್ಮ ಕನ್ನಡಿಗರು ಔದಾರ್ಯಕ್ಕೆ ಹೆಸರುವಾಸಿ. ಬೇರೆ ರಾಜ್ಯಕ್ಕೆ ಹೋದಾಗ ಇರಲಿ, ನಮ್ಮ ರಾಜ್ಯದಲ್ಲಿಯೇ ಇರುವ, ಬರುವ ಅನ್ಯ ರಾಜ್ಯದವರ ಜೊತೆ ಅವರ ಭಾಷೆಯಲ್ಲಿಯೇ ಮಾತನಾಡುವಷ್ಟು ಉದಾರವಾದಿಗಳು. “ಕನ್ನಡ ತಮಿಳಿನಿಂದ ಜನಿಸಿದ್ದು” ಅನ್ನೋದಿರಲಿ “ಕನ್ನಡ ಒಂದು ಭಾಷೆಯೇ ಅಲ್ಲ ಅದು ಈಗೀಗ ಹುಟ್ಟಿ ಬೆಳೀತಾ ಇರೋದು” ಅಂದರೂ ಸಹ ನಮ್ಮವರು ತಲೆಯಾಡಿಸಿ ನಕ್ಕು ಮೌನವಾಗುವಷ್ಟೂ ಉದಾರವಾದಿಗಳು (ನಿರಭಿಮಾನಿಗಳು ಅಂದರೂ ತಪ್ಪಿಲ್ಲ).
ಇನ್ನೂ ಕೆಲವರು ಎಷ್ಟು “ಉದಾರವಾದಿಗಳು” ಎಂದರೆ. “ಕಮಲ್ ಹಾಸನ್ ಮಾತನಾಡಿದ್ದರಲ್ಲಿ ತಪ್ಪೇನಿದೆ. ಒಂದು ಭಾಷೆಯ ಪ್ರಭಾವ ಮತ್ತೊಂದು ಭಾಷೆಯ ಮೇಲೆ ಆಗುತ್ತೆ, ಹಾಗೆ ಹೇಳಿರಬಹುದು, ಇದನ್ನೇ ದೊಡ್ದ ವಿಷಯ ಅಂತ ಯಾಕೆ ಬಡಿದಾಡೋದು?” ಎಂಬಷ್ಟು. ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯ ಪ್ರಭಾವ ಖಂಡಿತ ಇದ್ದೇ ಇರುತ್ತೆ. ಆದರೆ ಭಾಷೆಯ ಪ್ರಾಚೀನತೆಯ ಪ್ರಶ್ನೆ ಬಂದಾಗ ಹೇಳಿದ್ದಕ್ಕೆಲ್ಲ ತಲೆಯಾಡಿಸುವುದು ತಪ್ಪಾಗುತ್ತದೆ. ಹಾಗಿದ್ದರೆ ಕನ್ನಡ ಒಂದು ಭಾಷೆ ಅಂತ ಯಾಕೆ ಒಪ್ಪಿಕೊಳ್ತೀರಿ ? ಅದಕ್ಕೆ ಪ್ರಾಚೀನತೆ ಇದೆ ಅಂತ ಯಾಕೆ ಹೇಳ್ತೀರಿ ? ಕನ್ನಡ ಅನ್ನೋದೇ ಇಲ್ಲ ಯಾವು ಯಾವುದೋ ಭಾಷೆಗಳಿಂದ ಹುಟ್ಟಿದ್ದು ಅಂತ ಒಪ್ಪಿಕೊಂಡು “ಇನ್ನೂ ಉದಾರವಾದಿಗಳಾಗಿ”. ನಮ್ಮವರೇ ಇಂಥ ಹೇಳಿಕೆಗಳನ್ನು ಕೊಡ್ತಾ ಇರೋದು ನಿಜಕ್ಕೂ ದೊಡ್ಡ ದುರಂತ, ಇಂಥ ಕನ್ನಡಿಗರನ್ನ ಪಡೆದ ಕನ್ನಡ ಭಾಷೆಯ ಕರ್ಮ .
ಇದೆಲ್ಲ ಆಗಲು ಮೂಲ ಕಾರಣ “ಕನ್ನಡದ ಪ್ರಾಚೀನತೆ, ಇತಿಹಾಸದ ಬಗ್ಗೆ ನಿರ್ಲಕ್ಷ್ಯ ಧೋರಣೆ”. ಕನ್ನಡದ ಬಗ್ಗೆ ಎದೆ ತಟ್ಟಿ ಮಾತನಾಡಬೇಕಾದರೆ ಅದರ ಇತಿಹಾಸವನ್ನೂ ಅರಿತಿರಬೇಕಾಗುತ್ತದೆ. ಇಲ್ಲದಿದ್ದರೆ ತಲೆ ಅಲ್ಲಾಡಿಸಿ ಎಲ್ಲದಕ್ಕೂ ಹೌದು ಎಂದು ಸಮ್ಮತಿಸಬೇಕಾದ ದುರವಸ್ಥೆ ಒದಗುತ್ತದೆ.
ಕನ್ನಡ ಭಾಷಾಶಾಸ್ತ್ರದ ಅಧ್ಯಯನದ ಪ್ರಕಾರ, ಕನ್ನಡಕ್ಕೆ ಮೂಲವಾದುದು ” ಮೂಲ ದ್ರಾವಿಡ ಭಾಷೆ” ಅದರಿಂದ ಉದ್ಭವಿಸಿದ್ದು “ದ್ರಾವಿಡ ಭಾಷೆ” ಇದರಿಂದ ಜನಿಸಿದ್ದು, ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳು. ಅಂದರೆ ದಕ್ಷಿಣ ಭಾರತದ ಭಾಷೆಗಳೆಲ್ಲವೂ ಸೋದರ ಭಾಷೆಗಳೇ ಹೊರತು, ಒಂದರಿಂದ ಮತ್ತೊಂದು ಹುಟ್ಟಿಲ್ಲ. ಇದನ್ನು ಭಾಷಾ ಶಾಸ್ತ್ರಜ್ಞರು ಅಧ್ಯಯನ ಮಾಡಿ ತಿಳಿಸಿರುವುದೇ ಹೊರತು ಸುಮ್ಮನೆ ಹೇಳಿದ್ದಲ್ಲ.
ಇದರ ಬಗ್ಗೆ ಕೂಲಂಕಷವಾಗಿ ತಿಳಿಯಬೇಕಾದರೆ ಡಾ.ಸಂಗಮೇಶ ಸವದತ್ತಿಮಠ, ಡಾ.ವಿಲ್ಯಂ ಮಾಡ್ತಾ, ಡಾ.ರಂ.ಶ್ರೀ.ಮುಗಳಿ ಮುಂತಾದವರ ಕೃತಿಗಳನ್ನು ಓದಬಹುದು.
“ಓದು ಇರದೆ” ನಮ್ಮ ಭಾಷೆಯ ಬಗ್ಗೆ ದೃಢತೆಯಿಂದ ಮಾತನಾಡಲಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲ ಕನ್ನಡಿಗರೂ ಅರಿತಿರಬೇಕಾಗುತ್ತದೆ. ಬರೀ ಕೂಗಾಟ, ಹಾರಾಟದಿಂದ ನಮ್ಮ ಭಾಷೆಯ ಪ್ರಾಚೀನತೆಯನ್ನು ಅನ್ಯಭಾಷಿಗರಿಗೆ ಮುಖಕ್ಕೆ ಹೊಡೆಯುವಂತೆ ಹೇಳಲಾಗುವುದಿಲ್ಲ.
ನಟ ಕಮಲ್ ಹಾಸನ್ ರ ಹೇಳಿಕೆ ತಪ್ಪು ಎಂದು ಹೇಳುವಂತಹ, ಅದನ್ನು ಸಾಬೀತು ಮಾಡುವ ಅಧಿಕೃತ ಹೇಳಿಕೆಯನ್ನು ನಮ್ಮ ನಾಡಿನ ಭಾಷಾ ತಜ್ಞರು ಎಲ್ಲೆಡೆಯೂ ಪ್ರಸ್ತುತಪಡಿಸಿದರೆ ಅದು ಸರಿಯಾದ ತಿರುಗೇಟಾಗುತ್ತದೆ.

-ಸಿದ್ಧರಾಮ ಕೂಡ್ಲಿಗಿ
The post ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆ -ಸಾಹಿತಿ ಸಿದ್ಧರಾಮ ಹಿರೇಮಠ appeared first on Karnataka Kahale.
]]>The post ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸುಸೂತ್ರ ನಿರ್ವಹಣೆಗೆ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸಾಹಿತಿ, ಪತ್ರಕರ್ತರಿಂದ ಒತ್ತಾಯ appeared first on Karnataka Kahale.
]]>
ರಾಜ್ಯ ತನ್ನ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸಂಭ್ರಮಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರು ಕನ್ನಡ ಉಳಿಸಿ ಬೆಳೆಸುವ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುತ್ತಿದ್ದಾರೆ. ಇದೆಲ್ಲವೂ ಸ್ವಾಗಾತಾರ್ಹ ಮತ್ತು ಕನ್ನಡ , ಕನ್ನಡಿಗ ಹಾಗೂ ಕರ್ನಾಟಕದ ಹೆಮ್ಮೆ .
ಆದರೆ ಮತ್ತೊಂದೆಡೆ , ಕರ್ನಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಸ್ಥಾಪನೆಯಾದ ಕರ್ನಾಟಕದ ಕನ್ನಡ ವಿಶ್ವವಿದ್ಯಾಲಯ ಹಣದ ಕೊರತೆಯಿಂದ ಮುಚ್ಚುವ ಪರಿಸ್ಥಿತಿಗೆ ಬಂದಿದೆ.
ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದ ಅನುದಾನಗಳು ಕುಸಿಯುತಿದ್ದು ಸಿಬ್ಬಂದಿ ಸಂಬಳ ಹಾಗೂ ನಿತ್ಯ ಖರ್ಚುಗಳಿಗೂ ಹಣವಿಲ್ಲದಂತಾಗಿದೆ .ಸುಮಾರು 1,200 ವಿದ್ಯಾರ್ಥಿಗಳನ್ನು ಓದುತ್ತಿರುವ ಈ ವಿಶ್ವವಿದ್ಯಾಲಯವು ತನ್ನ ಕನಿಷ್ಠ ವೆಚ್ಚವನ್ನು ಭರಿಸಲು ಅನುದಾನವಿಲ್ಲದೆ ಅನಿಶ್ಚಿತ ಭವಿಷ್ಯವನ್ನು ಎದುರು ನೋಡುತ್ತಿದೆ .
ಹಲವು ಖಾಯಂ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಹೊರಗುತ್ತಿಗೆ ಮತ್ತು ಹಂಗಾಮಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ .
ಅವರ ಸಂಬಳ ಪಾವತಿಸಲು ಹಣವಿಲ್ಲದಾಗಿದೆ . ಈ ಹಂಗಾಮಿ ಮತ್ತು ಹೊರಗುತ್ತಿಗೆ ನೌಕರರಿಗೆ ಸುಮಾರು ಒಂದು ವರ್ಷದಿಂದ ಸಂಬಳ ಪಾವತಿಯಾಗಿಲ್ಲ .
1991 ರಲ್ಲಿ 700 ಎಕರೆ ಕ್ಯಾಂಪಸ್‌ನಲ್ಲಿ ಮೂಲಸೌಕರ್ಯ, ಹಾಸ್ಟೆಲ್‌ಗಳು, 22 ಸಂಶೋಧನಾ ವಿಭಾಗಗಳು ಮತ್ತು 32 ಕಟ್ಟಡಗಳೊಂದಿಗೆ ಈ ವಿಶ್ವವಿದ್ಯಾಲಯವನ್ನು, ಕನ್ನಡವನ್ನು ಉತ್ತೇಜಿಸಲು ಮತ್ತು ಪೋಷಿಸಲು, ಭಾಷೆಯ ಬೆಳವಣಿಗೆಗೆ ಸಹಾಯ ಮಾಡಲು, ಸಂಶೋಧನೆ ಮತ್ತು ಇತರ ಅಧ್ಯಯನಗಳನ್ನು ಕೈಗೊಳ್ಳಲು ಮತ್ತು ಸಮಾಜದ ಅಂಚಿನಲ್ಲಿರುವ ಗುಂಪುಗಳಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಸಹಾಯ ಮಾಡಲು ಉದ್ದೇಶಿಸಿ ಸ್ಥಾಪಿಸಲಾಯಿತು .
ಆದರೆ , ಅದೇ ವಿಶ್ವವಿದ್ಯಾಲಯ ಹಣಕಾಸಿನ ತೀವ್ರ ಬಿಕ್ಕಟ್ಟಿಗೆ ಒಳಗಾಗಿ ನಿರಂತರ ಕುಸಿತ ಕಂಡಿದ್ದು ಈಗ ಮುಚ್ಚುವ ಹಂತ ತಲುಪಿದೆ .
ಕನ್ನಡದ ಈ ಏಕೈಕ ವಿಶ್ವವಿದ್ಯಾಲಯವನ್ನು ಉಳಿಸಿ ಬೆಳಸಿ ಸುಸ್ಥಿರಗೊಳಿಸಲು ಅಗತ್ಯ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನಾವು ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮತ್ತು ಈ ವಿಶ್ವವಿದ್ಯಾಲಯ ಸಬಲೀಕರಣಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ತಗೆದುಕೊಳ್ಳಲು ಒತ್ತಾಯಿಸುತ್ತೇವೆ.
-ನಿರಂಜನಾರಾಧ್ಯ ವಿ ಪಿ , ಬೆಂಗಳೂರು,
ಬಸವರಾಜ ಸೂಳಿಭಾವಿ ಗದಗ,
ಕೆ ಪಿ ಸುರೇಶ ಬೆಂಗಳೂರು,
ಡಾ. ಎಚ್ ಎಸ್ ಅನುಪಮಾ ಕವಲಕ್ಕಿ,
ಅನಿಲ ಹೊಸಮನಿ ವಿಜಯಪುರ,
ಸಿ.ಮಂಜುನಾಥ್ ಬಳ್ಳಾರಿ.
The post ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸುಸೂತ್ರ ನಿರ್ವಹಣೆಗೆ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸಾಹಿತಿ, ಪತ್ರಕರ್ತರಿಂದ ಒತ್ತಾಯ appeared first on Karnataka Kahale.
]]>The post ಬಳ್ಳಾರಿ ಹಳೇ ತಾಲೂಕು ಕಚೇರಿ ಆವರಣಕ್ಕೆ ಶಾಶ್ವತ ಪರಿಷ್ಕಾರ ಯಾವಾಗ? -ಬಳ್ಳಾರಿ ಜಿಲ್ಲಾಧಿಕಾರಿ, ಶಾಸಕರಿಗೆ ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಬಹಿರಂಗ ಪತ್ರ! appeared first on Karnataka Kahale.
]]>
ನಗರದ ಹೃದಯ ಭಾಗದಲ್ಲಿರುವ ಹಳೇ ತಾಲೂಕ ಕಚೇರಿ ಆವರಣದಲ್ಲಿ ಸುಮಾರು 11 ಸರ್ಕಾರಿ ಕಚೇರಿಗಳಿವೆ. ಇವುಗಳಲ್ಲಿ ಜನ ಸಂಪರ್ಕವಿರುವ ಕೃಷಿ, ತೋಟಗಾರಿಕೆ, ಉದ್ಯೋಗ ವಿನಿಮಯ ಕಚೇರಿ, ಧಾರ್ಮಿಕ ದತ್ತಿ ಇಲಾಖೆ ಗ್ರಾಮಾಂತರ ಹಾಗೂ ಬ್ರೂಸ್ ಪೇಟೆ ಪೋಲಿಸ್ ಠಾಣೆ ಇನ್ನು ಮುಂತಾದ ಕಚೇರಿಗಳಿವೆ ಕಂದಾಯ ಇಲಾಖೆಯ ತಾಲೂಕು ಕಚೇರಿಯ ಸ್ವಲ್ಪ ಭಾಗ ವರ್ಗಾವಣೆಯಾಗಿ ಇನ್ನು ಕೆಲವು ವಿಭಾಗಗಳು ಹಳೆ ತಾಲೂಕ ಕಚೇರಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ.
ದಿನನಿತ್ಯ ಸಾವಿರಾರು ಜನ ಮುಖ್ಯವಾಗಿ ರೈತರು ಬರುವಂತ ಈ ಕಚೇರಿಗಳಿಗೆ ಮಳೆ ಬಂದಾಗ ಹೋಗಿ ಬರಬೇಕಾದರೆ ಕಷ್ಟವಾಗುತ್ತಿದೆ. ಇಷ್ಟೊಂದು ಕಚೇರಿಗಳಿರುವ ಆವರಣದಲ್ಲಿ ಉನ್ನತ ಅಧಿಕಾರಿಗಳು ಈ ಅವ್ಯವಸ್ಥೆ ಬಗ್ಗೆ ಸರ್ಕಾರ ಗಮನಕ್ಕೆ ತಂದಿದ್ದಾರೋ ಇಲ್ಲವೊ ಗೊತ್ತಿಲ್ಲ! ಮತ್ತು ಹಲವಾರು ವರ್ಷಗಳಿಂದ ಈ ಅವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಯಾವ ಉನ್ನತ ಅಧಿಕಾರಿಗಳು ಗಮನ ಹರಿಸದೇ ಇರುವುದು ಶೋಚನೀಯ.

ಪ್ರತಿ ವರ್ಷ ಮಳೆ ಬಂದಾಗ ಈ ವ್ಯವಸ್ಥೆ ಬಗ್ಗೆ ಯಾವ ಪಕ್ಷದ ಆಡಳಿತ ನಾಯಕರು ಕೂಡ ಸರಿಪಡಿಸಲು ಮುಂದೆ ಬಂದಿಲ್ಲ ಆವರಣ ದಲ್ಲಿರುವ ಪ್ರತಿಯೊಂದು ಕಚೇರಿಗಳನ್ನು ಸಂಪರ್ಕಿಸುವ ಮಣ್ಣಿನ ರಸ್ತೆಗಳನ್ನು ಸಿಮೆಂಟ್ ರಸ್ತೆಗಳಾಗಿ ಪರಿವರ್ತಿಸ ಬೇಕೆಂದು ಕೋರಿ ಕೊಳ್ಳುತ್ತೇನೆ.
ಜತೆಗೆ ಕುಡಿಯುವ ನೀರು, ಮುಖ್ಯವಾಗಿ ಶೌಚಾಲಯ ವ್ಯವಸ್ಥೆ ಮಾಡಬೇಕೆಂದು ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿ ತಮ್ಮಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಮಹಾನಗರ ಪಾಲಿಕೆ ಆವರಣದ ಮಾದರಿಯಲ್ಲಿ ಎಷ್ಟೇ ಮಳೆಯಾದರು ಕೂಡ ಒಂದು ಹನಿ ನೀರು ನಿಲ್ಲದ ಹಾಗೆ ಒಳ ಚರಂಡಿ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.

-ಮೇಕಲ ಈಶ್ವರ ರೆಡ್ಡಿ,
ಸಾಮಾಜಿಕ ಕಾರ್ಯಕರ್ತ, ಬಳ್ಳಾರಿ
—–
The post ಬಳ್ಳಾರಿ ಹಳೇ ತಾಲೂಕು ಕಚೇರಿ ಆವರಣಕ್ಕೆ ಶಾಶ್ವತ ಪರಿಷ್ಕಾರ ಯಾವಾಗ? -ಬಳ್ಳಾರಿ ಜಿಲ್ಲಾಧಿಕಾರಿ, ಶಾಸಕರಿಗೆ ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಬಹಿರಂಗ ಪತ್ರ! appeared first on Karnataka Kahale.
]]>The post ದ್ವಿತೀಯ ಪಿಯು ಪರೀಕ್ಷೆಯಲ್ಲಿ 23 ನೇ ಸ್ಥಾನ: ವಿದ್ಯಾನಗರಿ ಧಾರವಾಡ ಎತ್ತ ಸಾಗುತ್ತಿದೆ!? -ಬಸೂ, ಕವಿ- ಶಿಕ್ಷಣ ಪ್ರೇಮಿ, ಧಾರವಾಡ appeared first on Karnataka Kahale.
]]>
ಒಂದು ಕಾಲದಲ್ಲಿ ಉತ್ತರ ಕರ್ನಾಟಕದ ಮಹತ್ವಾಕಾಂಕ್ಷೆಯ ಯುವಕರೆಲ್ಲ ವಿದ್ಯಾಭ್ಯಾಸಕ್ಕಾಗಿ ಧಾರವಾಡಕ್ಕೆ ಬರುತ್ತಿದ್ದರು.. ಇಲ್ಲಿ ಓದುವುದು ಅವರ ಕನಸಾಗಿರುತ್ತಿತ್ತು.. ಧಾರವಾಡಕ್ಕಿರುವ ವಿದ್ಯಾನಗರಿ ಎಂಬ ಹೆಸರೂ ಕಾರಣವಾಗಿತ್ತು . ಪಕ್ಕದ ಹುಬ್ಬಳ್ಳಿಗೆ ಛೋಟಾ ಬಾಂಬೆ ಎಂದೋ ವ್ಯಾಪಾರದ ನಗರ ಎಂದೋ ಕರೆಯಲಾಗುತ್ತಿತ್ತು.. ಧಾರವಾಡ ಶಿಕ್ಷಣಕ್ಕೆ ಫೇಮಸ್ ಎಂಬಂತಿತ್ತು.
ಧಾರವಾಡಕ್ಕೆ ವಿದ್ಯಾನಗರಿ ಎಂದು ಕರೆಯಲು ಇಲ್ಲಿನ ಶಿಕ್ಷಣದ ಗುಣಮಟ್ಟ ಕಾರಣವಾಗಿತ್ತು. ಇಂಥ ಫೇಮಸ್ಸಿನ ಧಾರವಾಡ ಜಿಲ್ಲೆಗೆ ಈ ವರ್ಷದ ದ್ವಿತೀಯ ಪಿಯು ಪರೀಕ್ಷೆಯಲ್ಲಿ 23 ನೇ ಸ್ಥಾನ. ಯಾಕೆ ಹೀಗಾಗುತ್ತಿದೆ?
ಇಂದೂ ಧಾರವಾಡ ವಿದ್ಯಾರ್ಥಿ ಯುವಜನರಿಂದಲೇ ಕಿಕ್ಕಿರಿದು ತುಂಬಿದೆ.. ಮಾರಿಗೊಂದು ಕೋಚಿಂಗ್ ಸೆಂಟರ್.. ಜತೆಗೆ ಶಿಕ್ಷಣ ಎಂಬುದೇ ಇಲ್ಲಿ ದೊಡ್ಡ ವ್ಯಾಪಾರ. ಕಾಲೇಜುಗಳು ಹೊರತಾಗಿಲ್ಲ… ವ್ಯಾಪಾರ ಎಂದಾಗ ಏನಾಗಬೇಕಿತ್ತೊ ಅದೇ ಸಂಭವಿಸಿದೆ.
ಇಲ್ಲಿ ಪಿಯುಗೆ ಸೇರಬೇಕೆಂದರೆ ಲಕ್ಷ ಲಕ್ಷ ಫೀ ಕೊಡಬೇಕು. ಒಂದೊಂದು ಕಾಲೇಜು ಒಂದೊಂದು ಕುರಿದೊಡ್ಡಿಯೇ.. ಅಷ್ಟು ವಿದ್ಯಾರ್ಥಿಗಳು. ಗುಣಮಟ್ಟದ ಶಿಕ್ಷಣ ಕಡೆ ಗಮನ ಕೊಡೋ ಎಲ್ಲೋ ಒಂದೆರಡು ಕಾಲೇಜುಗಳು. ಅಲ್ಲಿಯೂ ರಾಶಿ ರಾಶಿ ವಿದ್ಯಾರ್ಥಿಗಳಿಂದಾಗಿ ವೈಯಕ್ತಿಕ ಕಾಳಜಿಗಳಿಲ್ಲ.. ಆದ್ಯತೆಗಳಿಲ್ಲ..
ಕಾಲೇಜುಗಳು ರೊಕ್ಕದ ಮುಖ ನೋಡುತ್ತ ಶಿಕ್ಷಣದ ಕಡೆ ಗಮನ ಕೊಡದೇ ಇರಲಾರಂಭಿಸಿದ್ದರಿಂದ ಇವತ್ತು ಈ ಸ್ಥಿತಿ ಎದುರಾಗಿದೆ.
ಒಂದೊಂದು ಮಾರ್ಗದಲ್ಲಿ ಹತ್ತಹನ್ನೆರಡು ಕೋಚಿಂಗ್ ಸೆಂಟರ್ ಗಳು, 24 ತಾಸಿನ ಓದಿನ ಮನೆಗಳು ಬೇಕಾಬಿಟ್ಟಿಯಾಗಿ ಹಬ್ಬಿರುವದರಿಂದ ವಿದ್ಯಾರ್ಥಿಗಳು ಕಕ್ಕಾಬಿಕ್ಕಿಯಾದ ಅಬ್ಬೇಪಾರಿಗಳು. ಎಲ್ಲಿಯೂ ಸಮಾಧಾನ ಇಲ್ಲದ ಅಶಾಂತರು. ಕಿಂಚಿತ್ ಕಾಳಜಿಗಳಿಲ್ಲದೆ ಕಾಲೇಜುಗಳ ನಡುವಿನಿಂದ ಜಾರಿ ಬೀದಿಗೆ ಬಿದ್ದ ಕೂಸುಗಳು.
ಗುಣಮಟ್ಟದ ಶಿಕ್ಷಣದ ಬಗ್ಗೆ ಯಾರು ತಲೆಕೆಡಿಸಿಕೊಳ್ಳಬೇಕು..?. ಹಣವೇ ಸರ್ವಸ್ವ ಎನ್ನುವಂತಾದಲ್ಲಿ.. ಹೌದು ಒಂದೊಂದು ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥರೂ, ಕಾಲೇಜಿನ ಪ್ರಾಂಶುಪಾಲರೂ ಎಷ್ಟೋ ಕೋಟಿಗಳ ಒಡೆಯರು..
ಗುಣಮಟ್ಟದ ಶಿಕ್ಷಣ ಬಗ್ಗೆ ಜಿಜ್ಞಾಸೆ ಹುಟ್ಟುತ್ತಿಲ್ಲ.. ಇದೇ ಮುಂದುವರೆದರೆ ಧಾರವಾಡ ಜಿಲ್ಲೆಯ ಸ್ಥಾನ ಇನ್ನಷ್ಟು ಕುಸಿದರೆ ಅಚ್ಚರಿಯ ವಿಷಯ ಎನಿಸುವುದೇ ಇಲ್ಲ

-ಬಸೂ, ಹೋರಾಟಗಾರರು, ಧಾರವಾಡ
—–
The post ದ್ವಿತೀಯ ಪಿಯು ಪರೀಕ್ಷೆಯಲ್ಲಿ 23 ನೇ ಸ್ಥಾನ: ವಿದ್ಯಾನಗರಿ ಧಾರವಾಡ ಎತ್ತ ಸಾಗುತ್ತಿದೆ!? -ಬಸೂ, ಕವಿ- ಶಿಕ್ಷಣ ಪ್ರೇಮಿ, ಧಾರವಾಡ appeared first on Karnataka Kahale.
]]>The post ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರಿಗೊಂದು ನಮನ -ಬಿ ಎಂ ಹನೀಫ್, ಹಿರಿಯ ಪತ್ರಕರ್ತರು, ಬೆಂಗಳೂರು appeared first on Karnataka Kahale.
]]>
ವಿಶ್ವದ ಅತಿದೊಡ್ಡ ಪ್ರತಿಮೆ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಸ್ಥಾಪನೆಯಾಗಿದೆ. 206 ಅಡಿ ಎತ್ತರದ ಈ ಪ್ರತಿಮೆಗೆ “ಸಾಮಾಜಿಕ ನ್ಯಾಯದ ಪ್ರತಿಮೆ” ಎಂದು ಇದಕ್ಕೆ ಹೆಸರಿಡಲಾಗಿದೆ.
ಈಗೇನಿದ್ದರೂ ಭಾರತದಲ್ಲಿ ಪ್ರತಿಮೆಗಳ ರಾಜಕೀಯದ ಕಾಲ. ಆದರೆ ಪ್ರತಿಮಾ ರಾಜಕೀಯದ ಎಲ್ಲ ವಾದ ವಿವಾದಗಳ ಆಚೆಗೆ ಮುಖ್ಯಮಂತ್ರಿ ಜಗನ್ ರೆಡ್ಡಿಯವರ ಈ ಸಾಧನೆಯನ್ನು ಗಮನಿಸಬೇಕಿದೆ. ಭಾರತದ ಸಂವಿಧಾನ ಶಿಲ್ಪಿಗೆ ಇಂತಹದ್ದೊಂದು ಗೌರವ ಸಲ್ಲಿಕೆ ದಕ್ಷಿಣ ಭಾರತದಲ್ಲಿ ಆಗಿದೆ ಎನ್ನುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ನ್ಯಾಯವಾಗಿ ನೋಡುವುದಾದರೆ ಈ ಬೃಹತ್ ಪ್ರತಿಮೆ ನವದೆಹಲಿಯಲ್ಲಿ ಸ್ಥಾಪನೆ ಆಗಬೇಕಿತ್ತು. ದೇಶದ ಸಂವಿಧಾನದ ಸಾರ್ವಭೌಮತೆ, ಸಮಾನತೆ, ಸಮಾಜವಾದ ಮತ್ತು ಭ್ರಾತ್ವತ್ವದ ಸಾರ್ವಕಾಲಿಕ ಮೌಲ್ಯಗಳನ್ನು ಎತ್ತಿ ಹಿಡಿದು ಭಾರತೀಯರನ್ನು ಒಗ್ಗೂಡಿಸುವ ಮಂತ್ರ ಶಕ್ತಿ ಕೇಂದ್ರ ಇದಾಗಬೇಕಿದೆ.

-ಬಿ.ಎಂ. ಹನೀಫ್, ಹಿರಿಯ ಪತ್ರಕರ್ತರು, ಬೆಂಗಳೂರು
The post ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರಿಗೊಂದು ನಮನ -ಬಿ ಎಂ ಹನೀಫ್, ಹಿರಿಯ ಪತ್ರಕರ್ತರು, ಬೆಂಗಳೂರು appeared first on Karnataka Kahale.
]]>