ಎಲ್ಲಿ ಹೋದವು ಬಟ್ಟೆ ಬ್ಯಾನರು?!
-ಚಂದ್ರಕಾಂತ ವಡ್ಡು
ಏಳು ವರ್ಷಗಳ ಹಿಂದೆ ಹಾವೇರಿಯಲ್ಲಿ ಸಮಾಜಮುಖಿ ಓದುಗರ ಬಳಗ ಮತ್ತು ಸಾಹಿತಿ ಕಲಾವಿದರ ಬಳಗ ಒಟ್ಟಾಗಿ ಒಂದು ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಿದ್ದರು. ಅಂದು ಅದೇ ತಾನೇ ಐಎಎಸ್ ಪರೀಕ್ಷೆ ಪಾಸಾಗಿದ್ದ ಹೊಸಪೇಟೆಯ ಕೀರ್ತಿಕಿರಣ್ ಪೂಜಾರ್ (ಇವರು ಹಾವೇರಿಯ ಅಳಿಯ) ಅವರನ್ನು ಗೌರವಿಸಲಾಯಿತು.
ಆ ಕಾರ್ಯಕ್ರಮದಲ್ಲಿ ಹಾವೇರಿಯ ಪರಿಸರಪ್ರೇಮಿ ಗೆಳೆಯರು ಬಳಸಿದ್ದ ಕೈಬರಹದ ಬಟ್ಟೆ ಬ್ಯಾನರು ವಿಶೇಷವಾಗಿ ಗಮನ ಸೆಳೆಯುತ್ತದೆ.
ಇತ್ತೀಚೆಗೆ ಎಲ್ಲೆಡೆ ಫ್ಲೆಕ್ಸ್ ಬ್ಯಾನರುಗಳ ಬಳಕೆ ಮೂಲಕ ಪರಿಸರ ಮಾಲಿನ್ಯಕ್ಕೆ ವಿಪರೀತ ಕೊಡುಗೆ ನೀಡಲಾಗುತ್ತಿದೆ. ಇಂಥ ಕೆಟ್ಟ ಸಾರ್ವಜನಿಕ ನಡವಳಿಕೆಯನ್ನು ಬಹುತೇಕ ಸಂಘಸಂಸ್ಥೆಗಳು, ರಾಜಕೀಯ ಪಕ್ಷಗಳು, ನೇತಾರರು ಯಾವ ಅಳುಕು ಅಂಜಿಕೆ ಕಾಳಜಿ ಇಲ್ಲದೇ ಪಾಲಿಸುವುದನ್ನು ಅಸಹಾಯಕತೆಯಿಂದ ಗಮನಿಸುತ್ತಿದ್ದೇವೆ.
ಇಂತಹ ಪರಿಸರ ಹಾನಿ ವರ್ತನೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಮಾಧ್ಯಮ ಲೋಕವಾದರೂ ಹೊರತಾಗಬೇಕಲ್ಲವೇ…?
ಮರೆತು ಹೋಗಿರುವ ಬಟ್ಟೆ ಬ್ಯಾನರ್ ಬಳಕೆಯನ್ನು ಮತ್ತೆ ಜಾರಿಗೆ ತರುವುದು ಸೂಕ್ತವೇ? ಸಾಧ್ಯವೇ? ಕಣ್ಮರೆಯಾಗಿರುವ ಬಟ್ಟೆಬರವಣಿಗೆಯ ಕಲಾವಿದರನ್ನು ಹುಡುಕುವುದು ಹೇಗೆ, ಎಲ್ಲಿ?
-ಚಂದ್ರಕಾಂತ ವಡ್ಡು , ಸಂಪಾದಕರು: ಸಮಾಜಮುಖಿ ಮಾಸಿಕ, ಬೆಂಗಳೂರು
—–