ಐ ಲವ್ ಹೊಸಪೇಟೆ -ಪ್ರೊ. ಎಸ್. ಎಂ ಶಶಿಧರ್, ಹೊಸಪೇಟೆ

ಹೊಸಪೇಟೆ ಊರು ಇಷ್ಟವಾಗುವುದೇ ಈ ಕಾರಣಗಳಿಗಾಗಿ!

    ಹೌದು! ಬೋರಾಯಿತೆನಿಸಿದರೆ, ಎಸ್ಕೇಪ್ ಆಗಲು ಊರಿನ ಸುತ್ತ, ಹತ್ತಾರು ಅಲ್ಲ, ನೂರಾರು ಸ್ಥಳಗಳಿವೆ. ಕೇವಲ 15-20 ನಿಮಿಷಗಳ ಬೈಕ್ ರೈಡಿನಲ್ಲಿ ಮತ್ತಾವುದೋ ಲೋಕಕ್ಕೆ ಎಂಟ್ರಿ ಕೊಟ್ಟಂತೆ! ಹಂಪಿಯ ಗುಡಿ- ಗುಂಡಾರಗಳಂತೂ ಏಕ್ದಮ್ ಮನಸ್ಸನ್ನು ಶಾಂತಗೊಳಿಸುತ್ತವೆ. ತುಸು ಪ್ರಯಾಸವೂ ಇಲ್ಲದೆ, ಮನಸ್ಸನ್ನು ಧ್ಯಾನದೊಳಗೆ ಎಳೆದುಕೊಂಡು ಬಿಡುತ್ತವೆ. ಮಾಲ್ಯವಂತ, ಮಾತಂಗ, ಅಂಜನಾದ್ರಿ ಬೆಟ್ಟಗಳಂತೂ ಟ್ರೆಕ್ಕಿಂಗಿನ ರೋಚಕ ಫೀಲಿಂಗ್ ಕೊಡುತ್ತವೆ. ಸೂರ್ಯೋದಯಕ್ಕೆ ಮಾತಂಗ, ಸೂರ್ಯಾಸ್ತಕ್ಕೆ ಹೇಮಕೂಟ. ಒಂದಿಡೀ ದಿನದ ಆಹ್ಲಾದ, ವಾರಗಳ ಕಾಲ ತೊನೆಯುವ ಆಮೋದ. ತುಂಗಭದ್ರಾ ಅಣೆಕಟ್ಟಿನ ಸರೋವರ, ಬ್ಯಾಕ್ ವಾಟರ್ ಅಥವಾ ಲೇಕ್ ವ್ಯೂ ನೋಡುತ್ತಾ ಕುಳಿತುಬಿಟ್ಟರೆ ಪ್ರಪಂಚ ಮರೆತು ಹೋಗುತ್ತದೆ. ಅನಕೊಂಡದಂತೆ ಮೈಚಾಚಿ ಊರಿನ ಸುತ್ತ ಹರಿಯುವ ಕಾಲುವೆಗಳ ಬದಿಯಲ್ಲಿ ಓಡಾಡಬಹುದು. ಕುಳಿತು ರಿಲ್ಯಾಕ್ಸ್ ಆಗಬಹುದು. ಓಡಾಡಲಾಗದ, ಹತ್ತಲಾಗದ ಸೋಮಾರಿ ಕ್ಷಣಗಳು ಬೇಕೆಂದರೆ, ಸುಂದರ ಉದ್ಯಾನಗಳಿವೆ. ತುಂಗಭದ್ರಾ ಅಣೆಕಟ್ಟಿನ ಸುತ್ತಮುತ್ತ- ಚಕ್ರವನ, ನಂದನವನ, ಪಂಪಾವನ ಉದ್ಯಾನಗಳು.

ಈಚೆಗೆ ನನ್ನ ಇಷ್ಟದ ಪಂಪಾವನಕ್ಕೆ ಹೋಗಿದ್ದೆ. 61 ಎಕರೆಗಳ ಹಚ್ಚಹಸಿರು ಉದ್ಯಾನ. ಕರ್ನಾಟಕದಲ್ಲೇ ದೊಡ್ಡ ಪಾರ್ಕ್ ಎಂಬ ಹೆಗ್ಗಳಿಕೆ ಇದಕ್ಕೆ ಇದೆ! ಮೂರು ದಶಕಗಳ ಹಿಂದೆ, ಡಾ.ರಾಜ್ ಕುಮಾರ್ ಮತ್ತು ಬಿ. ಸರೋಜಾದೇವಿ ಹಾಡಿ ನರ್ತಿಸಿದ “ನಿನ್ನಾ ಸ್ನೇಹಕೇ ನಾ ಸೋತು ಹೋದೆನು. ಎಲ್ಲಾ ದೇವರ ನಾ ಬೇಡಿ ಕೊಂಡೆನು”, ಹಾಡು ಚಿತ್ರೀಕರಿಸಿದ ಸ್ಥಳ. ತುಸು ಮೇಂಟೇನ್ ಮಾಡಿದರೆ ಈ ಪಾರ್ಕ್ ಅತ್ಯಾಕರ್ಷಕ ಟೂರಿಸ್ಟ್ ಸ್ಪಾಟ್ ಆಗುವುದರಲ್ಲಿ ಸಂದೇಹವಿಲ್ಲ.

-ಪ್ರೊ. ಎಸ್ ಎಂ ಶಶಿಧರ್                                 ವಿಶ್ರಾಂತ ಪ್ರಾಚಾರ್ಯರು                                  ಪಿಡಿಐಟಿ ಇಂಜನಿಯರಿಂಗ್ ಕಾಲೇಜ್                            ಹೊಸಪೇಟೆ

Leave a Reply

Your email address will not be published. Required fields are marked *