Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸುಸೂತ್ರ ನಿರ್ವಹಣೆಗೆ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸಾಹಿತಿ, ಪತ್ರಕರ್ತರಿಂದ ಒತ್ತಾಯ - Karnataka Kahale

ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸುಸೂತ್ರ ನಿರ್ವಹಣೆಗೆ ಕೂಡಲೇ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಲು ಸಾಹಿತಿ, ಪತ್ರಕರ್ತರಿಂದ ಒತ್ತಾಯ

ರಾಜ್ಯ ತನ್ನ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡ 50 ವರ್ಷಗಳ ಸಂಭ್ರಮಾಚರಣೆ ನಡೆಸುತ್ತಿದೆ. ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರು ಕನ್ನಡ ಉಳಿಸಿ ಬೆಳೆಸುವ ಬಗ್ಗೆ ಪುಂಕಾನುಪುಂಖವಾಗಿ ಮಾತನಾಡುತ್ತಿದ್ದಾರೆ. ಇದೆಲ್ಲವೂ ಸ್ವಾಗಾತಾರ್ಹ ಮತ್ತು ಕನ್ನಡ , ಕನ್ನಡಿಗ ಹಾಗೂ ಕರ್ನಾಟಕದ ಹೆಮ್ಮೆ .

ಆದರೆ ಮತ್ತೊಂದೆಡೆ , ಕರ್ನಾಟಕದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಸ್ಥಾಪನೆಯಾದ ಕರ್ನಾಟಕದ ಕನ್ನಡ ವಿಶ್ವವಿದ್ಯಾಲಯ ಹಣದ ಕೊರತೆಯಿಂದ ಮುಚ್ಚುವ ಪರಿಸ್ಥಿತಿಗೆ ಬಂದಿದೆ.

ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದ ಅನುದಾನಗಳು ಕುಸಿಯುತಿದ್ದು ಸಿಬ್ಬಂದಿ ಸಂಬಳ ಹಾಗೂ ನಿತ್ಯ ಖರ್ಚುಗಳಿಗೂ ಹಣವಿಲ್ಲದಂತಾಗಿದೆ .ಸುಮಾರು 1,200 ವಿದ್ಯಾರ್ಥಿಗಳನ್ನು ಓದುತ್ತಿರುವ ಈ ವಿಶ್ವವಿದ್ಯಾಲಯವು ತನ್ನ ಕನಿಷ್ಠ ವೆಚ್ಚವನ್ನು ಭರಿಸಲು ಅನುದಾನವಿಲ್ಲದೆ ಅನಿಶ್ಚಿತ ಭವಿಷ್ಯವನ್ನು ಎದುರು ನೋಡುತ್ತಿದೆ .

ಹಲವು ಖಾಯಂ ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಹೊರಗುತ್ತಿಗೆ ಮತ್ತು ಹಂಗಾಮಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ .
ಅವರ ಸಂಬಳ ಪಾವತಿಸಲು ಹಣವಿಲ್ಲದಾಗಿದೆ . ಈ ಹಂಗಾಮಿ ಮತ್ತು ಹೊರಗುತ್ತಿಗೆ ನೌಕರರಿಗೆ ಸುಮಾರು ಒಂದು ವರ್ಷದಿಂದ ಸಂಬಳ ಪಾವತಿಯಾಗಿಲ್ಲ .

1991 ರಲ್ಲಿ 700 ಎಕರೆ ಕ್ಯಾಂಪಸ್‌ನಲ್ಲಿ ಮೂಲಸೌಕರ್ಯ, ಹಾಸ್ಟೆಲ್‌ಗಳು, 22 ಸಂಶೋಧನಾ ವಿಭಾಗಗಳು ಮತ್ತು 32 ಕಟ್ಟಡಗಳೊಂದಿಗೆ ಈ ವಿಶ್ವವಿದ್ಯಾಲಯವನ್ನು, ಕನ್ನಡವನ್ನು ಉತ್ತೇಜಿಸಲು ಮತ್ತು ಪೋಷಿಸಲು, ಭಾಷೆಯ ಬೆಳವಣಿಗೆಗೆ ಸಹಾಯ ಮಾಡಲು, ಸಂಶೋಧನೆ ಮತ್ತು ಇತರ ಅಧ್ಯಯನಗಳನ್ನು ಕೈಗೊಳ್ಳಲು ಮತ್ತು ಸಮಾಜದ ಅಂಚಿನಲ್ಲಿರುವ ಗುಂಪುಗಳಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಸಹಾಯ ಮಾಡಲು ಉದ್ದೇಶಿಸಿ ಸ್ಥಾಪಿಸಲಾಯಿತು .

ಆದರೆ , ಅದೇ ವಿಶ್ವವಿದ್ಯಾಲಯ ಹಣಕಾಸಿನ ತೀವ್ರ ಬಿಕ್ಕಟ್ಟಿಗೆ ಒಳಗಾಗಿ ನಿರಂತರ ಕುಸಿತ ಕಂಡಿದ್ದು ಈಗ ಮುಚ್ಚುವ ಹಂತ ತಲುಪಿದೆ .

ಕನ್ನಡದ ಈ ಏಕೈಕ ವಿಶ್ವವಿದ್ಯಾಲಯವನ್ನು ಉಳಿಸಿ ಬೆಳಸಿ ಸುಸ್ಥಿರಗೊಳಿಸಲು ಅಗತ್ಯ ಅನುದಾನಗಳನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ನಾವು ಒಕ್ಕೊರಲಿನಿಂದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಮತ್ತು ಈ ವಿಶ್ವವಿದ್ಯಾಲಯ ಸಬಲೀಕರಣಕ್ಕಾಗಿ ಅಗತ್ಯವಿರುವ ಕ್ರಮಗಳನ್ನು ತಗೆದುಕೊಳ್ಳಲು ಒತ್ತಾಯಿಸುತ್ತೇವೆ.

-ನಿರಂಜನಾರಾಧ್ಯ ವಿ ಪಿ , ಬೆಂಗಳೂರು,
ಬಸವರಾಜ ಸೂಳಿಭಾವಿ ಗದಗ,
ಕೆ ಪಿ ಸುರೇಶ ಬೆಂಗಳೂರು,
ಡಾ. ಎಚ್ ಎಸ್ ಅನುಪಮಾ ಕವಲಕ್ಕಿ,
ಅನಿಲ ಹೊಸಮನಿ ವಿಜಯಪುರ,
ಸಿ.ಮಂಜುನಾಥ್ ಬಳ್ಳಾರಿ.