ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆ -ಸಾಹಿತಿ ಸಿದ್ಧರಾಮ‌ ಹಿರೇಮಠ

“ಓದು ಇರದೆ” ಕನ್ನಡದ ಬಗ್ಗೆ ವಾದ ಮಾಡಲಾಗದು

ನಟ ಕಮಲ್ ಹಾಸನ್ ರ ಹೇಳಿಕೆ ತಮಿಳಿನ ಅಂಧಾಭಿಮಾನದ ಹೇಳಿಕೆಯಾಗಿದೆ. ತಮಿಳರು ಭಾಷಾ ವಿಷಯದಲ್ಲಿ ಅತ್ಯಂತ ದುರಭಿಮಾನಿಗಳು.

ಸಾಹಿತಿ ಬಿ.ಜಿ.ಎಲ್.ಸ್ವಾಮಿಯವರೇ ತಮ್ಮ ಅನುಭವವನ್ನು ಕೃತಿಯೊಂದರಲ್ಲಿ ದಾಖಲಿಸುತ್ತಾ “ತಮಿಳರಿಗೆ ತಮ್ಮ ಭಾಷೆಯ ಬಗ್ಗೆ ಎಷ್ಟು ಅಭಿಮಾನವಿದೆಯೆಂದರೆ, ತಮಿಳಿನ ಪ್ರಾಚೀನತೆಯ ಬಗ್ಗೆ ಹೀಗೆ ಹೇಳುತ್ತಾರೆ, ’ಶಿವ ಕೈಲಾಸದಲ್ಲಿ ಡಮರುಗ ಬಾರಿಸಿದಾಗ ಒಂದು ಕಡೆಯಿಂದ ಸಂಸ್ಕೃತವೂ ಮತ್ತೊಂದು ಕಡೆಯಿಂದ ತಮಿಳು ಹುಟ್ಟಿತು’ ಎಂದು. ಇದು ಜನಸಾಮಾನ್ಯರಲ್ಲ ಅಲ್ಲಿಯ ಪ್ರಕಾಂಡ ಪಂಡಿತರೂ ಈ ರೀತಿಯೇ ವಾದ ಮಾಡುತ್ತಾರೆಂದರೆ ಅವರಲ್ಲಿ ಭಾಷೆಯ ಬಗ್ಗೆ ಎಷ್ಟು ದುರಭಿಮಾನವಿರಬಹುದು. ಇದು ಹಿಂದಿನಿಂದಲೂ ನಡೆದುಬಂದಿದೆ.
ಇನ್ನು ನಮ್ಮ ಕನ್ನಡಿಗರು ಔದಾರ್ಯಕ್ಕೆ ಹೆಸರುವಾಸಿ. ಬೇರೆ ರಾಜ್ಯಕ್ಕೆ ಹೋದಾಗ ಇರಲಿ, ನಮ್ಮ ರಾಜ್ಯದಲ್ಲಿಯೇ ಇರುವ, ಬರುವ ಅನ್ಯ ರಾಜ್ಯದವರ ಜೊತೆ ಅವರ ಭಾಷೆಯಲ್ಲಿಯೇ ಮಾತನಾಡುವಷ್ಟು ಉದಾರವಾದಿಗಳು. “ಕನ್ನಡ ತಮಿಳಿನಿಂದ ಜನಿಸಿದ್ದು” ಅನ್ನೋದಿರಲಿ “ಕನ್ನಡ ಒಂದು ಭಾಷೆಯೇ ಅಲ್ಲ ಅದು ಈಗೀಗ ಹುಟ್ಟಿ ಬೆಳೀತಾ ಇರೋದು” ಅಂದರೂ ಸಹ ನಮ್ಮವರು ತಲೆಯಾಡಿಸಿ ನಕ್ಕು ಮೌನವಾಗುವಷ್ಟೂ ಉದಾರವಾದಿಗಳು (ನಿರಭಿಮಾನಿಗಳು ಅಂದರೂ ತಪ್ಪಿಲ್ಲ).

ಇನ್ನೂ ಕೆಲವರು ಎಷ್ಟು “ಉದಾರವಾದಿಗಳು” ಎಂದರೆ. “ಕಮಲ್ ಹಾಸನ್ ಮಾತನಾಡಿದ್ದರಲ್ಲಿ ತಪ್ಪೇನಿದೆ. ಒಂದು ಭಾಷೆಯ ಪ್ರಭಾವ ಮತ್ತೊಂದು ಭಾಷೆಯ ಮೇಲೆ ಆಗುತ್ತೆ, ಹಾಗೆ ಹೇಳಿರಬಹುದು, ಇದನ್ನೇ ದೊಡ್ದ ವಿಷಯ ಅಂತ ಯಾಕೆ ಬಡಿದಾಡೋದು?” ಎಂಬಷ್ಟು. ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯ ಪ್ರಭಾವ ಖಂಡಿತ ಇದ್ದೇ ಇರುತ್ತೆ. ಆದರೆ ಭಾಷೆಯ ಪ್ರಾಚೀನತೆಯ ಪ್ರಶ್ನೆ ಬಂದಾಗ ಹೇಳಿದ್ದಕ್ಕೆಲ್ಲ ತಲೆಯಾಡಿಸುವುದು ತಪ್ಪಾಗುತ್ತದೆ. ಹಾಗಿದ್ದರೆ ಕನ್ನಡ ಒಂದು ಭಾಷೆ ಅಂತ ಯಾಕೆ ಒಪ್ಪಿಕೊಳ್ತೀರಿ ? ಅದಕ್ಕೆ ಪ್ರಾಚೀನತೆ ಇದೆ ಅಂತ ಯಾಕೆ ಹೇಳ್ತೀರಿ ? ಕನ್ನಡ ಅನ್ನೋದೇ ಇಲ್ಲ ಯಾವು ಯಾವುದೋ ಭಾಷೆಗಳಿಂದ ಹುಟ್ಟಿದ್ದು ಅಂತ ಒಪ್ಪಿಕೊಂಡು “ಇನ್ನೂ ಉದಾರವಾದಿಗಳಾಗಿ”. ನಮ್ಮವರೇ ಇಂಥ ಹೇಳಿಕೆಗಳನ್ನು ಕೊಡ್ತಾ ಇರೋದು ನಿಜಕ್ಕೂ ದೊಡ್ಡ ದುರಂತ, ಇಂಥ ಕನ್ನಡಿಗರನ್ನ ಪಡೆದ ಕನ್ನಡ ಭಾಷೆಯ ಕರ್ಮ .

ಇದೆಲ್ಲ ಆಗಲು ಮೂಲ ಕಾರಣ “ಕನ್ನಡದ ಪ್ರಾಚೀನತೆ, ಇತಿಹಾಸದ ಬಗ್ಗೆ ನಿರ್ಲಕ್ಷ್ಯ ಧೋರಣೆ”. ಕನ್ನಡದ ಬಗ್ಗೆ ಎದೆ ತಟ್ಟಿ ಮಾತನಾಡಬೇಕಾದರೆ ಅದರ ಇತಿಹಾಸವನ್ನೂ ಅರಿತಿರಬೇಕಾಗುತ್ತದೆ. ಇಲ್ಲದಿದ್ದರೆ ತಲೆ ಅಲ್ಲಾಡಿಸಿ ಎಲ್ಲದಕ್ಕೂ ಹೌದು ಎಂದು ಸಮ್ಮತಿಸಬೇಕಾದ ದುರವಸ್ಥೆ ಒದಗುತ್ತದೆ.

ಕನ್ನಡ ಭಾಷಾಶಾಸ್ತ್ರದ ಅಧ್ಯಯನದ ಪ್ರಕಾರ, ಕನ್ನಡಕ್ಕೆ ಮೂಲವಾದುದು ” ಮೂಲ ದ್ರಾವಿಡ ಭಾಷೆ” ಅದರಿಂದ ಉದ್ಭವಿಸಿದ್ದು “ದ್ರಾವಿಡ ಭಾಷೆ” ಇದರಿಂದ ಜನಿಸಿದ್ದು, ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳು. ಅಂದರೆ ದಕ್ಷಿಣ ಭಾರತದ ಭಾಷೆಗಳೆಲ್ಲವೂ ಸೋದರ ಭಾಷೆಗಳೇ ಹೊರತು, ಒಂದರಿಂದ ಮತ್ತೊಂದು ಹುಟ್ಟಿಲ್ಲ. ಇದನ್ನು ಭಾಷಾ ಶಾಸ್ತ್ರಜ್ಞರು ಅಧ್ಯಯನ ಮಾಡಿ ತಿಳಿಸಿರುವುದೇ ಹೊರತು ಸುಮ್ಮನೆ ಹೇಳಿದ್ದಲ್ಲ.

ಇದರ ಬಗ್ಗೆ ಕೂಲಂಕಷವಾಗಿ ತಿಳಿಯಬೇಕಾದರೆ ಡಾ.ಸಂಗಮೇಶ ಸವದತ್ತಿಮಠ, ಡಾ.ವಿಲ್ಯಂ ಮಾಡ್ತಾ, ಡಾ.ರಂ.ಶ್ರೀ.ಮುಗಳಿ ಮುಂತಾದವರ ಕೃತಿಗಳನ್ನು ಓದಬಹುದು.

“ಓದು ಇರದೆ” ನಮ್ಮ ಭಾಷೆಯ ಬಗ್ಗೆ ದೃಢತೆಯಿಂದ ಮಾತನಾಡಲಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲ ಕನ್ನಡಿಗರೂ ಅರಿತಿರಬೇಕಾಗುತ್ತದೆ. ಬರೀ ಕೂಗಾಟ, ಹಾರಾಟದಿಂದ ನಮ್ಮ ಭಾಷೆಯ ಪ್ರಾಚೀನತೆಯನ್ನು ಅನ್ಯಭಾಷಿಗರಿಗೆ ಮುಖಕ್ಕೆ ಹೊಡೆಯುವಂತೆ ಹೇಳಲಾಗುವುದಿಲ್ಲ.

ನಟ ಕಮಲ್ ಹಾಸನ್ ರ ಹೇಳಿಕೆ ತಪ್ಪು ಎಂದು ಹೇಳುವಂತಹ, ಅದನ್ನು ಸಾಬೀತು ಮಾಡುವ ಅಧಿಕೃತ ಹೇಳಿಕೆಯನ್ನು ನಮ್ಮ ನಾಡಿನ ಭಾಷಾ ತಜ್ಞರು ಎಲ್ಲೆಡೆಯೂ ಪ್ರಸ್ತುತಪಡಿಸಿದರೆ ಅದು ಸರಿಯಾದ ತಿರುಗೇಟಾಗುತ್ತದೆ.

-ಸಿದ್ಧರಾಮ ಕೂಡ್ಲಿಗಿ

Leave a Reply

Your email address will not be published. Required fields are marked *