ಅಂಬೇಡ್ಕರ್ ಎಂದರೆ
ಅಂಬೇಡ್ಕರ್ ಎಂದರೆ ಸಾಮರಸ್ಯದ ಪಿತ
ಸಮಸಮಾಜಕ್ಕ ಸತ್ಪಥವ ತೋರಿದಾತ
ಸರ್ವರೂ ಸಮಾನರು ಎಂದಾತ
ಆನಂದ-ಪರಮಾನಂದ ನೀಡಿದಾತ!!1!!
ಅಂಬೇಡ್ಕರ್ ಎಂದರೆ ಅಕ್ಷರದ ಕ್ಷೀರಸಾಗರ
ಅಕ್ಕರೆಯ ಅರಿವಿನ ಮಹಾಸಾಗರ
ಆರ್ಭಟಗಳನು ಅಡಗಿಸಿದ ಹೋರಾಟಗಾರ
ಬಾಳ ಗೆಲುವಿನ ದಾರಿ ತೋರಿದ ಛಲಗಾರ!!2!!
ಅಂಬೇಡ್ಕರ್ ಎಂದರೆ ಜಾತಿಜಾಲವ ಜಾಲಾಡಿದಾತ
ನ್ಯಾಯ ನೀತಿನಿಧಿಯ ಶೋಧಿಸಿದಾತ
ಮಾನವೀಯತೆಯ ಬೀಜ ಎಲ್ಲರೆದೆಯಲಿ ಬಿತ್ತಿದಾತ
ಸರ್ವರಲ್ಲೂ ಮನುಷ್ಯತ್ವದ ಕಣ್ತೆರೆಸಿದಾತ!!3!!
ಅಂಬೇಡ್ಕರ್ ಎಂದರೆ ಇರುವಿನ ಅರಿವು ತೋರಿದಾತ
ಭಾರತದೊಳಗಿನ ಭಗ್ನಗಳನು ತೆರೆತೆರೆದು ತೋರಿದಾತ
ಕಪಟಿಗಳ ಕಾರ್ಮೋಡವನು ಕರಗಿಸಿದಾತ
ವಂಚಕರ ವಂಚನೆಗಳ ಬಯಲುಗೊಳಿಸಿದಾತ!!4!!
ಅಂಬೇಡ್ಕರ್ ಎಂದರೆ ಶಿಲೆಯೊಳಗಿನ ಕಲೆ
ನೊಂದಬೆಂದವರಿಗೆ ಕರುಣೆಯ ಸೆಲೆ
ವಿಕಾರಿಗಳನು ಆಕಾರಿಗಳಾಗಿಸಿದಾತ
ಪ್ರಜೆಗಳನು ಪ್ರಭುವಾಗಿಸಿದಾತ!!5!!
-ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್
ನಿರ್ದೇಶಕರು, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ.
ಕುವೆಂಪು ವಿಶ್ವವಿದ್ಯಾಲಯ
ಜ್ಞಾನ ಸಹ್ಯಾದ್ರಿ, ಶಂಕರಘಟ್ಟ.
ಶಿವಮೊಗ್ಗ, ಜಿಲ್ಲೆ.