ಅನುದಿನ ಕವನ-೧೫೭೧, ಕವಿ:ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ: ಒಂದು ಹುಸಿ‌ ಮಳೆ

ಒಂದು ಹುಸಿ ಮಳೆ

ಎಂದಿನಂತೆ ಇಂದೂ
ಸುಡು ನಡು ಮಧ್ಯಾನ್ಹ ಹೊರಗೆ
ಆಕಾಶದಲಿ ಅಪರೂಪಕೆ ಅಲ್ಲೊಂದು ಇಲ್ಲೊಂದು ಮೈ ಚೆಲ್ಲಿ ;
ಮಾತು ಬಿಟ್ಟ ಮಕ್ಕಳ ತರಹ
-ದ
ಮಳೆ ಮೋಡಗಳ ಮೇಳ ಅಲ್ಲಲ್ಲಿ.

ಮತ್ತೊಮ್ಮೆ ದಿಟ್ಟಿಸಿ ನೋಡಿ
ಫ್ಯಾನು ಚಾಲೂ ಮಾಡಿ ಬರಿ ಮೈ ಯಲೆ
ನೆಲಕೆ ಬರಿ ಮೈ ಚೆಲ್ಲಿ ಎರಡೂ ಕಾಲು ನೀಡಿ
ಮೊಬೈಲ್ ಬಾಯಿಗೆ ನಾಕು ಲೈಕು
ಎರಡು ಕಮೆಂಟು ತುರುಕಿ;

ಬೆವೆತ ಮೈ ಒರೆಸಿಕೊಂಡು
ಮಲಗಿದ್ದಲ್ಲೆ ಸೆಖೆಗೆ ಮಗ್ಗಲು ಬದಲಿಸುವಾಗ
ಹೊರಗೆ ಪವಾಡವೇ ಎಂಬಂತೆ ಧೋ
ಮಳೆಗೆ ;
ಬೆಂದ ನೆಲದ ಮಣ್ಣು
ವಾಸನೆ ಮೂಗಿಗಡರಿ ಎದ್ದು ಕಿಡಕಿ
ತೆರೆದು ;

ನೋಡಿದರೆ ಎಲ್ಲಿ ಓಡಿ ಹೋದೀತೆಂದು

ಅಂಜಿ ಮೊದಲ ಮಳೆಯ ಫೋಟೋ ತೆಗೆಯಲು ಧೈರ್ಯ ಸಾಲದೆ
ಹಾಗೆ ಸುಮ್ಮನೆ ಮೊದಲ ಮಳೆಯ ಚಟ ಪಟ
ಚಟ
ಸದ್ದು ಕೇಳುವುದೆಷ್ಟು ಚಂದ!

ಕಾದಿರಲಿಲ್ಲ ಈ ಹಿಂದೆ ಎಂದೂ
ಇಷ್ಟೊಂದು ಕಾತರದಲಿ ಮಳೆಗಾಗಿ

ಅವಳ ಬರುವ ದಾರಿಯ ಹೊರತಾಗಿ;
ಕಾತರಿಸಿದ ಕಿವಿ
ಗಳಿಗೆ ಅವಳ ಕಿವಿ
ಯ ಲೋಲಾಕು ,ಝಲ್ ಬಳೆ ,ಗಲ ಗಲ
ಗೆಜ್ಜೆ ಇಷ್ಟುದ್ದ ಹೂ ಮುಡಿದು
ಬಂದಿದ್ದಳು ಆ ದಿನ ನೆ‌ನಪಿದೆ ಇನ್ನೂ ನನಗೆ ಹೀಗೆ;

ಏನೇನು ಕನಸಿ ತಡವರಿಸಿ ಬಡ ಬಡಿ
ಸುತ್ತಿರುವಾಗ ಬಿದ್ದ
ಮಳೆಗೆ ಬೀದಿ ಬೀದಿಯ ಚರಂಡಿ
ಮೋರಿ ತುಂಬಿ ಕೆರೆಗೆ ನುಗ್ಗಿ ಕೆರೆ
ತುಂಬಿ ಅಲ್ಲಿಂದ ನನ್ನ ಮನೆ ಹೊಸ್ತಿಲೂ
ದಾಟಿ ದ ಅಕಾಲ ನೆರೆ ;

ಅರೆ !
ಎಲ್ಲಿದ್ದೀಯೇ ಏ ಇವಳೆ ! ಮಳೆ.
ಹಾಳು ಮನೆಯ ಜೋಳ ಅಕ್ಕಿ ಕಾಳು ಹಾಳು
ಮಾಡೀತೆಂದು
ಎದ್ದೇಳುವುದರವೊಳಗೆ ನನ್ನ ಬಲಗಾಲು
ಚೊಂಬಿಗೆ ತಾಗಿ ನೀರು ಹಾಸಿಗೆ
ಮೈ ಮನ ಒದ್ದೆ ಯಾಗಿಸಿರಲು

ಎದ್ದು ಕಿಡಕಿ ತೆರೆದು ಹೊರಗೆ;
ಕಣ್ಣಾಡಿಸಿದರೆ ಅಲ್ಲೇನು ಮಣ್ಣು ! ಧೂಳು
ಆಕಾಶ ಇದ್ದ ಬಿದ್ದ ಮೋಡ ಜೋರಾಗಿ ಬೀಸಿದ
ಗಾಳಿಗೆ ಹಾರಿ ಮಣ್ಣ ದಾರಿಯ ಮೇಲೆ
ಅಡ್ಡಾದಿಡ್ಡಿ ಹಾಸಿದ ತರಗೆಲೆ
ಒಂದೆರೆಡು ಹುಣ್ಣು ಮೈ ಮಾವಿನ ಹಣ್ಣು.


-ಎಲ್ವಿ, ಬೆಂಗಳೂರು
—–