ಅನುದಿನ ಕವನ-೧೮೬೨, ಹಿರಿಯ ಕವಿ:ಸಿದ್ದರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಬದುಕು ಅರಿಯದೆ ಸವೆಯಿತು ಗರಿಯಿರದ ಹಕ್ಕಿಯಂತೆ
ಕನಸು ರಂಗಿರದೆ ಕರಗಿತು ಮಳೆಯಿರದ ಮೋಡದಂತೆ

ಗಂಟಲೊಣಗಿದ ಕೆರೆಯಲ್ಲಿ ಉಸಿರೆಳೆಯುತಿದೆ ಮೀನು
ಜೀವನವೆ ಕೊನೆಯಾಯಿತು ಒಲವಿರದ ಗೆಳತಿಯಂತೆ

ಗಾಳಿಗೊಡ್ಡಿದ ಒಣಮರವು ಚಣಗಳನೆದುರಿಸುತಿಹುದು
ಆಸೆಯೆ ಉರುಳಿಹೋಯಿತು ತಡೆಯಿರದ ಗಾಲಿಯಂತೆ

ಚೂರುಗಳಾದ ಕನ್ನಡಿ ಆಯುವವರಿಲ್ಲದೆ ಅನಾಥವಾಗಿದೆ
ಪ್ರೀತಿ ಹೀಗೇ ಚೂರಾಯಿತು ಸ್ಥಿರವಿರದ ನೀರ ಗುಳ್ಳೆಯಂತೆ

ಬೆಟ್ಟದ ಹಿಂದಿನ ರವಿಯು ಎಲ್ಲವನು ಅರಿತು ನಗುತಿಹನು
ದೀಪ ಕತ್ತಲಲಿ ಕರಗಿಹೋಯಿತು ತೈಲವಿರದ ಬತ್ತಿಯಂತೆ


-ಸಿದ್ಧರಾಮ ಕೂಡ್ಲಿಗಿ

Leave a Reply

Your email address will not be published. Required fields are marked *