ಅನುದಿನ‌ ಕವನ-೧೫೭೪, ಕವಿ: ಬಂಜಗೆರೆ ನಾಗೇಂದ್ರ, ಬಳ್ಳಾರಿ, ಕವನದ ಶೀರ್ಷಿಕೆ: ಸಲಹು ಸಲಹಿದ ಭೂಮಿಯ..

🍀🌺💐🌹ಎಲ್ಲರಿಗೂ ವಿಶ್ವ ಭೂ ದಿನಾಚರಣೆಯ ಶುಭಾಶಯಗಳು🍀🌺🍀💐🌹

ಸಲಹು ಸಲಹಿದ ಭೂಮಿಯ..

ನೋಡು ಬಾ ಭೂರಮೆಯ ಸಿಂಗಾರ..
ಹಾಸಿಹಳು ಹಸಿರ ಹಾಸಿಗೆ
ಮುಡಿದಿಹಳು ಸಪ್ತರಂಗಿನ ಸುಮಗಳ ಬಂದು ನೋಡು
ಭೂತಾಯ ಮಡಿಲು ಬರಿದಲ್ಲ ಜೀವಿಗಳಿಗೆ ಆಗಿಹಳು ಸರ್ವಸ್ವ.. ಸಲುಹುತಿಹಳು ಸಕಲಜೀವರಾಶಿಗಳ ..

ಧರೆಗಾಗಿ ಸಾವಿರ ಕಥಾನಕ ಗತಿಸಿದವು
ಧರೆಗಾಗಿ ದೊರೆಗಳು ಆಳಿದರು ರಾಜ್ಯವ ವಿಸ್ತರಿಸಿದರು ಕಾಶ್ಮೀರದಿಂ ಕನ್ಯಾಕುಮಾರಿವರೆಗೆ.
ಆದರೂ ಧರೆಯ ಮಣ್ಣು ಈ ದೊರೆಗಳಿಗೆ ಸೇರದೆ ದೊರೆಗಳೇ ಮಣ್ಣಿಗೆ ಸೇರಿದರು ಕೊನೆಗೆ..

ಭೂಮಿಗಾಗಿ ನಡೆದಿದೆ ದೇಶ ದೇಶಗಳ ಮಧ್ಯೆ ಕದನ
ಭೂಮಿಗಾಗಿ ಕೊಂದಿಹರು ಹೆತ್ತವರ ಪ್ರೀತಿಸಿದ ಬಂಧುಗಳ ಮರೆತು ಮೂರು ದಿನದ ಬದುಕಿಗೆ..

ಬೇಟೆಯಾಡಿ ಬಡಿದು ತಿಂದರು ಖಗ- ಮೃಗಗಳ..ಭಸ್ಮ ಮಾಡಿದರು ಅಳಿದುಳಿದ ಗಿಡಮರಗಳ
ಖನಿಜದ ಖಜಾನೆಗೆ ಹಾಕಿದರು ಕನ್ನ..
ತೆಗೆದರು ಗ್ಯಾಸ್ ಪೆಟ್ರೋಲ್ ಚಿನ್ನ. ಅದೆಷ್ಟು ದಿನ ಬರಬಹುದು ಇನ್ನಾ.??

ಅಂದು ಬೀಜ ಬಿತ್ತಿ ಹೊನ್ನಬೆಳೆ ಬೆಳೆದರು ನಮ್ಮ ಅಜ್ಜ ಮುತ್ತಾತ..ಅನ್ನವ ನೀಡಿದ ಭೂಮಿಗೆ ದೈವಭಕ್ತಿಯ ಮೆರೆದರು..
ಇಂದು ಅನ್ನವ ಬೆಳೆವ ಮಣ್ಣಿನಲಿ ಯೋಜಿಸಿಹರು ಪ್ರಿಂಟ್ ಹಾಕಲು ನೋಟು.!
ಆದರೆ ಹೊಟ್ಟೆಗೆ ಏನು ತಿನ್ನಬೇಕಾಗುವುದೇನೋ ??

ಜೀವ ಜಲ ಇರುವುದು ಇಲ್ಲೆ ಮಂಗಳ ಚಂದಿರನಂತೆ ಬರಡುಗಲ್ಲಲ್ಲ ಈ ಭೂಮಿ
ನಿನ್ನ ಚಟ-ವಟಿಕೆಗೆ ಕಾವಲಿ ಕಾದಂತೆ ಕಾದಿಹುದು ಈ ನೆಲ
ತಾಪಕ್ಕೆ ನಿರ್ಗಲ್ಲು ಜಾರುತಿಹದು
ಸಾಗರ ಸರಿಯುತಿಹುದು ಕಾಪಾಡು ಓ ಮನುಜ ಈ ಭೂಮಿಯ ನಮ್ಮ ಮಕ್ಕಳೂ ಮೊಮ್ಮಕ್ಕಳು ನೋಡಲಿ ಓಡಾಡಲಿ ಒಂದು ದಿನ ಇರುವುದೊಂದು ಭೂಮಿಯಲಿ..

✍️-ನಾಗೇಂದ್ರ ಬಂಜಗೆರೆ, ಬಳ್ಳಾರಿ