ದಾರಿ ತೋರಿವೆ
ನಾಲಗೆ ನೀರೂರುವುದು ಈಗಲೂ
ರುಚಿ ಮೊಗ್ಗುಗಳು ಬಡ್ಡಾಗಿಲ್ಲ
ಗಂಟಲೊತ್ತಿಕೊಂಡು ಬರುವನಕ
ಉಂಡರೂ ಹಸಿವೆ
ಒಹ್! ಜೀವಿಸಲು ಕಾರಣವಿದೆ!
ಕಸಿವಿಸಿ ಸುಕ್ಕಾದರೆ ಬಟ್ಟೆ ಬರೆ
ಹೊಸದನ್ನೇ ಉಡುವೆ ತೊಡುವೆ
ಮುಕ್ಕಾಗದ ಮೋಹಕ ನಗೆ ಧರಿಸಿ
ಭರಿಸುವೆ ದು:ಖ ದುಮ್ಮಾನ
ಒಹ್! ಜೀವಿಸಲು ಕಾರಣವಿದೆ!
ಕೂತಲ್ಲಿಯೇ ಆಕಳಿಕೆ ತೂಕಡಿಕೆ
ಕನಸು ಕಾಮನಬಿಲ್ಲನೊದ್ದು
ಬರುವ ಸವಿ ನಿದ್ದೆ, ದಣಿವಾರಿ
ಮೈಮುರಿದು ಹುರುಪುಗೊಳ್ಳುವೆ
ಒಹ್! ಜೀವಿಸಲು ಕಾರಣವಿದೆ!
ಬೀಸಿ ಗಾಳಿ ಎಳೆದು ತಂದಿದೆ
ಕೆಂಡ ಸಂಪಿಗೆಯ ಗಮ
ದುಂಬಿ ಝೇಂಕರಿಸಿರಲು
ತಲೆದೂಗಿ ಬಾಗಿದೆ
ಒಹ್! ಜೀವಿಸಲು ಕಾರಣವಿದೆ!
ಕಿತ್ತಿಡುವೆ ಹೆಜ್ಜೆ ವಾಲಿದರೆ ಸಾವರಿಸಿ
ನಿಂತು ನೋಡುವೆ ತಿರುಗಿ ಮರುಗಿ
ಮುನ್ನಡೆವೆ, ಮಿನುಗಿ ತಾರಾಬಳಗ
ಸುರಿದು ಬೆಳದಿಂಗಳು ದಾರಿ ತೋರಿವೆ….
-ಸವಿತಾ ನಾಗಭೂಷಣ, ಶಿವಮೊಗ್ಗ
—–