ಅನುದಿನ ಕವನ-೧೬೯೬, ಕವಿ: ಬಸೂ, ಧಾರವಾಡ, ಕವನದ ಶೀರ್ಷಿಕೆ: ಸಮಯ

ಸಮಯ

ಕೊನೆಗೂ ಗೆಳೆತನವ ಸಾಧಿಸಿದೆ
ಮತ್ತು ಪ್ರೀತಿಸಿದೆ

ನಾನು ಬರೆಯದಿರುವ ಕವನಗಳ ಜತೆಗೆ
ನನ್ನ ಹತ್ತಿರಕೆ ಬರದ ಕನಸುಗಳ ಜತೆಗೆ
ನನ್ನೊಳಗಿನ ಖಾಲಿ ಜಾಗಗಳ ಜತೆಗೆ
ಮುನ್ಸೂಚನೆ ಕೊಡದೆ ಬದಲಾಗುವ ಮನ್ಸೂನಗಳ ಜತೆಗೆ

ಮತ್ತು ಬದುಕನ್ನು ಪ್ರೀತಿಸಿದರೂ ಬೆಳೆವ ಏಕಾಂತಗಳ ಜತೆಗೆ

ಯಾವುದೋ ಕಣ್ಣಿಂದ ಜಾರಿದ ಒಂದು ಹನಿ ಮಣ್ಣಿಗೆ ತಾಗದ ಹಾಗೆ ಅಂಗೈಯಲ್ಲಿ ಹಿಡಿದಿರುವೆ

ನನ್ನದೇ ಅಂಗೈಯಲ್ಲಿ ಆ ಹನಿ ಆರದೆ ಉಳಿವ ಸಮಯವೆಷ್ಟು?
ಆರದ ಹನಿಯ ಜತೆ ಗೆಳೆತನವ ಸಾಧಿಸಲು ಉಳಿದಿರುವ ಸಮಯವೆಷ್ಟು?

-ಬಸೂ, ಧಾರವಾಡ