ಸಾವಿನ ಕನಸು
ಕೋಣೆಯ ಒಳಗೆ
ಮೈಗಂಟಿ ಸುಡುವ ಜ್ವರ
ಕಿಟಕಿಯ ಪರದೆ ಸರಿಸಿದರೆ
ಸಣ್ಣಗೆ ಸುರಿವ ಮಳೆ ಹೊರಗೆ
ಹಿತವಾದ ನರಳಿಕೆಯೊಂದಿಗೆ ತುಂತುರು ಹನಿಗಳ ಜೋಗುಳಕೆ
ತಲೆದೂಗಿ
ಹಾಗೆ ಅಂಗಾತವಾದವನ ಕಣ್ಣಲ್ಲಿ
ಸಾವಿನ ನವಿಲು ಸಾವಿರ ಕಣ್ಣುಗಳ ಗರಿಗೆದರಿ
ಎದೆಯ ಮೇಲೆ ಕುಣಿದಂತೆ
ಸಾವಿನ ಕನಸ ಕಂಡೆ!
ಷೇಕ್ಸಪಿಯರ್ ವರ್ಣಿಸಿದಂತೆ,
ಟಾಗೋರರು ವ್ಯಾಖ್ಯಾನಿಸಿದಂತೆ,
ಟಾಲ್ ಸ್ಟಾಯ್ ಧ್ಯಾನಿಸಿದಂತೆ
ಈ ಸಾವು ಎಂಬುವುದು ಅದೆಷ್ಟು ನಿಗೂಢ
ಅಷ್ಟೇ ರೋಮಾಂಚಿತ
ಹುಟ್ಟಿನೊಂದಿಗೆ ಕೂಡಿಯೇ
ಹುಟ್ಟಿದ ಸಾವು
ಬದುಕಿನ ಕಿರು ಬೆರಳ ಹಿಡಿದು
ನೆರಳಿನಂತೆ ಮೌನವಾಗಿ
ಹೆಜ್ಜೆಗಳ ಮಿಡಿವಂತೆ ಅದು
ಲೇಬನಾನಿನ ದಾರ್ಶನಿಕ
ಖಲಿಲ್ ಗಿಬ್ರಾನ್ ಹೇಳುತ್ತಾನೆ
“ಮನುಷ್ಯ ಊಟಕ್ಕೆ ಕುಳಿತಾಗ
ಸಾವು, ಅವನ ಪಕ್ಕದಲ್ಲಿ
ಕಾಲು ಚಾಚಿಕೊಂಡು
ಮಲಗಿರುವುದಂತೆ”
ಎಷ್ಟು ವಿಚಿತ್ರ ಇದೆಲ್ಲಾ…
ಇದ್ದು ಇಲ್ಲದಂತೆ ಬದುಕುವ ಸೂಫಿ ತತ್ವದಂತೆ
ಸಾವಿನ ಮೊದಲು ಸಾವಾದಂತೆ
ಲೋಕದ ಬಟ್ಟಲಲಿ
ಬದುಕಿನ ನಸೀಬಿನ ಶರಾಬು ಬತ್ತಿ
ಶೂನ್ಯವಾಗಿ ತುಂಬಿಕೊಳ್ಳುವ ಸಾವು
ಗೆದ್ದಲು ಕಟ್ಟಿದ ಹುತ್ತದಲ್ಲಿ
ಸೇರಿಕೊಂಡಂತೆ ಹಾವು
ಹುಟ್ಟಿದ ಮನುಷ್ಯನಿಲ್ಲಿ
ಅನುಭವಗಳ ಹೊಸೆದುಕೊಂಡು ಹತ್ತಿಯ ಬತ್ತಿಯಾಗಿ
ನೋವಿನ ಬೆಂಕಿಯ ಹೂವನ್ನು ಮುಡಿದು
ನಗೆಯ ಬೆಳಕು ಚೆಲ್ಲಬೇಕು
ಆ ಸಾವೆಂಬ ಆಗಂತುಕ ವಿಧಿ
ಗಾಳಿಯ ಕುದುರೆ ಏರಿ ಬರಬಹುದು ಎಂದಾದರು
ಸದಾ ಸಿದ್ಧವಿರಬೇಕು
ಬದುಕೆಂಬ ಬಟ್ಟಲು ಖಾಲಿಯಾಗಬಹುದು ಮುಂದು
ಈ ಕ್ಷಣಗಳನ್ನು ಇಂದೇ ಬದುಕಿಬಿಡಬೇಕು.
◼️ ಜಬೀವುಲ್ಲಾ ಎಂ. ಅಸದ್, ಹಿರಿಯೂರು