ಅನುದಿನ ಕವನ-೧೭೨೩, ಕವಿ: ಎ ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ:ಅನುಸಂಧಾನ

“ಇದು ಜೀವ-ಜೀವನದ ಅನುಸಂಧಾನದ ನಿತ್ಯ ಸತ್ಯ ಕವಿತೆ. ಬದುಕು-ಬೆಳಕಿನ ಆತ್ಮಾನುಸಂಧಾನದ ಚಿರ ಚಿರಂತನ ಭಾವಗೀತೆ. ’ತಲ್ಲಣಿಸದಿರು ತಾಳು ಮನವೆ’, ’ಚಿಂತಿಯಾಕ ಮಾಡತಿ ಚಿನ್ಮಯನಿದ್ದಾನೆ’, ’ಬಂದದ್ದೆಲ್ಲ ಬರಲಿ ಭಗವಂತನ ದಯೆಯೊಂದಿರಲಿ’ ಎಂಬ ಅಮೃತನುಡಿಗಳ ಸತ್ಯದರ್ಶನವೆ ಈ ಕವಿತೆ. ದಿವ್ಯಬೆಳಕಿನ ಭಾವ-ಭಾಷ್ಯಗಳ ಅಕ್ಷರಪ್ರಣತೆ. ಏನಂತೀರಾ.?” – ಪ್ರೀತಿಯಿಂದ -ಎ.ಎನ್.ರಮೇಶ್, ಗುಬ್ಬಿ.

ಅನುಸಂಧಾನ.!

ಪ್ರಾಮಾಣಿಕ ಪ್ರಯತ್ನಗಳ ಮಾಡುತ
ಗೆಳೆಯ ಇದ್ದು ಬಿಡಬೇಕು ನಿಶ್ಚಿಂತ
ವೃಥಾ ಫಲಾಫಲಗಳ ಚಿಂತೆಯೇಕೆ.?
ಅದೆಲ್ಲವು ಆ ನಿಯಾಮಕನ ಕಾಣಿಕೆ.!

ಏಕೆ ಯೋಚನೆ ಯಾತನೆ ಚಡಪಡಿಕೆ
ಗೊಂದಲ ಹಂಬಲಗಳ ಒಡಂಬಡಿಕೆ
ಬೇಡದ ಭಾರದ ನಿರೀಕ್ಷೆ ಹಪಹಪಿಕೆ
ಕಂಬನಿಗರೆದು ಕೊರಗುವ ಕನವರಿಕೆ.!

ನಮ್ಮ ಪಾಲಿನ ಪ್ರತಿ ಕಾಳಿನ ಮೇಲು
ಬರೆದಿಹನು ಭಗವಂತ ನಮ್ಮ ಹೆಸರು
ನಮ್ಮ ಭಾಗಕೆ ದಕ್ಕಬೇಕಾದ್ದರ ಮೇಲೆ
ಒತ್ತಿಹನು ನಮ್ಮ ನಾಮದ ಮೊಹರು.!

ಹನಿನೀರು, ಹಿಡಿಪ್ರೀತಿ ಪ್ರತಿಯೊಂದು
ಅವನ ಅನುಗ್ರಹವಿದ್ದರಷ್ಟೆ ಲಭ್ಯವಿಲ್ಲಿ
ಪಡೆವ ಕೊಡುವ ಪ್ರತಿಕಣ ಪ್ರತಿಬಿಂದು
ಅವನ ಅಣತಿಯಿದ್ದರಷ್ಟೆ ಸಾಧ್ಯವಿಲ್ಲಿ.!

ನಮ್ಮದೇನಿದ್ದರೂ ಬರಿದೆ ಹಾಹಾಕಾರ
ಕ್ಷಣಕ್ಷಣವು ಇಲ್ಲಿ ಅವನದೆ ಶಿಷ್ಟಾಚಾರ
ಸುಖಾಸುಮ್ಮನೇಕೆ ಅಹಂಕಾರ ಠೇಂಕಾರ
ಮೀರಲಾರೆವೆಂದು ಅವನ ಲೆಕ್ಕಾಚಾರ.!

ನಿತ್ಯವು ಕೇವಲ ನಡಿಗೆಯಷ್ಟೆ ನಮದು
ದಿಕ್ಕು ದೆಸೆ ಗುರಿ ಗಮ್ಯ ಸಕಲ ಅವನದು
ಅಕ್ಷರಶಃ ಚದುರಂಗ ಕಾಯಿಗಳು ನಾವು
ಅವನಿಂದಲೆ ನಡೆ ತಡೆ ಆಟ ಮಾಟವು.!

ಅವನೆ ಕಾಲಾನುಕಾಲದ ಹಿಂದಿನ ಸೂತ್ರ
ಅವನ ಬರಹದಂತೆ ಆಡುತಿಹುದು ಪಾತ್ರ
ಕಾಯ ಕಾಯಕಗಳೆಲ್ಲವೂ ಪೂರ್ವನಿಶ್ಚಿತ
ಶರಣಾಗು ದಡಮುಟ್ಟಿಸುತ್ತಾನೆ ವಿಧಾತ.!


-ಎ ಎನ್ ರಮೇಶ್, ಗುಬ್ಬಿ.