
ಯಾರೋ ಬರೆದ ಚಿತ್ರದಲ್ಲಿ
ನಿನ್ನ ಪಾತ್ರವಾಗಿ ಹುಡುಕುವೇ …
ಯಾರೋ ಕೆತ್ತಿದ ಶಿಲ್ಪದಲ್ಲಿ
ನಿನ್ನ ರೂಪ ಕಾಣುವೇ…
ಯಾರೋ ಬರೆದ ಕಾವ್ಯದಲ್ಲಿ
ನಿನ್ನ ಹೃದಯ ಹುಡುಕಿ ಅಲೆಯುವೇ…
ಯಾರೋ ಹಾಡಿದ ಹಾಡಿನಲ್ಲಿ
ನಿನ್ನ ಭಾವವಾಗಿ ಕಾಣುವೇ …
ಇನ್ಯಾರದೋ ಸ್ಪರ್ಶದಲ್ಲಿ
ನಿನ್ನ ತಾಯ್ತನದ ಸುಖವ ಉಣುವೇ …
ಯಾರೋ ನನ್ನ ಹಣೆಗೆ ಕೆನ್ನೆಗಿಟ್ಟ ಕರಿ ದೃಷ್ಟಿ ಬೊಟ್ಟಿನಲಿ
ನಿನ್ನ ಪ್ರೀತಿ ಕಾಳಜಿ ಹಾರೈಕೆಗಳ ನೆನೆಯುವೇ…
ಯಾರೋ ಉಣಬಡಿಸಿದ ಊಟದಲ್ಲಿ
ನಿನ್ನ ಕೈ ರುಚಿಯ ತೃಪ್ತಿಯನು ಅನುಭವಿಸುತಿರುವೆ …
ಯಾರೋ ನೆಡೆದ ಹಾದಿಯಲ್ಲಿ
ನಿನ್ನ ಹೆಜ್ಜೆ ಹುಡುಕಿ ಅಲೆಯುವೆ …
ನೀ ನೆಡೆದ ಹಾದಿಯು
ಶ್ರೀಗಂಧದ ಮರ ನೆಡೆದಂತೆ
ನಿನ್ನೆದೆಯ ಕಂಪು…
ಮಳೆ ಬಂದು ನೆಲ ತಂಪಾದ ಹಾಗೆ
ನಿನ್ನಯಾ ನೆನಪಿನ ಮಳೆಯ ತಂಪು
ನನ್ನಯಾ ಮೈ ಮನಕೆ
ಸರೋವದೊಳಗಿನ ಹಂಸ ಸರೋವರವ ಚಂದವಾಗಿಸಿದಂತೆ
ನೀನೆ ಬೆಳಗು ನನ್ನ ಬಾಳಿಗೆ…
ಭೂಮಿ ಆಕಾಶಗಳ ಒಂದು ಮಾಡಿದಂತೆ
ಕಾರ್ಮೋಡ ಗುಡುಗು ಮಿಂಚು ಸುರಿವ ಮಳೆ ನೀನು
ನೆಲದ ಪೈರು ನಾನು
ಪೈರಿನಾಕಾಶದ ಹೂವು ನೀನು
ಚಿಟ್ಟೆ ದುಂಬಿ ಪತಂಗ ಜೇನ್ನೋಣಗಳ ಕರೆಯುವೆ ಸೃಷ್ಟಿಯ ಚೆಲುವು ಹಡೆವ ನಿನ್ನ ಬಳಿಗೆ
ನನ್ನಯ ಮುಂದಿನ ಒಳಿತಿನ ಬಾಳಿಗೆ…
ನಾನು ಬಣ್ಣಬಣ್ಣದ ಗಾಳಿಪಟವಾದರೆ,
ನಿನ್ನೆದೆಯೇ ಸೂತ್ರದಾರ ಪಟವದಕೆ
ಆಕಾಶಕ್ಕೆರಿ ಹಾರಿ ಹಾರಿ
ಗಾಳಿ ತರಂಗದಲಿ ತಂಬೂರಿ ಮೀಟಿದಂತೆ ನೀರಿನಲೆಯಲಿ ಮೀನು ಈಜಿದಂತೆ
ಮೋಡ ಮೀರಿ ಬಾನಿನಲ್ಲಿ ಗರುಡ ಹಾರಿದಂತೆ…
ಇಬ್ಬನಿಯೊಳು ಹಿಮಾಲಯವಿರುವಂತೆ
ನೀರ ಹನಿಯೊಳು ತೇಲುವ ಆಕಾಶ
ಇರುವೆಯ ಕಣ್ಣೊಳು ಆನೆ ಕಾಣಬಹುದು
ಆನೆಯ ಕಣ್ಣೊಳು ಇರುವೆಯ ಕಾಣಬಹುದೇ ?!

ಅವ್ವ,
ಯವ್ವಾ
ನಿನ್ನ ಹೋಲಿಸಲು ನನಗೆ ಪದಗಳೇ ಸಿಗುತ್ತಿಲ್ಲ
ನಿನಗೆ ನೀನೆ ಸರಿ ಸಾಟಿ ಕಣವ್ವಾ
ನಿನ್ನ ಚೆಲುವ ಬೆರಗಿನಾ ಬೆಳಗನು
ಕಂಡೆನವ್ವ ಕಂಡೆ…
ಕಂಡೆನವ್ವಾ. ಕಂಡೆ…

– ನಾಗತಿಹಳ್ಳಿರಮೇಶ, ಬೆಂಗಳೂರು
—–
