ಕತ್ತಲೆಗೆಂದೂ ಕತ್ತಲಿಲ್ಲ!
ಅಂಜದಿರು, ಕತ್ತಲೆಗೆಂದೂ ಕತ್ತಲಿಲ್ಲ
ಬೆಳಕಿಗೂ ಬೆಳಕಿದೆಯೋ, ಅಂಗಾತ ಮಲಗಿ
ಆಕಾಶ ಅಪ್ಪಿದರೆ ನಕ್ಷತ್ರಗಳ ದೀಪಾವಳಿ!
ಜೀವ ಜೊತೆಯಾಗುವುದು, ಸಿಡಿದು
ದೂರಾಗುವುದು ಸೂರ್ಯನಿಗೂ ತಪ್ಪಲಿಲ್ಲ
ಅಪ್ಪದೇ ಅಪ್ಪಿಕೊಳ್ಳುವ ಒಗಟ ಬಿಡಿಸಬೇಕಿಲ್ಲ
ಸುತ್ತುವುದು, ಬೆನ್ನ ಹತ್ತುವುದು
ಬೆಳಕ ಪಡೆಯುವುದು, ನೀಡುವುದು
ಕತ್ತಲಲ್ಲಿ ಕರಗುವುದು ಸಹಜ ಧರ್ಮವೇ!
ಕತ್ತಲು ಕರಗಿ, ಬೆಳಕು ಬೆಳೆಯುವುದಿಲ್ಲ
ಒಂದರೊಳಗೊಂದು ಹುರಿಯಂತೆ ಹೆಣೆದು
ಕಾಣುತ್ತ, ಕಾಣದಾಗುವ ಕಣ್ಕಟ್ಟು ಇದು!
ಇಲ್ಲಿ ಯಾವುದೂ ಮರುಕಳಿಸುವುದಿಲ್ಲ
ಪ್ರತಿ ಮುಂಜಾನೆಗೂ ಅದರದೇ ಬಣ್ಣ
ಸಂಜೆಗತ್ತಲಿಗೆ ಸಿದ್ಧಪಡಿಸಿಕೋ ಹಣತೆಗಣ್ಣ!

-ಎಂ ಆರ್ ಕಮಲ, ಬೆಂಗಳೂರು
—–
