ನಿನ್ನ ನೆನಪೇ ಅಮರ ನಮ್ಮ ಪುನೀತ

ಬಣ್ಣದಾ ಬದುಕಲ್ಲಿ ಕಾಲಿಟ್ಟ ಗಳಿಗೆಯದು
ಬಣ್ಣನೆಗೂ ಸಿಗದಿಂದು ಕೊನೆಯ ದಿವಸದಲಿ
ಅಣ್ಣಂದಿರಿರುವಾಗ ತಮ್ಮನಿಗೆ ಸೂಳಾಯ್ತೆ
ಕಣ್ಣ ಮುಂದಿನ ಬೊಂಬೆ ಇಲ್ಲವಾಯ್ತೆ||
ಅಕ್ಕರೆಯ ಮಗನಾಗಿ ಸಕ್ಕರೆಯ ಸವಿ ನೀಡಿ
ಕಕ್ಕುಲತೆಯಿಂದೆಲ್ಲ ಮಾತನಾಡುತಲಿ
ಬಿಕ್ಕು ತಾ ಬರುವಂತೆ ಮಾಡಿ ಹೋದೆಯ ಅಪ್ಪು
ದಿಕ್ಕೆಟ್ಟ ಅಭಿಮಾನಿಗಳದೇನು ತಪ್ಪು||
ಪ್ರೇಮದಾ ಕಾಣಿಕೆಯೊ ಭಕ್ತ ಪ್ರಹ್ಲಾದನೋ
ಭೂಮದಲಿ ಕಂಡೆ ನಾ ಬೆಟ್ಟದಾ ಹೂವು
ರಾಮನಂತೆಯೆ ಬದುಕಿ ಭೀಮನಂತೆಯೆ ಬಾಳಿ
ಶಾಮನಂತೆಯೆ ಎಲ್ಲಿ ಕಾಣದಾದೆ||
ಕುಡಿದ ಹಾಲದು ತುಟಿಯ ಮೇಲಿನ್ನೂ ಮಾಸದಿಹ
ಮಿಡಿದ ನಗುವದು ಮೊಗದಿ ಬಾಡಿಲ್ಲವಿನ್ನೂ
ಕುಡಿಯ ಕಡೆ ಬಾಡಿತದು ಏಕೊ ಅರಿವಾಗದಿದೆ
ಕಡೆಯ ಮಗ ಮೊದಲಾದ ಸಾವ ಮನೆಗೆ||
ಎಷ್ಟೊಂದು ಶಾಲೆಗಳು ವೃದ್ಧಾಶ್ರಮಗಳಿವೆಯೊ
ಅಷ್ಟೇ ಅನಾಥರಿಗೆ ಬಡವರಿಗೆ ದಾನಿ
ಎಷ್ಟು ಮಾಡಿದರೇನು ಅಷ್ಟು ಪುಣ್ಯದ ಜೊತೆಗೆ
ಇಷ್ಟೇಕೆ ಬೇಗ ತೆರಳಿದೆಯೊ ನೀನು||
ರಾಜಣ್ಣನಿದ್ದಾಗ ಬೇರೇನೂ ಬೇಕಿಲ್ಲ
ರಾಜನಳಿದಂದು ನೀ ಯುವರತ್ನವಾದೆ
ರಾಜನಂತೆಯೆ ಬದುಕಿ ರಾಜಿಸಿದೆ ಕೀರ್ತಿಯಲಿ
ರಾಜನಿಗು ಬರಬಹುದೆ ಬೇಗ ಸಾವು||
ನಿನ್ನ ನೆನಪಲಿ ಸಿನಿಮ ಕತೆಗಳನು ಹೇಳುತಿವೆ
ನಿನ್ನ ಅಗಲಿಕೆಯಲ್ಲಿ ಪಾತ್ರಗಳು ಉಳಿದು
ನಿನ್ನ ವ್ಯಕ್ತಿತ್ವವದು ಜನರಮನದಲಿ ತಾನು
ಚಿನ್ನವಾಗುಳಿಯುವುದು ಅಪ್ಪಿನಿಂದು||
ಹೋಗಿ ಬಾ ಲೋಹಿತನೆ ಹರಿಶ್ಚಂದ್ರಕಥೆಯಲಿ
ಸಾಗಿ ಬಂದಂತೆ ಜೀವವದು ಬರಬಹುದೆ
ಕೂಗಿ ಕರೆದರು ನೀನು ಬಾರದಿಹ ಲೋಕಕ್ಕೆ
ಸಾಗಿದೆ ಪುನೀತನೊಲು ಪುಣ್ಯವಾಗಿ||
-ತನಾಶಿ(ಶಿವಕುಮಾರ್ ಟಿಎನ್), ಬೆಳಗಾವಿ
(ಡಾ. ಪುನೀತ್ ರಾಜ್ ಕುಮಾರ್ ನೆನಪಿನಲ್ಲಿ)
