ಗಜಲ್
ಒಡೆದು ಹೋದ ಎದೆಯ ದನಿಯ ನೀನಲ್ಲದೆ ಯಾರು ಕೇಳಬೇಕು
ಹೇಳಲಾಗದೆ ಉಳಿದಿರುವ ಕತೆಯ ನೀನಲ್ಲದೆ ಯಾರು ಕೇಳಬೇಕು
ರಂಗಿನ ಕನಸುಗಳಿಗೂ ಬೆಲೆ ಕಟ್ಟಲು ಕಾದಿರುವ ದಿನಮಾನಗಳಿವು
ಕಂಗಳಲೆ ಇಂಗಿದ ಒಲವ ಹನಿಯ ನೀನಲ್ಲದೆ ಯಾರು ಕೇಳಬೇಕು
ಎಂತಹ ಸೊಗಸಿತ್ತು ಜೊತೆಯಾಗಿ ನಲಿದ ಆ ಬಂಗಾರದ ದಿನಗಳು
ನೆನಪಿನ ನೋವಿನ ಮೆರವಣಿಗೆಯ ನೀನಲ್ಲದೆ ಯಾರು ಕೇಳಬೇಕು
ಮರೆವಿಗೆ ಸವಾಲೆನುವಂತೆ ನಿಂತಿವೆ ಮಧುರ ನೆನಪಿನ ಶೂಲಗಳು
ರೋದಿಸುವ ದಿಂಬಿನ ಯಾತನೆಯ ನೀನಲ್ಲದೆ ಯಾರು ಕೇಳಬೇಕು
ಒಲವಿನ ಮಳೆಮೋಡವ ಕಾಣದೆ ದಣಿದಿದೆ ಸಿದ್ಧನ ಮನದ ನವಿಲು
ಎದೆಯಲಿ ಸುರಿವ ಕೆಂಡದ ಮಳೆಯ ನೀನಲ್ಲದೆ ಯಾರು ಕೇಳಬೇಕು

-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.
