
ಬಳ್ಳಾರಿ, ಡಿ.7: ವಿದ್ಯಾರ್ಥಿಗಳಿಗೆ ಜ್ಞಾನ, ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಕಲಿಸುವ ಅಧ್ಯಾಪಕ ವೃತ್ತಿ ಅತ್ಯಂತ ಪವಿತ್ರವಾದದ್ದು ಎಂದು ಬಳ್ಳಾರಿಯ ವಿಎಸ್ ಕೆ ವಿವಿಯ ನಿಕಟಪೂರ್ವ ಕುಲಪತಿ ಡಾ. ಕೆ ಎಂ ಮೇತ್ರಿ ಅವರು ಹೇಳಿದರು.
ನಗರದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ ತಾಲೂಕಿನ ಎತ್ತಿನ ಬೂದಿಹಾಳ್ ಗ್ರಾಮದ ಶ್ರೀ ಕಟ್ಟೆಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ
ಪೌರತ್ವ ತರಬೇತಿ ಶಿಬಿರ-2025ರ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ‘ರಾಷ್ಟ್ರೀಯತೆ, ಸಾಮಾಜಿಕ ಬದ್ಧತೆ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಅಧ್ಯಾಪಕರು ಸಮಾಜದ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕುತ್ತಾರೆ. ತಂದೆ-ತಾಯಿ ಜನ್ಮ ನೀಡಿದರೆ ಗುರು ನೀಡುವ ಸಂಸ್ಕಾರವು ಮಗುವನ್ನು ಉತ್ತಮ ಪ್ರಜೆಯನ್ನಾಗಿ ಮಾಡುತ್ತದೆ ಎಂದು ತಮ್ಮ ಬಾಲ್ಯದ ದಿನಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿದ ಬಗ್ಗೆ ಸ್ಮರಿಸಿದರು.
ಅಧ್ಯಾಪಕ ವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಭಾವನೆ ಮುಖ್ಯ ಎಂದು ಭಾವಿ ಶಿಕ್ಷಕರಿಗೆ ಮನದಟ್ಟು ಮಾಡಿದರು.
ಅತ್ಯಂತ ಬದ್ದತೆಯನ್ನು ಹೊಂದಿರುವ ಶಿಕ್ಷಕ ವೃತ್ತಿ ಪುಣ್ಯದ ಕಾರ್ಯವೂ ಹೌದು ಎಂದರು.
ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣದ ಜತೆ ಮಕ್ಕಳಿಗೆ ಕೌಶಲ್ಯಗಳನ್ನು ಕಲಿಸುವ ಅಗತ್ಯ ಇದೆ ಎಂದರು.

ಮುಖ್ಯ ಅತಿಥಿ ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕ ಅಧ್ಯಕ್ಷ ಸಿ. ಮಂಜುನಾಥ ಅವರು ಮಾತನಾಡಿ, ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ರಚನೆಯ ಸಂವಿಧಾನದ ಆಶಯದಂತೆ ಯುವಜನತೆ, ವಿದ್ಯಾರ್ಥಿಗಳು ರಾಷ್ಟ್ರೀಯತೆಯನ್ನು ಅಳವಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕು ಎಂದರು.
ಸಾಮಾಜಿಕ ಬದ್ಧತೆಯನ್ನು ಅಳವಡಿಸಿಕೊಂಡವರು ಜನಮುಖಿಯಾಗಿ ಕಾರ್ಯನಿರ್ವಹಿಸುವ ಮೂಲಕ ತಾವು ಬೆಳೆಯುತ್ತಾರೆ ದೇಶದ ಪ್ರಗತಿಗೂ ಶ್ರಮಿಸುತ್ತಾರೆ ಎಂದು ಅಭಿಪ್ರಾಯ ಪಟ್ಟರು.
ಜಾನಪದ ಕಲಾವಿದರೂ ಆಗಿರುವ ಕಾಲೇಜಿನ ಪ್ರಾಚಾರ್ಯ ಡಾ. ಅಶ್ವರಾಮು ಅವರು ಉತ್ತಮಸಂಘಟಕರಾಗಿದ್ದು ಪ್ರಶಿಕ್ಷಣಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಸಿ.ಮಂಜುನಾಥ್ ಮತ್ತು ಡಾ. ಅಶ್ವರಾಮು ಅವರನ್ನು ಕಾಲೇಜ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ವಿಶೇಷವೆಂದರೆ ಡಾ. ಕೆ ಎಂ ಮೇತ್ರಿ ಅವರು ಸನ್ಮಾನ ಸ್ವೀಕರಿಸಿದೇ ತಮ್ಮ ಪ್ರೀತಿಯ ವಿದ್ಯಾರ್ಥಿ ಮಿತ್ರ ಡಾ.ಅಶ್ವರಾಮು ಅವರಿಗೆ ಸ್ವತಃ ಪೇಟಾತೊಡಿಸಿ ಗೌರವಿಸಿದ್ದು ಕಂಡು ವೇದಿಕೆಯಲ್ಲಿದ್ದ ಪ್ರಾಧ್ಯಾಪಕರು, ಸಭಿಕರಾಗಿದ್ದ ಶಿಬಿರಾರ್ಥಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಗುರುಗಳ ಮಮತೆಗೆ ಡಾ. ರಾಮು ಅವರ ಕಣ್ಣುಗಳು ಆನಂದ ಭಾಷ್ಪ ಸುರಿಸಿದವು.

ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಅಶ್ವ ರಾಮು ಅವರು ಅತಿಥಿಗಳನ್ನು ಪರಿಚಯಿಸಿದರು.
ಶಿಬಿರಾರ್ಥಿ ಶಾರದಾ ಎಂ ನಿರೂಪಿಸಿದರು. ಶಿಬಿರಾಧಿಕಾರಿಗಳಾದ ಮಂಗಳ ಗೌರಿ, ಅಶ್ವಿನಿ ಎಸ್, ಅನುಷಾ ಎನ್, ಚಂದ್ರಿಕಾ ಎ ವೈ, ಬೀರಲಿಂಗ ಕೆ, ಚಂದ್ರಶೇಖರ್ ಎಸ್ ಎಮ್, ನೀಲಕಂಠ ಕೆ ನಿರ್ವಹಿಸಿದರು.

ಶಿಬಿರಾರ್ಥಿಗಳು ಶ್ರಮದಾನ ಸ್ವಚ್ಚತೆ, ಗುಂಪು ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮಸ್ಥರ ಗಮನ ಸೆಳೆದವು.
—–
