ಪರಿ-ಪೂರ್ಣತೆ
ಪರಿಪೂರ್ಣತೆ ಸೃಷ್ಟಿಯಾಗಿದ್ದೇ
ನಾವೆಲ್ಲಾ , ಅಪೂರ್ಣರೆನಿಸಲು
ನಾವೆಲ್ಲರೂ ಅಪೂರ್ಣರೆ ಅಲ್ಲವೇ?
ಮತ್ತೇಕೆ ಪರಿಪೂರ್ಣತೆಯ ಅಮಲು
ಪ್ರತಿ ದಿನ, ಕ್ಷಣದ ನಿಲ್ಲದ ಪ್ರಯತ್ನ
ಪರಿಪೂರ್ಣರೆನಿಸಿಕೊಳ್ಳುವ ತುಮುಲ
ಸದಾ ಹೊಸದನ್ನು ಅರಸುತ್ತಾ
ವಿಭಿನ್ನ , ವಿಶಿಷ್ಟರಾಗುವ ಹಂಬಲ..
ಬದುಕಿನ ನೂರು ಪ್ರಶ್ನೆಗಳಿಗೆ ಉತ್ತರಗಳ
ಹುಡುಕುತ್ತಾ, ನಾವೇ ಕಳೆದು ಹೋಗುತ್ತಾ
ನಮ್ಮಲ್ಲಿರುವ ಪುಟ್ಟ ಅಚ್ಚರಿಗಳನ್ನೂ
ಮರೆತೇ ಬಿಡುವೆವು ಪೈಪೋಟಿಗಿಳಿಯುತ್ತಾ
ಸದಾ ಎಲ್ಲದರಲ್ಲೂ ಸೈ ಎನಿಸಿಕೊಂಡು
ಧಾವಂತದಲ್ಲಿ ಬದುಕುವ ಬದಲು
ನಾವು, ನಾವೇ ಆಗಿರಲು ಸಾಧ್ಯವೇ?
ನಮ್ಮಸ್ಥಿತ್ವವೇ, ಕಳೆದುಹೋಗುವ ಮೊದಲು..
ಪರಿಪೂರ್ಣತೆಗಿಂತ ಮಿಗಿಲಾದದ್ದು
ಇದ್ದಂತೇ ನಮ್ಮನ್ನು ಸ್ವೀಕರಿಸುವ ಸಂತೃಪ್ತಿ
ಪುಟ್ಟ ನಗುವೊಂದ ಚಿಮ್ಮಿಸುತ್ತ ಇದ್ದರಾಯ್ತು
ಅಪೂರ್ಣ ಬದುಕಲ್ಲೂ , ಪೂರ್ಣತೆಯ ತೃಪ್ತಿ

-ರೂಪ ಗುರುರಾಜ್, ಬೆಂಗಳೂರು
—–
