ಅನುದಿನ ಕವನ-೧೮೧೨, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಸಮಾಧಿಯಾಗುವ ತನಕ…..

ಸಮಾಧಿಯಾಗುವ ತನಕ…..

ಅಲ್ಲಿ ಯುದ್ಧ ಶುರು ಆಯಿತೆ?
ಒಹ್! ಇಲ್ಲಿ ಮಾತುಕತೆ ಸಂಧಾನವೆ?
ಮುರಿದು ಬಿದ್ದು ಮತ್ತೆ ಯುದ್ಧವೆ?
ನಿಂತು ಯುದ್ಧ ಅಲ್ಲಿ ಕದನ ವಿರಾಮವೆ?

ಎಷ್ಟು ದಿನ?
ಅಷ್ಟು ದಿನ !
ಇಷ್ಟು ದಿನ….
ನಡೆಯುವುದು ನಡೆಯುತ್ತಲೇ
ಇರುವುದು ಯುದ್ಧ….
ಮುಗಿದಂತೆ ತೋರುವುದು
ಮುಗಿಯಲಾರದು….

ಬೆಂಕಿ ಉಗುಳಿ ಉಗುಳಿ
ಬಾಯಿಗೂ ಸಾಕಾಗಬಹುದು
ಬಾಣ ಬಿಟ್ಟು ಬಿಟ್ಟು ತೋಳು
ನೋಯಬಹುದು
ವಿಮಾನದಿಂದ ಜಿಗಿದು ಜಿಗಿದು
ಬಾಂಬುಗಳಿಗೂ
ಬೇಸರ ಮೂಡಬಹುದು

ಹೊಟ್ಟಿ ಹೋಗಿರುವ
ನಿನ್ನ ಪುಟ್ಟ ಕಣ್ಣು
ಸೊಟ್ಟಗಾಗಿರುವ ನಿನ್ನ ಪುಟ್ಟ ಕೈಕಾಲುಗಳು
ನೆಟ್ಟಗಾಗುವ ತನಕ
ಗಟ್ಟಿಯಾಗಿರುವ ನಿನ್ನ ಹೃದಯ
ಮೆತ್ತಗಾಗುವ ತನಕ
ಯುದ್ಧ ನಡೆಯುತ್ತಲೇ ಇರುವುದು

ಕಾಯಬೇಕು ಕಾಯಬೇಕು
ಅಯ್ಯೋ ಸಾಕು ಸಾಕು
ಎನಿಸುವ ತನಕ
ಛೇ ಬೇಡ ಎನಿಸುವ ತನಕ
ಸಹಿಸಬೇಕು ಸಹಿಸಬೇಕು
ಸಹನೆಯೂ ಸತ್ತು
ಸಮಾಧಿಯಾಗುವ ತನಕ…..


-ಸವಿತಾ ನಾಗಭೂಷಣ, ಶಿವಮೊಗ್ಗ