ಜನಪದ ನಮ್ಮ ಸಂಸ್ಕೃತಿಯ ಜೀವನಾಡಿ :ಡಾ. ಅಶ್ವ ರಾಮು

ಬಳ್ಳಾರಿ, ಜೂ. 5 : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಆಯೋಜಿಸಿರುವ ರಾಷ್ಟ್ರಿಯ ರಂಗಭೂಮಿ ಕಾರ್ಯಗಾರ–2026ರ ಐದನೇ ದಿನದ ಕಾರ್ಯಕ್ರಮದಲ್ಲಿ ಶುಕ್ರವಾರ “ಜನಪದ ರಂಗ” ವಿಷಯದ ಕುರಿತು ಸಂಶೋಧಕರು ಹಾಗೂ ಜನಪದ ಕಲಾವಿದರಾದ ಡಾ. ಅಶ್ವ ರಾಮು (ವಿ. ರಾಮಾಂಜಿನೇಯ) ಅವರು ವಿಶೇಷ ಉಪನ್ಯಾಸ ನೀಡಿದರು.

ಅವರು ಮಾತನಾಡಿ,  ಜನಪದ  ನಮ್ಮ ನಾಡಿನ ಸಂಸ್ಕೃತಿ, ಪರಂಪರೆ, ಜೀವನ ಮೌಲ್ಯಗಳು ಹಾಗೂ ಜನರ ಭಾವನೆಗಳನ್ನು ಪ್ರತಿಬಿಂಬಿಸುವ ಜೀವಂತ ಕಲಾರೂಪವಾಗಿದೆ ಎಂದು ತಿಳಿಸಿದರು.            ಜನಪದ ಸಾಹಿತ್ಯವು ಜನಸಾಮಾನ್ಯರ ಬದುಕಿನ ಅನುಭವಗಳಿಂದ ಹುಟ್ಟಿ ಮೌಖಿಕ ಪರಂಪರೆಯ ಮೂಲಕ ತಲೆಮಾರುಗಳಿಂದ ಹರಿದು ಬಂದಿದ್ದು, ಜನರ ನೋವು-ನಲಿವು, ಸಂಸ್ಕೃತಿ ಹಾಗೂ ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಜನಪದ ಗೀತೆಗಳು, ಗಾದೆಗಳು, ಒಗಟುಗಳು, ಜನಪದ ಕಥೆಗಳು ಹಾಗೂ ಬಯಲಾಟಗಳು ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳಾಗಿದ್ದು, ಇವು ಸಮಾಜದಲ್ಲಿ ನೈತಿಕ ಮೌಲ್ಯಗಳು, ಸಹಕಾರ ಮನೋಭಾವ ಹಾಗೂ ಸಾಂಸ್ಕೃತಿಕ ಅರಿವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ವಿವರಿಸಿದರು.
“ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ ಭೂತಾಯಿ…” ಎಂಬ ಜನಪದ ಗೀತೆಯನ್ನು ಉದಾಹರಿಸಿ, ಜನಪದರ ಬದುಕಿನಲ್ಲಿ ಭೂಮಾತೆಗೆ ಇರುವ ಮಹತ್ವವನ್ನು ವಿಶ್ಲೇಷಿಸಿದರು. ಜನಪದ ಗೀತೆಗಳು ಹಳ್ಳಿಗಾಡಿನ ಬದುಕಿನ ನೈಜ ಚಿತ್ರಣವನ್ನು ಪ್ರತಿಬಿಂಬಿಸುವ ಅನುಭಾವ ಕಾವ್ಯಗಳಾಗಿವೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯ ಜನಪದ ರಂಗಭೂಮಿಯ ವೈವಿಧ್ಯತೆಯನ್ನು ಪರಿಚಯಿಸಿದ  ಡಾ.ರಾಮು, ಬುಡ್ಗಜಂಗಮರ ಬರ್ರಕಥೆ, ಗಂಗಿಗೌರಿ ಮೇಳ, ಹಗಲುವೇಷ, ಸಿಂಧೊಳ್ಳರ ಪೋತುರಾಜ ನೃತ್ಯ, ಸುಡುಗಾಡು ಸಿದ್ದರ ಕೈಚಳಕ, ಮೋರ್ಚಿಂಗ್ ವಾದನ, ಹಂಡಿಜೋಗಿಗಳ ಕಿನ್ನರಿ ಮೇಳ, ಚೆನ್ನದಾಸರ ತತ್ವಪದಗಳು ಸೇರಿದಂತೆ ಅನೇಕ ಅಪರೂಪದ ಕಲಾಪ್ರಕಾರಗಳ ವೈಶಿಷ್ಟ್ಯಗಳನ್ನು ವಿವರಿಸಿದರು.
ಇಂದಿನ ಆಧುನಿಕತೆ ಮತ್ತು ತಂತ್ರಜ್ಞಾನದ ಪ್ರಭಾವದಿಂದ ಅನೇಕ ಜನಪದ ಕಲಾಪ್ರಕಾರಗಳು ಕಣ್ಮರೆಯಾಗುವ ಹಂತ ತಲುಪಿವೆ. ಆದ್ದರಿಂದ ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜದ ಎಲ್ಲ ವರ್ಗಗಳು ಜನಪದ ಕಲೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಜಾನಪದ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಅಳವಡಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಇದರಿಂದ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯ, ಸೃಜನಶೀಲತೆ, ಜೀವನ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಅರಿವು ವೃದ್ಧಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಯೋಜಕರಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ, ಉಪನ್ಯಾಸಕರಾದ ವಿಷ್ಣು ಹಡಪದ, ತೊಗಲುಗೊಂಬೆಯಾಟ ಕಲಾವಿದ ಕೆ. ಹೊನ್ನೂರುಸ್ವಾಮಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *