ಛಲವಾದಿ ನೌಕರರ ಕಲ್ಯಾಣ ಸಂಘದಿಂದ 150 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ಡಾ. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು – ಕೆಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕೆ ಆರ್ ಗಂಗಾಧರಯ್ಯ

ಕೆ ಆರ್ ಗಂಗಾಧರಯ್ಯ

ಬಳ್ಳಾರಿ, ಮೇ 31: ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಅತೀ ಮಹತ್ವ ನೀಡಿದ್ದರು. ಇವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿ ಕೊಳ್ಳಬೇಕು ಎಂದು ಕುಡುತಿನಿ ಕೆಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕೆ. ಆರ್. ಗಂಗಾಧರಯ್ಯ ಅವರು ಹೇಳಿದರು.

ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಉದ್ಘಾಟನೆ ಮತ್ತು ಛಲವಾದಿ ಸಮುದಾಯದ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿರುವ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಅವರು ಮಾತನಾಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿರುವ ವಿದ್ಯಾರ್ಥಿಗಳು,  ದೊಡ್ಡ  ಕನಸುಗಳೊಂದಿಗೆ ಮುಂದೆ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಬೇಕು ಎಂದು ಹರಸಿದರು.                  ಕೋಟ್ಯಾಂತರ ಜನರ ಬದುಕಿಗೆ ಬೆಳಕಾದ ಬಾಬಾಸಾಹೇಬರ ನೀಡಿದ ಭಿಕ್ಷೆಯಲ್ಲಿ ನಾವೆಲ್ಲಾ ಜೀವನ ಸಾಗಿಸುತ್ತೇವೆ ಎಂಬುದನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಂಡು ಜನಮುಖಿಗಳಾಗಿ ಕಾರ್ಯನಿರ್ವಹಿಸಬೇಕು ಎಂದರು.

ಮುಖ್ಯ ಅತಿಥಿ ಹಂಪಿ ಕನ್ನಡ ವಿವಿ ಇತಿಹಾಸ ಪ್ರಾಧ್ಯಾಪಕ, ಚಿಂತಕ ಅವರು ಮಾತನಾಡಿ, ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ದೇವರಾಗಿ ಅಲ್ಲ, ವಿಶ್ವ ಜ್ಞಾನಿಯಾಗಿ ಕಾಣಬೇಕು ಎಂದು ಪ್ರತಿಪಾದಿಸಿದರು.
ದೇಶದಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಎದುರಿಸದವರು, ಅನುಭವಿಸದವರು ಅನುಭವಿಸಿದಂತೆ ಹೇಳಿಕೊಳ್ಳುತ್ತಿದ್ದಾರೆ. ನಿಜವಾಗಿ ಸಾಮಾಜಿಕ ಸಮಸ್ಯೆ ಎದುರಿಸಿ, ಅನುಭವಿಸಿದ ಡಾ. ಅಂಬೇಡ್ಕರ್ ಅವರು, ತಮ್ಮನ್ನು ಅಸ್ಪೃಶ್ಯರೆಂದು ಕರೆದವರು, ನಿರ್ಲಕ್ಷ್ಯದಿಂದ ನೋಡಿದವರ ವಿರುದ್ಧ ಬರೆದಿದ್ದಾರೆ. ಅವರ ಮಾನಸಿಕ ಅಸ್ಪೃಶ್ಯದ ಬಗ್ಗೆ, ಅವರನ್ನು ಅಸ್ಪೃಶ್ಯ ಎಂದು ಕರೆದವರ ಬಗ್ಗೆ ಬರೆದಿದ್ದಾರೆ. ಅವರಿಗೆ ಈ ನೆಲಮೂಲದ ಬಗ್ಗೆ ಗೊತ್ತು. ಅದಕ್ಕೆ ಅವರು ಸಮಾನತೆಯ ಶ್ರೇಷ್ಠ ಸಂವಿಧಾನ ಬರೆದಿದ್ದಾರೆ ಎಂದ ಅವರು, ಅಂಬೇಡ್ಕರ್ ಪರ ಇದ್ದವರಿಗೆ ಅವರ ಬಗ್ಗೆ ಗೊತ್ತಾಗಲಿಲ್ಲಲ್ಲ. ಅವರ ವಿರೋಧಿಗಳಿಗೆ ಗೊತ್ತು. ಅದಕ್ಕೆ ಅವರು ಅಭಿವೃದ್ಧಿಯಾಗಿದ್ದಾರೆ ಎಂದು ಮೇಲ್ವರ್ಗದ ಬಗ್ಗೆ ಮಾರ್ಮಿಕವಾಗಿ ತಿಳಿಸಿದರು.
ಇದೇ ವೇಳೆ ಅಂಬೇಡ್ಕರ್ ಅವರನ್ನು ದೇವರಾಗಿ ಅಲ್ಲ, ಅವರನ್ನು ಜ್ಞಾನಿಯಾಗಿ ನೋಡಬೇಕು ಎಂದ ಅವರು, ನಾವು ಕಣ್ಣು ಮುಚ್ಚಿಕೊಂಡು ಸಂವಿಧಾನವನ್ನು ನೋಡುತ್ತಿದ್ದೇವೆ ನಾವು ಅಧೀನರಲ್ಲ, ಧೀನರು. ಇಂದಿನ ಮಕ್ಕಳೆ ನಾಳಿನ ಪ್ರಜಾಪ್ರಭುತ್ವದ ಮಕ್ಕಳು. ಅಂಬೇಡ್ಕರ್ ಅವರ ಫಲವನ್ನು ನಾವು ಅನುಭವಿಸಬೇಕು. ನಮ್ಮ ಫಲವತ್ತಾದ ಭೂಮಿಯಲ್ಲಿ ಅಂಬೇಡ್ಕರ್ ಪಾರ್ಕ್ ನಿರ್ಮಿಸಬೇಕು ಎಂದು ಅವರು ವಿವರಿಸಿದರು.

ತೀರ್ಥದ ಚರಿತ್ರೆ ಅಲ್ಲ: ನಮ್ಮದು ಬೆವರಿನ ಚರಿತ್ರೆ, ತೀರ್ಥದ ಚರಿತ್ರೆ ಅಲ್ಲ. ಎಡ-ಬಲ ಎಂದು ನಾವೇ ಬಡಿದಾಡಿದರೆ ಮತ್ತೊಂದು ವರ್ಗದವರು ಮುಖ್ಯಮಂತ್ರಿಯಾಗುತ್ತಾರೆ. ಹಳ್ಳಿಗಳಲ್ಲಿ ಗ್ರಾಮದೇವತೆ ಹೆಸರಲ್ಲಿ ನಡೆಯುವ ದೇವದಾಸಿಯಂತಹ ಅನಿಷ್ಠ ಪದ್ಧತಿಗಳನ್ನು ನಿರ್ಮೂಲನೆ ಮಾಡಬೇಕು ಎಂದು ಅವರು ತಿಳಿಸಿದರು.
ದಲಿತ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಹೆಚ್.ಕೆ.ಬಸವರಾಜ ಮಾತನಾಡಿ, ರಾಜ್ಯದಲ್ಲಿ ದಲಿತ ಸಮುದಾಯ ಸಂಘಟನೆಗಳ ಶಕ್ತಿಯನ್ನು ದಲಿತ ರಾಜಕಾರಣಿಗಳು ಸಮರ್ಪಕವಾಗಿ ಬಳಸಿಕೊಂಡಿಲ್ಲ. ಒಂದು ವೇಳೆ ಬಳಸಿಕೊಂಡಿದ್ದರೆ ಸಿಎಂ ಆಗುತ್ತಿದ್ದರು. ದಲಿತ ರಾಜಕಾರಣಿಗಳಿಗೆ ಸಮುದಾಯದ ಸಂಘಟನಾ ಶಕ್ತಿ, ಪ್ರಾಮಾಣಿಕತೆ ಎಲ್ಲವೂ ಗೊತ್ತಿದೆ. ಬಲಗೈ ಕೋಟದಲ್ಲಿ ಶಾಸಕರು, ಸಚಿವರು ಆಗಿದ್ದಾರೆ. ಬಲಗೈ ಸಮುದಾಯದ ಪ್ರಬಲ ರಾಜಕಾರಣಿಗಳಾದ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಗೃಹಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರು ಸಮುದಾಯದ ಪರ ಬಲವಾಗಿ ನಿಂತಿಲ್ಲ ಎಂದು ಆರೋಪಿಸಿದರು.
ಸಮುದಾಯದ ಸಂಘಟನೆಯನ್ನು ರಾಜಕಾರಣಿಗಳು ಬಳಸಿಕೊಳ್ಳಲಿಲ್ಲ ಎಂದು ವಿಷಾದಿಸಿದ ಬಸವರಾಜ್,
ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗ ಬೇಕಿತ್ತು. ಇನ್ಮುಂದೆ
ದಲಿತ ಮುಖ್ಯಮಂತ್ರಿಯ ಕನಸು ಮರೀಚಿಕೆಯಾಗಿದ್ದು,
ಡಿಸಿಎಂ ಮಾಡಿ ಎಂದು‌ ಬೇಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದರು.
ಕಾಂಗ್ರೆಸ್ ಹೈಕಮಾಂಡ್ ನಮ್ಮ ಬಲಗೈ ಸಮುದಾಯಕ್ಕೆ ನ್ಯಾಯ ಸಲ್ಲಿಸದಿದ್ದರೆ
ಮತಪೆಟ್ಟಿಗೆಯಲ್ಲಿ ತೋರಿಸುವ ಸಂದರ್ಭ ಬರುತ್ತದೆ ಎಂದು ಎಚ್ಚರಿಸಿದರು.

ಗೋವಿಂದರಾಜು ಡಿವೈಎಸ್ಪಿ

ಮುಖ್ಯ ಅತಿಥಿಯಾಗಿದ್ದ  ನಗರ ಡಿವೈಎಸ್ ಗೋವಿಂದರಾಜು ಅವರು ಮಾತನಾಡಿ, ಬಹುಮುಖಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತವೆ. ಈ ನಿಟ್ಟಿನಲ್ಲಿ ಅವರ ಚಿಂತನೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.

ಕರ್ನಾಟಕ ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಸಿ. ನರಸಪ್ಪ, ಸಂಘದ ಗೌರವಾಧ್ಯಕ್ಷ ಡಾ. ಸಿ.ಹೆಚ್.ಸೋಮನಾಥ್, ಕರ್ನೂಲ್ ದಾಮೋದರಂ ಸಂಜೀವಯ್ಯ ಚಾರಟಿಬಲ್ ಟ್ರಸ್ಟ್ ಅಧ್ಯಕ್ಷ ದಾಮೋದರಂ ರಾಧಾಕೃಷ್ಣ ಮೂರ್ತಿ ಮತ್ತಿತರರು ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಗೂಳಪ್ಪ ಬೆಳ್ಳೇಕಟ್ಟೆ ಮಾತನಾಡಿ ಮುಂಬರುವ ದಿನಗಳಲ್ಲಿ ಸಂಘ ಸಮಾಜಮುಖಿ ವಿಶೇಷವಾಗಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಮುದಾಯದ ನಿವೃತ್ತ ಸರ್ಕಾರಿ ನೌಕರರು, ವಿಶೇಷ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಎಸ್ ಎಸ್ ಎಲ್ ಸಿ, ಪಿಯುಸಿ ಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿದ್ದ ೧೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಬೌದ್ಧ ಮಹಾಸಭಾದ ಕಮಲರತ್ನ ಬಂತೇಜಿ, ನಿವೃತ್ತ ಅಧೀಕ್ಷಕ ಇಂಜಿನಿಯರ್ ವೆಂಕಟರಮಣ, ಮುಖಂಡರಾದ ಟಿ. ಸುಂಕಪ್ಪ, ನಾಗಲಕೆರೆ ಗೋವಿಂದ, ಎಂ. ಸಿ.‌ಮಾಯಪ್ಪ, ಎ.ಸಿ ದಾನಪ್ಪ, ಹೊಟ್ಟೇರ್ ಅಜ್ಜಯ್ಯ, ವೆಂಕೋಬಿ ಸಂಗನಕಲ್ಲು, ಮಾವಿನಹಳ್ಳಿ ಸಿದ್ದಬಸಪ್ಪ, ನ್ಯಾಯವಾದಿ ಸೋಮು, ಕೆ. ಯೋಗರಾಜ್, ಸಿ.ಆರ್.ಹನುಮಂತ, ಸಿಎಂಎಸ್ ಜಿಲ್ಲಾಧ್ಯಕ್ಷ ಸಿ.ಶಿವಕುಮಾರ್, ಮುಖಂಡರಾದ ಜೆ ಎಸ್ ಶ್ರೀನಿವಾಸುಲು, ಶಂಕರ್ ನಂದಿಹಾಳ್, ಹನುಮೇಶ್ ಕಟ್ಟಿಮನಿ,
ಶಂಕ್ರಪ್ಪ ಸೇರಿದಂತೆ ಸಮುದಾಯದ ಹಲವಾರು ಮುಖಂಡರು ಇದ್ದರು.
ಜಾಗೃತಿ ಗೀತೆ: ಚಿಗುರು ಕಲಾ ತಂಡದ ಎಸ್ ಎಂ‌ ಹುಲುಗಪ್ಪ ಮತ್ತು ಅವರ ತಂಡ ಬಾಬಾಸಾಹೇಬ, ಬುದ್ಧ  ಗೀತೆಗಳನ್ನು ಹಾಡಿ ಗಮನ ಸೆಳೆದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಹನುಮಪ್ಪ ಸ್ವಾಗತಿಸಿದರು. ಸಂಘದ ಕಾರ್ಯಾಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಖಜಾಂಚಿ ರಮೇಶ ಸುಗ್ನಳ್ಳಿ ನಿರೂಪಿಸಿದರು. ಉಪಾಧ್ಯಕ್ಷರಾದ ಪ್ರೊ.  ಎ.ಎಸ್ ಬಸವರಾಜ್, ಲಕ್ಷ್ಮಿಕಾಂತಯ್ಯ ಸಿ.ಎಸ್, ಈರಣ್ಣ ಮುದೇನೂರು,  ಕೊಳೂರು‌ ಅಂಬರೀಶ್, ಕಾಶೀಮಪ್ಪ ದೇಶನೂರು, ಕೊಳಗಲ್ಲು ಮಂಜುನಾಥ್,  ಕೊರ್ಲಗುಂದಿ ರುದ್ರಯ್ಯ, ತಾಳೂರು ಶೇಖರ್,ಯಲ್ಲಪ್ಪ ಬೆಂಗಳೂರು, ವಿಲಾಸ ಮಾನಕರ್ ಮತ್ತಿತರರು ನಿರ್ವಹಿಸಿದರು. ಶೇಖರ್ ಕುರುವಳ್ಳಿ ವಂದಿಸಿದರು.

Leave a Reply

Your email address will not be published. Required fields are marked *