ಅನುದಿನ ಕವನ-೧೯೫೩, ಕವಯತ್ರಿ: ಸಾಯಿಲೀಲಾ, ಬಳ್ಳಾರಿ, ಕವನದ ಶೀರ್ಷಿಕೆ: ತೊಗಲ ಪ್ರೀತಿ

ತೊಗಲ ಪ್ರೀತಿ
ಜಗದಗಲ ತೋರುತಿದೆ ಈ ರೀತಿ
ಎಲ್ಲೆಲ್ಲಿಯೂ ಕಾಣುತಿದೆ ಅನೀತಿ
ದೇಶವು ಪಡೆಯುತಿದೆ ಕುಖ್ಯಾತಿ

ಗುರಿಗಳ ಹಾದಿಯ ಮುಚ್ಚಿಸುತಿದೆ
ಬಾಡುವ ಆಸೆಗಳ ಮೂಡಿಸುತಿದೆ
ಕನಸಿನ ಕಂಗಳ ಕುರುಡಾಗಿಸುತಿದೆ
ಸ್ವಸ್ಥ ಮನಗಳ ಅಸ್ವಸ್ಥವಾಗಿಸುತಿದೆ

ಸಂಬಂಧಗಳ ಬೆಲೆ ಮರೆಯಾಗಿಸುತಿದೆ
ನೈತಿಕತೆಯಿಲ್ಲದ ಪ್ರೀತಿಯ ನೆಲೆಯೂರಿಸುತಿದೆ
ರಕ್ಷಣೆಯ ಕಣ್ಣುಗಳ ಕಾಮುಕವಾಗಿಸುತಿದೆ
ಬೇಡದ ಜೀವಗಳ ಒಡಲಲಿ ಬೆಳೆಸುತಿದೆ!

ಮನಗಳಲಿ ಕ್ರೂರತ್ವವ ಬೆಳೆಸುತಿದೆ
ಮಾನವೀಯ ಮೌಲ್ಯಗಳ ಮರೆಸುತಿದೆ
ಕಂಬನಿಗಳ ಮಳೆಯಲಿ ರಾಕ್ಷಸರ ನಲಿಸುತಿದೆ
ಅಪರಾಧಿಗಳ ಅರಸನಂತೆ ಮೆರೆಸುತಿದೆ!

ನಿರ್ಭಯದ ನಾಡಾಗಿದ್ದ ರಾಜ್ಯಗಳು
ಅದೇಕೋ ಭಯದ ಕಾಡಾಗುತಿವೆ!
ದುಃಖವಾಲಿಸುವ ಕರ್ಣಗಳು ಇಳೆಯಲಿಲ್ಲವಾಗಿ
ನೊಂದ ಮನಗಳು ಮೌನಕೆ ಶರಣಾಗುತಿವೆ!

ಬದಲಿಸಿಕೊಳ್ಳಿ, ಮೃಗತ್ವ ಮನಗಳೇ
ತೊಗಲ ಪ್ರೀತಿಯ ಕಾಣುವ ರೀತಿ
ಆಗಲಾದರೂ ಬದಲಾದೀತು
ಸಕಲ ನಾರಿಯರ ಸ್ಥಿತಿ-ಗತಿ.


-ಸಾಯಿಲೀಲಾ, ಬಳ್ಳಾರಿ

Leave a Reply

Your email address will not be published. Required fields are marked *