ವಿದ್ಯಾರ್ಥಿಗಳ ಪ್ರತಿಭಾ ಅನಾವರಣಕ್ಕೆ ಸಾಂಸ್ಕೃತಿಕ ಸ್ಪರ್ಧೆಗಳು ಸೂಕ್ತ ವೇದಿಕೆ: ಡಿಡಿಪಿಯು ಹನುಮಂತ ರಾವ್

ಬಳ್ಳಾರಿ, ಸೆ. 3: ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಪಠ್ಯಾಧಾರಿತ ಶಿಕ್ಷಣದೊಂದಿಗೆ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸೃಜನಶೀಲ ಚಟುವಟಿಕೆಗಳೂ ಅವಶ್ಯಕ ಎಂದು ಬಳ್ಳಾರಿ ಜಿಲ್ಲಾ ಉಪನಿರ್ದೇಶಕರಾದ ಹನುಮಂತ ರಾವ್ ಎಂ.ವಿ. ಹೇಳಿದರು.

ನಗರದ ವೀರಶೈವ ವಿದ್ಯಾವರ್ಧಕ ಸಂಘದ ಎನ್.ಎಂ. ಸ್ವತಂತ್ರ ಪ.ಪೂ. ಕಾಲೇಜಿನಲ್ಲಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ, ಬಳ್ಳಾರಿ ಜಿಲ್ಲಾ ಪ್ರಾಂಶುಪಾಲರ ಸಂಘ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ “ಬಳ್ಳಾರಿ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು–2026”ರ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಶಿಕ್ಷಣವು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸಿದರೆ, ಕಲೆ ಮತ್ತು ಸಂಸ್ಕೃತಿ ಅವರ ಮನಸ್ಸನ್ನು ಶ್ರೀಮಂತಗೊಳಿಸುತ್ತವೆ. ಹಾಡು, ನೃತ್ಯ, ನಾಟಕ, ಸಾಹಿತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರಕಾರಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಅಭಿವ್ಯಕ್ತಿ ಸಾಮರ್ಥ್ಯ, ಸೃಜನಶೀಲತೆ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ. ಇಂತಹ ವೇದಿಕೆಗಳು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಅವರ ಭವಿಷ್ಯಕ್ಕೆ ಹೊಸ ದಿಕ್ಕನ್ನು ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಸಹಕಾರ್ಯದರ್ಶಿ ಯಾಳ್ಪಿ ಮೇಟಿ ಪಂಪನಗೌಡ ಮಾತನಾಡಿ, ಪಠ್ಯಾಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗೆ ನೆರವಾದರೆ, ಸಾಂಸ್ಕೃತಿಕ ಚಟುವಟಿಕೆಗಳು ಅವರ ಸೃಜನಶೀಲತೆ ಹಾಗೂ ವ್ಯಕ್ತಿತ್ವವನ್ನು ರೂಪಿಸುತ್ತವೆ. ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವ ಜೊತೆಗೆ ನಮ್ಮ ನಾಡಿನ ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ಮಾಡುತ್ತವೆ ಎಂದರು.

ಬಳ್ಳಾರಿ ಜಿಲ್ಲಾ ಪ್ರಾಂಶುಪಾಲರ ಸಂಘದ ಕಾರ್ಯಾಧ್ಯಕ್ಷ ಎಂ. ಶ್ರೀಶೈಲ ಮಾತನಾಡಿ, ಆಧುನಿಕ ಶಿಕ್ಷಣದ ನಡುವೆ ನಮ್ಮ ನೆಲದ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ವಿದ್ಯಾರ್ಥಿಗಳನ್ನು ಬೆಸೆಯುವುದು ಅತ್ಯಂತ ಅಗತ್ಯ. ಸಾಂಸ್ಕೃತಿಕ ಸ್ಪರ್ಧೆಗಳು ಈ ಕಾರ್ಯವನ್ನು ಪರಿಣಾಮಕಾರಿಯಾಗಿ ನೆರವೇರಿಸುವ ವೇದಿಕೆಗಳಾಗಿವೆ ಎಂದು ತಿಳಿಸಿದರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸಣ್ಣ ಶಿವರಾಂ ಮಾತನಾಡಿ, ಸ್ಪರ್ಧೆಯಲ್ಲಿ ಗೆಲುವು–ಸೋಲು ಸಹಜ. ಆದರೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ದೊರೆಯುವ ಅನುಭವವೇ ವಿದ್ಯಾರ್ಥಿಗಳ ನಿಜವಾದ ಸಂಪತ್ತು. ಫಲಿತಾಂಶದ ಬಗ್ಗೆ ಯಾವುದೇ ಒತ್ತಡಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಆಡಳಿತ ಮಂಡಳಿಯ ಸದಸ್ಯರಾದ ಎಂ. ಗಿರಿಜಾಪತಿ ಹಾಗೂ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಬಿ.ಪಿ. ಕಲ್ಲಪ್ಪ ಮಾತನಾಡಿ ಸ್ಪರ್ಧಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಎನ್ ಎಂ ಸ್ವತಂತ್ರ ಪ.ಪೂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಮುಂಡಾಸದ ಚೆನ್ನಬಸವರಾಜ್ ವಹಿಸಿದ್ದರು.

ಕಾಲೇಜಿನ ಪ್ರಾಚಾರ್ಯರಾದ ಎ.ಎಂ.ಪಿ. ವೀರೇಶಸ್ವಾಮಿ ಸ್ವಾಗತಿಸಿದರು. ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳ ಸಂಚಾಲಕರಾದ ಡಾ. ಎನ್.ಎಸ್. ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಗಳ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿದರು. ಮಂಜುನಾಥ ಹಿರೇಮಠ ಪ್ರಾರ್ಥಿಸಿದರು. ಶೈಕ್ಷಣಿಕ ಸಂಯೋಜಕರಾದ ಅಬಿದಲಿ ವಂದಿಸಿದರು. ತಾಲೂಕು ಸಾಂಸ್ಕೃತಿಕ ಸ್ಪರ್ಧೆಗಳ ಸಂಚಾಲಕರಾದ ಎನ್. ವೀರೇಂದ್ರಗೌಡ ನಿರೂಪಿಸಿದರು.

25ಕ್ಕೂ ಹೆಚ್ಚು ಕಾಲೇಜುಗಳ 500ಕ್ಕೂ ಅಧಿಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ:

ತಾಲೂಕಿನ 25ಕ್ಕೂ ಹೆಚ್ಚು ಪದವಿಪೂರ್ವ ಕಾಲೇಜುಗಳಿಂದ 500ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ವಿವಿಧ ಕಲಾ ಪ್ರಕಾರಗಳಲ್ಲಿ ವಿದ್ಯಾರ್ಥಿಗಳು ನೀಡಿದ ಮನೋಜ್ಞ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು. ತೀರ್ಪುಗಾರರು, ಉಪನ್ಯಾಸಕರು, ಪೋಷಕರು ಹಾಗೂ ಪ್ರೇಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಮೆಚ್ಚಿ ಪ್ರಶಂಸಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆರ್.ವೈ.ಎಂ.ಇ. ಕಾಲೇಜಿನ ಪ್ರಾಚಾರ್ಯರಾದ ಹೆಚ್. ಮಹಾಬಲೇಶ್ವರಪ್ಪ ಸಮಾರೋಪ ಭಾಷಣ ಮಾಡಿದರು. ಬಳಿಕ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಕಾರ್ಯಕ್ರಮದ ಅಚ್ಚುಕಟ್ಟು ಆಯೋಜನೆ, ಶಿಸ್ತು ಹಾಗೂ ವ್ಯವಸ್ಥಿತ ನಿರ್ವಹಣೆಗೆ ಆಗಮಿಸಿದ್ದ ಗಣ್ಯರು, ತೀರ್ಪುಗಾರರು, ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳು, ವೀರಶೈವ ವಿದ್ಯಾವರ್ಧಕ ಸಂಘದ ಎನ್ ಎಂ ಸ್ವತಂತ್ರ ಪ.ಪೂ ಕಾಲೇಜಿನ ಆಡಳಿತ ಮಂಡಳಿ, ವಿವಿಧ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರು, ತೀರ್ಪುಗಾರರು, ಬೋಧಕ–ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ಸ್ವಯಂಸೇವಕರಿಗೆ ಆಯೋಜಕರು ಕೃತಜ್ಞತೆ ಸಲ್ಲಿಸಿದರು.

“ಸಂಸ್ಕೃತಿ ನಮ್ಮ ಬೇರು, ಕಲೆ ನಮ್ಮ ಅಭಿವ್ಯಕ್ತಿ, ಪ್ರತಿಭೆ ನಮ್ಮ ಶಕ್ತಿ” ಎಂಬ ಆಶಯದೊಂದಿಗೆ ನಡೆದ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು, ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಒದಗಿಸುವುದರೊಂದಿಗೆ ಅವರಲ್ಲಿ ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಿದ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿ ಬಂದವು.

Leave a Reply

Your email address will not be published. Required fields are marked *