
ಬಳ್ಳಾರಿ, ಸೆ.1: ಹಳ್ಳಿಹಳ್ಳಿಗೂ ಕಸಾಪ ಕಾರ್ಯಚಟುವಟಿಕೆಗಳು ತಲುಪುತ್ತಿರುವುದು ಶ್ಲಾಘನೀಯ ಎಂದು ಬಳ್ಳಾರಿಯ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಶ್ರೀಮತಿ ಗಾಯತ್ರಿ ಅವರು ಅಭಿಪ್ರಾಯಪಟ್ಟರು.
ಕಸಾಪ ಜಿಲ್ಲಾ ಘಟಕವು ಹಂದಿಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ದಿ. ಪಟೇಲ ಬಸವರಾಜ ಸ್ಮಾರಕ ದತ್ತಿ ಹಾಗೂ ದಿ. ವೈ. ಲಿಂಗಾರೆಡ್ಡಿ ಮತ್ತು ಪಾರ್ವತಮ್ಮ ದತ್ತಿ ಕಾರ್ಯಕ್ರಮ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕಲಾವಿದ ಪುರುಷೋತ್ತಮ ಹಂದ್ಯಾಳು ಅವರಿಗೆ ಪರಿಷತ್ತಿನ ಗೌರವ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಂದಿಹಾಳು ಗ್ರಾಮದ ಪ್ರತಿಭೆಗಳು ಸಮಾಜದ ವಿವಿಧ ಕ್ಷೇತ್ರಗಳಿಗೆ ಅನುಪಮ ಕೊಡುಗೆ ನೀಡಿದ್ದಾರೆ. ಆ ಸಾಲಿನಲ್ಲಿ ರಂಗಭೂಮಿಯ ಚಟುವಟಿಕೆಗಳ ಮೂಲಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪುರುಷೋತ್ತಮ ಹಂದ್ಯಾಳು ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.
ಕುವೆಂಪು ಮಕ್ಕಳ ಸಾಹಿತ್ಯ ಕುರಿತು ವೀರಶೈವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ನೀಲಮ್ಮ ವಿಶೇಷ ಉಪನ್ಯಾಸ ನೀಡಿದರು.
ದತ್ತಿ ದಾನಿಗಳಾದ ಖ್ಯಾತ ವೈದ್ಯ ಡಾ. ಅರವಿಂದ ಪಟೇಲ ಮಾತನಾಡಿ, ತಮ್ಮ ತಂದೆಯವರ ಹೆಸರಿನಲ್ಲಿ ನೀಡಿದ ದತ್ತಿ ದಾನವು ಜ್ಞಾನದಾಸೋಹದ ಮೂಲಕ ಸಾರ್ಥಕ ಗೊಳ್ಳುತ್ತಿರುವುದು ಪರಿಷತ್ತಿನ ಬಗ್ಗೆ ಅತೀವ ಹೆಮ್ಮೆಮೂಡಿಸದೆ ಎಂದರು.

ವೇದಿಕೆಯಲ್ಲಿ ಕ.ಸಾ.ಪ ಜಿಲ್ಲಾ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕರಾದ ಮಲ್ಲಿಕಾರ್ಜುನಸ್ವಾಮಿ ಹಿರೇಮಠ (ಮಹಿಮ) ಮಾತನಾಡಿದರು. ಮುಖ್ಯಗುರುಗಳಾದ ಶ್ರೀಮತಿ ಶಶಿರೇಖಾ ಎಸ್, ಕಸಾಪ ಜಿಲ್ಲಾ ಸಂಚಾಲಕ ಕಪ್ಪಗಲ್ಲು ಬಿ ಚಂದ್ರಶೇಖರ ಆಚಾರ್, ಕಥೆಗಾರ ವೀರೇಂದ್ರ ರಾವಿಹಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ವೆಂಕಟೇಶ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ರಂಗಕಲಾವಿದ ಪುರುಷೋತ್ತಮ ಹಂದ್ಯಾಳು ಅವರಿಗೆ ,”ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪುರಸ್ಕಾರ” ನೀಡಿ ಗೌರವಿಸಲಾಯಿತು. ಗ್ರಾಮದ ಸಾಧಕ ವಿಶ್ರಾಂತ ಡಿಡಿಪಿಐ ಮಲ್ಲಿಕಾರ್ಜುನಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರುಷೋತ್ತಮ ಹಂದ್ಯಾಳು ಮಾತನಾಡಿ ಪರಿಷತ್ತು ಸಾಹಿತಿ ಮತ್ತು ವಿವಿಧ ಕ್ಷೇತ್ರಗಳ ಕಲಾವಿದರಿಗೆ ಅವರ ಪ್ರತಿಭೆಯನ್ನು ಗುರುತಿಸಿ ಗೌರವಿಸುವ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದೆ ಎಂದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಡಾ. ಕೆ ಶಿವಲಿಂಗಪ್ಪ ಹಂದಿಹಾಳು
ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಮಹಿಮ ಎಂ.ಸಿ. ನಿರೂಪಿಸಿದರು. ಶ್ರೀಮತಿ ನಾಹೀದಾ ಅಂಜುಮ್ ಪ್ರಾರ್ಥಿಸಿದರು. ಶಿಕ್ಷಕರಾದ ಗಾದಿಲಿಂಗಪ್ಪ.ಜೆ ಸ್ವಾಗತಿಸಿದರು. ಶಿಕ್ಷಕಿ ಈರಮ್ಮ.ಎನ್. ವಂದಿಸಿದರು.
