ಅನುದಿನ ಕವನ-೧೯೬೩, ಹಿರಿಯ ಕವಿ: ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಕಾಣೆಯಾಗಿದ್ದ ಕವಿತೆ ಕಾಫಿ ಕೆಫೆಯಲ್ಲಿ….

ಕಾಣೆಯಾಗಿದ್ದ ಕವಿತೆ
ಕಾಫಿ ಕೆಫೆಯಲ್ಲಿ….

ಕವಿತೆ ಕಳೆದು ಹೋಗಿದೆ; ಮೊನ್ನೆ ದಿನ ಸಂಜೆ,
ಸಣ್ಣಗೆ ಮಳೆ ಸುರಿಯುವಾಗ
ನನ್ನ ಕೈಬೆರಳು ಹಿಡಿದು
ಜತೆಜೊತೆಗೆ ಹೆಜ್ಜೆ ಹಾಕುತ್ತಿತ್ತು.

ಅವಳಿಗೆ ಜನ್ಮ ದಿನದ
ಶುಭಾಶಯ ಹೇಳುವಾಗ ಕ್ಯಾಂಡಲ್ ದೀಪಗಳ ಜೊತೆ
ಮುಗುಳ್ನಗುತ್ತತ್ತು.

ಇದ್ದಕ್ಕಿದ್ದ ಹಾಗೆ
ಆಚೆ ಮೊನ್ನೆಯಿಂದ ಕಾಣೆಯಾಗಿದೆ ಎಲ್ಲೂ ಕಾಣುತ್ತಿಲ್ಲ
ಕಳೆದ ಮೂರು ದಿನಗಳಿಂದ.

ಪದ್ಯ ಬರೆಯುವ ಎಲ್ಲರನ್ನೂ ಕೇಳಿದೆ;
ನನ್ನ ಕವಿತೆಯನ್ನೆನಾದರೂ ಕಂಡಿರಾ (?), ಎಂದು.

ಚಹರೆಪಟ್ಟೆ, ಬಣ್ಣ, ಅಳತೆ, ತೊಟ್ಟ ಬಟ್ಟೆಯ ವಿವರ ಕೇಳಿದರು.
ಏನು ಹೇಳುವುದೆಂದು ತಿಳಿಯದೆ
ಅಡುಗೆ ಮನೆ, ಹಿತ್ತಲು,
ಅವರೆಕಾಳು ಸಾರು ಹೀಗೆ ಏನೇನೋ
ಬಡಬಡಿಸಿದೆ.

ಇಲ್ಲ ಇಲ್ಲ ಬೆಳ್ಳುಳ್ಳಿ ಮೀನಿನ ವಾಸನೆ-
ಯ ನಿಮ್ಮ ಕವಿತೆ ಇತ್ತ ಬಂದಿಲ್ಲ ಎಂದರು.

ಹೇಳದೇ ಕೇಳದೇ ಎಂದೂ ಹೀಗೆ ಹೋಗಿದ್ದಿಲ್ಲ.
ಕಾರಿಡಾರುಗಳಲ್ಲಿ ಓಡಾಡಿ ಗೊತ್ತಿಲ್ಲ
ಕವಿತೆಗೆ.

ಒಮ್ಮೊಮ್ಮೆ ಐಸ್ಕ್ರೀ ಸೆಂಟರ್ ಇಲ್ಲವೆ ಕಾಫಿ ಕೆಫೆಗೆ ಮಾತ್ರ ಹೋಗಿ ಗೊತ್ತು;

ಓಹ್, ಕಾಫಿ ಕೆಫೆಯಲ್ಲಿ ಒಂಟಿಯಾಗಿ
ಕುಳಿತಿದೆ ಮೂಲೆಯಲ್ಲಿ ಕವಿತೆ.

ನನ್ನ ಜೊತೆ ಜಗಳವಾಡಬುದಿತ್ತು; ತಪ್ಪಿದ್ದರೆ ಬಯ್ದು ತಿದ್ದಬಹುದಿತ್ತು.
ನಾಗರೀಕ ಜಗತ್ತಿನಲ್ಲಿ ಮೌನ ಸರೀನಾ ಅಂತ
ಕೇಳ್ಬೇಕು ಅನ್ನಿಸಿತು.

ಎದುರಿಗೆ ಹೋಗಿ ಕುಳಿತೆ; ಕವಿತೆಯ ಕಣ್ಣಲ್ಲಿ
ಪ್ರೀತಿನೂ ಇರಲಿಲ್ಲ ವಿಶಾದವೂ ಇರಲಿಲ್ಲ.

ಕಾಫಿಗೆ ಆರ್ಡರ್ ಮಾಡಿ ಸುಮ್ಮನೆ ಕುಳಿತೆ.
ಕಾಫಿ ಬಂದಿತು.
ಕವಿತೆ ಅದನ್ನು ಮುಟ್ಟಲೂ ಇಲ್ಲ
ಮಾತೂ ಆಡಲಿಲ್ಲ.

ಕವಿತೆಯ ಕಣ್ಣಲ್ಲಿ ಕಣ್ಣಿಟ್ಟು
ನೋಡಿದರೆ
ಕವಿತೇನೂ ತಿರುಗಿ ಹಾಗೇ ನೋಡಿತು.
ಮೋಹ ನಿದ್ದೆ ಮಾಡುತ್ತಿತ್ತು.

ಯಾವುದೇ ಭ್ರಮೆಗಳಿಲ್ಲದೆ ನಾನು
ಕವಿತೆಯನ್ನು
ಕವಿತೆ ನನ್ನನ್ನು ನೋಡುತ್ತ ಕುಳಿತಿದ್ದೇವೆ.

-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು

Leave a Reply

Your email address will not be published. Required fields are marked *