ಅಭಿನಯ ಕಲಾಕೇಂದ್ರ ಆಯೋಜನೆ: ಸಂಗೀತಪ್ರಿಯರ ಮನಸೆಳೆದ ‘ಪಂಚಮವೇದ ಪ್ರೇಮದ ನಾದ’

ಬಳ್ಳಾರಿ, ಅ.4: ನಗರದ ಅಭಿನಯ ಕಲಾಕೇಂದ್ರ ಭಾನುವಾರ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ ‘ಪಂಚಮವೇದ ಪ್ರೇಮದ ನಾದ’ ಎಂಬ ಕನ್ನಡ ಕರೋಕೆ ಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ಸಂಗೀತ ಮಾಧುರ್ಯದಲ್ಲಿ ತೇಲಾಡಿಸಿತು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯ ಕವಿ ಹುಯಿಲಗೋಳ ನಾರಾಯಣರಾಯರ ಜನ್ಮದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ನಾಟಕಕಾರ ಹಾಗೂ ರಂಗನಿರ್ದೇಶಕ ಕೆ. ಜಗದೀಶ್ ಅವರು ಹುಯಿಲಗೋಳ ನಾರಾಯಣರಾಯರ ಸಾಹಿತ್ಯ ಸೇವೆಯನ್ನು ಸ್ಮರಿಸಿದರು. ಅವರ ಅಮರ ಕೃತಿ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಗೀತೆ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕನ್ನಡಿಗರಲ್ಲಿ ನಾಡು-ನುಡಿಯ ಅಭಿಮಾನವನ್ನು ಜಾಗೃತಗೊಳಿಸಿದ ಪ್ರಮುಖ ಗೀತೆಗಳಲ್ಲಿ ಒಂದಾಗಿತ್ತು. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಈ ಗೀತೆ ಪ್ರಸಿದ್ಧಿ ಪಡೆದಿದ್ದು, ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಹಾಡಿದ್ದರು ಎಂದು ನಾರಾಯಣರಾಯರನ್ನು ಸ್ಮರಿಸಿದರು.

ಆರಂಭದಲ್ಲಿ ಚಿನ್ಮಯಿ ಮತ್ತು ಶ್ರೀಮಯಿ ಸಹೋದರಿಯರು ಪ್ರದರ್ಶಿಸಿದ ಶಾಸ್ತ್ರೀಯ ನೃತ್ಯ ಆಕರ್ಷಕವಾಗಿತ್ತು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ವಿಜಯನಗರ ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಯ 20 ಗಾಯಕರು ಕನ್ನಡ ಭಾವಗೀತೆ ಭಕ್ತಿಗೀತೆ ಜಾನಪದ ಗೀತೆ ಹಾಗೂ ಸಿನಿಮಾ ಹಾಡುಗಳನ್ನು ಹಾಡಿ ರಂಜಿಸಿದರು.


ಸಿದ್ದಾರ್ಥ ಸಾಲೀಮಠ, ವಿನಯಕುಮಾರ್, ಲಕ್ಷ್ಮಿ, ಗೋಪಯ್ಯ ಕಾವಲಿ, ಶಿಲ್ಪ, ರಾಮಲಿ, ಹೆಚ್.ಭಾಗ್ಯಲಕ್ಷ್ಮಿ, ಗೀತಾಂಜಲಿ ಬಂಡಾರಿ, ಜಿ.ಎಂ. ನಾಗಲಿಂಗ ಸ್ವಾಮಿ, ಡಿ. ಬಸವರಾಜ, ಎ.ಕೆ.ಹುಲುಗಪ್ಪ, ಸೋಮಶೇಖರ ಕಲ್ಡಹಳ್ಳಿ, ಚಂದನ ಆರ್. ಬಿ., ಆರ್ ನಾಗರಾಜ, ಡಾ. ಶ್ರೀಲೇಖ, ವೆಂಕಟೇಶ್ ಆಚಾರ್, ಸಿ. ಮಾರ್ಕಂಡೇಯ, ಬಿ.ಎಚ್. ತಿಪ್ಪೇಸ್ವಾಮಿ, ಜೆ.ಎಚ್. ಭಾಗ್ಯಮ್ಮ, ರಾಜು ಇಸ್ರಾಣಿಯವರು ಹಾಡಿದ ಹಾಡುಗಳು ಮನಸೆಳೆದವು.
ಸಾಹಿತಿ ಎಚ್. ಎಂ. ಮಲ್ಲಿಕಾರ್ಜುನ ಸ್ವಾಮಿ, ಕುಡಿತಿನಿ ಪ್ರಕಾಶ್, ಕೊಳಗಲ್ಲು ಜಗದೀಶಯ್ಯ, ಕೋಳೂರು ಜಗದೀಶ ಗೌಡ, ಉತ್ತನೂರು ರಾಮಣ್ಣ, ಮಾರೇಶ ಮತ್ತಿತರರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಇದು ಅಭಿನಯ ಕಲಾ ಕೇಂದ್ರದ ಮೂರನೇ ಕರೋಕೆ ಸಂಚಿಕೆಯಾಗಿದೆ.

Leave a Reply

Your email address will not be published. Required fields are marked *