ಮಾನ್ಯ ಕುಲಪತಿಗಳು/ಸಿಂಡಿಕೇಟ್ ಸದಸ್ಯ ಮಂಡಳಿ
ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ
ಬಳ್ಳಾರಿ.ಇವರಿಗೆ
ಮಾನ್ಯರೆ,
ವಿಷಯ:ಅಣ್ಣ ಸಿ. ಚನ್ನಬಸವಣ್ಣರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಿದ ಕುರಿತು

ಕನ್ನಡಕ್ಕೆ ಲೋಹಿಯಾರನ್ನು, ಶಾಂತವೇರಿ ಗೋಪಾಲಗೌಡ,ಕೋಣಂದೂರು,ಮುಂತಾದ ಸಮಾಜವಾದಿಗಳನ್ನು ಮತ್ತಷ್ಟು ಹತ್ತಿರವಾಗಿಸುವಂತೆ ಮಾಡಿದ್ದು ಅಣ್ಣ ಚನ್ನಬಸವಣ್ಣನವರ ಬಳ್ಳಾರಿಯ ಲೋಹಿಯಾ ಪ್ರಕಾಶನ. ಒಂದು ಯುನಿವರ್ಸಿಟಿ ಮಾಡಬಹುದಾದ ಅತ್ಯಂತ ಮೌಲಿಕವಾದ ಬೃಹತ್ ಯೋಜನೆಗಳನ್ನು ಚನ್ನಬಸವಣ್ಣ ನಿಭಾಯಿಸಿದ್ದಾರೆ. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ.ಯು ಈ ಬಾರಿ,ಅವರಿಗೆ ಗೌರವ ಡಾಕ್ಟರೇಟ್ ಪದವಿ ಘೋಷಿಸಿರುವುದು ನಿಜಕ್ಕೂ ಕನ್ನಡ ನಾಡಿಗೆ ಸಂತಸದ ವಿಷಯವೇ ಆಗಿದೆ.
ಚನ್ನಬಸವಣ್ಣನವರ ಸಹನೆಯ ನಿಲುವು, ನಿರ್ಲಿಪ್ತತೆ ಕೂಡ ಈ ಕಾಲದ ಕೋಮುವಾದದಲ್ಲಿ ಮುಳುಗಿಹೋದವರನ್ನು ತಳಮಳಕ್ಕೆ ಕೆಡವಬಲ್ಲುದು. ಅವರ ಸಾಂಗತ್ಯದಲ್ಲಿ ಬುದ್ಧ,ಬಸವಣ್ಣ,ಗಾಂಧಿ,ಅಂಬೇಡ್ಕರ್ ,ಲೋಹಿಯಾವಾದಿಗಳು ಕೂಡ ತಮ್ಮ ವಿರೋಧಾಭಾಸಗಳನ್ನೆಲ್ಲ ಮರೆತು ಒಂದಾಗಬಲ್ಲರು.ಇದು ಚೆನ್ನಬಸವಣ್ಣನ ತಾಕತ್ತು.ದ್ವೇಷಿಸುವವರಿಗೆ ಮಾನವತೆಯನ್ನು ಬೋಧಿಸಿ,ಇಡೀ ಮನುಕುಲವನ್ನು ರಚಿಸುವ,ರಕ್ಷಿಸುವ,ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವ ಸಂಸ್ಕೃತಿ ಅಂತ ಏನಾದರೂ ಇವತ್ತು ಉಳಿದುಕೊಂಡಿದ್ದರೆ ಅದು ಪುಸ್ತಕ ಸಂಸ್ಕೃತಿ ಮಾತ್ರ. ಇಂತಹ ಪುಸ್ತಕ ಸಂಸ್ಕೃತಿಯ ಪರಿಚಾರಿಕೆಯನ್ನು ನಿಷ್ಕಲ್ಮಷವಾಗಿ ಮಾಡಿ ಮುಗಿಸಿ, ನಾನು ಏನೂ ಮಾಡಿಲ್ಲವೆಂಬ ರೀತಿ ನಿರುಮ್ಮಳವಾಗಿ ಇರಬಲ್ಲ ಅಣ್ಣ ಚನ್ನಬಸವಣ್ಣನವರಿಗೆ ಈ ಬಾರಿಯ ಗೌರವ ಡಾಕ್ಟರೇಟ್ ಪದವಿ ಘೋಷಿಸಿದ್ದರಿಂದ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಗೌರವ, ಘನತೆ ಹೆಚ್ಚಾಗಿದೆ.
ಇಂತಹದೊಂದು ಅತ್ಯಂತ ಗೌರವದ, ಅಷ್ಟೇ ಅಲ್ಲ, ಈ ಕಾಲದ ಅತ್ಯಂತ ಸಮಾಧಾನದ ವಿಷಯಕ್ಕೆ ಕಾರಣೀಕರ್ತರಾದ ವಿ.ವಿ.ಯ ಸಿಂಡಿಕೇಟ್ ಸದಸ್ಯರಿಗೆ, ಇತರರಿಗೆ ನಾಡು ಎಂದೆಂದಿಗೂ ಕೃತಜ್ಞವಾಗಿರುತ್ತದೆ.
ಧನ್ಯವಾದಗಳೊಂದಿಗೆ,

-ಬಿ. ಶ್ರೀನಿವಾಸ, ಸಾಹಿತಿ, ದಾವಣಗೆರೆ
