ಬಳ್ಳಾರಿ: ಬಳ್ಳಾರಿ ಸೀಮೆಯ ಕಥಾ ಹಂದರ ಹೊಂದಿರುವ ಅಮರ ಪ್ರೇಮಿ ಅರುಣ ಚಲನ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರದ ನಿರ್ದೇಶಕ ಜಿ. ಪ್ರವೀಣ್ ಕುಮಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಚಿತ್ರ ತಂಡದೊಂದಿಗೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಳ್ಳಾರಿ ನಗರ ಹಾಗೂ ಸುತ್ತ ಮುತ್ತ ಗ್ರಾಮಗಳಲ್ಲಿ 54 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು. ಚಿತ್ರದಲ್ಲಿ ಬಳ್ಳಾರಿಯ ಪ್ರಸಿದ್ಧ ಏಕಶಿಲಾ ಬೆಟ್ಟ ಕೂಡಾ ಒಂದು ಪಾತ್ರವಾಗಿದ್ದು ಚಿತ್ರ ನೋಡಿದವರು ನಾಡಿನಾದ್ಯಂತ ಕೊಂಡಾಡುತ್ತಿದ್ದಾರೆ ಎಂದು ಹೇಳಿದರು.
2.50 ಕೋಟಿ ರೂ. ಗಳ ವೆಚ್ಚದಲ್ಲಿ ‘ಒಲವು ಸಿನಿಮಾ’ ಸಂಸ್ಥೆ ಚಿತ್ರ ನಿರ್ಮಾಣ ಮಾಡಿದೆ. ರಾಜ್ಯದ 25 ಥೇಟರುಗಳಲ್ಲಿ ಚಿತ್ರ ತೆರೆ ಕಂಡಿದೆ ಎಂದು ತಿಳಿಸಿದರು.
ಚಿತ್ರದ ಬಳ್ಳಾರಿ ಭಾಷೆಯನ್ನು ಎಲ್ಲಾ ಜಿಲ್ಲೆಗಳಲ್ಲಿ ವಿಶೇಷವಾಗಿ ಬೆಂಗಳೂರಿನ ಪ್ರೇಕ್ಷಕರು ಮೆಚ್ಚಿರುವುದು ತಮಗೂ ತಮ್ಮ ತಂಡಕ್ಕೂ ಸಂತಸ ತಂದಿದೆ ಎಂದರು.
ಚಿತ್ರ ನಾಯಕ ಹರೀಶ್ ಶರ್ವ ಮಾತನಾಡಿ ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ಬಂದಿದ್ದು ಇಡೀ ಚಿತ್ರದ ತಂಡಕ್ಕೆ ಹರ್ಷ ತಂದಿದೆ. ಬಳ್ಳಾರಿಯ ಸೊಗಡಿನ ಚಿತ್ರದಲ್ಲಿ ನಟಿಸಿದ ತಮಗೆ ಈ ಪರಿಸರದ ಜನರು ತೋರುತ್ತಿರುವ ಮೆಚ್ಚುಗೆಗೆ ಹಿಂದಿನ ಜನ್ಮದಲ್ಲಿ ಬಳ್ಳಾರಿಯಲ್ಲಿ ಹುಟ್ಟಿದ್ದೆನು ಎಂಬ ಭಾವ ಉಂಟಾಗುತ್ತಿದೆ ಎಂದು ಭಾವುಕರಾಗಿ ನುಡಿದರು.
ಚಿತ್ರ ನಾಯಕಿ ದೀಪಾ ಆರಾಧ್ಯ ಅವರು ಮಾತನಾಡಿ, ಬಳ್ಳಾರಿ ತಮಗೆ ಎರಡನೆಯ ಮನೆಯಾಗಿದೆ. ಬಳ್ಳಾರಿಗರು ತಮ್ಮನ್ನು ಮನೆ ಮಗಳಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪದ್ಮಶ್ರೀ ಮಂಜಮ್ಮ ಜೋಗತಿ ಮಾತನಾಡಿ, ಕೌಟುಂಬಿಕ ಕಥಾ ಹಂದರಹೊಂದಿರುವ ಈ ಚಿತ್ರವನ್ನು ಕುಟುಂಬದ ಸದಸ್ಯರೆಲ್ಲರೂ ಥೇಟರುಗಳಿಗೆ ಬಂದು ನೋಡಬೇಕು. ಈ ಮೂಲಕ ಚಿತ್ರ ತಂಡಕ್ಕೆ ಪ್ರೋತ್ಸಾಹಿಸ ಬೇಕು ಎಂದು ಮನವಿ ಮಾಡಿದರು.
ಹಾಸ್ಯ ಪಾತ್ರದಲ್ಲಿ ನಟಿಸಿರುವ ಕೃತಿ ಭಟ್, ಚಿತ್ರದ ಶೂಟಿಂಗ್ ಮುನ್ನ ತಂಡ ಆಯೋಜಿಸಿದ್ದ ಕಾರ್ಯಾಗಾರಕ್ಕೆ ಬಂದಿದ್ದ ದಿನದಿಂದ ಚಿತ್ರೀಕರಣ ನಡೆಯುವ ದಿನಗಳಲ್ಲಿ ಬಳ್ಳಾರಿಗರು ತಮ್ಮನ್ನು ಪ್ರೀತಿಯಿಂದ ಕಂಡು ಉತ್ತೇಜಿಸಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಹ ನಿರ್ಮಾಪಕ ಮಂಡ್ಯ ಮಂಜು, ರಂಗಕರ್ಮಿ ಪ್ರದೀಪ್ ಕುಮಾರ್ ಜಿ ಉಪಸ್ಥಿತರಿದ್ದರು.