ಬಳ್ಳಾರಿ, ಮೇ 21: ರಾಷ್ಟ್ರೀಯ ಸೇವಾ ಯೋಜನೆ(ಎನ್ ಎಸ್ ಎಸ್) ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಶಿಸ್ತು, ತಾಳ್ಮೆ, ನಾಯಕತ್ವದ ಗುಣಗಳನ್ನು ಹೆಚ್ಚಿಸುತ್ತದೆ ಎಂದು ಎಸ್ ಎಸ್ ಎ (ಸರಳಾದೇವಿ) ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರಾಂಶುಪಾಲರಾದ ಡಾ. ಸಿ ಎಚ್ ಸೋಮನಾಥ್ ಅವರು ತಿಳಿಸಿದರು.
ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ಎಅ್ ಎಸ್ ಎ ( ಸರಳಾದೇವಿ) ಸರಕಾರಿ ಪ್ರಥಮದರ್ಜೆ ಕಾಲೇಜಿನ ಎನ್ಎಸ್ಎಸ್ ಎ ಬಿ ಸಿ ಡಿ ಘಟಕಗಳು ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಗುರುತಿಸುವಿಕೆ, ಸಮಗ್ರತೆ ಮತ್ತು ಜವಾಬ್ದಾರಿಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು
ಹೇಳಿದರು.
ಶಿಕ್ಷಣದ ಮೂಲಕ ಸೇವೆ ಮತ್ತು ಸಮಾಜಕ್ಕಾಗಿ ಸೇವೆಯ ಮೂಲಕ ಶಿಕ್ಷಣ ಎಂಬುದು ರಾಷ್ಟ್ರೀಯ ಸೇವಾ ಯೋಜನೆಯ ಅರ್ಥ ಎಂದು ವಿವರಿಸಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಈ ಮೂಲಕ ಸಮುದಾಯದ ಜೊತೆಗೆ ಸಹಭಾಗಿತ್ವ ಮನೋಭಾವನೆಯನ್ನು ವಿದ್ಯಾರ್ಥಿ ಜೀವನದಿಂದಲೇ ಬೆಳಿಸಿಕೊಂಡಾಗ ಉತ್ತಮ ನಾಗರಿಕರಾಗಲು ಸಹಕಾರಿಯಾಗುತ್ತದೆ ಎಂದು ಡಾ. ಸೋಮನಾಥ್ ಅಭಿಪ್ರಾಯ ಪಟ್ಟರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ಹಾಕಲು ಶಿಬಿರ ಅತ್ಯುತ್ತಮವಾದ ವೇದಿಕೆಯಾಗಿದ್ದು ವಿದ್ಯಾರ್ಥಿಗಳು ಇದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಪ್ಪಗಲ್ಲಿನ ಎಸ್‌ಡಿಎಂಸಿ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷ ಪಂಪಾಪತಿ, ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ್, ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಡಾ. ಪಂಚಾಕ್ಷರಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಪಂಪನಗೌಡ, ರಾಜ್ಯಶಾಸ್ತ್ರ ಉಪನ್ಯಾಸಕ ಡಾ.ಟಿ. ದುರಗಪ್ಪ, ಇತಿಹಾಸ ಸಹಾಯಕ ಪ್ರಾಧ್ಯಾಪಕ ಬಸಪ್ಪ ಕೆ, ಅರ್ಥಶಾಸ್ತ್ರ ಉಪನ್ಯಾಸಕ ವೀರೇಶಯ್ಯ ಸ್ವಾಮಿ ಹಾಗೂ ಗ್ರಾಮದ ಮುಖಂಡರು, ಹಳೆಯ ವಿದ್ಯಾರ್ಥಿಗಳು, ರಾಷ್ಟ್ರೀಯ ಸ್ವಯಂ ಸೇವಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುಮಾರಿ ಬಿಂದು ಪ್ರಾರ್ಥನೆ ಗೀತೆ ಹಾಡಿದರು. ಸಿ ಘಟಕದ ಸಂಚಾಲಕ ಪ್ರೊ ಪ್ರವೀಣ್ ಕುಮಾರ್ ಎಂ.ಎನ್. ಸ್ವಾಗತಿಸಿದರು. ಎನ್ ಎಸ್ ಎಸ್ ಎ ಘಟಕದ ಸಂಚಾಲಕ ಪ್ರೊ. ರಾಮಸ್ವಾಮಿ ಬಿ ನಿರೂಪಿಸಿದರು.
ಬಿ ಘಟಕದ ಸಂಚಾಲಕ ಡಾ. ಚನ್ನಬಸವಯ್ಯ ಹೆಚ್ ಎಂ ರವರು ವಂದಿಸಿದರು.
——