ಗಿಳಿ ಶಕುನ
ಹೊಸ ಕವಿತೆಯ ಸಾಲುಗಳಲ್ಲಿ
ನನ್ನವೇ ಹಳೆಯ ಕವಿತೆಯ ಪದಗಳು
ಮತ್ತೆ ಮತ್ತೆ ಮರುಕಳಿಸಿದಾಗ
ಓದುಗರು ಕರೆ ಮಾಡಿ ತಿದ್ದುತ್ತಾರೆ
ಕವಿತೆಯನ್ನು
ಸುಪ್ತ ಪ್ರಜ್ಞೆಯಲ್ಲಿ ಬರೆಯಬೇಕು;
ಪ್ರಜ್ಞಾ ಪೂರ್ವಕವಾಗಿ ತಿದ್ದಬೇಕು:
ಕವಿ ಮಿತ್ರ ಗದರುತ್ತಾನೆ!
ಈಗೀಗ ಮರೆವು ;
ನಾಲಿಗೆ ತುದಿಯಲ್ಲಿರುವ
ಹಳೆಯ ಗಾಯಕನ ಹೆಸರು
ಥಟ್ಟನೇ ನೆನಪಾಗುವುದೇ ಇಲ್ಲ !
ಹಳೆಯ ಜೋಕುಗಳನ್ನೇ ಮತ್ತೆ
ಮತ್ತೆ ಹೇಳಿ ನಗೆಪಾಟಲಿಗೀಡಾಗಿದ್ದೇನೆ
ಎಷ್ಟೋ ಸಲ!
ನೆನಪು ಉದ್ದೀಪಿಸಲು ವೈದ್ಯರು
ಸೂಚಿಸಿದ ಗುಳಿಗೆ ಸೇವಿಸುವುದನ್ನೂ
ಕೆಲವೊಮ್ಮೆ ಮರೆತು ಬಿಡುತ್ತೇನೆ !
ಬೆಂಗಳೂರಿನ ರೈಲು
ಹತ್ತುವ ಬದಲು ಮಂಗಳೂರಿನ
ರೈಲು ಹತ್ತಿ ಒಮ್ಮೆ ಬಲು ಫಜೀತಿಯಾಗಿತ್ತು!
ಬಿಡಿ ,ಈಗೆಲ್ಲಾ ಅವು ಯಾಕೆ
ನಿಮಗೆ ಸುಮ್ಮನೆ !
ಕಾಲ ಬಹಳಷ್ಟು ಸರಿದಿದೆ;
ಬರಿಗಾಲಿನಲಿ ನಡೆದ ಹಳೆಯ ಕಾಲಿನ ಗಾಯಗಳನ್ನು ಕಾಲವೇ ವಾಸಿ ಮಾಡಿದೆ:
ಹೊಸ ಗಾಯಗಳ ಭಯಕೆ
ದುಬಾರಿ ಚಪ್ಪಲಿ ಧರಿಸಿರುವೆ!
ಸುಳ್ಳು ಹೇಳಿದರೆ ಪಾಪ
ತಗಲುತ್ತದೆ; ಸತ್ಯ ನುಡಿದರೆ ಬೆಂಕಿ
ತಾಗುತ್ತದೆ:
ಪರಿಚಿತ ದಾರಿಯೂ
ಅಪರಿಚಿತವಾಗುವ ಈ ವಯಸಿನಲಿ!
ಕೈ ಹಿಡಿಯಬೇಕಿದ್ದವಳೊಬ್ಬಳು
ಕೈ ಕೊಟ್ಟ ಆ ಗಳಿಗೆಯನ್ನು ಮರೆವ
ದಾರಿಗಳ ಹುಡುಕುತ್ತ
ಗಿಳಿ ಶಕುನದವನಿಗೆ ನನ್ನ ಅಂಗೈ ಒಪ್ಪಿಸಿ
ಕುಳಿತಿರುವೆ
ನಿನಗೆ ಬೇಕಾದ ಸಂಪತ್ತು ಕೊಡುವೆ
ದೊರೆಯೇ !
ಹೇಳು ! ಹೇಳು ನಿಜ ಹೇಳು !
ಅವಳ ಹೆಸರು ಯಾವಾಗ ಮರೆಯುತ್ತೇನೆ
ಸರಿಯಾಗಿ ಹೇಳು!
-ಎಲ್ವಿ(ಡಾ. ಲಕ್ಷ್ಮಣ ವಿ.ಎ) ಬೆಂಗಳೂರು
—–