ಅನುದಿನ ಕವನ-೧೬೪೪, ಕವಿ: ಆರಿಫ್ ರಾಜಾ, ಇಳಕಲ್, ಕವನದ ಶೀರ್ಷಿಕೆ:ಒಂದು ಅಲ್ಪಾಯು ಪ್ರಣಯ ಪ್ರಸಂಗ

ಒಂದು ಅಲ್ಪಾಯು ಪ್ರಣಯ ಪ್ರಸಂಗ

ಮೂರನೆಯ ಜಾವದ ಹೊತ್ತಿಗೆ
ಏನೆಲ್ಲಾ ಪಟ್ಟು ಬಳಸಿ ಆಟವಾಡಿದೆವು ನಾವು
ಮಲಗಿ ಎದ್ದು, ಎದ್ದು ಮಲಗಿ
ರತಿ ಉತ್ಸಾಹದಲಿ ಮತ್ತೆ ಮುಲುಗಿ
ಅವರಿವರನು ಆಡಿಕೊಳ್ಳುವ
ನಮ್ಮನ್ನೇ ನಾವು ನೋಡಿಕೊಳ್ಳುವ
ಕಿಲ ಕಿಲ ನಗು,ಗುಸುಗುಸು ಮಾತು
ಅರ್ಥಕ್ಕೆ ಸಿಗದ ಅಶ್ಲೀಲ ಗುಂಗು..

ಬೆಳ್ಳಿ ಚುಕ್ಕಿ ಮೂಡುವ ಹೊತ್ತಿಗೆ
ಮೂಗುಂಗುರದ ಚೆಲುವೆ
ನೀ ಹೊತ್ತಿಸಿದೆ ಸಿಗರೇಟು ಹೊಗೆ ಸುರುಳಿ
ಗುಂಗುರು ಗುಂಗುರು ಆಲೋಚನೆ..
ಒಂದಾಟ ಮುಗಿದು
ಮತ್ತೊಂದಾಟಕೆ ಜಿಗಿಯಿವುದರೊಳಗೆ
ನೀನು ನೀನಾಗಿ ಉಳಿದಿರಲಿಲ್ಲ
ನಾನು ನಾನಾಗಿ..
ಅಂಥದೇನು ಬದಲಾಗಿ ಹೋಯ್ತು
ನಮ್ಮಿಬ್ಬರ ನಡುವೆ?
ಕೇವಲ ಒಂದು ಸಿಗರೇಟು ಉರಿದು
ಬೂದಿಯಾಗುವುದರೊಳಗೆ!

ಅರ್ಧಕ್ಕೆ ಮೈಕೊಡವಿ ಎದ್ದೆ
ಕಳಚಿದ ಬಟ್ಟೆ ತೊಟ್ಟು ನಾನು
ಅದೇ ಬಯಸಿದವಳಂತೆ
ಏನೂ ಮಾತನಾಡದೆ ಸುಮ್ಮನೆ ಕುಂತೆ ನೀನು
ಮತ್ತೊಂದು ಸಿಗರೇಟು ಹಚ್ಚಿ
ಜಾಗ ಖಾಲಿ ಮಾಡು ಎಂಬಂತೆ,
ಹಠಾತ್ ದಾಳಿಗೊಳಗಾದ
ಕಟೆದ ಕಪ್ಪು ಶಿಲೆಯ
ವಿಚಲ ವಿಗ್ರಹವಾಗ ನಿನ್ನ ಭಂಗಿ

ಹೇಗೆ ಮುಗಿಸುವುದು
ಈ ಅಲ್ಪಾಯು ಪ್ರಣಯವ?
ಸುಖವಲ್ಲದ ಸುಖಕೊಟ್ಟ
ಈ ಅಸಂಗತ ವಿದಾಯವ?
ತಿಳಿಯದೆ ಅರೆಗತ್ತಲಲ್ಲಿ
ನಿನ್ನ ಮೊಲೆತೊಟ್ಟಿಗೆ
ಜೋತು ಬಿದ್ದ ಅನಾಥ ಶಿಶುರಾತ್ರಿಯ
ನೇವರಿಸುತ್ತಾ ನಾನು,
ಕ್ಷಣಾರ್ಧದಲಿ ಸೃಷ್ಟಿಯಾಗಿ
ಮರುಕ್ಷಣವೇ ಬತ್ತಿ ಹೋದ
ಮಧುಮಂಚದ ನೀಲಿ ಕೊಳಕ್ಕೆ
ಹರಳುಗಲ್ಲೆಸೆಯುತ್ತಾ ನೀನು..

ಬೆಳಗಾಗುವುದನೇ ಕಾಯುತ್ತಾ
ಸುಮ್ಮನೆ ಹೊತ್ತು ನೂಕಿದೆವು
ಬೆನ್ನ ಬಂಡೆಗಳಿಗೆ ಬೆನ್ನು ‌ಮಾಡಿ
ನಮ್ಮಿಬ್ಬರ ನಡುವೆ ಬಿರುಕು ಬಿಟ್ಟ
ಮೌನವ ಅಚ್ವರಿಗಣ್ಣುಗಳಲ್ಲಿ!


-ಆರಿಫ್ ರಾಜಾ, ಇಳಕಲ್