ಅನುದಿನ ಕವನ-೧೬೪೩, ಕವಿ:ಎ.ಎನ್.ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಕಾವ್ಯ!

“ಇದು ಕಾವ್ಯದ ಜೀವದ್ರವ್ಯದ ಅನಾವರಣದ ಕವಿತೆ. ಕಾವ್ಯದ ಆಂತರ್ಯ ಅಂತರಾಳದ ಸಂವೇದನೆಗಳ ರಿಂಗಣದ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಕಾವ್ಯದ ಅರಿವು ಅಂತಃಕರಣಗಳ ಸಾರವಿದೆ. ಅರ್ಥೈಸಿದಷ್ಟೂ ಕಾವ್ಯದ ಚೆಲುವು ನಿಲುವುಗಳ ವಿಸ್ತಾರವಿದೆ. ಕಾವ್ಯ ಓದುವವರ ಒಡಲು ಸುಡುವ ಬೆಂಕಿಯಾಗಬಾರದು. ಎದೆಯಂಗಳ ಬೆಳಗುವ ಬೆಳಕುವ ಬೆಳಕಾಗಬೇಕು. ಚಿತ್ತದಂಗಳಕೆ ಚೈತನ್ಯ ತುಂಬುವ ಬೆಳದಿಂಗಳಾಗಬೇಕು. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್, ಗುಬ್ಬಿ.

ಕಾವ್ಯ.!

ಕೇಳಿದಳು ಗೆಳತಿ..
“ಸದಾ ಒಲವು ಚೆಲುವು
ನಲಿವುಗಳನೆ ಕುರಿತೇಕೆ
ಬರೆವೆ ಹೇಳು ಗೆಳೆಯ.?
ನೀ ಬರೆಯಬಾರದೇಕೆ
ಬಿಚ್ಚಿಡುತ ಜಗ ತುಂಬಿಹ
ಕಷ್ಟ ಕೋಟಲೆ ಕತ್ತಲೆಯ.??”

ನುಡಿದೆ ನಿಟ್ಟುರಿಸಿಡುತ..
“ದುಃಖ ದುಮ್ಮಾನಗಳೇ
ತುಂಬಿದೆ ಇಳೆಯ..!
ನಗೆಯ ಪನ್ನೀರಿಗಿಂತ
ಕಣ್ಣೀರ ಪ್ರವಾಹವೇ
ಹರಿಯುತಿದೆ ನಿತ್ಯ.!

ಸಾವಿಲ್ಲದ ಮನೆಯಿಲ್ಲ
ನೋವಿಲ್ಲದ ಮನವಿಲ್ಲ
ಶೋಷಣೆ ವಂಚನೆಗಳಿಲ್ಲದ
ನಗರ ಊರುಗಳಿಲ್ಲ.!
ಹಗೆ ಸ್ವಾರ್ಥ ಮತ್ಸರ
ಇಲ್ಲದ ಹೃದಯವಿಲ್ಲ.!

ಸಾಹಿತ್ಯವೆಂದರೆ ಅಗ್ನಿಗೆ
ತೈಲ ಸುರಿಯುವುದಲ್ಲ.!
ನರಳಿಕೆಗಳ ನೆನಪಿಸಿ
ವೃಥಾ ನರಳಿಸುವುದಲ್ಲ!
ದೋಷಗಳ ತಿಳಿಸಿ
ವಿನಾ ಕೆರಳಿಸುವುದಲ್ಲ.!

ಬರಹವೆಂದರೆ ವಿಕಾರಗಳ
ಬಣ್ಣಿಸಿ ಬೆದರಿಸುವುದಲ್ಲ.!
ಕವಿತೆಯಂದರೆ ಗೆಳತಿ..
ಜೀವ ಜೀವನಪ್ರೀತಿ.!
ಬದುಕಿಗೆ ಭರವಸೆಗಳ
ತುಂಬುವ ಸಂಪ್ರೀತಿ.!

ಕಾವ್ಯವೆಂದರೆ ಗೆಳತಿ..
ಕಷ್ಟಗಳ ಕಾರ್ಗತ್ತಲಿನಿಂದ
ಬೆಳಕಿನೆಡೆಗೆ ನಗುನಗುತ
ನಡೆಸಲು ಪ್ರೇರಣ.!
ಮನವನು ಸುಂದರಗೊಳಿಸಿ
ಬದುಕನು ಸಿಂಗರಿಪ
ಅಕ್ಷರಗಳ ತೋರಣ.!


-ಎ.ಎನ್.ರಮೇಶ್, ಗುಬ್ಬಿ.

Leave a Reply

Your email address will not be published. Required fields are marked *