ಮುದ್ರಣಾಲಯ ಆರಂಭಿಸಲು ತಮ್ಮ ಮನೆಯನ್ನೇ ಮಾರಿದ ಅರಕು ಅಂಗಿಯ ಹಿತ ಚಿಂತಕ ಫ.ಗು. ಹಳಕಟ್ಟಿ ಚಿತ್ರ-ಬರಹ:ಸ್ವ್ಯಾನ್ ಕೃಷ್ಣಮೂರ್ತಿ, ಮುದ್ರಕರು, ಬೆಂಗಳೂರು

ಮುದ್ರಕನೊಬ್ಬನ (ಫ.ಗು. ಹಳಕಟ್ಟಿ) ಜನ್ಮದಿನವನ್ನು (ಜುಲೈ ೨) ಕರ್ನಾಟಕ ಸರ್ಕಾರವು `ವಚನ ಸಾಹಿತ್ಯ ಸಂರಕ್ಷಣಾ ದಿನ’ವಾಗಿ ಘೋಷಿಸುವ ಮೂಲಕ ಅವರಿಗೆ ಗೌರವಾರ್ಪಣೆ ಸಲ್ಲಿಸುತ್ತಿರುವುದು ಮುದ್ರಕರೆಲ್ಲರಿಗೂ ಹೆಮ್ಮೆಯ ವಿಷಯ.

ಮಠ, ಮನೆಗಳ ದೇವರ ಗೂಡಿನ ಕತ್ತಲಲ್ಲಿ ಸೊರಗುತ್ತಿದ್ದ ವಚನ ಸಾಹಿತ್ಯದ ತಾಡೋಲೆಗಳನ್ನು ಕಂಡು ಫ.ಗು. ಹಳಕಟ್ಟಿ ಯವರು ಮರುಗಿದರು.

ನಮ್ಮ ನಿರ್ಲಕ್ಷದಿಂದ ಅನಾಥವಾಗಿರುವ ತಾಡೋಲೆಗಳು, ಗೆದ್ದಲು ಹುಳುಗಳಿಗೆ ಆಹಾರವಾಗುತ್ತಿದೆ, ಹೀಗೆ ಮುಂದುವರಿದರೆ ಒಂದು ಸಾಹಿತ್ಯ ಪರಂಪರೆ ಬೆಳಕಿಗೆ ಬಾರದೆ ನಶಿಸಿಹೋಗುತ್ತದೆ ಎಂಬುದನ್ನು ಮನಗೊಂಡು, ಅಂದಿನಿಂದ ಮನೆ ಮಠಗಳಲ್ಲಿದ್ದ ತಾಡೋಲೆಗಳನ್ನು ಹುಡುಕಿತಂದು ಅದರಲ್ಲಿನ ಅರ್ಥ ಬಿಡಿಸಿ ಬರೆಯುತ್ತ ರಾಶಿ ರಾಶಿ ವಚನಗಳನ್ನು ಸಂಗ್ರಹಿಸಿದರು.

ಹೀಗೆ ಸಂಗ್ರಹಿಸಿದ ವಚನ ಸಾಹಿತ್ಯವನ್ನು ಸಾಮಾನ್ಯ ಜನರಿಗೆ ತಲುಪಿಸಬೇಕೆಂಬ ಛಲ ತೊಟ್ಟರು, ಹೀಗೆ ತಲುಪಿಸಲು ಪ್ರತಿಗಳಿಗಾಗಿ ಕೈಬರಹವನ್ನೇ ಮುದ್ರಣ ಪ್ರತಿನಿಧಿಯಾಗಿಸಿಕೊಂಡರು. ಮುಂದೆ ಅಸಂಖ್ಯ ಪ್ರತಿಗಳು ಬೇಕಾದಾಗ ಕೈಬರಹದಿಂದ ಸಾಧ್ಯವಾಗದೆ ಚಿಂತೆಗೀಡಾದರು.

ಅವರ ಮುಂದಿನ ದಾರಿಗೆ ಬೆಳಕಾಗಿ ಕಂಡದ್ದು ಮುದ್ರಣ ಕಲೆ. ಹೇಗಾದರು ಮಾಡಿ ಒಂದು ಮುದ್ರಣಾಲಯವನ್ನು ತೆರೆಯಲೇ ಬೇಕೆಂದು ನಿರ್ಧರಿಸಿದಾಗ ಅವರಿಗೆ ಆರ್ಥಿಕ ತೊಂದರೆ ಎದುರಾಯಿತು. ಆಗ ತನ್ನ *ಮನೆಯನ್ನೇ ಮಾರಿ ೧೯೨೫ ರಲ್ಲಿ `ಹಿತ ಚಿಂತಕ’ ಮುದ್ರಣಾಲಯವನ್ನು ಬಿಜಾಪುರದಲ್ಲಿ ತೆರೆದರು. ಮುದ್ರಣಾಲಯಕ್ಕೆ ಕಾಗದ, ಮೊಳೆ, ಮಸಿಯನ್ನು ಕೊಳ್ಳಲು ತನ್ನ ಕೊರಳಲ್ಲಿದ್ದ ಬಂಗಾರದ ಕರಡಿಗೆಯನ್ನೇ ಮಾರಿದಂತಹ ಮಹಾನುಭಾವ ಫ.ಗು.ಹಳಕಟ್ಟಿ.

ಈ ರೀತಿ ಮುಂದೆ ೨೫೦ ವಚನಕಾರರ ಸಾಹಿತ್ಯವನ್ನು ಸಂಶೋಧಿಸಿ ಪ್ರಕಟಿಸಿದರು. ಫ.ಗು. ಹಳಕಟ್ಟಿಯವರು ಜೀವಿತಾವಧಿಯಲ್ಲಿ ಪ್ರಕಟಿಸಿದ ಎಲ್ಲಾ ಸಾಹಿತ್ಯವನ್ನು ೧೫ ಸಮಗ್ರ ಸಂಪುಟಗಳನ್ನು ೧೦,೦೦೦ ಪುಟಗಳಲ್ಲಿ ಬಿ.ಎಲ್.ಡಿ. ಸಂಸ್ಥೆಯು ಹೊರತಂದಿದೆ.

ಮರಾಠಮಯವಾಗಿದ್ದ ಬಿಜಾಪುರದಲ್ಲಿ ಕನ್ನಡ ಶಾಲೆಗಳನ್ನು ತೆರೆದರು. ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿಯೇ ಪ್ರತ್ಯೇಕ ಶಾಲೆಗಳನ್ನು ಆರಂಭಿಸಿದರು. ೧೯೧೨ ರಲ್ಲಿಯೇ ಶ್ರೀ ಸಿದ್ದೇಶ್ವರ ಸಹಕಾರ ಬ್ಯಾಂಕ್ನ್ನು ಸಹ ಆರಂಭಿಸಿದರು. ಸಿದ್ದೇಶ್ವರ ಸಂಸ್ಥೆಯನ್ನು ಸಹ ಹುಟ್ಟುಹಾಕಿದರು. ಇವರು ಪ್ರಾರಂಭಿಸಿದ ಮೂರು ಸಂಸ್ಥೆಗಳು ಶತಮಾನೋತ್ಸವ ಆಚರಿಸಿಕೊಂಡು ಯಶಸ್ವಿಯಾಗಿ ಇಂದಿಗೂ ಸಮಾಜಸೇವೆಯಲ್ಲಿ ಮುಂಚಣಿಯಲ್ಲಿವೆ.

ಸಮಾಜ ಸೇವೆ ಮಾಡುವ ಸಲುವಾಗಿ ಆಗಲೇ ಮಹಾರಾಷ್ಟ್ರ ಸರ್ಕಾರದ ವಿಧಾನಸಭೆಯನ್ನು ಪ್ರವೇಶಿಸಿದ್ದ ಹಳಕಟ್ಟಿಯವರು ಮುಂದಿನ ಉತ್ತಮ ರಾಜಕೀಯ ಜೀವನವನ್ನು ಬದಿಗೊತ್ತಿದ್ದಲ್ಲದೆ, ವೃತ್ತಿಯಿಂದ ವಕೀಲರಾಗಿದ್ದ ಇವರು ಮುಂದೆ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗುತ್ತಿದ್ದರು. ಇಂತಹ ಅವಕಾಶಗಳನ್ನು ಲೆಕ್ಕಿಸದೆ ಎಲ್ಲವನ್ನು ಬದಿಗೊತ್ತಿ ಬದುಕಿಡಿ ಗಂಧದ ಕೊರಡಿನಂತೆ ವಚನ ಸಾಹಿತ್ಯ ಸಂಸ್ಕೃತಿಗಾಗಿ ಸಮಾಜದ ಶ್ರೇಯಸ್ಸಿಗಾಗಿ ಕನ್ನಡದ ಏಳಿಗೆಗಾಗಿ ತಮ್ಮನ್ನು ತಾವೇ ಸಮರ್ಪಿಸಿ ಕೊಂಡರು.

– ಸ್ವ್ಯಾನ್ ಕೃಷ್ಣಮೂರ್ತಿ, ಮುದ್ರಕರು, ಬೆಂಗಳೂರು
——