“ಇದು ಕವಿತೆಯ ಮೇಲೊಂದು ಮಧು ಮಧುರ ಕವಿತೆ. ಕಾವ್ಯದ ಭಾವಭಾಷ್ಯಗಳ ಬೆಳಕಾಗಿಸುವ ಅಕ್ಷರ ಪ್ರಣತೆ. ಕವಿತೆಯ ಈ ಸಾಲುಗಳು ನನ್ನದಷ್ಟೇ ಅಲ್ಲ, ನಮ್ಮ ನಿಮ್ಮೆಲ್ಲರ ಸ್ವಾನುಭವ, ಲೋಕಾನುಭವ, ರಸಾನುಭಾವಗಳ ಚಿರ ಚಿರಂತನ ಜೀವದೊರತೆಯೂ ಹೌದು. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಕವಿತೆಯೆಂದರೆ…
ನನಗೆ ಕವಿತೆಯೆಂದರೆ…
ಮನದೊಳಗೆ ಅವಿತ
ಭಾವಗಳ ಅನಾವರಣ!
ಮರೆತ ನೋವುಗಳ
ಮಧುರ ನೆನಪುಗಳ
ಸುಂದರ ಸಮೀಕರಣ.!
ಒಲವು ನಿಲುವುಗಳ
ನಿತ್ಯ ಸತ್ಯ ಚಿರಂತನ
ಹೃದಯ ಧೃವೀಕರಣ.!
ಹೊಸತು ಕಲ್ಪನೆಗಳ
ಇನಿತು ಕಾಮನೆಗಳ
ಅರಳಿಪ ಹೊಂಗಿರಣ!
ಚಿಂತನೆ ಮಂಥನಗಳಲಿ
ಒಡಲ ಬೆಳದಿಂಗಳಾಗಿಪ
ಅರಿವು ಅಂತಃಕರಣ.!
ರಾಗದ್ವೇಷ ವಿಕಾರಗಳ
ತೊಳೆದು ಬೆಳಗುವ
ಜೀವಭಾವ ಶುದ್ಧೀಕರಣ.!
ಹಗೆ ಸ್ವಾರ್ಥ ಹಿಂಸೆಗಳ
ತೊಡೆದು ಕಲ್ಮಶ ಕಳೆವ
ಚಿತ್ತದ ನಿರ್ಜಲೀಕರಣ.!
ಪ್ರೀತಿ ಮಮಕಾರಗಳ
ಬಿತ್ತಿ ಬೆಳೆದು ಎದೆಯ
ಹಸನಾಗಿಸುವ ಸಂಸ್ಕರಣ..!
ರಂಜನೆಯ ಜೊತೆಗೆ
ಜೀವಗಳ ಬೆಸೆವ
ಸಂವೇದನೆಗಳ ನವೀಕರಣ.!
ಅಕ್ಷರದಿ ಬೆರೆತು ಬೆಳೆವ
ಕಾವ್ಯ ಭಾವಭಾಷ್ಯಗಳ
ಪರಸ್ಪರ ಉನ್ನತೀಕರಣ.!
ಉಸಿರುಸಿರ ಹಸಿರಾಗಿಸಿ
ಬಾಳ ಚೈತನ್ಯವಾಗಿಸುವ
ಭಾವಬಂಧಗಳ ಶೈತಲೀಕರಣ.!
-ಎ.ಎನ್.ರಮೇಶ್, ಗುಬ್ಬಿ.