ಮಾಜಿ ವಿಧಾನ ಪರಿಷತ್ತು ಸಭಾಪತಿ ಎನ್.ತಿಪ್ಪಣ್ಣ ನಿಧನ: ಶಾಸಕ ನಾರಾ ಭರತ್ ರೆಡ್ಡಿ ಸಂತಾಪ

ಬಳ್ಳಾರಿ, ಜು.11: ಹಿರಿಯ ನ್ಯಾಯವಾದಿ, ರಾಜ್ಯ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಎನ್.ತಿಪ್ಪಣ್ಣ ಅವರ ಅಗಲಿಕೆ ಆಘಾತ ತಂದಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಶುಕ್ರವಾರ ಅವರು ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಅತೀವ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ತಿಪ್ಪಣ್ಣ ಅವರು ನನ್ನ ಮಾರ್ಗದರ್ಶಕರಾಗಿದ್ದರು, ನಾನು ಶಾಸಕನಾಗುವ ಮೊದಲು ಹಾಗೂ ನಂತರ ಸಾಕಷ್ಟು ಸಲ ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿರುವೆ, ಹಲವು ವಿಷಯಗಳಲ್ಲಿ ನನಗೆ ಅವರು ಸಲಹೆ ನೀಡಿದ್ದರು ಎಂದು ಶಾಸಕ ನಾರಾ ಭರತ್ ರೆಡ್ಡಿ ತಮ್ಮ ಹಾಗೂ ತಿಪ್ಪಣ್ಣ ಅವರ ಸಂಬಂಧವನ್ನು ನೆನಪಿಸಿಕೊಂಡಿದ್ದಾರೆ.

ನಾರಾ ಭರತ್ ರೆಡ್ಡಿ

ತಿಪ್ಪಣ್ಣ ಅವರು ಸುದೀರ್ಘ ಬದುಕು ಸವೆಸಿದ್ದು, ನಮ್ಮಂತಹ ಯುವಕರಿಗೆ ಮಾದರಿ, ಅವರು ವಕೀಲರಾಗಿ, ಸರ್ಕಾರಿ ಅಭಿಯೋಜಕರಾಗಿ, ಶಿಕ್ಷಣ ಪ್ರೇಮಿಯಾಗಿ, ವೀವಿ ಸಂಘವನ್ನು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ಸಮರ್ಥವಾಗಿ ಸಂಘಟಿಸಿದ ಸಂಘಟಕರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಸಭಾಪತಿಯಾಗಿ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾಗಿ ಮಾಡಿದ ಸೇವೆಯನ್ನು ಕನ್ನಡ ನಾಡು ದೀರ್ಘ ಕಾಲ ನೆನಪಿನಲ್ಲಿಡಲಿದೆ ಎಂದು ಅಭಿಪ್ರಾಯ ಪಟ್ಟಿರುವ ಶಾಸಕ ನಾರಾ ಭರತ್ ರೆಡ್ಡಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ದೊರೆಯಲಿ ಎಂದು ಹಾರೈಸಿದ್ದಾರೆ.
—–