ಅನುದಿನ ಕವನ-೧೬೭೭, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ: ಸಾಲು ಸಾಲು

ಸಾಲು ಸಾಲು

ಅವಳ ಬೈಗುಳಗಳು ಕೇಳದ ಕಿವಿಗಳು
ಈಗೀಗ ಒಂಟಿಯಾಗಿ ಬಿಕೋ ಎನ್ನುತ್ತಿವೆ
ಅವಳ ಹಾಜರಾತಿಯ ಮತ್ತವಳ
ಅಳಲಿನ ಕಣ್ಣಿನ ನಗುವನು ಕನ್ನಡಿ
ಮಳೆ ಕಾದ ಮರುಭೂಮಿಯಂತೆ
ಹಂಬಲಿಸಿದೆ

ತೀರಾ ಪ್ರೀತಿಸುವ
ಬುದ್ಧನನ್ನು ಮನಸ್ಸಿನಿಂದ
ದೂರ ಸರಿಸಿ
ಮತ್ತಿನ್ನೆಲ್ಲೋ ನೆಮ್ಮದಿಯ
ಗೂಡ ಹುಡುಕುತ್ತಿದ್ದೆ

ಆಗ ನನ್ನೊಳಗೇ
ಅವಿತ ಅವನು
ಗಹಗಹಿಸಿ ನಗುತ
ನನ್ನ ಮಡಿಲಲ್ಲಿ
ಬೆಚ್ಚಗೆ ಮಲಗಿದ್ದ
ಕಂದನತ್ತ ಬೆರಳು
ಮಾಡಿ ತೋರಿಸಿ
ಮೆಲ್ಲಗೆ ಸದ್ದಿಲ್ಲದೆ
ಗಾಳಿಯಲ್ಲಿ ಲೀನನಾದ
ಈಗ ದುಃಖವಿಲ್ಲದ
ನನ್ನೊಡಲಿನಲ್ಲಿ ಆಸೆಗಳಿಗೇ
ಜಾಗವಿಲ್ಲ…

-ಸಂಘಮಿತ್ರೆ ನಾಗರಘಟ್ಟ