ಒಂದು ಮೂಳೆಯ ಕೊಳಲು
ಬಂದು ನಾದವಾಗಿ ನಿಶ್ಯಬ್ದದ ಅಲೆಯಲ್ಲಿ ಲೀನವಾದವರು ಎಷ್ಟೋ
ನೆನ್ನೆ ತಾನೆ ನಕ್ಕವರು ಅತ್ತವರು ಇವತ್ತು ಎತ್ತ ಹೋದರೋ ಏನು ಬ್ಯಾನಿ ಇತ್ತೋ
ಗಾಳಿ ಎಳೆದುಕೊಂಡು ಹೋಯಿತೋ
ಯಾರಾದರೂ ಬಹಿಷ್ಕರಿಸಿದರೋ ಬಲಿ ಹಾಕಿದರೋ ಇವತ್ತು ಇದ್ದವರು ನಾಳೆಗಿಲ್ಲ
ರಾತ್ರಿ ಹುಟ್ಟಿದ ಮಕ್ಕಳೆ ಮುಂಜಾವಿಗಿಲ್ಲ
ತಂಗಾಳಿಯ ಯಾರಾದರು ಕದ್ದರೇ
ಬೆಳಕ ಕುಡಿಯ ಚಿವುಟಿ ಹೊಗೆ ಹಾಕಿ ಉಸಿರುಗಟ್ಟಿಸಿದರೇ
ಒಳಗೇ ಉರಿವ ಕಿಚ್ಚಿನ ಪಂಜು
ಯಾವೂರ ಯಾವ ಪಯಣಕ್ಕೆ
ಸೂತಕದ ಬೀದಿಗಳಲ್ಲಿ ಇದೇನಿದು
ಜಗನ್ಜಾತ್ರೆಯ ಜಂಗುಳಿ
ಉರಿಯುತ್ತಿವೆ ಏಕೆ ಈ ಪರಿಯ ಲಾವಾಗಣ್ಣು
ಬಂದದ್ದೆಲ್ಲ ಬರಿದಾಗಲೆಂದೇ ಬರುವುದೇ
ದುಃಖದ ಒಂದೋಂದು ಹಣತೆಯೂ
ಬುದ್ದ ಪೂರ್ಣಮಿಯ ನಗೆಯ ತಂಪೇ
ಬಿಕ್ಕಿ ಬಿಕ್ಕಿ ಅತ್ತ ಬಿಕ್ಕುಗಳೆಲ್ಲ ಎನ್ನ ಬಿಟ್ಟು ಎಲ್ಲಿ ಹೋದರು ನಕ್ಕು ನಲಿದು ನೆತ್ತಿಯಲಿ ಚಿಮ್ಮಿದ ಚಿಲುಮೆ ಈಗ ಎಲ್ಲಿ ಆವಿ ಆಯಿತು
ಕೈಗೆಟುಕುವ ಆಕಾಶ ಯಾವ ತೀರದಲ್ಲಿದೆ
ದಿಕ್ಕೇ ಇಲ್ಲದ ದಿಕ್ಕಿಗೆ ದಿಕ್ಕು ಯಾವುದು
ಮನವೀಗ ಖಾಲಿ ಖಾಲಿ
ಎಲುಬಿನ ಕೊಳಲು
ಇದೇನಿದು ಹೆಣ್ಣ ಹೆಜ್ಜೆಯ ಗುರುತು
ಅಹಾ ಅವಳ ಸೂರ್ಯೋದಯದ ಕಾಲ ಬಂತೇ
ನುಡಿಸುವೆ ಎಲುಬಿನ ಕೊಳಲ
ಅಲೆ ಅಲೆ ಎಲ್ಲೆಡೆ ಹರಡಲಿ.
-ಡಾ.ಮೊಗಳ್ಳಿ ಗಣೇಶ್, ಹೊಸಪೇಟೆ
***