ಅನುದಿನ ಕವನ-೧೭೦೫, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ನಿಸ್ವಾರ್ಥಿ ನನ್ನ ಮನಸು

ನಿಸ್ವಾರ್ಥಿ ನನ್ನ ಮನಸು

ಗೊತ್ತೇ ಆಗದೆ ಮತ್ತೆ ಮತ್ತೆ ಕಣ್ತುಂಬಿ
ತುಟಿಯಲಿ ಡೊಂಕು ಮೊಗದಿ ಪ್ರಶ್ನೆ

ಸೋತು ಸುಮ್ಮನೆ ಒರಗಿ ಮೆಲ್ಲಗೆ ಬಾಗಿ
ಒಳಗಿಣುಕಿದರೆ ಎದೆ ತುಂಬಿದ ಗಾಬರಿ
ಅದೇನು ಅಸ್ತವ್ಯಸ್ತ ವಿಲಕ್ಷಣ ಆವರಣ
ಆ ಮೂಲೇಲಿ ಮುಖ ಬಿಗಿದ ಮನಸು

ಕ್ಷಣ ಏನೂ ತಿಳಿಯದೆ ಮಾತು ಬಾರದೆ
ಆ ಮೂಲೆಯತ್ತ ಸಾವರಿಸಿ ಮೆಲ್ಲನೆ ತೆವಳಿ
ಮೆತ್ತಗೆ ಮೈದಡವಿ ತಲೆ ನೇವರಿಸೆ ಥಟ್ಟನೆ
ನನ್ನತ್ತ ಬೆನ್ನು ಮಾಡಬೇಕೆ ಕೈ ಕೊಸರಿ ಅದು

ನನಗೂ ಕಳವಳ ಗೊತ್ತು ನನ್ನದೆ ತಪ್ಪು
ಮರೆತೇ ಬಿಟ್ಟೆ ನನ್ನದೆ ನನಗಾಗೆ ಇರುವ
ಸರ್ವಸ್ವವೂ ನಾನಾಗಿ ತಾನೇ ನಾನಾದ
ಮನದತ್ತ ನೋಡದೆ ಹೋದ ಮಹಾತಪ್ಪು

ಬಳಿ ಸರಿದು ಕೆನ್ನೆ ತಟ್ಟಿ ಮೊಗ ಎತ್ತಿದರೆ
ಕಣ್ಣು ಬಾತು ಕೆಂಪಡ‌ರಿ ಕೆನ್ನೆ ಮೇಲೆ ಕರೆ
ಓ ನಂದಲ್ಲವೆ ಅಲ್ಲ ಕಣ್ತುಂಬಿದ ಆ ಕಂಬನಿ
ನೊಂದು ಬಿಮ್ಮನೆ ಕುಳಿತ ಈ ಮನಸಿನದು

ಬಾಚಿ ತಬ್ಬಿ ಮುತ್ತಿಟ್ಟು ಹೇಳಿದೆ ಮುದ್ದಿನಲಿ
ಇನ್ನೆಂದೂ ಹೀಗಾಗೋದಿಲ್ಲ ದೇವರಾಣೆ
ನನ್ನದೆಲ್ಲ ನಿನ್ನದೆ ನೀ ಬಲ್ಲೆ ಬಲು ಚೆನ್ನಾಗಿ ಮೀಸಲು ನಿನಗೆ ಕೆಲವು ನನ್ನ ವ್ಯಸ್ತ ಕ್ಷಣಗಳಲಿ

ಪಿಸು ನುಡಿಯಿತು ಮುದ್ದುಮಗುವಂತೆ
ಕತ್ತಿಗೇ ಜೋತು ಬಿದ್ದು ಮೊಗವರಳಿಸಿ
ಹೇಳು ನೀನೇ ಹೇಗಿರಲಿ ನಾ ಹೀಗಾದರೆ ನೀ
ಆ ಬಿಸುಪಿಗೆ ಕಣ್ಣೀರು ಆವಿ ಎವೆ ಸ್ವಚ್ಛ
ಮೆಲ್ಲನುಸುರಿದೆ ನಿಸ್ವಾರ್ಥಿ ನನ್ನ ಮನಸು

-ಸರೋಜಿನಿ ಪಡಸಲಗಿ, ಬೆಂಗಳೂರು