ದಲಿತರನ್ನು ಮುಖ್ಯಮಂತ್ರಿ ಮಾಡಿ ಋಣ ತೀರಿಸಲು ದಲಿತ ಛಲವಾದಿ‌ ಮಹಾಸಭಾದ ರಾಜ್ಯಾಧ್ಯಕ್ಷ ಹೆಚ್.ಕೆ ಬಸವರಾಜ್ ಒತ್ತಾಯ

ಬಳ್ಳಾರಿ, ಆ.31: ರಾಜ್ಯದಲ್ಲಿ‌ ಸಿಎಂ ಬದಲಾಯಿಸುವ ಸಂದರ್ಭ ಬಂದರೆ ದಲಿತರನ್ನೇ ಸಿಎಂ ಮಾಡಬೇಕು ಎಂದು ದಲಿತ ಛಲವಾದಿ‌ ಮಹಾಸಭಾ ರಾಜ್ಯಾಧ್ಯಕ್ಷ ಹೆಚ್.ಕೆ.‌ ಬಸವರಾಜ್ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು‌ ಮಾತನಾಡಿದರು.
ದಲಿತರು ವಿಶೇಷವಾಗಿ ಬಲಗೈ ಸಮುದಾಯಗಳು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತದಾರರಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿ ನಿಂತಿದ್ದಾರೆ.
ಸಮಾಜದ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ.‌ಜಿ.‌ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಎರಡು ಬಾರಿ ಪಕ್ಷವನ್ನು ಮುನ್ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವನ್ನು ರಚಿಸಿದ್ದಾರೆ. ಮತ್ತೋರ್ವ ಹಿರಿಯ ಮುಖಂಡ ಡಾ. ಹೆಚ್ ಸಿ ಮಹಾದೇವಪ್ಪ ಅವರು ಬಾಬಾಸಾಹೇಬರ ಕಟ್ಟಾ ಅನುಯಾಯಿಯಾಗಿದ್ದು, ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ದಲಿತ ಮುಖಂಡರಾದ ಹೆಚ್.ಕೆ.‌ಮುನಿಯಪ್ಪ, ಸತೀಶ್ ಜಾರಕಿಹೊಳಿ ಸೇರಿದಂತೆ ಐವರು ಪಕ್ಷದ ಮುಂಚೂಣಿ ನಾಯಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ಐದು‌ ಜನ ಮುಖಂಡರಲ್ಲಿ ಒಬ್ಬರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿ
ದಲಿತರ ಋಣವನ್ನು ತೀರಿಸಬೇಕೆಂದು ಕಾಂಗ್ರೆಸ್ ವರಿಷ್ಠರನ್ನು ಆಗ್ರಹಿಸಿದರು.


ಸಮಾವೇಶ: ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ದಲಿತ ಸಮುದಾಯಗಳನ್ನು ಜಾಗೃತಿಗೊಳಿಸಲಾಗುವುದು. ಮತ್ತು ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ದಾವಣಗೆರೆ, ಚಿತ್ರದುರ್ಗ ಅಥವಾ ಬಳ್ಳಾರಿಯಲ್ಲಿ 5 ಲಕ್ಷಕ್ಕಿಂತ ಹೆಚ್ಚು ದಲಿತ ಸಮುದಾಯದ ಜಾಗೃತಿ ಸಮಾವೇಶ ಹಮ್ಮಿಕೊಂಡು
ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡಲು ಆಗ್ರಹಿಸಲಾಗುವುದು. ದಲಿತ ಸಮುದಾಯದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರನ್ನು ಒಳಗೊಂಡಂತೆ ರಾಷ್ಟ್ರೀಯ ಕಾಂಗ್ರೆಸ್ ವರಿಷ್ಠರನ್ನು ಒತ್ತಾಯಿಸುತ್ತೇವೆ. ಒಂದೊಮ್ಮೆ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡದಿದ್ದಲ್ಲಿ, ದಲಿತ ಸಮುದಾಯವೂ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸುವುದು ಅನಿವಾರ್ಯವಾಗುತ್ತದೆ ಎಂದು ಬಸವರಾಜ್ ಎಚ್ಚರಿಸಿದರು.
ಕರ್ನಾಟಕ ಸರ್ಕಾರ ಒಳಮೀಸಲಾತಿಯನ್ನು ಘೋಷಣೆ ಮಾಡಿರುವುದು. ರಾಷ್ಟ್ರೀಯ ಜನಗಣತಿ ಹಾಗೂ ಕಾಲಕಾಲಕ್ಕೆ ಮೀಸಲಾತಿ ಆಯೋಗವು ಮಾಡಬಹುದಾದ ಶಿಫಾರಸ್ಸಿನ ಹಾಗೂ ಜನಸಂಖ್ಯೆ ಆಧಾರಿತ ತಿದ್ದುಪಡಿಗೆ ಒಳಪಟ್ಟು ಒಳ ಮೀಸಲಾತಿ ನಿಗದಿಪಡಿಸಿರುವುದನ್ನು ಸ್ವಾಗತಿಸಿದರು.
ಅಲೆಮಾರಿ ಸಮುದಾಯಕ್ಕೆ ನಿಗದಿಪಡಿಸಿದ ಶೇ. 1 ರಷ್ಟನ್ನು ಸಿ. ವರ್ಗಕ್ಕೆ ಸೇರಿಸಿರುವುದು ಅಲೆಮಾರಿ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯವಾಗುತ್ತದೆ. ಆದ್ದರಿಂದ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇಕಡ 1 ರಷ್ಟನ್ನು ನಿಗದಿಗೊಳಿಸಲು ದಲಿತ ಛಲವಾದಿ ಮಹಾಸಭಾ ಒತ್ತಾಯಿಸುತ್ತದೆ.ಎಂದರು.
ದಲಿತ ಛಲವಾದಿ ಮಹಾಸಭಾ- ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಚಿತ್ರದುರ್ಗದ ಹೆಚ್ ಸಿ ನಿರಂಜನ ಮೂರ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ. ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷ ಎಂ ಸಿ ಓಂಕಾರಪ್ಪ, ಕಲ್ಯಾಣ ಕರ್ನಾಟಕದ ಉಸ್ತುವಾರಿ ಸಿ.‌ನರಸಪ್ಪ, ಜಿಲ್ಲಾಧ್ಯಕ್ಷ ಜೆ ಎಸ್ ಶ್ರೀನಿವಾಸ್, ಜಿಲ್ಲಾ ಛಲವಾದಿ ನೌಕರರ ಸಂಘದ ಗೌರವಾಧ್ಯಕ್ಷ ಡಾ. ಸಿ ಎಚ್ ಸೋಮನಾಥ್,
ಕೆಸಿಎಂಸಿ ಉಪಾಧ್ಯಕ್ಷ ಸಿ. ಶ್ರೀನಿವಾಸ್ ಮುಖಂಡರಾದ ಕೆ.ಸಿ ಸಿದ್ದಬಸಪ್ಪ ಮಾವಿನಹಳ್ಳಿ, ನಾಗಲಕೆರೆ ಗೋವಿಂದ್, ಯುವ ಮುಖಂಡರಾದ ಆನಂದ್ ಕುಮಾರ್, ಗಾದಿಲಿಂಗಪ್ಪ ಬಿ. ಗೋನಾಳ್,  ದೀಕ್ಷಾ ಸಿ. ಶಂಕರ್ ಮತ್ತಿತರರು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
—–